For Quick Alerts
ALLOW NOTIFICATIONS  
For Daily Alerts

ಗುಡ್ ರಿಟರ್ನ್ ವೃತ್ತಿ ಮಾರ್ಗದರ್ಶಿ: ಅಡುಗೆ ಕಾಂಟ್ರ್ಯಾಕ್ಟ್ ಬಗ್ಗೆ ಇಂಚಿಂಚು ಮಾಹಿತಿ

|

ಸ್ವಂತ ವ್ಯವಹಾರ ಮಾಡಬೇಕು ಅಂದುಕೊಳ್ಳುತ್ತಿರುವವರಿಗೆ ಅದಾಗಲೇ ಅಂಥ ಬಿಜಿನೆಸ್ ಮಾಡುತ್ತಿರುವವರ ಜತೆ ಮಾತನಾಡಬೇಕು, ಮಾರ್ಗದರ್ಶನ ಪಡೆಯಬೇಕು ಅನ್ನೋ ಆಲೋಚನೆ ಇರುತ್ತದೆ. ಅಂಥವರಿಗೆ ಈ ಲೇಖನ ಸರಣಿ ಆರಂಭಿಸಲಾಗಿದೆ. ಅದರ ಮೊದಲ ಭಾಗವಾಗಿ ಅಡುಗೆ ಕಾಂಟ್ರ್ಯಾಕ್ಟ್ ವೃತ್ತಿಯಲ್ಲಿ ಇರುವವರನ್ನು ಮಾತನಾಡಿಸಿ, ಅವರ ಅಭಿಪ್ರಾಯ- ಸಲಹೆ ಹಾಗೂ ಅನುಭವವನ್ನು ದಾಖಲಿಸಲಾಗಿದೆ. ಈ ಸರಣಿ ಬಗ್ಗೆ ನಿಮ್ಮ ಅಭಿಪ್ರಾಯವನ್ನು ನಮಗೆ ತಿಳಿಸಿ. -ಸಂಪಾದಕರು

***

"ಅಡುಗೆ ಕಾಂಟ್ರ್ಯಾಕ್ಟ್ ಅನ್ನೋ ಕಲ್ಪನೆ ರೆಕ್ಕೆ ಬಿಚ್ಚಿ ಅಗಲ, ಇನ್ನಷ್ಟು ಅಗಲವಾಗಿದೆ. ಈಗೆಲ್ಲ ಇವೆಂಟ್ ಮ್ಯಾನೇಜ್ ಮೆಂಟ್, ವೆಡ್ಡಿಂಗ್ ಪ್ಲ್ಯಾನರ್ಸ್ ಹೀಗೆ ಕರೆಯುತ್ತಾರೆ. ಆದ್ದರಿಂದ ಈ ವೃತ್ತಿಗೆ ಗ್ಲ್ಯಾಮರ್ ಬಂದಿದೆ. ನಾಲ್ಕು ಜನರ ಮಧ್ಯೆ ಗಟ್ಟಿಯಾಗಿ ಹೇಳಿಕೊಳ್ಳುವಂಥ ಆದಾಯವೂ ಇದೆ. ಆದರೆ...." ಹೀಗೆ ಕ್ಷಣ ಕಾಲ ಮೌನವಾದರು ಬೆಂಗಳೂರಿನ ಶ್ರೀನಿವಾಸನಗರದಲ್ಲಿ ಇರುವ, ವೃತ್ತಿಯಿಂದ ಅಡುಗೆ ಕಾಂಟ್ರ್ಯಾಕ್ಟರ್ ಆದ ಅನಿಲ್ ಕುಮಾರ್.

 

ಇದೇನು, ಹೀಗೆ ಸುಮ್ಮನಾಗಿಬಿಟ್ಟರಲ್ಲ ಎಂದು ಅವರನ್ನು ಮತ್ತೆ ಕೇಳಬೇಕಾಯಿತು. ಆಗ ಮಾತು ಮುಂದುವರಿಸಿದರು. "ಅದ್ಭುತವಾದ ಅಡುಗೆ ಎಂದು ಬಾಯಿ ಚಪ್ಪರಿಸಿ ಹೇಳುವ ಜನರ ಬಾಯಲ್ಲಿ 'ಅಡುಗೆಯವರಾ' ಎಂಬ ತಾತ್ಸಾರ ಮನೋಭಾವವೂ ಇದೆ. ಅದರಲ್ಲೂ ಮದುವೆ ವಿಚಾರ ಬಂದಾಗ ಹೆಣ್ಣು ಸಿಗಲ್ಲ" ಎಂದು ಬೇಸರಿಸಿಕೊಂಡರು.

ಆದರೆ, ಇದೇ ಮಾತನ್ನು ಎಲ್ಲ ಜಾತಿಗೂ ಹೇಳಲ್ಲ. ನಾನಿಲ್ಲಿ ಜಾತಿ ವಿಚಾರ ತರುತ್ತಿದ್ದೀನಿ ಅಂದುಕೊಳ್ಳಬೇಡಿ. ಆ ವಿಷಯ ಹೆಚ್ಚು ಮುಂದುವರಿಸುವುದು ಬೇಡ ಎಂದು ಅಲ್ಲಿಗೇ ಸುಮ್ಮನಾದರು. ಮುಂದಿನದೆಲ್ಲ ಅಡುಗೆ ಕಾಂಟ್ರ್ಯಾಕ್ಟ್ ಗೆ ಸಂಬಂಧಿಸಿದ ಮಾತುಗಳೇ ಆಗಿದ್ದವು.

ಹತ್ತು ಲಕ್ಷ ಬಂಡವಾಳದೊಂದಿಗೆ ಆರಂಭ

ಹತ್ತು ಲಕ್ಷ ಬಂಡವಾಳದೊಂದಿಗೆ ಆರಂಭ

ಎಷ್ಟೋ ಬಿಜಿನೆಸ್ ಗಳು ಒಂದು ಹಂತದ ಮೇಲೆ ವಿಪರೀತ ಸ್ಪರ್ಧೆ, ಪರ್ಯಾಯ ಅಂತ ಬಂದು ಮುಂದುವರಿಸುವುದು ಕಷ್ಟವಾಗುತ್ತದೆ. ಆದರೆ ಇದು ಹಾಗಲ್ಲ. ಶುಭ ಕಾರ್ಯಕ್ಕೋ- ಅಶುಭ ಕಾರ್ಯಕ್ಕೋ ನಾಲ್ಕು ಜನರನ್ನು ಕರೆದು ಊಟ ಹಾಕುವ ನಮ್ಮ ಸಾಂಪ್ರದಾಯಿಕ ಮನಸ್ಥಿತಿ ಎಲ್ಲಿಯವರೆಗೂ ಇರುತ್ತದೋ ಅಲ್ಲಿಯ ತನಕ ಇರುತ್ತದೆ. ಈಗಷ್ಟೇ ಅಡುಗೆ ಕಾಂಟ್ರ್ಯಾಕ್ಟ್ ವೃತ್ತಿಗೆ ಬರುವವರು ಹತ್ತು ಲಕ್ಷ ರುಪಾಯಿಯಾದರೂ ಬಂಡವಾಳ ಇಟ್ಟುಕೊಂಡು ಬರಬೇಕು. ನಾನು ಈಗ ಮಾತನಾಡುತ್ತಿರುವುದು ಬೆಂಗಳೂರಿಗೆ ಸಂಬಂಧಪಟ್ಟಂತೆ. ಇಡೀ ಕರ್ನಾಟಕಕ್ಕೆ ಅನ್ವಯಿಸಿ ಹೇಳುವುದಾದರೆ ಆಯಾ ಊರಲ್ಲಿ ಇರುವ ಅಂಗಡಿ ಬಾಡಿಗೆ, ಸಂಬಳ ಮತ್ತಿತರ ಅಂಶಗಳ ಮೇಲೆ ಸ್ವಲ್ಪ ಹೆಚ್ಚು- ಕಡಿಮೆ ಆಗಬಹುದು. ಸ್ವಂತ ಪಾತ್ರೆ ಇದ್ದರೆ ಅದು ಅಡ್ವಾಂಟೇಜ್ ಆಗುತ್ತದೆ. ಏಕೆಂದರೆ ಒಂದು ಸಾವಿರ ಜನರ ಅಡುಗೆಗೆ ಎಷ್ಟೋ ಸಲ ಪಾತ್ರೆಗಳಿಗೆ ಹತ್ತಾರು ಸಾವಿರ ಬಾಡಿಗೆ ನೀಡಬೇಕಾಗುತ್ತದೆ. ಬದಲಿಗೆ ಸ್ವಂತ ಪಾತ್ರೆಗಳಿದ್ದರೆ ಉತ್ತಮ. ಇನ್ನು ಶಾಮಿಯಾನ ಈಗಿನ ಟ್ರೆಂಡ್ ಆಗಿ ಉಳಿದಿಲ್ಲ. ಇದನ್ನು ಆಯಾ ಊರಿನ ಬೇಡಿಕೆ ಹಾಗೂ ಸ್ವಂತ ಅನುಭವದ ಆಧಾರದಲ್ಲಿ ವಿಶ್ಲೇಷಣೆ ಮಾಡಿ, ತೀರ್ಮಾನ ಮಾಡಬೇಕು.

ಇದರಲ್ಲಿ ಮೂರು ಬಗೆ ಇದೆ
 

ಇದರಲ್ಲಿ ಮೂರು ಬಗೆ ಇದೆ

ಲೇಬರ್ ಕಾಂಟ್ರ್ಯಾಕ್ಟ್, ಫುಲ್ ಕಾಂಟ್ರ್ಯಾಕ್ಟ್ ಮತ್ತು ಕ್ಯಾಟರಿಂಗ್ ಹೀಗೆ ಮೂರು ಬಗೆಯಲ್ಲಿ ಇದೆ. ಲೇಬರ್ ಕಾಂಟ್ರ್ಯಾಕ್ಟ್ ಅಂದರೆ, ಕಸ್ಟಮರ್ ಗಳು ಅಡುಗೆ ಮಾಡುವುದಕ್ಕೆ ತಗುಲುವ ಲೇಬರ್ ವೆಚ್ಚವನ್ನು ಮಾತ್ರ ನೀಡುತ್ತಾರೆ. ಉಳಿದಂತೆ ದಿನಸಿ, ಪಾತ್ರೆಗಳು, ಗ್ಯಾಸ್, ಪಾತ್ರೆ ತೊಳೆಯುವವರು ಎಲ್ಲವೂ ಅವರದೇ ಜವಾಬ್ದಾರಿ. ಫುಲ್ ಕಾಂಟ್ರ್ಯಾಕ್ಟ್ ಆದರೆ ಅಡುಗೆಯವರ ಸಂಬಳವೂ ಸೇರಿದ ಹಾಗೆ ದಿನಸಿ, ಪಾತ್ರೆ, ಗ್ಯಾಸ್ ಎಲ್ಲವೂ ಸೇರಿ ಹಣ ಪಡೆಯಲಾಗುತ್ತದೆ ಈ ಎರಡೂ ಸನ್ನಿವೇಶದಲ್ಲಿ ಕಾರ್ಯಕ್ರಮ ಎಲ್ಲಿರುತ್ತದೋ ಅದೇ ಸ್ಥಳದಲ್ಲಿ ಅಡುಗೆ ಮಾಡಲಾಗುತ್ತದೆ. ಇನ್ನು ಕ್ಯಾಟರಿಂಗ್ ಅಂದರೆ, ಒಂದು ಊಟ ಅಥವಾ ತಿಂಡಿಗೆ ತಲಾ ಇಷ್ಟು ಎಂದು ನಿಗದಿ ಮಾಡಿ, ಅದನ್ನು ನಾವೇ ಮಾಡಿಕೊಂಡು ಹೋಗಿ, ಕಾರ್ಯಕ್ರಮ ಇರುವ ಸ್ಥಳಕ್ಕೆ ತಲುಪಿಸುತ್ತೇವೆ. ಸದ್ಯಕ್ಕೆ ನಾನು ಲೇಬರ್ ಕಾಂಟ್ರ್ಯಾಕ್ಟ್ ವಹಿಸಿಕೊಳ್ಳುತ್ತಿಲ್ಲ. ಹೀಗೆ ಮಾಡುತ್ತಾ ಹದಿನೈದು ವರ್ಷವೇ ಆಯಿತು. ಏಕೆಂದರೆ, ಲೇಬರ್ ಕಾಂಟ್ರ್ಯಾಕ್ಟ್ ರಿಸ್ಕ್ ಜಾಸ್ತಿ ಹಾಗೂ ಲಾಭ ಕಡಿಮೆ. ಇನ್ನೂ ಕ್ಯಾಟರಿಂಗ್ ಮಾಡುವುದಕ್ಕೆ ಬೇಕಾದ ಮನಸ್ಥಿತಿ ಹಾಗೂ ಪರಿಸ್ಥಿತಿ ಬೇರೆ. ಅದು ಕೂಡ ಮಾಡುವುದಿಲ್ಲ.

ಯಾವುದಕ್ಕೆ ಎಷ್ಟು ರೇಟ್ ಇದೆ?

ಯಾವುದಕ್ಕೆ ಎಷ್ಟು ರೇಟ್ ಇದೆ?

ಈಗಿನ ಟ್ರೆಂಡ್ ಹೇಗಿದೆ ಅಂದರೆ, ಊಟಕ್ಕೆ- ವೆಲ್ ಕಂ ಡ್ರಿಂಕ್ಸ್- ತಿಂಡಿ, ಕಾಫಿಗೆ- ತಾಂಬೂಲಕ್ಕೆ- ಆರತಕ್ಷತೆಗೆ ಹೀಗೆ ಪ್ರತಿಯೊಂದಕ್ಕೂ ಪ್ರತ್ಯೇಕವಾಗಿ ದರ ನಿಗದಿ ಮಾಡಲಾಗುತ್ತದೆ. ಏಕೆಂದರೆ ತಿಂಡಿಗೆ ಕಡಿಮೆ ಜನ, ಊಟಕ್ಕೆ ಜಾಸ್ತಿ ಜನ ಹಾಗೂ ಆರತಕ್ಷತೆಗೆ ವಿಪರೀತ ಜನ ಬರುವ ಕಾಲ ಇದು. ಆದ್ದರಿಂದ ತಿಂಡಿ- ಕಾಫಿಗೆ 50 ಅಥವಾ 70 ಮತ್ತು ಯಾವುದು ತಿಂಡಿ ಎಂಬುದರ ಆಧಾರದಲ್ಲಿ 100 ರುಪಾಯಿ ತನಕ ಆಗುತ್ತದೆ. ಇನ್ನು ಊಟಕ್ಕೆ 280ರಿಂದ 350 ಹಾಗೂ 400 ರುಪಾಯಿ ತನಕ ಆಗುತ್ತದೆ. ಇದು ಮೆನು ಏನು ಎಂಬುದರ ಆಧಾರದಲ್ಲಿ ನಿರ್ಧಾರವಾಗುತ್ತದೆ. ಇನ್ನು ಆರತಕ್ಷತೆಗೆ ನಾರ್ಥ್ ಇಂಡಿಯನ್ ಒಳಗೊಂಡಂತೆ 320 ರುಪಾಯಿಯಿಂದ ಶುರುವಾಗುತ್ತದೆ. ಅದು ಕೂಡ ಮೆನು ಏನು ಎಂಬುದರ ಮೇಲೆ ಅವಲಂಬಿಸಿರುತ್ತದೆ. ಈಗ ಹೇಳಿದ್ದ ಮೊತ್ತ ಒಬ್ಬೊಬ್ಬ ಅಡುಗೆ ಕಾಂಟ್ರ್ಯಾಕ್ಟರ್ ಒಂದೊಂದು ಹೇಳಬಹುದು. ಆದರೆ ಆಹಾರ ಪದಾರ್ಥಗಳ ಗುಣಮಟ್ಟ, ಕೆಲಸ ಮಾಡುವ ಗುಣಮಟ್ಟದ ಕೆಲಸಗಾರ, ಸರ್ವೀಸ್ ಇವೆಲ್ಲವನ್ನೂ ಕಾಣಬೇಕು ಅನ್ನೋದಾದರೆ ಖರ್ಚು ಆಗೇ ಆಗುತ್ತದೆ.

ದಿನಸಿ ವ್ಯಾಪಾರಿಯೇ ಅಡುಗೆ ಕಾಂಟ್ರ್ಯಾಕ್ಟ್ ವಹಿಸಿಕೊಳ್ತಾರೆ

ದಿನಸಿ ವ್ಯಾಪಾರಿಯೇ ಅಡುಗೆ ಕಾಂಟ್ರ್ಯಾಕ್ಟ್ ವಹಿಸಿಕೊಳ್ತಾರೆ

ಇನ್ನೊಂದು ಉದಾಹರಣೆ ಹೇಳ್ತೀನಿ: ದಕ್ಷಿಣ ಬೆಂಗಳೂರಿನಲ್ಲಿ ಬಹಳ ಹೆಸರುವಾಸಿಯಾದ ದಿನಸಿ ವ್ಯಾಪಾರಿಯೊಬ್ಬರು ಈಗ ಅಡುಗೆ ಕಾಂಟ್ರ್ಯಾಕ್ಟ್ ವಹಿಸಿಕೊಳ್ಳುತ್ತಾರೆ. ಅವರಿಗೆ ಅಡುಗೆ ಮಾಡುವ ಬಗ್ಗೆ ಗೊತ್ತಿಲ್ಲ. ಆದರೆ ಅವರ ಸಂಬಂಧಿಗೆ ಅಡುಗೆ ಜವಾಬ್ದಾರಿ ವಹಿಸುತ್ತಾರೆ. ದಿನಸಿ ಅಂಗಡಿ ಇವರದೇ ಇದೆಯಾದ್ದರಿಂದ ಅದರಲ್ಲಿ ಒಂದಿಷ್ಟು ಲಾಭ ಹೆಚ್ಚಾಗುತ್ತದೆ. ಇಂಥ ಕಾಂಬಿನೇಷನ್ ಅಪರೂಪ. ಇನ್ನು ಕೆಲವು ತಿನಿಸುಗಳನ್ನು ಅಡುಗೆಯವರನ್ನು ಇಟ್ಟು, ಅವರಿಂದ ಮಾಡಿಸಿದರೆ ವಿಪರೀತ ದುಬಾರಿ ಆಗುತ್ತದೆ. ಆ ಕಾರಣಕ್ಕೆ ಹೊರಗಿನಿಂದ ತರ್ತೀವಿ. ಕೆಲವು ಬಾರಿ ಕೆಲವರು ಒಪ್ಪಲ್ಲ. ಅಂಥ ಸನ್ನಿವೇಶದಲ್ಲಿ ಖರ್ಚು ಹೆಚ್ಚಾಗುತ್ತದೆ ಅನ್ನೋದು ತಿಳಿಸಿಬಿಡ್ತೀನಿ. ಉದಾಹರಣೆಗೆ ಪೇಣಿ. ಐನೂರು ಪೇಣಿ ಮಾಡುವುದಕ್ಕೆ ಆಗುವ ಖರ್ಚು ಲೆಕ್ಕ ಹಾಕಿದರೆ ರೆಡಿಮೇಡ್ ತಂದುಬಿಡುವುದು ಉತ್ತಮ. ಅದಕ್ಕೆ ಹಾಕುವ ಶ್ರಮದಲ್ಲಿ ಬೇರೆ ಅಡುಗೆಗಳನ್ನು ಇನ್ನೂ ಚೆನ್ನಾಗಿ ಮಾಡಬಹುದು. ಸರ್ವೀಸ್ ಚೆನ್ನಾಗಿ ಕೊಡಬಹುದು. ಅದೇ ರೀತಿ ಒತ್ತು ಶ್ಯಾವಿಗೆ ಕೂಡ ಅಷ್ಟೇ.

ಹೆಚ್ಚಿನ ಖರ್ಚಾಗುವುದು ಲೇಬರ್ ಗೆ

ಹೆಚ್ಚಿನ ಖರ್ಚಾಗುವುದು ಲೇಬರ್ ಗೆ

ಅಡುಗೆ ಕಾಂಟ್ರ್ಯಾಕ್ಟ್ ನಲ್ಲಿ ಅತಿ ದೊಡ್ಡ ಖರ್ಚು ಇರುವುದೇ ಲೇಬರ್ ಗೆ. ಶೇಕಡಾ ಐವತ್ತರಷ್ಟು ಅದಕ್ಕೇ ಆಗುತ್ತದೆ. ಆ ನಂತರ ದಿನಸಿಯದು. ಆದ್ದರಿಂದ ಇವೆರಡನ್ನೂ ಬಹಳ ಉತ್ತಮವಾಗಿ, ಬುದ್ಧಿವಂತಿಕೆಯಿಂದ ಮ್ಯಾನೇಜ್ ಮಾಡಬೇಕು. ಚೆನ್ನಾಗಿ ಕೆಲಸ ಮಾಡುವವರಿಗೆ ಹೆಚ್ಚಿಗೆ ಹಣವನ್ನು ಕೊಡಲೇಬೇಕು. ಇನ್ನು ಬೇಡಿಕೆ ಇರುವ ದಿನಗಳಲ್ಲಿ ಹೆಚ್ಚಿಗೆ ಡಿಮ್ಯಾಂಡ್ ಮಾಡುವುದು ಸಹ ಉಂಟು. ಇನ್ನು ನಿಮ್ಮ ಜತೆಗೆ ಇರುವವರು, ಇದು ಮತ್ತೊಬ್ಬರ ಕೆಲಸ. ಅವನಿಗೆ ನಷ್ಟವಾದರೆ ನನಗೇನು ಅಂತ ಯೋಚಿಸಿದರೆ ಅಷ್ಟೇ ಕತೆ ಮುಗಿಯಿತು. ಇನ್ನೊಂದು ವಿಚಾರ ಏನೆಂದರೆ, ಶ್ರದ್ಧೆ- ಎಚ್ಚರಿಕೆ ಹಾಗೂ ಜಾಗ್ರತೆ ಎಷ್ಟಿದ್ದರೂ ಸಾಲದು. ಹೀಗೇ ಅಡುಗೆ ಕಾಂಟ್ರ್ಯಾಕ್ಟರ್ ವೊಬ್ಬರು ಸಸ್ಯಾಹಾರಿ- ಮಾಂಸಾಹಾರಿ ಎರಡೂ ಬಗೆಯ ಕ್ಯಾಟರಿಂಗ್ ಮಾಡುತ್ತಿದ್ದರು. ಅದೊಂದು ದಿನ ಎರಡು ಬಗೆಯ ಆರ್ಡರ್ ಬಂದಿತ್ತು. ಅದೇನು ಅ‌ಚಾತುರ್ಯ ಆಯಿತೋ ಸತ್ಯನಾರಾಯಣ ಪೂಜೆ ಇದ್ದ ಮನೆಗೆ ನಾನ್ ವೆಜ್ ಊಟ ಹೋಯಿತು. ಅಂಥ ಸನ್ನಿವೇಶದಲ್ಲಿ ಎಂಥ ಅವಮಾನ- ಮುಜುಗರ ಯೋಚಿಸಿ ನೋಡಿ.

ಸುಳ್ಳು ಹೇಳಿದರೆ ಅವಮಾನದ ಪಾಲಾಗಬೇಕಾಗುತ್ತದೆ

ಸುಳ್ಳು ಹೇಳಿದರೆ ಅವಮಾನದ ಪಾಲಾಗಬೇಕಾಗುತ್ತದೆ

ಇನ್ನು ಈಗ ಹೇಳುತ್ತಿರುವುದು ಅಡುಗೆ ಒಪ್ಪಿಸಲು ಬರುತ್ತಾರಲ್ಲ ಅವರ ಬಗ್ಗೆ. ಮುನ್ನೂರು ಜನ ಬರುವ ಕಾರ್ಯಕ್ರಮಕ್ಕೆ ಇನ್ನೂರೈವತ್ತು ಅಂತ ಹೇಳಿರ್ತಾರೆ. ಏಕೆಂದರೆ ಅವರಿಗೆ ಯಾರೋ ಹೇಳಿರ್ತಾರೆ: ಅಡುಗೆಯವರಿಗೆ ಇನ್ನೂರೈವತ್ತು ಹೇಳಿದರೆ ಮಾಡುವುದೇ ಇನ್ನೂರು ಜನಕ್ಕೆ ಅಂತ. ಆದರೆ ನಾವು ಯಾವಾಗಲೂ ಐವತ್ತರಿಂದ- ಎಪ್ಪತ್ತೈದು ಜನಕ್ಕೆ ಹೆಚ್ಚಿಗೆ ಮಾಡಿರ್ತೀವಿ. ಏಕೆಂದರೆ, ಒಂದು ಛತ್ರದಲ್ಲಿ ಸೆಕ್ಯೂರಿಟಿ ಗಾರ್ಡ್ ನಿಂದ ಆರಂಭವಾಗಿ, ಪಾತ್ರೆ ತೊಳೆಯುವವರು, ವಾಲಗದವರು, ಕ್ಯಾಮೆರಾಮನ್ ಮತ್ತು ಅಡುಗೆಯವರೂ ಸೇರಿದ ಹಾಗೆ ಐವತ್ತರಿಂದ- ಎಪ್ಪತ್ತೈದು ಜನ ಹೆಚ್ಚಿಗೆ ಆಗುತ್ತಾರೆ. ಕೆಲವು ಸಲ ಅಂದುಕೊಂಡಿದ್ದಕ್ಕಿಂತ ಕಡಿಮೆ ಜನ ಆಗಬಹುದು. ವಿಪರೀತ ಕಡಿಮೆ ಜನ ಆದರೆ ಕೆಲಸ ಒಪ್ಪಿಸಿದವರಿಗೂ- ಒಪ್ಪಿದವರು ಇಬ್ಬರಿಗೂ ನಷ್ಟವೇ. ದುಡ್ಡು ಉಳಿಸಿಕೊಳ್ಳಬೇಕು ಅನ್ನೋ ಆಲೋಚನೆ ಸರಿ. ಅದಕ್ಕಾಗಿ ಸುಳ್ಳು ಹೇಳಿದರೆ ಅವಮಾನದ ಪಾಲಾಗಬೇಕಾಗುತ್ತದೆ.

ಅಡುಗೆ ಕಾಂಟ್ರ್ಯಾಕ್ಟ್ ನಲ್ಲಿ ಲಾಭ ಎಷ್ಟಿದೆ

ಅಡುಗೆ ಕಾಂಟ್ರ್ಯಾಕ್ಟ್ ನಲ್ಲಿ ಲಾಭ ಎಷ್ಟಿದೆ

ಇದರಲ್ಲಿ ಲಾಭ ಎಷ್ಟಿದೆ ಎಂಬುದಕ್ಕೆ ನಾನು ಉತ್ತರ ಹೇಳೋದಿಲ್ಲ. ಏಕೆಂದರೆ ಇದರಲ್ಲಿ ಉದ್ಧಾರ ಆದವರಿದ್ದಾರೆ. ನಷ್ಟ ಆದವರಿದ್ದಾರೆ. ಪ್ರಯತ್ನ- ಶ್ರಮದ ಜತೆಗೆ ಅದೃಷ್ಟವನ್ನೂ ನಂಬ್ತೀನಿ ನಾನು. ಆದ್ದರಿಂದ ಅದೃಷ್ಟ ಕೂಡ ಮುಖ್ಯ. ಲಾಭ ಖಂಡಿತಾ ಚೆನ್ನಾಗಿ ಇದ್ದೇ ಇದೆ. ಈಚೆಗೆ ಹೋಟೆಲ್ ನವರು ಸಹ ಕ್ಯಾಟರಿಂಗ್ ಗೆ ಬಂದಿದ್ದಾರೆ. ಆದರೆ ಅವರಿಗೆ ಕೆಲವು ಮಿತಿಗಳಿವೆ. ದೀರ್ಘಾವಧಿಗೆ ಉಳಿಯುವುದು ಕಷ್ಟ. ಎಂಜಿನಿಯರ್ ಮಾಡಿದವರು, ಡಿಗ್ರಿ- ಪಿ.ಜಿ. ಮಾಡಿದಂಥವರು ಸಹ ಈ ವೃತ್ತಿಗೆ ಬರುತ್ತಿದ್ದಾರೆ. ಆದರೆ ಕೆಲವು ಜಾತಿಗಳಲ್ಲಿ ಅಡುಗೆ ಕೆಲಸ ಮಾಡುವವರ ಬಗ್ಗೆ ಹಾಗೂ ಆ ವೃತ್ತಿ ಬಗ್ಗೆಯೇ ತಿರಸ್ಕಾರ ಇದೆ. ಆ ಕಾರಣಕ್ಕೆ ಈ ವೃತ್ತಿಗೆ ಬರುವವರು ಹಿಂದು- ಮುಂದೆ ಆಲೋಚಿಸುತ್ತಾರೆ. ಇನ್ನು ಈಚಿಗೆ ವೆಡ್ಡಿಂಗ್ ಪ್ಲ್ಯಾನರ್ಸ್, ಈವೆಂಟ್ ಮ್ಯಾನೇಜ್ ಮೆಂಟ್ ಎಂಬ ಹಣೆಪಟ್ಟಿ ಹಚ್ಚಿದ ಮೇಲೆ ಪರವಾಗಿಲ್ಲ. ಸ್ವಂತವಾಗಿ ಅಡುಗೆ ಕಾಂಟ್ರ್ಯಾಕ್ಟ್ ಶುರು ಮಾಡುವ ಮುನ್ನ ಇಲ್ಲಿನ ಎಲ್ಲ ಕೆಲಸವನ್ನೂ ಮತ್ತೊಬ್ಬರ ಬಳಿ ಹೋಗಿ, ಕೆಲ ಸಮಯ ಮಾಡಿರಬೇಕು. ಆಗ ತಪ್ಪುಗಳಾಗುವ ಪ್ರಮಾಣ ಕಡಿಮೆ ಆಗುತ್ತದೆ ಎಂದು ಮಾತು ಮುಗಿಸಿದರು ಅನಿಲ್.

English summary

Goodreturn Kannada Career Guide: Cooking Contract Complete Details

Here is the series of Goodreturn Kannada guide for career start cooking contract. Career guide in Kannada.
Story first published: Tuesday, December 10, 2019, 14:27 [IST]
Company Search
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more