For Quick Alerts
ALLOW NOTIFICATIONS  
For Daily Alerts

ಷೇರು ಪೇಟೆಯಲ್ಲಿ ಆಟ ಆಡುವಾಗ ಆಡಬೇಕು, ನೋಡುವಾಗ ನೋಡಬೇಕು

By ಕೆ.ಜಿ.ಕೃಪಾಲ್
|

ಮೇ 20ನೇ ತಾರೀಕಿನ ಸೋಮವಾರದಂದು ಚುನಾವಣಾ ನಂತರದ ಸಮೀಕ್ಷೆಗಳು ಹೊರಬಂದ ನಂತರ ಸೆನ್ಸೆಕ್ಸ್ ಪ್ರದರ್ಶಿಸಿದ 1421 ಪಾಯಿಂಟುಗಳ ಏರಿಕೆಯ ನಂತರದ ದಿನ ಮಾರಾಟದ ಒತ್ತಡದಿಂದ 382 ಪಾಯಿಂಟುಗಳ ಇಳಿಕೆ ಆಯಿತು. ಇದು ಒಂದು ಕಡೆ ಆಯಿತು. ಆದರೆ ಗುರುವಾರದ ಆರಂಭಿಕ ಕ್ಷಣಗಳಲ್ಲಿ ಎನ್ ಡಿಎ ಸಮೂಹವು ಜಯದತ್ತ ದಾಪುಗಾಲು ಹಾಕುತ್ತಿದ್ದಂತೆ ಸೆನ್ಸೆಕ್ಸ್ ಸಹ ಏರಿಕೆ ಕಾಣುತ್ತಾ ಹೋಯಿತು.

ಹಿಂದಿನ ದಿನದ 39,310 ಪಾಯಿಂಟುಗಳಿಂದ ಸೆನ್ಸೆಕ್ಸ್ ಏಕಮುಖವಾಗಿ ಏರಿಕೆ ಕಂಡು 40,124.96 ಪಾಯಿಂಟುಗಳನ್ನು ತಲುಪಿ, ಸರ್ವಕಾಲೀನ ದಾಖಲೆಯನ್ನು ನಿರ್ಮಿಸಿತು. ಇತ್ತೀಚಿನ ಒಂದು ಟ್ರೆಂಡ್ ಅಂದರೆ ಪ್ರತಿ ಬಾರಿ ಸೆನ್ಸೆಕ್ಸ್ ದಾಖಲೆಯ ಮಟ್ಟಕ್ಕೆ ಏರಿಕೆ ಕಂಡ ನಂತರದಲ್ಲಿ ಭರ್ಜರಿ ಕುಸಿತವನ್ನು ಕಾಣುತ್ತಿದೆ.

 

ಹಿಂದಿನ ವರ್ಷ ಆಗಸ್ಟ್ ನಲ್ಲಿ 39,989 ಪಾಯಿಂಟುಗಳನ್ನು ತಲುಪಿ, ಅಕ್ಟೊಬರ್ ತಿಂಗಳವರೆಗೂ ಸತತವಾದ ಕುಸಿತ ಕಂಡು ಸುಮಾರು ಆರು ಸಾವಿರ ಪಾಯಿಂಟುಗಳ ಇಳಿಕೆ ಪ್ರದರ್ಶಿಸಿತು. ನಂತರ ಚೇತರಿಕೆಯ ಹಾದಿಯಲ್ಲಿ ಸಾಗಿ 18ನೇ ಏಪ್ರಿಲ್ ನಂದು 39,487 ಪಾಯಿಂಟುಗಳ ಗರಿಷ್ಠ ತಲುಪಿ, ಹದಿನೈದು ದಿನಗಳಲ್ಲಿ ಸುಮಾರು ಎರಡು ಸಾವಿರ ಪಾಯಿಂಟುಗಳನ್ನು ಕಳೆದುಕೊಂಡಿತು.

ಮತ್ತೆ ಅಲ್ಲಿಂದ ಪುಟಿದೆದ್ದು, ಮಂಗಳವಾರ 39,571.73 ಪಾಯಿಂಟುಗಳಿಗೆ ಏರಿಕೆ ಪಡೆದು ಮತ್ತೆ ಹೊಸ ದಾಖಲೆ ಬರೆದಿದೆ. ಇಂದು ಪ್ರಪ್ರಥಮ ಬಾರಿಗೆ 40 ಸಾವಿರದ ಗಡಿ ದಾಟಿ ವಿಜೃಂಭಿಸಿದೆ. ಆದರೆ ಅಲ್ಲಿಯೂ ಸ್ಥಿರವಾದ ಸರಕಾರದ ಬಗ್ಗೆ ಖಾತ್ರಿಯಾದರೂ ಸ್ಥಿರತೆ ಕಾಣದಾಯಿತು. ಏಕೆ ಹೀಗೆ ಅಂದರೆ ಸದ್ಯದ ಪರಿಸ್ಥಿತಿಯಲ್ಲಿ ಯಾರಿಗೂ 'ಲಾಯಲ್ಟಿ' ಬೇಕಾಗಿಲ್ಲ. ಎಲ್ಲರೂ ಎಲ್ಲಿ ' ರಾಯಲ್ಟಿ' ದೊರೆಯುತ್ತದೆ ಎಂದು ಹುಡುಕಾಡುವ ಕಾಲವಿದಾಗಿದೆ.

ವಿಶ್ಲೇಷಣೆಗಳನ್ನೂ ಮೀರಿದ ರೀತಿ

ವಿಶ್ಲೇಷಣೆಗಳನ್ನೂ ಮೀರಿದ ರೀತಿ

ಷೇರುಪೇಟೆಯಲ್ಲಿ ಹೂಡಿಕೆದಾರರು ಟೆಕ್ನಿಕಲ್ ಮತ್ತು ಫಂಡಮೆಂಟಲ್ ಅನಾಲಿಸಿಸ್ ಎಂಬ ಎರಡು ವಿಧದ ಚಟುವಟಿಕೆಯಲ್ಲಿ ಇರುತ್ತಾರೆ. ಆದರೆ ಈಗಿನ ದಿನಗಳಲ್ಲಿ ಇವೆರಡು ವಿಧಗಳು ಯಾವುದೇ ರೀತಿಯ ಅವಕಾಶಗಳನ್ನು ಒದಗಿಸದೆ ಒಂದು ವಿಶಿಷ್ಟ ರೀತಿಯ ಚಲನೆಯನ್ನು ಪ್ರದರ್ಶಿಸುವಂತೆ ವಹಿವಾಟುದಾರರು ಚಟುವಟಿಕೆಯನ್ನು ನಿರ್ವಹಿಸುವಂತಿದೆ. ಇತ್ತೀಚಿನ ದಿನಗಳಲ್ಲಿ ಆಗಿಂದಾಗ್ಗೆ ಅಗ್ರಮಾನ್ಯ ಕಂಪೆನಿಗಳ ಷೇರುಗಳಲ್ಲಿ ದಿಢೀರ್ ಕುಸಿತವನ್ನು ಮಿಂಚಿನ ವೇಗದಲ್ಲಿ ಕುಸಿಯುವಂತೆ ಮಾಡಿ, ನಂತರ ಶರವೇಗದಲ್ಲಿ ಏರಿಕೆಗೆ ಹಿಂದಿರುಗುವಂತೆ ಮಾಡಲಾಗುತ್ತಿದೆ. ಇದಕ್ಕೆ ಉದಾಹರಣೆ ಅಂದರೆ, ಕೆಲವು ದಿನಗಳ ಹಿಂದೆ ಸನ್ ಫಾರ್ಮಾ ಪ್ರದರ್ಶಿಸಿದ ದಿನದ ಕೊನೆಯ ಅರ್ಧ ಗಂಟೆಯ ಕ್ಷಣಗಳಲ್ಲಿ ಸುಮಾರು ರೂ. 350 ರವರೆಗೂ ಭಾರಿ ಕುಸಿತ ನಂತರ ತಕ್ಷಣ ಚೇತರಿಕೆ ಕಂಡು ರೂ.400 ರ ಗಡಿ ದಾಟುವಂತೆ ಮಾಡಿದ್ದು ಈ ಎಲ್ಲಾ ವಿಶ್ಲೇಷಣೆಗಳನ್ನು ಮೀರಿಸಿದ ರೀತಿಯದಾಗಿದೆ. ಅದೇ ರೀತಿ ಕೆಲವು ತಿಂಗಳ ಹಿಂದೆ ಡಾಕ್ಟರ್ ರೆಡ್ಡಿಸ್ ಲ್ಯಾಬ್, ಮಾರ್ಚ್ ನಲ್ಲಿ ಎಸ್ ಬಿಐ ಲೈಫ್ ಇಂಶುರನ್ಸ್ ಸಹ ಇದೆ ರೀತಿ ಪ್ರದರ್ಶಿಸಿವೆ. ಅಂದರೆ ಈಗಿನ ಚಲನೆಗಳು ಸಾಮಾನ್ಯರ ಹಿಡಿತಕ್ಕೂ, ಊಹೆಗೂ ಸಿಗದ ರೀತಿಯಲ್ಲಿ ನಡೆಯುತ್ತಿವೆ.

ಮಾರಾಟದ ಒತ್ತಡಕ್ಕೆ ಸಿಲುಕಿತು
 

ಮಾರಾಟದ ಒತ್ತಡಕ್ಕೆ ಸಿಲುಕಿತು

ಇಂದು ದಿನದ ಆರಂಭದ ಚಟುವಟಿಕೆಯಲ್ಲಿ ಎಚ್ ಡಿಎಫ್ ಸಿ ಬ್ಯಾಂಕ್ ಷೇರಿನ ಬೆಲೆ ರೂ. 2,410 ರ ಸಮೀಪದಿಂದ ರೂ.2,439 ರವರೆಗೂ ಏರಿಕೆ ಪ್ರದರ್ಶಿಸಿ ನಂತರ ಸ್ಥಿರತೆಯ ಸರಕಾರ ಎಂಬ ಭಾವನಾತ್ಮಕ ವಿಚಾರದ ವಾತಾವರಣದಲ್ಲಿ ವಹಿವಾಟುದಾರರು ಹೆಚ್ಚಿನ ಮಾರಾಟದಿಂದ ತಮ್ಮ ಲಾಭ ಗಳಿಕೆ ಮಾಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಗಮನಿಸಬೇಕಾದ ಅಂಶವೆಂದರೆ, ಈ ಷೇರಿನ ಬೆಲೆ ವಾರ್ಷಿಕ ಗರಿಷ್ಠದ ಸಮೀಪಕ್ಕೆ ಬಂದಾಗ ಈ ಕುಸಿತ ಕಂಡಿದೆ. ಇನ್ನು ಇತ್ತೀಚಿಗೆ ಇಂಡಸ್ ಇಂಡ್ ಬ್ಯಾಂಕ್ ಹಿಂದಿನ ವರ್ಷದ ತನ್ನ ಸಾಧನೆಯ ಅಂಕಿ- ಅಂಶಗಳನ್ನು ಪ್ರಕಟಿಸಿತು. ಸಾಧನೆಯು ತೃಪ್ತಿಕರವಾಗಿಲ್ಲವೆಂದರು ಸಹ ರೂ.1,366ರ ಕನಿಷ್ಠದಿಂದ ರೂ. 1,639ರವರೆಗೆ ಇಂದು ಚಿಮ್ಮಿದೆ. ಈ ರೀತಿಯ ಗರಿಷ್ಠ ತಲುಪಲು ಕಾರಣ ಪೇಟೆಯಲ್ಲಿ ಮೂಡಿರುವ ಭಾವನಾತ್ಮಕ ಅಭಿಪ್ರಾಯವಾಗಿತ್ತು. ಆದರೆ ಆ ಷೇರಿನ ಬೆಲೆ ಮಾರಾಟದ ಒತ್ತಡದಿಂದ ರೂ.1,544 ರವರೆಗೂ ಕುಸಿದು, ರೂ. 1,596 ರಲ್ಲಿ ಕೊನೆಗೊಂಡಿತು.

ಷೇರುಪೇಟೆ ಎಂಬುದು ವ್ಯಾವಹಾರಿಕ ತಾಣ

ಷೇರುಪೇಟೆ ಎಂಬುದು ವ್ಯಾವಹಾರಿಕ ತಾಣ

ಇದೇ ರೀತಿ ರಿಲಯನ್ಸ್ ಇಂಡಸ್ಟ್ರೀಸ್ ಸುಮಾರು ರೂ.68ರಷ್ಟು, ಬಜಾಜ್ ಫೈನಾನ್ಸ್ ರೂ. 174 ರಷ್ಟು, ಟಾಟಾ ಸ್ಟೀಲ್ ರೂ.23 ರಷ್ಟು, ಲಾರ್ಸನ್ ಅಂಡ್ ಟೊಬ್ರೋ ಸುಮಾರು ರೂ.94 ರಷ್ಟು ಏರಿಳಿತ ಪ್ರದರ್ಶಿಸಿವೆ. ಈ ಏರಿಳಿತಗಳನ್ನು ಗಮನಿಸಿದಾಗ ಒಂದು ಅಂಶ ದೃಢಪಡುತ್ತದೆ, ಅದೆಂದರೆ ಇಂದಿನ ಷೇರುಪೇಟೆಗಳು ಹೂಡಿಕೆಯ ವೇದಿಕೆಯಾಗಿರದೆ ಅವು ಕೇವಲ ಒಂದು ರೀತಿಯ ವ್ಯಾವಹಾರಿಕ ತಾಣಗಳಾಗಿವೆ. ಹಿಂದಿನ ದೀರ್ಘಕಾಲೀನ ಹೂಡಿಕೆ ಎಂಬ ಭ್ರಮೆಯಿಂದ ಹೊರಬಂದು ವ್ಯಾವಹಾರಿಕ ರೀತಿಯಲ್ಲಿ ಚಟುವಟಿಕೆ ನಡೆಸಿದಲ್ಲಿ ಅನೇಕ ಅವಕಾಶಗಳನ್ನು ನಮ್ಮ ಅನುಕೂಲಕ್ಕೆ ಬಳಸಿಕೊಳ್ಳಬಹುದು. ಟಾಟಾ ಸ್ಟೀಲ್ ಕಂಪನಿ ಷೇರಿನ ಬೆಲೆ ಕಳೆದ ಒಂದು ತಿಂಗಳಲ್ಲಿ ರೂ.560 ರ ಗರಿಷ್ಠದಿಂದ ರೂ.456ರ ವರೆಗೂ ಕುಸಿದಿತ್ತು. ಇದಕ್ಕೆ ಕಾರಣ ಅಂತರ ರಾಷ್ಟ್ರೀಯ ಮಟ್ಟದ 'ಟ್ರೇಡ್ ವಾರ್' ಕಾರಣವಾದರೂ ಈ ಒಂದು ವಾರದಲ್ಲಿ ಹೆಚ್ಚಿನ ಏರಿಳಿತಗಳನ್ನು ಪ್ರದರ್ಶಿಸಿ ಅಲ್ಪಕಾಲೀನ ಅವಕಾಶಗಳನ್ನು ಕಲ್ಪಿಸಿಕೊಟ್ಟಿದೆ.

ಬಂಡವಾಳ ರಕ್ಷಿಸಿಕೊಳ್ಳಲು ಹೆಚ್ಚಿನ ಒತ್ತು

ಬಂಡವಾಳ ರಕ್ಷಿಸಿಕೊಳ್ಳಲು ಹೆಚ್ಚಿನ ಒತ್ತು

ಪೇಟೆಯ ವಿಸ್ಮಯಕಾರಿ ಅಂಶವೆಂದರೆ ಇಂತಹ ಉತ್ತಮವಾದ ವಾತಾವರಣದಲ್ಲೂ ಬಯೋಕಾನ್ ಕಂಪನಿ 1:1ರ ಅನುಪಾತದ ಬೋನಸ್ ಘೋಷಿಸಿದ ನಂತರದಲ್ಲಿ ಷೇರಿನ ಬೆಲೆ ರೂ.630 ರಿಂದ ರೂ.520 ರವರೆಗೂ ಕುಸಿದಿದೆಯಾದರೂ ಪೇಟೆಯು ಗಮನಿಸುತ್ತಿಲ್ಲ. ಪ್ರತಿ ಷೇರಿಗೆ ರೂ.35 ರ ಡಿವಿಡೆಂಡ್ ಪ್ರಕಟಿಸಿರುವ ಗ್ರಾಫೈಟ್ ಇಂಡಿಯಾ ಷೇರಿನ ಬೆಲೆ ಕಳೆದ ಒಂದು ತಿಂಗಳಲ್ಲಿ ಹೆಚ್ಚಿನ ಕುಸಿತ ಕಂಡಿದ್ದರೂ ಅದಕ್ಕೆ ಡಿವಿಡೆಂಡ್ ಪ್ರಕಟಿಸಿದ ನಂತರವೂ ಹೆಚ್ಚಿನ ಬೆಂಬಲವಿಲ್ಲ. ಆದರೆ ಷೇರು ಪೇಟೆಯಲ್ಲಿ ಯಶಸ್ಸು ಕಾಣಬೇಕಾದರೆ ಕಂಪೆನಿಗಳ ಅಂತರ್ಗತ ಸಾಧನೆಯೊಂದಿಗೆ, ಕಂಪೆನಿಗಳು ವಿತರಿಸುವ ಕಾರ್ಪೊರೇಟ್ ಫಲಗಳಾದ ಲಾಭಾಂಶ, ಬೋನಸ್ ಷೇರು ಮುಂತಾದವುಗಳನ್ನು ವಿತರಿಸುವ ಕಂಪೆನಿಗಳ ಷೇರಿನ ಬೆಲೆಗಳು ಕುಸಿತ ಕಂಡರೆ ಅದು ಹೂಡಿಕೆಗೆ ಉತ್ತಮ ಅವಕಾಶವೆಂದು ಆಯ್ಕೆ ಮಾಡಿಕೊಂಡಲ್ಲಿ ಸ್ವಲ್ಪಮಟ್ಟಿನ ಯಶಸ್ಸು ಕಾಣಬಹುದು. ಯಾವುದೇ ಕಾರಣಕ್ಕಾಗಿ ದಿಢೀರ್ ಏರಿಕೆ ಕಂಡಲ್ಲಿ ಮಾರಾಟ ಮಾಡುವುದು ಒಂದು ರಕ್ಷಣಾತ್ಮಕ ಚಟುವಟಿಕೆ ಎನಿಸುತ್ತದೆ. ಪ್ರಮುಖವಾಗಿ ಬಂಡವಾಳವನ್ನು ರಕ್ಷಿಸಿಕೊಂಡು, ನಂತರ ಬೆಳೆಸಿಕೊಳ್ಳುವ ಪ್ರಕ್ರಿಯೆಗೆ ಕೈ ಹಾಕಬೇಕು.

English summary

What is the right to time to invest and keep quiet in Share market

What is the right to time to invest and keep quiet in Share market? Here is the very useful tips by financial columnist K.G.Krupal.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more