For Quick Alerts
ALLOW NOTIFICATIONS  
For Daily Alerts

ಟೇಕ್ ಹೋಂ ಸ್ಯಾಲರಿ (Take Home Salary) ಹೆಚ್ಚಿಸಿಕೊಳ್ಳುವುದು ಹೇಗೆ?

By Siddu
|

ಯಾವುದಾದರೂ ಕಂಪನಿ ಅಥವಾ ಸಂಸ್ಥೆಯಲ್ಲಿ ಕೆಲಸ ಮಾಡುವ ಬಹುತೇಕ ಎಲ್ಲರಿಗೂ ತಮ್ಮ ಟೇಕ್ ಹೋಂ ಸ್ಯಾಲರಿ ಬಗ್ಗೆ ಒಂದು ಅಸಮಾಧಾನ ಇದ್ದೇ ಇರುತ್ತದೆ. ತಮಗಿರುವ ಸಂಬಳಕ್ಕೂ (ಗ್ರಾಸ್ ಸ್ಯಾಲರಿ) ಹಾಗೂ ಯಾವ್ಯಾವುದೋ ಕಡಿತಗಳ ನಂತರ ತಿಂಗಳ ಕೊನೆಯಲ್ಲಿ ಕೈಗೆ ಬರುವ ಸಂಬಳಕ್ಕೂ ಇರುವ ವ್ಯತ್ಯಾಸದಿಂದ ತಾಪತ್ರಯ ಅನುಭವಿಸುವಂತಾಗುತ್ತದೆ.

ಸಾಮಾನ್ಯವಾಗಿ ಕೈಗೆ ಬರುವ ಸಂಬಳ ಕಂಪನಿ ನಿಗದಿ ಪಡಿಸಿದ ಸಂಬಳಕ್ಕಿಂತ ಕಡಿಮೆಯಾಗಿರುತ್ತದೆ. ತೆರಿಗೆ, ಪಿಎಫ್, ಇಎಸ್‌ಐ, ಎಚ್‌ಆರ್‌ಎ ಇನ್ನಿತರ ಕಡಿತಗಳ ನಂತರ ಸಿಗುವ ಮೊತ್ತವನ್ನು ಟೇಕ್ ಹೋಂ ಸ್ಯಾಲರಿ ಎನ್ನಲಾಗುತ್ತದೆ. ಉದ್ಯೋಗ ಜಗತ್ತಿನಲ್ಲಿ ಕೆಲಸ ಮಾಡುವವರಿಗೆ, ನಿಮ್ಮ ಟೇಕ್ ಹೋಂ ಸ್ಯಾಲರಿಯಿಂದ ನೀವು ಸಂತುಷ್ಟರಾಗಿದ್ದೀರಾ ಎಂದು ಪ್ರಶ್ನೆ ಮಾಡಿದರೆ ಶೇ. 70ರಷ್ಟು ಜನ ಇಲ್ಲ ಎಂದು ಖಚಿತವಾಗಿ ಹೇಳುತ್ತಾರೆ.

 

ಕಂಪನಿಗಾಗಿ ಸಾಕಷ್ಟು ಪರಿಶ್ರಮ ಹಾಗೂ ಸಮರ್ಪಣಾ ಮನೋಭಾವದಿಂದ ಕೆಲಸ ಮಾಡಿದರೂ ಕೈಗೆ ಬರುವ ಸಂಬಳ ನಿರಾಶಾದಾಯಕವಾಗಿರುತ್ತದೆ ಎಂಬುದು ಬಹುತೇಕರ ಅಭಿಪ್ರಾಯವಾಗಿದೆ. ನಿಮ್ಮ ಕಂಪನಿ ನಿಮಗೆ ನಿಗದಿ ಪಡಿಸಿದ ಸಂಬಳ ಹಾಗೂ ಕೈಗೆ ಸಿಗುವ ಸಂಬಳಕ್ಕೆ ವ್ಯತ್ಯಾಸವಿದ್ದರೂ ಏನೂ ಮಾಡಲಾಗದ ಪರಿಸ್ಥಿತಿ ಇರುತ್ತದೆ. ಯಾವ್ಯಾವ ಕಡಿತಗಳಾಗುತ್ತವೋ ಎಂಬುದೂ ಸರಿಯಾಗಿ ತಿಳಿಯಲಾಗುವುದಿಲ್ಲ.

ವಾಸ್ತವದಲ್ಲಿ ಏನು ಮಾಡಿದರೆ ಸಂಬಳ ಹೆಚ್ಚಿಸಿಕೊಳ್ಳಬಹುದು, ಕೈಗೆ ಸಿಗುವ ಸಂಬಳ ಹೆಚ್ಚಾಗಲು ಮಾಡಬೇಕಾದ್ದೇನು ಎಂಬುದನ್ನು ಅರಿಯಲು ಮುಂದೆ ಓದಿ. ಟೇಕ್ ಹೋಂ ಸ್ಯಾಲರಿ ಹೆಚ್ಚಿಸಲು ಪ್ರಮುಖ ಉಪಾಯಗಳು ಇಲ್ಲಿವೆ..

ನಿಮ್ಮ ಸಾಮರ್ಥ್ಯ ತಿಳಿದುಕೊಳ್ಳಿ

ನಿಮ್ಮ ಸಾಮರ್ಥ್ಯ ತಿಳಿದುಕೊಳ್ಳಿ

ನಿಮ್ಮ ಸಾಮರ್ಥ್ಯದಲ್ಲಿ ನಿಮಗೆ ಯಾವಾಗಲೂ ನಂಬಿಕೆ ಇರಲಿ. ಅದಕ್ಕೆ ಬೆಲೆ ನೀಡದ ಕಂಪನಿಯಲ್ಲಿ ಕೆಲಸ ಮಾಡುವುದು ಬೇಕಿಲ್ಲ. ಯಾವುದೇ ಕಂಪನಿಯಲ್ಲಿ ಎರಡು ಅಥವಾ ಅದಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದರೂ ಸಿಗಬೇಕಾದ ಏಳಿಗೆ ಸಿಗುತ್ತಿಲ್ಲ ಎಂದಾಗ ಅದು ಗಂಭೀರವಾಗಿ ಪರಿಗಣಿಸುವ ವಿಚಾರವಾಗುತ್ತದೆ. ಒಂದು ಕಾಲದಲ್ಲಿ ಆಗಾಗ ಕೆಲಸ ಬದಲಾಯಿಸುವುದನ್ನು ಕೆಟ್ಟ ಚಾಳಿ ಎಂದು ತಿಳಿಯಲಾಗುತ್ತಿತ್ತು. ಆದರೆ ಕಾಲ ಬದಲಾಗಿದೆ. ನ್ಯಾಯಯುತ ಸಂಬಳ ಸಿಗದಿದ್ದಲ್ಲಿ ಕೆಲಸ ಬದಲಾಯಿಸಲು ಹಿಂಜರಿಕೆ ಬೇಕಿಲ್ಲ.

ಆದರೂ ಪ್ರಮುಖ ನಿರ್ಧಾರ ಕೈಗೊಳ್ಳುವ ಮುಂಚೆ, ಇರುವ ಕಂಪನಿಯಲ್ಲಿಯೇ ಬಡ್ತಿ ಸಿಗಬಹುದಾ ಎಂದು ಪ್ರಯತ್ನಿಸಿ ನೋಡಿ. ಜೊತೆಗೆ ಸಂಬಳ ಹೆಚ್ಚಳ ಕುರಿತು ಕಂಪನಿಯ ಮುಖ್ಯಸ್ಥರೊಂದಿಗೆ ಮಾತನಾಡಬಹುದು. ಈಗ ಮಾಡುತ್ತಿರುವ ಕೆಲಸದ ಜೊತೆ ಹೆಚ್ಚುವರಿ ಜವಾಬ್ದಾರಿ ಹೊತ್ತುಕೊಳ್ಳಲು ತಯಾರಿದ್ದು, ಸಂಬಳ ಹೆಚ್ಚಿಸುವಂತೆ ಕೇಳಿ ನೋಡಿ. ಸ್ವಯಂ ಪ್ರೇರಿತರಾಗಿ ಹೆಚ್ಚಿನ ಕೆಲಸ ಮಾಡುತ್ತ ಅದರ ಬಗ್ಗೆ ಮುಖ್ಯಸ್ಥರ ಗಮನ ಸೆಳೆಯಲು ಪ್ರಯತ್ನಿಸಿ.

ಆದರೂ ಇದ್ದಲ್ಲಿಯೇ ಚಿಕ್ಕ ಬಡ್ತಿ ಸಿಕ್ಕರೆ ಸಂಬಳದಲ್ಲಿ ಅಂಥ ಹೇಳಿಕೊಳ್ಳುವಂಥ ಹೆಚ್ಚಳವೇನೂ ಆಗದು. ಹೊಸ ಹುದ್ದೆ ದೊರಕಿದಲ್ಲಿ ಮಾತ್ರ ಸಂಬಳದಲ್ಲಿ ಗಣನೀಯ ಹೆಚ್ಚಳ ಕಾಣಬಹುದು ಎಂಬುದು ತಿಳಿದಿರಲಿ.

ನಿಮ್ಮ ಕೌಶಲಗಳನ್ನು ಸುಧಾರಿಸಲು ಕೋರ್ಸ್ ಸೇರಿಕೊಳ್ಳಿ. ಸಾಮಾನ್ಯವಾಗಿ ಕೆಲಸದಲ್ಲಿರುವಾಗ ವಿದ್ಯಾಭ್ಯಾಸದ ಖರ್ಚನ್ನು ಕಂಪನಿಗಳು ಭರಿಸುತ್ತವೆ. ಇದರ ಬಗ್ಗೆ ಪರಿಶೀಲಿಸಿ. ಒಟ್ಟಾರೆ ಹೊಸ ಕೌಶಲ ಕಲಿತುಕೊಂಡಲ್ಲಿ ಸಹಜವಾಗಿಯೇ ಹೆಚ್ಚು ಸಂಬಳ ಪಡೆಯುವ ಅರ್ಹತೆಯನ್ನು ನೀವು ಗಿಟ್ಟಿಸಿಕೊಳ್ಳುವಿರಿ.

ಹಣದ ಸೂಕ್ತ ಹೂಡಿಕೆ
 

ಹಣದ ಸೂಕ್ತ ಹೂಡಿಕೆ

ಕಾರ್ಪೊರೇಟ್ ವಲಯದಲ್ಲಿ ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್ ಪಿಎಸ್) ಅಥವಾ ಇಪಿಎಸ್ ಗೆ ಕಂಪನಿಗಳು ಸಲ್ಲಿಸುವ ವಂತಿಗೆ ತೆರಿಗೆ ವಿನಾಯಿತಿಗೆ ಅರ್ಹವಾಗಿರುತ್ತದೆ. ಮಾಲೀಕತ್ವ ಸಂಸ್ಥೆ ಭರಿಸುವ ಮೂಲ ಎನ್‌ಪಿಎಸ್‌ನ ಶೇ. 10ರಷ್ಟು ಹಾಗೂ ಡಿಎ ಇವೆರಡೂ ೮೦ಸಿಸಿಡಿ (೨) ಅನ್ವಯ ತೆರಿಗೆ ವಿನಾಯಿತಿ ಪಡೆಯುತ್ತವೆ. ಸೆಕ್ಷನ್ ೮೦ ಸಿ ಅಡಿ ಎನ್‌ಪಿಎಸ್‌ನ 1.5 ಲಕ್ಷ ರೂಪಾಯಿ ಹಾಗೂ ೮೦ಸಿಸಿಡಿ (೨) ಅನ್ವಯ ಎನ್‌ಪಿಎಸ್‌ಗೆ ಭರಿಸುವ ೫೦ ಸಾವಿರ ರೂಪಾಯಿವರೆಗಿನ ವೈಯಕ್ತಿಕ ವಂತಿಗೆಗಳು ಸಹ ತೆರಿಗೆ ಮುಕ್ತವಾಗಿರುತ್ತವೆ. ಇನ್ನು ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್) ಯೋಜನೆಗಳ ಮೂಲಕವೂ ತೆರಿಗೆ ಉಳಿಸಬಹುದು.

ಆದರೆ ನೀವು ಸಾಲ ಹೊಂದಿರದಿದ್ದರೆ ಮಾತ್ರ ಇವೆಲ್ಲ ಯೋಜನೆಗಳಲ್ಲಿ ಹೂಡಿಕೆ ಮಾಡಬಹುದು ಎಂಬ ಮೂಲ ತತ್ವ ಮರೆಯದಿರಿ. ಜೊತೆಗೆ ಹೂಡಿಕೆಗಳು ವಾಸ್ತವದಲ್ಲಿ ನಿಮ್ಮ ಉದ್ದೇಶಗಳಿಗೆ ಪೂರಕವಾಗಿರುವುದು ಅವಶ್ಯ. ಹಾಗಾಗಿ ನಿಮ್ಮ ಆದ್ಯತೆಗಳ ಬಗ್ಗೆ ವಿಚಾರ ಮಾಡಿ ಮುಂದುವರಿಯುವುದು ಸೂಕ್ತ. ಇನ್ನು ನೀವು ಯಾವುದಾದರೂ ಶೈಕ್ಷಣಿಕ ಸಾಲದ ಕಂತು ಭರಿಸುತ್ತಿದ್ದಲ್ಲಿ ಮೊದಲು ಆ ಸಾಲವನ್ನು ಮುಗಿಸಲು ಆದ್ಯತೆ ನೀಡಿ. ಶೈಕ್ಷಣಿಕ ಸಾಲದ ಬಡ್ಡಿ ಪಾವತಿಗೆ ಸೆಕ್ಷನ್ ೮೦ಇ ಪ್ರಕಾರ ತೆರಿಗೆ ವಿನಾಯಿತಿ ಲಭಿಸುತ್ತದೆ. ಅವಧಿ ಪೂರ್ವ ಸಾಲ ತೀರಿಕೆಗೆ ಯಾವುದೇ ದಂಡ ಶುಲ್ಕ ಇಲ್ಲದಿದ್ದರೆ ಮೊದಲು ಅಂಥ ಸಾಲಗಳಿಂದ ಮುಕ್ತರಾಗುವುದು ಒಳ್ಳೆಯದು ಎಂಬುದು ಆರ್ಥಿಕ ತಜ್ಞರ ಸಲಹೆಯಾಗಿದೆ.

ಆರ್ಥಿಕ ವರ್ಷಾರಂಭದಲ್ಲಿಯೇ ನಿಮ್ಮೆಲ್ಲ ಹೂಡಿಕೆಗಳ ಬಗ್ಗೆ ಸಂಸ್ಥೆಗೆ ಮಾಹಿತಿ ನೀಡುವುದು ಸಹ ನಿಮ್ಮ ಟೇಕ್ ಹೋಂ ಸ್ಯಾಲರಿ ಹೆಚ್ಚಿಸಲು ಸಹಾಯಕವಾಗಬಹುದು. ಇದರಿಂದ ನಿಮ್ಮ ಸಂಬಳದಲ್ಲಿ ಟಿಡಿಎಸ್ ಹಾಗೂ ಇನ್ನಿತರ ತೆರಿಗೆ ಕಡಿತ ಮಾಡಬೇಕಾ ಅಥವಾ ಬೇಡ ಎಂಬುದನ್ನು ಕಂಪನಿ ನಿರ್ಧರಿಸಲು ಸುಲಭವಾಗುತ್ತದೆ. ಟಿಡಿಎಸ್ ಕಡಿಮೆಯಾದರೆ ಸಹಜವಾಗಿಯೇ ಕೈಗೆ ಬರುವ ಸಂಬಳ ಹೆಚ್ಚಾಗುತ್ತದೆ.

ಸಂಬಳದಲ್ಲಿ ಅಡಕವಾಗಿರುವ ಅಂಶಗಳು ಹಾಗೂ ತೆರಿಗೆ ಪಾವತಿ ಕಡಿಮೆ ಮಾಡಿಕೊಳ್ಳುವ ಪರಿಹಾರೋಪಾಯಗಳು ಮುಂದಿವೆ.

1. ಮನೆ ಬಾಡಿಗೆ ಭತ್ಯೆ (ಎಚ್‌ಆರ್‌ಎ)

1. ಮನೆ ಬಾಡಿಗೆ ಭತ್ಯೆ (ಎಚ್‌ಆರ್‌ಎ)

ನೀವು ಸಂಬಳ ಪಡೆಯುವ ಉದ್ಯೋಗಿಯಾಗಿದ್ದು, ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರೆ ಎಚ್‌ಆರ್‌ಎ (House Rent Allowance) ಕ್ಲೇಮ್ ಮಾಡಿ ತೆರಿಗೆ ಉಳಿತಾಯ ಮಾಡಬಹುದು. ಬಾಡಿಗೆಯಾಗಿ ನೀಡಿದ ಮೊತ್ತ ಭಾಗಶಃ ತೆರಿಗೆ ವಿನಾಯಿತಿಗೆ ಅರ್ಹವಾಗಿರುತ್ತದೆ. ಗೃಹ ಸಾಲದ ಕಂತು ಹಾಗೂ ಮನೆ ಬಾಡಿಗೆ ಎರಡನ್ನೂ ಪಾವತಿಸುತ್ತಿದ್ದರೆ ಎರಡರ ಮೇಲೂ ತೆರಿಗೆ ವಿನಾಯಿತಿ ಕ್ಲೇಮ್ ಮಾಡಬಹುದು. ಬಾಡಿಗೆ ಮನೆಯಲ್ಲಿದ್ದು ಬೇರೊಂದು ಮನೆಯ ಕಂತು ಕಟ್ಟುತ್ತಿದ್ದರೆ ಎರಡಕ್ಕೂ ತೆರಿಗೆ ವಿನಾಯಿತಿ ಪಡೆಯಬಹುದು. ಎರಡೂ ಆಸ್ತಿಗಳು ಒಂದೇ ನಗರದಲ್ಲಿದ್ದರೂ ಯಾವುದೇ ಸಮಸ್ಯೆ ಆಗದು. ನಿಮ್ಮ ತಂದೆ-ತಾಯಿಗೆ ಸೇರಿದ ಮನೆಯಲ್ಲಿದ್ದು, ಅವರಿಗೆ ಬಾಡಿಗೆ ಪಾವತಿಸುತ್ತಿದ್ದರೂ ಎಚ್‌ಆರ್‌ಎ ಕ್ಲೇಮ್ ಮಾಡಲು ಅವಕಾಶವಿದೆ.

2. ರಜೆ ಪ್ರಯಾಣ ಭತ್ಯೆ ಅಥವಾ ಎಲ್‌ಟಿಎ (Leave Travel Allowance)

2. ರಜೆ ಪ್ರಯಾಣ ಭತ್ಯೆ ಅಥವಾ ಎಲ್‌ಟಿಎ (Leave Travel Allowance)

ಎಲ್‌ಟಿಎ ಎಂಬುದು ನಿಮ್ಮ ಸ್ಯಾಲರಿ ಸ್ಲಿಪ್ ನಲ್ಲಿ ಕಂಡುಬರುವ ಮತ್ತೊಂದು ಪ್ರಮುಖ ಅಂಶವಾಗಿದೆ. ಇದು ನಿಮ್ಮ ತೆರಿಗೆ ಹೊರೆಯನ್ನು ಕಡಿಮೆ ಮಾಡಲು ಸಹಾಯ ಮಾಡಬಲ್ಲದು. ಆದರೆ ಎಲ್‌ಟಿಎ ಭಾರತದೊಳಗಿನ ಪ್ರಯಾಣಕ್ಕೆ ಮಾತ್ರ ಅನ್ವಯಿಸುತ್ತದೆ ಎಂಬುದು ಗೊತ್ತಿರಲಿ. ನಿಮಗೆ ಈ ಭತ್ಯೆ ಅನ್ವಯವಾಗುತ್ತಿದ್ದಲ್ಲಿ, ನಾಲ್ಕು ಕ್ಯಾಲೆಂಡರ್ ವರ್ಷ ಅವಧಿಯ ೨ ಪ್ರಯಾಣಗಳಿಗೆ ಎಲ್‌ಟಿಎ ಕ್ಲೇಮ್ ಮಾಡಬಹುದು.

3. ಮರುಪಾವತಿಗಳು

3. ಮರುಪಾವತಿಗಳು

ಟೆಲಿಫೋನ್, ಮೊಬೈಲ್ ಬಿಲ್, ಇಂಧನ ವೆಚ್ಚ, ಡ್ರೈವರ್ ಗಳ ಖರ್ಚು, ಕೆಲಸಕ್ಕೆ ಅಗತ್ಯವಾದ ಪುಸ್ತಕ, ಸಾಹಿತ್ಯ ಖರೀದಿ, ಊಟದ ಕೂಪನ್‌ಗಳು ಮುಂತಾದುವುಗಳ ಖರ್ಚು ತೋರಿಸಿ ತೆರಿಗೆ ಕಡಿತವನ್ನು ಕಡಿಮೆ ಮಾಡಿಕೊಳ್ಳುವ ಅವಕಾಶವಿದೆ.

4. ಬೇರೆ ಆದಾಯಗಳತ್ತ ಗಮನ ಹರಿಸಿ

4. ಬೇರೆ ಆದಾಯಗಳತ್ತ ಗಮನ ಹರಿಸಿ

ಬೇರೆ ಆದಾಯ ಮೂಲಗಳತ್ತ ಗಮನ ಹರಿಸುವುದು ಯಾವಾಗಲೂ ಒಳ್ಳೆಯದಾಗಿರುತ್ತದೆ. ಓವರ್ ಟೈಂ ಕೆಲಸ ಮಾಡಲು ಯತ್ನಿಸಿ. ಇದರಿಂದ ಕಂಪನಿಗೆ ನಿಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡಲು ಸಾಧ್ಯವಾಗುತ್ತದೆ. ಇದು ಸಂಬಳ ಹೆಚ್ಚಿಸಲು ಸಹಕಾರಿಯಾಗಬಹುದು.

ಜೊತೆಗೆ ಮತ್ತೊಂದು ಕೆಲಸವನ್ನು ಆರಂಭಿಸಬಹುದು. (ಇದನ್ನು ಮಾಡುವ ಮುನ್ನ ಕಂಪನಿಯೊಂದಿಗೆ ನಿಮ್ಮ ಅಗ್ರೀಮೆಂಟ್ ಪರಿಶೀಲಿಸಿ ನೋಡಿ). ನಿಮ್ಮ ಹವ್ಯಾಸದಿಂದ ಒಂದಿಷ್ಟು ಹಣ ಗಳಿಸುವ ಉಪಾಯ ಮಾಡಬಹುದು. ನಿಮಗೆ ಯಾವುದೋ ಡಿಸೈನಿಂಗ್ ಅಥವಾ ಇನ್ನಾವುದೋ ವಿದ್ಯೆಯಲ್ಲಿ ಪರಿಣಿತಿ ಇದ್ದಲ್ಲಿ ಅದನ್ನೇ ಫ್ರೀಲಾನ್ಸ್ ವೃತ್ತಿಯಾಗಿ ಆರಂಭಿಸಬಹುದು. ಇದು ನಿಮಗೆ ಆಫೀಸ್ ಕೆಲಸದ ಬೇಜಾರು ಕಳೆದು ಒಂದಿಷ್ಟು ಆದಾಯವನ್ನೂ ತಂದು ಕೊಡುತ್ತದೆ. ಜೊತೆಗೆ ಮನಸ್ಸಿಗೆ ನೆಮ್ಮದಿಯೂ ಇರುತ್ತದೆ.

5. ಬೋನಸ್

5. ಬೋನಸ್

ಬೋನಸ್ ನೀಡುವ ಸಂದರ್ಭದಲ್ಲಿ ಕಂಪನಿಯವರು ತೆರಿಗೆ ಕಡಿತ ಮಾಡಿಯೇ ಬೋನಸ್ ಪಾವತಿಸುತ್ತಾರೆ. ಆದ್ದರಿಂದ ಸಂಸ್ಥೆಗೆ ಮೊದಲೇ ನಿಮ್ಮ ತೆರಿಗೆ ವಿನಾಯಿತಿ ಪಡೆಯಬಹುದಾದ ಹೂಡಿಕೆಗಳ ಮಾಹಿತಿ ನೀಡಿದಲ್ಲಿ ಆದಷ್ಟು ಹೆಚ್ಚು ಬೋನಸ್ ಸಿಗುವಂತಾಗುವುದು. ಇಲ್ಲವಾದರೆ ಇನ್‌ಕಂ ಟ್ಯಾಕ್ಸ್ ರಿಟರ್ನ್ ಫೈಲ್ ಮಾಡುವ ಸಂದರ್ಭದಲ್ಲಿ ಈ ತೆರಿಗೆ ಕಡಿತಕ್ಕೆ ಮರುಪಾವತಿ ಕ್ಲೇಂ ಮಾಡಬಹುದು.

ಕೊನೆ ಮಾತು

ಕೊನೆ ಮಾತು

ಆದರೂ ಟೇಕ್ ಹೋಂ ಸ್ಯಾಲರಿ ವಿಷಯದಲ್ಲಿ ಕೆಲ ಅಂಶಗಳನ್ನು ತಿಳಿದು ಅವುಗಳನ್ನು ಪಾಲಿಸುವುದರಿಂದ ಸಿಗುವ ಸಂಬಳದ ಪ್ರಮಾಣವನ್ನು ಹೆಚ್ಚಿಸಿಕೊಳ್ಳುವ ಅವಕಾಶಗಳಿವೆ. ಇತ್ತೀಚಿನ ದಿನಗಳಲ್ಲಿ ಕೆಲ ಕಂಪನಿಗಳು ಸಂಬಳದಲ್ಲಿನ ಕಡಿತಗಳ ಬಗ್ಗೆ ನಿರ್ಧರಿಸಲು ಉದ್ಯೋಗಿಗಳಿಗೆ ಅವಕಾಶ ನೀಡುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಇದರಿಂದ ಒಂದಿಷ್ಟು ತೆರಿಗೆಗಳ ಕಡಿತ ತಪ್ಪಿಸಿ ಟೇಕ್ ಹೋಂ ಸ್ಯಾಲರಿ ಪ್ರಮಾಣ ಹೆಚ್ಚಿಸಿಕೊಳ್ಳಬಹುದಾಗಿದೆ. ಹಾಗೆಯೇ ನಿಮ್ಮ ಒಟ್ಟು ಸಂಬಳವನ್ನು ಹೆಚ್ಚಿಸಿಕೊಂಡು ಡಿಡಕ್ಷನ್ಸ್ ಕಡಿಮೆ ಮಾಡಿಕೊಳ್ಳಲು ಮೇಲಿನಂತೆ ಹಲವಾರು ವಿಧಾನಗಳಿವೆ.

English summary

How to increase your Take Home Salary?

How to increase your Take Home Salary here are some Practical ways.
Story first published: Monday, July 16, 2018, 10:01 [IST]
Company Search
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more