ವಿವಾಹದ ಬಳಿಕ ಪ್ಯಾನ್ ಕಾರ್ಡ್ನಿಂದ ಸರ್ನೇಮ್, ವಿಳಾಸ ಬದಲಾವಣೆ ಮಾಡುವುದು ಹೇಗೆ?
ಪರ್ಮನೆಂಟ್ ಅಕೌಂಟ್ ನಂಬರ್ ಕಾರ್ಡ್ (ಪ್ಯಾನ್) ಹತ್ತು ಅಂಕಿಗಳ ಮುಖ್ಯವಾದ ದಾಖಲೆಗಳಲ್ಲಿ ಒಂದಾಗಿದೆ. ಆದಾಯ ತೆರಿಗೆ ಇಲಾಖೆಯಿಂದ ನೀಡಲಾದ ಹತ್ತು-ಅಂಕಿಯ ವಿಶಿಷ್ಟ ಸಂಖ್ಯೆ ಪ್ಯಾನ್ ಕಾರ್ಡ್ ಎಂದೇ ಜನಪ್ರಿಯವಾಗಿದೆ. ಈ ಕಾರ್ಡ್ ಈಗ ಎಲ್ಲಾ ಹಣಕಾಸು ವಹಿವಾಟಿನಲ್ಲೂ ಅತೀ ಮುಖ್ಯವಾಗಿದೆ. ಪ್ಯಾನ್ ಕಾರ್ಡ್ ಅನ್ನು ನಮ್ಮ ಐಡಿ ಪುರಾವೆಯಾಗಿ ಬಳಸಲಾಗುತ್ತದೆ. ಬ್ಯಾಂಕ್ಗಳಲ್ಲಿ, ನಿಮ್ಮ ಎಲ್ಲಾ ಹಣಕಾಸು ವ್ಯವಹಾರಕ್ಕೆ ಪ್ಯಾನ್ ಕಾರ್ಡ್ ಮುಖ್ಯವಾಗಿದೆ.
ಹಾಗಿರುವಾಗ ನಿಮ್ಮ ವಿವಾಹದ ಬಳಿಕ ಪ್ಯಾನ್ ಕಾರ್ಡ್ನಿಂದ ನಿಮ್ಮ ಅಗತ್ಯ ವಿವರಗಳನ್ನು ಬದಲಾವಣೆ ಮಾಡುವುದು ನೀವು ಎಂದಿಗೂ ಮರೆಯಬೇಡಿ. ನೀವು ಮದುವೆಯಾಗಿದ್ದರೆ ಮತ್ತು ನಿಮ್ಮ ಪ್ಯಾನ್ ಕಾರ್ಡ್ನಲ್ಲಿ ನಿಮ್ಮ ಸರ್ನೇಮ್ ಹಾಗೂ ವಿಳಾಸವನ್ನು ಬದಲಾಯಿಸಲು ಬಯಸಿದರೆ, ಅತ್ಯಲ್ಪ ಶುಲ್ಕವನ್ನು ಪಾವತಿಸುವ ಮೂಲಕ ನೀವು ಬದಲಾವಣೆ ಮಾಡಿಕೊಳ್ಳಬಹುದು. ನೀವು ಆನ್ಲೈನ್ ಮೂಲಕವೇ ಬದಲಾವಣೆಯನ್ನು ಮಾಡಿಕೊಳ್ಳಬಹುದು.
ಹೆಸರೇ ಸೂಚಿಸುವಂತೆ ಪರ್ಮನೆಂಟ್ ಅಕೌಂಟ್ ನಂಬರ್ ಶಾಶ್ವತ ಸಂಖ್ಯೆ ಮತ್ತು ಬದಲಾಗುವುದಿಲ್ಲ. ಆದರೆ ನಮ್ಮ ವಿಳಾಸ ಬದಲಾವಣೆ ಆದಾಗ ಪ್ಯಾನ್ ಕಾರ್ಡ್ನಲ್ಲೂ ವಿಳಾಸ ಬದಲಾವಣೆ ಮಾಡಿಕೊಳ್ಳಬೇಕಾಗಿದೆ. ಅಂತಹ ಬದಲಾವಣೆಗಳನ್ನು ಐಟಿಡಿಗೆ ತಿಳಿಸಬೇಕಾಗಿದೆ. ಇದರಿಂದಾಗಿ ಐಟಿಡಿಯ ಪ್ಯಾನ್ ಡೇಟಾಬೇಸ್ ಅನ್ನು ನವೀಕರಿಸಬಹುದು. ಹೊಸ ಪ್ಯಾನ್ ಕಾರ್ಡ್ಗಾಗಿ ವಿನಂತಿ ಅಥವಾ ಪ್ಯಾನ್ ಡೇಟಾದಲ್ಲಿನ ಬದಲಾವಣೆಗಳು ಅಥವಾ ತಿದ್ದುಪಡಿಗಾಗಿ ಫಾರ್ಮ್ ಅನ್ನು ಭರ್ತಿ ಮಾಡಬೇಕಾಗುತ್ತದೆ. ಈ ಫಾರ್ಮ್ ಅನ್ನು ನಾವು ಯಾವುದೇ TIN-FC ಅಥವಾ ಆನ್ಲೈನ್ನಲ್ಲಿ NSDL e-Gov - TIN ವೆಬ್ಸೈಟ್ನಲ್ಲಿ ಸಲ್ಲಿಸಬಹುದು. ಹಾಗಾದರೆ ವಿವಾಹದ ಬಳಿಕ ನಾವು ಪ್ಯಾನ್ ಕಾರ್ಡ್ನಲ್ಲಿ ಸರ್ನೇಮ್ ಹಾಗೂ ವಿಳಾಸವನ್ನು ಬದಲಾವಣೆ ಮಾಡುವುದು ಹೇಗೆ ಎಂಬ ಬಗ್ಗೆ ಇಲ್ಲಿದೆ ಸಂಪೂರ್ಣ ವಿವರ ಮುಂದೆ ಓದಿ...

ಸರ್ನೇಮ್, ವಿಳಾಸ ಬದಲಾವಣೆ ಮಾಡುವುದು ಹೇಗೆ?
* ಮೊದಲು https://www.onlineservices.nsdl.com/paam/endUserRegisterContact.html ಗೆ ಭೇಟಿ ನೀಡಿ
* ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಮತ್ತು ಪ್ಯಾನ್ ಡೇಟಾದಲ್ಲಿ ಬದಲಾವಣೆಗಳು ಅಥವಾ ತಿದ್ದುಪಡಿಯನ್ನು ಆಯ್ಕೆಮಾಡಿ
* ನಿಮ್ಮ ಹೆಸರು, ಹುಟ್ಟಿದ ದಿನಾಂಕ, ಲಿಂಗ, ಪ್ಯಾನ್ ಸಂಖ್ಯೆ, ಮೊಬೈಲ್ ಸಂಖ್ಯೆಯನ್ನು ಹೊಂದಿರುವ ಅಗತ್ಯವಿರುವ ಎಲ್ಲಾ ವಿವರಗಳನ್ನು ನಮೂದಿಸಿ
* ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ
* ಬಳಿಕ Submit ಮೇಲೆ ಕ್ಲಿಕ್ ಮಾಡಬೇಕು (ಫಾರ್ಮ್ ಅನ್ನು ನೀವು ಭರ್ತಿ ಮಾಡಿದ ಬಳಿಕ ಪಾವತಿಯನ್ನು ಮಾಡಬೇಕಾಗುತ್ತದೆ)
ಪ್ಯಾನ್ ಕಾರ್ಡ್ನ ವಿಳಾಸ, ಸರ್ನೇಮ್ ಬದಲಾವಣೆಗೆ ಎಷ್ಟು ಶುಲ್ಕ?
ಪರ್ಮನೆಂಟ್ ಅಕೌಂಟ್ ನಂಬರ್ ಕಾರ್ಡ್ (ಪ್ಯಾನ್) ಹೊಂದಿರುವವರು ವಿಳಾಸ ಅಥವಾ ಸರ್ನೇಮ್ ಅನ್ನು ಬದಲಾವಣೆ ಮಾಡಿಕೊಳ್ಳಲು ಶುಲ್ಕವಾಗಿ 110 ರೂಪಾಯಿಯನ್ನು ಪಾವತಿ ಮಾಡಬೇಕಾಗುತ್ತದೆ. ಆದರೆ ನೀವು ಬದಲಾಯಿಸಲು ಬಯಸುವ ವಿಳಾಸ ಭಾರತದ್ದು ಆಗಿಲ್ಲದಿದ್ದರೆ ನೀವು ಈ ಬದಲಾವಣೆಗಾಗಿ 1,020 ರೂಪಾಯಿ ಶುಲ್ಕ ಪಾವತಿ ಮಾಡಬೇಕಾಗುತ್ತದೆ. ಪ್ಯಾನ್ ಕಾರ್ಡ್ ಹೊಂದಿರುವವರು ಶುಲ್ಕವನ್ನು ಪಾವತಿಸಿದ ಬಳಿಕ ಪ್ಯಾನ್ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಂಡು ಅದನ್ನು ಭರ್ತಿ ಮಾಡಿಕೊಳ್ಳಬೇಕು. ಇನ್ನು ಫಾರ್ಮ್ ಸಲ್ಲಿಸುವ ವೇಳೆ ನೀವು ಸಹಿ ಮಾಡಿದ ಎರಡು ಭಾವಚಿತ್ರ ಬೇಕಾಗುತ್ತದೆ. ಈ ಅಪ್ಲಿಕೇಶನ್ ಅನ್ನು ಆದಾಯ ತೆರಿಗೆ ಪ್ಯಾನ್ ಸೇವೆಗಳ ಘಟಕಕ್ಕೆ ಎನ್ಎಸ್ಡಿಎಲ್ ವಿಳಾಸಕ್ಕೆ ಕಳುಹಿಸಬೇಕು. ನೀವು ಆನ್ಲೈನ್ ನೆಟ್ ಬ್ಯಾಂಕಿಂಗ್ ಮೂಲಕ ಅಥವಾ ನಿಮ್ಮ ಡೆಬಿಟ್, ಕ್ರೆಡಿಟ್ ಅಥವಾ ಕ್ಯಾಷ್ ಕಾರ್ಡ್ ಮೂಲಕ ಈ ಪಾವತಿಯನ್ನು ಮಾಡಬೇಕಾಗುತ್ತದೆ.