ಪಿಪಿಎಫ್ ಖಾತೆ ತೆರೆಯುವ ಮುನ್ನ ನಿಮಗೆ ಗೊತ್ತಿರಬೇಕಾದ ಅಂಶಗಳೇನು..?

By Siddu
Subscribe to GoodReturns Kannada
For Quick Alerts
ALLOW NOTIFICATIONS  
For Daily Alerts

  ಸಾರ್ವಜನಿಕ ಭವಿಷ್ಯ ನಿಧಿ ಅಥವಾ ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್) ಖಾತೆ ಆರಂಭಿಸಬೇಕೆಂದು ಹಲವಾರು ಜನ ಬಯಸಿದರೂ ಇದರ ಬಗ್ಗೆ ಇರುವ ಕೆಲ ಪ್ರಶ್ನೆಗಳಿಗೆ ಉತ್ತರ ಸಿಗದೆ ಗೊಂದಲಕ್ಕೀಡಾಗುತ್ತಾರೆ. ಪಿಪಿಎಫ್ ಬಗ್ಗೆ ಸಾಮಾನ್ಯವಾಗಿ ಮನದಲ್ಲಿ ಮೂಡುವ ಪ್ರಮುಖ ಪ್ರಶ್ನೆಗಳು ಹಾಗೂ ಅವುಗಳಿಗೆ ಸೂಕ್ತ ಪರಿಹಾರವನ್ನು ಇಲ್ಲಿ ನೀಡಲಾಗಿದೆ. ಪಿಪಿಎಫ್ ಖಾತೆ ಆರಂಭಕ್ಕೂ ಮುನ್ನ ಈ ಲೇಖನ ಓದಿ ನಿಮ್ಮ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳಿ.

  ಪಿಪಿಎಫ್ ಅಕೌಂಟ್ ಎಂದರೆ ಏನು?

  ಪಿಪಿಎಫ್ (ಪಬ್ಲಿಕ್ ಪ್ರಾವಿಡೆಂಟ್ ಫಂಡ್) ಅಕೌಂಟ್ ಒಂದು ಅತಿ ಜನಪ್ರಿಯ ಹಾಗೂ ದೀರ್ಘಾವಧಿಯ ಹೂಡಿಕೆ ಯೋಜನೆಯಾಗಿದೆ. ಇದರಲ್ಲಿ ಸಂಬಳ ಪಡೆಯುವ ಉದ್ಯೋಗಿಗಳು ಅಥವಾ ಸ್ವ ಉದ್ಯೋಗ ಮಾಡುವವರು ಹೂಡಿಕೆ ಮಾಡಬಹುದು. ಕೇಂದ್ರದ ಹಣಕಾಸು ಸಚಿವಾಲಯದ ವತಿಯಿಂದ ೧೯೬೮ರಲ್ಲಿ ಈ ಯೋಜನೆಯನ್ನು ಆರಂಭಿಸಲಾಯಿತು. ಇದೊಂದು ಸುರಕ್ಷಿತ ಹೂಡಿಕೆ ವಿಧಾನವಾಗಿದ್ದು, ಆಕರ್ಷಕ ಬಡ್ಡಿದರದೊಂದಿಗೆ ಆದಾಯ ನೀಡುವ ಯೋಜನೆಯಾಗಿದ್ದು, ಇದರ ಮೇಲೆ ಗಳಿಸಲಾಗುವ ಬಡ್ಡಿಗೆ ತೆರಿಗೆ ವಿನಾಯಿತಿ ಇರುವುದು ಇದರ ಪ್ಲಸ್ ಪಾಯಿಂಟ್ ಆಗಿದೆ. ಇದರಲ್ಲಿ ಹಾಕಿದ ಮೊತ್ತವನ್ನು ತೆರಿಗೆ ವಿನಾಯಿತಿಗಾಗಿ ಕ್ಲೇಮ್ ಮಾಡಬಹುದು. ಹೀಗಾಗಿ ಪಿಪಿಎಫ್ ಅಕೌಂಟ್ ತೆರಿಗೆ ಉಳಿಸುವ ನಿಟ್ಟಿನಲ್ಲಿ ಸಹಕಾರಿಯಾಗಿದೆ.

  ಪಿಪಿಎಫ್ ಅಕೌಂಟ್ ಯಾರು ಆರಂಭಿಸಬಹುದು?

  18 ವರ್ಷ ಅಥವಾ ಅದಕ್ಕೂ ಮೇಲ್ಪಟ್ಟ ವಯಸ್ಸಿನ ಭಾರತೀಯ ನಾಗರಿಕರು ಈ ಖಾತೆ ಆರಂಭಿಸಬಹುದು. 18 ವರ್ಷಗಳಿಗಿಂತ ಕೆಳಗಿನವರ ಹೆಸರಲ್ಲಿ ಸಹ ಅವರ ಪೋಷಕರು ಖಾತೆ ತೆರೆಯಬಹುದು.

  ಪಿಪಿಎಫ್ ಖಾತೆಗೆ ಯಾರು ಅರ್ಹರಲ್ಲ?
  ಎನ್‌ಆರ್‌ಐಗಳು ಪಿಪಿಎಫ್ ಖಾತೆ ತೆರೆಯಲು ಅವಕಾಶವಿಲ್ಲ. ಒಂದು ವೇಳೆ ಪಿಪಿಎಫ್ ಅಕೌಂಟ್ ಹೊಂದಿರುವವರು ನಂತರ ಎನ್‌ಆರ್‌ಐ ಸ್ಟೇಟಸ್ ಪಡೆದರೆ ಅಂಥವರು ಖಾತೆಯ ಅವಧಿ ಮುಗಿಯುವವರೆಗೆ ಖಾತೆಯನ್ನು ಮುಂದುವರಿಸಹುದು. ಹಿಂದೂ ಅವಿಭಕ್ತ ಕುಟುಂಬದ ಹೆಸರಿನಲ್ಲಿ ಖಾತೆ ಆರಂಭಿಸುವಂತಿಲ್ಲ.

  ಪಿಪಿಎಫ್ ಖಾತೆ ತೆರೆಯುವುದು ಹೇಗೆ?

  ದೇಶದ ಯಾವುದೇ ರಾಷ್ಟ್ರೀಕೃತ ಬ್ಯಾಂಕ್ ಶಾಖೆಗಳಲ್ಲಿ, ಅಧಿಕೃತ ಬ್ಯಾಂಕ್‌ಗಳಲ್ಲಿ ಅಥವಾ ಆಯ್ದ ಅಂಚೆ ಕಚೇರಿಗಳಲ್ಲಿ ಪಿಪಿಎಫ್ ಖಾತೆ ತೆರೆಯಬಹುದು. ಕೆಲ ನಿರ್ದಿಷ್ಟ ಖಾಸಗಿ ಬ್ಯಾಂಕ್‌ಗಳಲ್ಲಿ ಸಹ ಖಾತೆ ಆರಂಭಿಸಲು ಅವಕಾಶವಿದೆ. ಬಹುತೇಕ ಖಾಸಗಿ ಬ್ಯಾಂಕ್‌ಗಳಲ್ಲಿ ಈಗ ಆನ್‌ಲೈನ್ ಮೂಲಕವೇ ಖಾತೆಗಳನ್ನು ನಿರ್ವಹಿಸಬಹುದಾಗಿದೆ. ನಿಗದಿಪಡಿಸಲಾದ ಫಾರ್ಮ ತುಂಬಿ, ಸೂಕ್ತ ದಾಖಲೆಗಳನ್ನು ಸಲ್ಲಿಸಿ ಹಾಗೂ ಕನಿಷ್ಠ ಠೇವಣಿ ಹಣ ಸಂದಾಯ ಮಾಡುವ ಮೂಲಕ ಬ್ಯಾಂಕ್ ಶಾಖೆಗಳಲ್ಲಿ ಖಾತೆ ತೆರೆಯಬಹುದಾಗಿದೆ.

  ಆನ್‌ಲೈನ್ ಮೂಲಕ ಪಿಪಿಎಫ್ ಖಾತೆ ತೆರೆಯವುದು ಹೇಗೆ?

  ಬಹುತೇಕ ಬ್ಯಾಂಕ್‌ಗಳಲ್ಲಿ ಆನ್‌ಲೈನ್ ಮೂಲಕವೇ ಪಿಪಿಎಫ್ ಖಾತೆಯನ್ನು ನಿರ್ವಹಣೆ ಮಾಡಬಹುದಾದರೂ ಖಾತೆ ತೆರೆಯಲು ಮಾತ್ರ ಬ್ಯಾಂಕ್ ಶಾಖೆಗೆ ಭೇಟಿ ನೀಡುವುದು ಅಗತ್ಯವಾಗಿದೆ. ಶಾಖೆಯಲ್ಲಿ ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಸಲ್ಲಿಸುವ ಮೂಲಕ ಖಾತೆ ಆರಂಭಿಸಬಹುದು.

  ಪಿಪಿಎಫ್ ಖಾತೆ ಆರಂಭಿಸಲು ಬೇಕಾಗುವ ದಾಖಲೆಗಳು ಯಾವವು?

  ಸಾಮಾನ್ಯವಾಗಿ ಈ ಕೆಳಗೆ ನೀಡಲಾದ ದಾಖಲೆಗಳನ್ನು ಬ್ಯಾಂಕಿಗೆ ನೀಡಬೇಕಾಗುತ್ತದೆ:
  1. ಅಕೌಂಟ್ ತೆರೆಯುವ ನಿಗದಿತ ಅರ್ಜಿ ಫಾರ್ಮ
  2. ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ
  3. ಗುರುತಿನ ಪುರಾವೆ ಚೀಟಿ
  4. ವಿಳಾಸ ದೃಢೀಕರಣ ದಾಖಲೆ

  ಪಿಪಿಎಫ್ ಖಾತೆ ಪಕ್ವತಾ ಅವಧಿ ಎಷ್ಟು?

  ಪಿಪಿಎಫ್ ಖಾತೆ ತೆರೆದ ವರ್ಷದ ಕೊನೆಯಿಂದ 15 ವರ್ಷಗಳು ಪೂರ್ಣಗೊಂಡ ನಂತರ ಖಾತೆ ಪಕ್ವಗೊಳ್ಳುತ್ತದೆ.

  ಕನಿಷ್ಠ ಹಾಗೂ ಗರಿಷ್ಠ ಠೇವಣಿ ಮೊತ್ತ ಎಷ್ಟು?
  ಯಾವುದೇ ವ್ಯಕ್ತಿ ಆರಂಭದಲ್ಲಿ ಕೇವಲ 100 ರೂಪಾಯಿ ಠೇವಣಿಯೊಂದಿಗೆ ಪಿಪಿಎಫ್ ಖಾತೆ ತೆರೆಯಬಹುದು. ಆದರೆ ಒಂದು ಆರ್ಥಿಕ ವರ್ಷದಲ್ಲಿ ಕನಿಷ್ಠ 500 ರೂ. ಜಮಾ ಮಾಡಬೇಕು. ಹಾಗೆಯೇ ಒಂದು ಆರ್ಥಿಕ ವರ್ಷದಲ್ಲಿ ಗರಿಷ್ಠ 1ಲಕ್ಷ 50 ಸಾವಿರ ರೂ. ಜಮಾ ಮಾಡಬಹುದು.

  ವರ್ಷದಲ್ಲಿ ಎಷ್ಟು ಬಾರಿ ಹಣ ಜಮಾ ಮಾಡಬಹುದು?

  ವರ್ಷದಲ್ಲಿ ಒಂದೇ ಬಾರಿ ಮೊತ್ತವನ್ನು ಅಕೌಂಟಿಗೆ ಹಾಕಬಹುದು ಅಥವಾ ಒಂದು ಆರ್ಥಿಕ ವರ್ಷದಲ್ಲಿ ೧೨ ಕಂತುಗಳಲ್ಲಿ ಹಣ ಜಮಾ ಮಾಡಬಹುದು.

  ಪಿಪಿಎಫ್‌ನಲ್ಲಿ ಸಿಗುವ ಬಡ್ಡಿದರ ಎಷ್ಟು?
  ಪ್ರತಿ ತ್ರೈಮಾಸಿಕಕ್ಕೊಮ್ಮೆ ಕೇಂದ್ರ ಸರಕಾರ ಪಿಪಿಎಫ್ ಬಡ್ಡಿದರವನ್ನು ನಿರ್ಧರಿಸುತ್ತದೆ. ಪ್ರಸ್ತುತ ಪಿಪಿಎಫ್ ಅಕೌಂಟಿಗೆ ವಾರ್ಷಿಕ ಶೇ. 7.6 ರಷ್ಟು ಬಡ್ಡಿ ನಿಗದಿಪಡಿಸಲಾಗಿದೆ. ಈ ಅಕಾಂಟಿನಲ್ಲಿನ ಹಣಕ್ಕೆ ಬರುವ ಬಡ್ಡಿಗೆ ತೆರಿಗೆ ವಿನಾಯಿತಿ ಇರುತ್ತದೆ.

  ಒಂದಕ್ಕಿಂತ ಹೆಚ್ಚು ಪಿಪಿಎಫ್ ಖಾತೆ ಹೊಂದಬಹುದೆ?

  ಒಂದು ಅವಧಿಯಲ್ಲಿ ನಿಮ್ಮ ಹೆಸರಲ್ಲಿ ಒಂದೇ ಪಿಪಿಎಫ್ ಅಕೌಂಟ್ ಹೊಂದಲು ಅವಕಾಶವಿದೆ. ನಿಮ್ಮ ಅಪ್ರಾಪ್ತ ಮಗ ಅಥವಾ ಮಗಳ ಹೆಸರಲ್ಲಿ ಮತ್ತೊಂದು ಅಕೌಂಟ್ ತೆರೆದು ಅದರಲ್ಲಿ ಹಣ ಹೂಡಬಹುದು.

  ನಾಮಿನೇಶನ್ ಸೌಲಭ್ಯವಿದೆಯೆ?

  ಪಿಪಿಎಫ್ ಅಕೌಂಟಿಗೆ ನಾಮಿನೇಶನ್ ಸೌಲಭ್ಯ ಇದೆ. ಅಕೌಂಟ್ ತೆರೆಯುವ ಸಂದರ್ಭದಲ್ಲಿಯೇ ನಾಮಿನೇಶನ್ ಫಾರ್ಮ ತುಂಬುವ ಮೂಲಕ ಭವಿಷ್ಯದಲ್ಲಿ ಉಂಟಾಗಬಹುದಾದ ಸಮಸ್ಯೆಗಳಿಂದ ಪಾರಾಗಬಹುದು.

  ಪಿಪಿಎಫ್ ಅಕೌಂಟ್‌ನಿಂದ ಸಿಗುವ ತೆರಿಗೆ ವಿನಾಯಿತಿಗಳೇನು?

  ಪಿಪಿಎಫ್ ಅಕೌಂಟಿನಲ್ಲಿ ಹೂಡಿಕೆ ಮಾಡಲಾದ 1 ಲಕ್ಷ 50 ಸಾವಿರ ರೂಪಾಯಿ ಮೊತ್ತದವರೆಗೆ ಸೆಕ್ಷನ್ ೮೦ಸಿ ಪ್ರಕಾರ ತೆರಿಗೆ ವಿನಾಯಿತಿ ಅನ್ವಯವಾಗುತ್ತದೆ. ಅಲ್ಲದೆ ಖಾತೆಯ ಮ್ಯಾಚುರಿಟಿ ನಂತರ ಸಿಗುವ ಸಂಪೂರ್ಣ ಮೊತ್ತ ಹಾಗೂ ಬಡ್ಡಿಯ ಮೇಲೆ ಯಾವುದೇ ತೆರಿಗೆ ವಿಧಿಸಲಾಗುವುದಿಲ್ಲ.

  ಪಿಪಿಎಫ್ ಖಾತೆ ವರ್ಗಾಯಿಸಬಹುದೆ?

  ಯಾವುದೇ ಬ್ಯಾಂಕಿನಲ್ಲಿರುವ ಪಿಪಿಎಫ್ ಖಾತೆಯನ್ನು ಅಂಚೆ ಕಚೇರಿಗೆ ಅಥವಾ ಅಂಚೆ ಕಚೇರಿಯಿಂದ ಬ್ಯಾಂಕಿಗೆ ವರ್ಗಾವಣೆ ಮಾಡಬಹುದಾಗಿದೆ. ವರ್ಗಾಯಿಸಲಾದ ಖಾತೆಯನ್ನು ಮುಂದುವರಿದ ಪಿಪಿಎಫ್ ಖಾತೆ ಎಂದು ಪರಿಗಣಿಸಲಾಗುತ್ತದೆ.

  ಬೇರೆಯವರ ಹೆಸರಿಗೆ ಪಿಪಿಎಫ್ ಖಾತೆ ವರ್ಗಾವಣೆ ಸಾಧ್ಯವೆ?
  ಬೇರೆ ವ್ಯಕ್ತಿಗೆ ತಮ್ಮ ಹೆಸರಲ್ಲಿನ ಪಿಪಿಎಫ್ ಖಾತೆ ವರ್ಗಾವಣೆ ಸಾಧ್ಯವಿಲ್ಲ. ಖಾತೆದಾರರು ತೀರಿ ಹೋದಲ್ಲಿ ಅವರ ನಾಮಿನಿ ಖಾತೆಯನ್ನು ಮುಂದುವರಿಸಲು ಸಾಧ್ಯವಿಲ್ಲ.

  ಅಂಶಿಕ ಹಣ ಮರಳಿ ಪಡೆಯುವುದು ಸಾಧ್ಯವೆ?

  ಖಾತೆ ಆರಂಭಿಸಿದ ಏಳು ವರ್ಷಗಳ ನಂತರ ಅಂಶಿಕ ಮೊತ್ತವನ್ನು ಕೆಲ ಷರತ್ತುಗೊಳಪಟ್ಟು ಹಿಂಪಡೆಯುವ ಅವಕಾಶವಿದೆ. ಪ್ರತಿ ಆರ್ಥಿಕ ವರ್ಷದಲ್ಲಿ ಒಂದು ಬಾರಿ ಮಾತ್ರ ಹಣ ಹಿಂಪಡೆಯಲು ಅವಕಾಶ ನೀಡಲಾಗಿದೆ.

  ಪಿಪಿಎಫ್ ಮೇಲೆ ಸಾಲ ಪಡೆಯಹುದೆ?

  ಕೆಲ ನಿಬಂಧನೆಗಳಿಗೊಳಪಟ್ಟು ಪಿಪಿಎಫ್ ಖಾತೆಯ ಮೇಲೆ ಸಾಲ ಪಡೆಯಲು ಅವಕಾಶವಿದೆ. ಖಾತೆಯ ೩ ರಿಂದ ೬ ನೇ ಆರ್ಥಿಕ ವರ್ಷದಲ್ಲಿ ಮಾತ್ರ ಈ ಸೌಲಭ್ಯ ಇದೆ.

  ಪಿಪಿಎಫ್ ಖಾತೆಯನ್ನು ಅವಧಿಪೂರ್ವ ಮುಕ್ತಾಯಗೊಳಿಸಬಹುದೆ?

  ಕೆಲ ತುರ್ತು ಸಂದರ್ಭಗಳಲ್ಲಿ ಪಿಪಿಎಫ್ ಖಾತೆಯನ್ನು ನಿಲ್ಲಿಸಲು ಅವಕಾಶವಿದೆ. ಗಂಭೀರ ಕಾಯಿಲೆಗಳ ಸಂದರ್ಭದಲ್ಲಿ, ಮಕ್ಕಳ ಉನ್ನತ ವಿದ್ಯಾಭ್ಯಾಸದ ಕಾರಣದಿಂದ ಖಾತೆಯನ್ನು ಮುಕ್ತಾಯಗೊಳಿಸಬಹುದು. ಆದರೆ ಖಾತೆ ತೆರೆದು ಐದು ವರ್ಷವಾಗಿರಬೇಕು. ಆದರೆ ಈ ರೀತಿ ಅವಧಿಪೂರ್ವ ಖಾತೆ ನಿಲ್ಲಿಸಿದರೆ ಖಾತೆಯಲ್ಲಿನ ಮೊತ್ತದ ಮೇಲೆ ಸಿಗುವ ಒಟ್ಟು ಬಡ್ಡಿಯ ಶೇ.೧ ರಷ್ಟು ದಂಡ ಪಾವತಿ ಮಾಡಬೇಕಾಗುತ್ತದೆ.

  ನಿಂತು ಹೋದ ಪಿಪಿಎಫ್ ಖಾತೆಯನ್ನು ಮತ್ತೆ ಆರಂಭಿಸುವುದು ಹೇಗೆ?

  ಕನಿಷ್ಠ 500 ರೂ. ಹಣ ಜಮಾ ಮಾಡುವ ಮೂಲಕ ಹಾಗೂ ಖಾತೆ ನಿಂತುಹೋದ ಪ್ರತಿವರ್ಷಕ್ಕೆ 50 ರೂಪಾಯಿಯಂತೆ ಶುಲ್ಕ ಭರಿಸಿ ಖಾತೆಯನ್ನು ಪುನಾರಂಭಿಸಬಹುದು.

  ಖಾತೆ ಮುಕ್ತಾಯದ ನಂತರ ಅವಧಿ ವಿಸ್ತರಣೆ ಸಾಧ್ಯವೆ?

  ಪಿಪಿಎಫ್ ಖಾತೆದಾರರು ತಮ್ಮ ಖಾತೆ ಮುಕ್ತಾಯವಾದ ಮೇಲೆ ಮತ್ತೆ ಒಂದು ವರ್ಷ ಅಥವಾ ಒಂದೇ ಬಾರಿ ೫ ವರ್ಷಗಳಿಗೆ ವಿಸ್ತರಿಸಲು ಅವಕಾಶ ನೀಡಲಾಗಿದೆ. ಇದರಲ್ಲಿ ಎರಡು ರೀತಿಯ ಅವಕಾಶಗಳಿವೆ:
  ಹೂಡಿಕೆ ಇಲ್ಲದೆ ವಿಸ್ತರಣೆ: ಈ ರೀತಿಯ ಅವಧಿ ವಿಸ್ತರಣೆಯಲ್ಲಿ ಪ್ರಸ್ತುತ ಖಾತೆಯಲ್ಲಿನ ಮೊತ್ತಕ್ಕೆ ಬರುವ ವರ್ಷಗಳಲ್ಲಿ ಪೂರ್ವನಿರ್ಧಾರಿತ ಬಡ್ಡಿದರದಲ್ಲಿ ಬಡ್ಡಿ ಜಮೆಯಾಗುತ್ತ ಹೋಗುತ್ತದೆ. ಹಾಗೆಯೇ ಪ್ರತಿ ಆರ್ಥಿಕ ವರ್ಷದಲ್ಲಿ ಒಂದು ಬಾರಿ ಖಾತೆಯಿಂದ ಎಷ್ಟು ಬೇಕಾದರೂ ಹಣವನ್ನು ಹಿಂಪಡೆಯಬಹುದಾಗಿದೆ.

  ಹೂಡಿಕೆಯೊಂದಿಗೆ ವಿಸ್ತರಣೆ: ಈ ರೀತಿಯ ವಿಸ್ತರಣೆಯಲ್ಲಿ ಮುಂಚಿನಂತೆ ಹೂಡಿಕೆ ಮಾಡುತ್ತ ಹೋಗಬಹುದು. ಈ ವಿಧಾನದಲ್ಲಿ ಖಾತೆ ವಿಸ್ತರಣೆ ಮಾಡಿದ ಪ್ರತಿ ವರ್ಷದ ಆರಂಭದಲ್ಲಿ ಶೇ.60 ರಷ್ಟು ಹಣವನ್ನು ಹಿಂಪಡೆಯಲು ಅವಕಾಶವಿದೆ.

  ಪಿಪಿಎಫ್ ಖಾತೆದಾರರ ಮರಣದ ನಂತರ ಹೇಗೆ?

  ಪಿಪಿಎಫ್ ಖಾತೆದಾರರು ತೀರಿಕೊಂಡಲ್ಲಿ ಅವರ ನಾಮಿನಿ ಅಥವಾ ಅವರ ಕಾನೂನಾತ್ಮಕ ವಾರಸುದಾರರಿಗೆ ಖಾತೆ ಅವಧಿ ಮುಗಿಯದಿದ್ದರೂ ಖಾತೆಯಲ್ಲಿನ ಹಣವನ್ನು ಸಂದಾಯ ಮಾಡಲಾಗುತ್ತದೆ. ಆದರೆ ಮೃತರ ವಾರಸುದಾರರು ಅಥವಾ ನಾಮಿನಿ ಅದೇ ಖಾತೆಯನ್ನು ಮುಂದುವರಿಸಲು ಸಾಧ್ಯವಿಲ್ಲ.

  ಪಿಪಿಎಫ್‌ನಲ್ಲಿ ಏಕೆ ಹಣ ಹೂಡಬೇಕು?

  ಭಾರತ ಸರಕಾರದಿಂದ ನಡೆಸಲ್ಪಡುವ ಪಿಪಿಎಫ್ ಯೋಜನೆ ಅತ್ಯಂತ ಸುರಕ್ಷಿತವಾಗಿದೆ. ಇದರಲ್ಲಿ ಇಡಲಾದ ಹಣಕ್ಕೆ ಸರಕಾರದ ಗ್ಯಾರಂಟಿ ಇದ್ದು, ಇದರಿಂದ ಬರುವ ಆದಾಯ ತೆರಿಗೆ ಮುಕ್ತವಾಗಿದೆ. 1 ಲಕ್ಷ 50 ಸಾವಿರ ರೂಪಾಯಿವರೆಗಿನ ಹೂಡಿಕೆಗೆ ಸೆಕ್ಷನ್ 80ಸಿ ಪ್ರಕಾರ ತೆರಿಗೆ ವಿನಾಯಿತಿ ಇದೆ. ಇನ್ನು ಬಹುತೇಕ ಪಿಪಿಎಫ್ ಅಕೌಂಟ್‌ಗಳನ್ನು ಆನ್‌ಲೈನ್ ಮೂಲಕವೇ ನಿರ್ವಹಣೆ ಮಾಡಬಹುದಾಗಿರುವುದರಿಂದ ಹಣ ಕಟ್ಟಲು ಬ್ಯಾಂಕುಗಳಿಗೆ ಹೋಗಿ ಸಮಯ ವ್ಯರ್ಥ ಮಾಡುವ ಪ್ರಮೇಯವಿಲ್ಲ.

  ಇಲ್ಲ ನೀಡಲಾದ ಪಿಪಿಎಫ್ ಅಕೌಂಟ್ ಬಗೆಗಿನ ಮಾಹಿತಿ ನಿಮ್ಮ ಬಹುತೇಕ ಗೊಂದಲಗಳನ್ನು ನಿವಾರಿಸಿರಬಹುದು.

  English summary

  Things you should know about PPF Account

  PPF (Public Provident Fund) account is a popular and one of the best long-term investment schemes with salaried as well as the self-employed class of individuals in India.
  Company Search
  Enter the first few characters of the company's name or the NSE symbol or BSE code and click 'Go'

  Find IFSC

  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more