For Quick Alerts
ALLOW NOTIFICATIONS  
For Daily Alerts

ಷೇರು ಮಾರುಕಟ್ಟೆಯಲ್ಲಿ ದುಡ್ಡು ಮಾಡೋದು ಹೇಗೆ? ಇಲ್ಲಿದೆ ರಹಸ್ಯ ಮಂತ್ರ

By ಕೆ. ಜಿ. ಕೃಪಾಲ್
|

ಷೇರುಪೇಟೆ ಅಂದಾಕ್ಷಣ ಒಂದೋ ಲಾಭದ ಬಗ್ಗೆ ಆಲೋಚನೆ ಮಾಡ್ತೀವಿ ಅಥವಾ ನಷ್ಟದ ಬಗ್ಗೆ ಗಾಬರಿ ಪಡ್ತೀವಿ. ಆದರೆ ಎಚ್ಚರಿಕೆಯಿಂದ, ಅಧ್ಯಯನದ ಮೂಲಕ ಹೂಡಿಕೆ ಮಾಡಬೇಕು ಎಂಬ ಓನಾಮವನ್ನು ಮರೆತುಬಿಡ್ತೀವಿ. ಅದರಲ್ಲೂ ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಕಂಪೆನಿಗಳಲ್ಲಿ ಹೂಡಿಕೆ ಮಾಡುವಾಗ ಆ ಕಂಪೆನಿಯ ಷೇರುಗಳ ಇತಿಹಾಸ ತಿಳಿದುಕೊಳ್ಳಬೇಕು. ದರಗಳ ಏರಿಳಿತದ ಮಾಹಿತಿ ಇರಬೇಕು.

 

ಹೇಗೆ ಹಿಂದಣ ಹೆಜ್ಜೆಯನ್ನರಿಯದೆ ಮುಂದೆ ಅಡಿ ಇಡಲಾಗದೋ ಇದೂ ಅದೇ ರೀತಿ. ಕೆಲವು ಕಂಪೆನಿಯ ಷೇರುಗಳನ್ನು ಎರಡು ವರ್ಷಗಳಿಂದಲೂ ಇಟ್ಟುಕೊಂಡಿದ್ದರೂ ಆಗ ಖರೀದಿಸುವಾಗ ಬೆಲೆ ಎಷ್ಟಿತ್ತೋ ಅದೇ ಬೆಲೆಯಲ್ಲಿರುವುದು ಕಂಡುಬರುತ್ತದೆ. ಆದರೆ ಅದೇ ಷೇರು ಎರಡೇ ತಿಂಗಳಲ್ಲಿ ಊಹಿಸಲು ಕೂಡ ಸಾಧ್ಯವಿಲ್ಲದಂಥ ಲಾಭ ಮಾಡಿಕೊಟ್ಟಿವೆ.

ಇನ್ನು ಹೆಚ್ಚಿಗೆ ಪೀಠಿಕೆ ಇಲ್ಲದೆ ಕೆಲವು ಉದಾಹರಣೆಗಳನ್ನು ನೀಡುತ್ತಿದ್ದೇನೆ; ನಿಮ್ಮ ಗಮನಕ್ಕೆ ಇರಲಿ, ಹೂಡಿಕೆ ಸಂದರ್ಭದಲ್ಲಿ ಮಾರ್ಗದರ್ಶನಕ್ಕೆ ಆದೀತು ಎಂಬ ಕಾರಣಕ್ಕೆ.

Rallies ಇಂಡಿಯಾ

Rallies ಇಂಡಿಯಾ

ಈ ಕಂಪೆನಿಯು ಫೆಬ್ರವರಿ 20 ರಂದು ವಾರ್ಷಿಕ ಗರಿಷ್ಠ ಮಟ್ಟವಾದ ರು. 255 ತಲುಪಿದೆ. 2019ರ ಡಿಸೆಂಬರ್ ತಿಂಗಳಲ್ಲಿ ರು. 165ರ ಸಮೀಪವಿದ್ದಂತಹುದು ಎರಡೇ ತಿಂಗಳಲ್ಲಿ ರು. 255ಕ್ಕೆ ಜಿಗಿದಿರುವುದು ಕಂಪನಿಯ ಸಾಧನೆಯಿಂದಲ್ಲ ಅದು ಫಂಡಮೆಂಟಲ್ಸ್ ನಿಂದ.

ಇದೇ ಕಂಪೆನಿಯ ಷೇರನ್ನು ಜನವರಿ 2018 ರಲ್ಲಿ ರು. 250ರ ಸಮೀಪ ಕೊಂಡವರಿಗೆ ಸುಮಾರು ಎರಡು ವರ್ಷಗಳ ನಂತರ ಅವರ ಬೆಲೆ ಸಿಗುತ್ತಿದೆ. ಕಂಪೆನಿ ಒಳ್ಳೆಯದಿದ್ದರೂ ಪೇಟೆಯ ದರ ಗರಿಷ್ಠದಲ್ಲಿದ್ದಾಗ ಖರೀದಿಸಿಡರೆ, ಒತ್ತಾಯಪೂರ್ವಕವಾಗಿ ಅವರು ದೀರ್ಘಕಾಲೀನ ಹೂಡಿಕೆದಾರರಾಗಿ ಪರಿವರ್ತಿತರಾಗುತ್ತಾರೆ ಎಂಬುದನ್ನು ನೆನಪಿನಲ್ಲಿಡಬೇಕು. ಈಗ ಈ ಕಂಪೆನಿಯ ಷೇರಿನ ಬೆಲೆ ರು. 245ರ ಸಮೀಪವಿದೆ.

ಕಂಪೆನಿಯ ದರಗಳ ಬೆಲೆ ಪ್ರಭಾವ ಬೀರಬಹುದಾದ ಇತ್ತೀಚಿನ ಬೆಳವಣಿಗೆಗಳೆಂದರೆ. ಮೆಟಾಹೆಲಿಕ್ಸ್ ಲೈಫ್ ಸೈನ್ಸಸ್ ಲಿಮಿಟೆಡ್ ಮತ್ತು ಜೀರೋ ವೇಸ್ಟ್ ಆಗ್ರೋ - ಆರ್ಗಾನಿಕ್ಸ್ ಲಿಮಿಟೆಡ್ ಎಂಬ ಕಂಪೆನಿಗಳನ್ನು ತನ್ನಲ್ಲಿ ನ್ಯಾಷನಲ್ ಕಂಪೆನಿ ಲಾ ಟ್ರಿಬ್ಯೂನಲ್ ನ ಆದೇಶದ ಪ್ರಕಾರ ಈ ಕಂಪೆನಿಯು ವಿಲೀನಗೊಳಿಸಿಕೊಳ್ಳಲಿದೆ. ಇದರ ಫಲ ಯಾವ ರೀತಿ ಕಂಪೆನಿಯ ಲಾಭ- ಗಳಿಕೆಯನ್ನು ವೃದ್ಧಿಸುವುದು, ಕಂಪೆನಿಯ ಘನತೆಯನ್ನು ಹೆಚ್ಚಿಸುವುದು ಎಂಬುದನ್ನು ಅವಲಂಬಿಸಿದೆ.

ಬಾಲಕೃಷ್ಣ ಇಂಡಸ್ಟ್ರಿಸ್
 

ಬಾಲಕೃಷ್ಣ ಇಂಡಸ್ಟ್ರಿಸ್

ಈ ಕಂಪೆನಿ ಷೇರಿನ ಬೆಲೆ 2019ರ ಸೆಪ್ಟೆಂಬರ್ ನಲ್ಲಿ ರು. 683ರಲ್ಲಿದ್ದು, ಫೆಬ್ರವರಿಯಲ್ಲಿ ರು. 1,298ರ ವಾರ್ಷಿಕ ಗರಿಷ್ಠವನ್ನು ತಲುಪಿ, ರು. 1,265 ರಲ್ಲಿ ವಾರಾಂತ್ಯ ಕಂಡಿದೆ. ಕೇವಲ ಐದಾರು ತಿಂಗಳಲ್ಲಿ ಷೇರಿನ ಬೆಲೆ ದ್ವಿಗುಣವಾಗುವ ಹಂತಕ್ಕೆ ತಲುಪಿದೆ. ಇದೇ ಅನುಪಾತ ಕಂಪೆನಿಯ ಸಾಧನೆಯಲ್ಲಿ ಬಿಂಬಿತವಾಗಿಲ್ಲ.

ಈ ಕಂಪೆನಿಯ ಷೇರಿನ ಬೆಲೆ 2018ರ ನವೆಂಬರ್ ನಲ್ಲಿ ರು. 1,200ರಲ್ಲಿತ್ತು. ಸುಮಾರು ಒಂದು ವರ್ಷ 4 ತಿಂಗಳ ನಂತರ ಆಗ ಹೂಡಿಕೆ ಮಾಡಿದ ದರಕ್ಕೆ ಬಂದಿದೆ. ಆರು ತಿಂಗಳ ಹಿಂದೆ ಹೂಡಿಕೆ ಮಾಡಿದವರಿಗೆ ಹಣ ದ್ವಿಗುಣದ ಹತ್ತಿರ ಬಂದಿದೆ. ಒಂದು ವರ್ಷಕ್ಕೂ ಹೆಚ್ಚಿನ ಸಮಯ ಕಾದು ಕುಳಿತವರಿಗೆ ಅಸಲು ಹಣ ದೊರೆಯುವ ಹಂತಕ್ಕೆ ಬಂದಿದೆ. ಇದು ವಿಸ್ಮಯಕಾರಿಯಲ್ಲವೇ?

ಈ ಕಂಪೆನಿಯ ವಿಶೇಷವೆಂದರೆ, ಇತ್ತೀಚಿನ ವರ್ಷಗಳಲ್ಲಿ ಕೇವಲ ಒಂದೂವರೆ ಅಥವಾ ಎರಡು ರುಪಾಯಿಗಳ ಮಧ್ಯಂತರ ಲಾಭಾಂಶವನ್ನು ನೀಡುವ ತನ್ನ ಹವ್ಯಾಸದಿಂದ ಹೊರಬಂದು ರು. 16 ಮಧ್ಯಂತರ ಲಾಭಾಂಶವನ್ನು ಘೋಷಿಸಿದೆ. ಇಂದಿನಿಂದ (24ನೇ ಫೆಬ್ರವರಿಯಿಂದ) ಎಕ್ಸ್ ಡಿವಿಡೆಂಡ್ ವಹಿವಾಟು ಆರಂಭಿಸಲಿದೆ.

ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್

ಈ ಷೇರಿನ ಬೆಲೆ ಜನವರಿ 2018ರಲ್ಲಿ ರು. 425 ರಲ್ಲಿದ್ದು, ಈಗ ರು. 157ರ ಸಮೀಪವಿದೆ. ಆಗ ಖರೀದಿ ಮಾಡಿದವರ ಪಾಲಿಗೆ 'ಬಿಸಿ ತುಪ್ಪದಂತೆ' ಆ ಷೇರನ್ನು ಇಟ್ಟುಕೊಳ್ಳಲು ಉತ್ಸಾಹವಿಲ್ಲದೆ, ಮಾರಾಟ ಮಾಡಿ ಹಾನಿ ಅನುಭವಿಸಲು ಮನಸ್ಸಿಲ್ಲದೆ ಇರುವ ಪರಿಸ್ಥಿತಿಯಲ್ಲಿದ್ದಾರೆ.

ಇದು ಅಗ್ರಮಾನ್ಯ ಕಂಪೆನಿಯ ಪರಿಸ್ಥಿತಿಯಾಗಿದೆ. 2019ರ ಏಪ್ರಿಲ್ ನಲ್ಲಿ ರು. 239ರ ವಾರ್ಷಿಕ ಗರಿಷ್ಠ ತಲುಪಿದ ನಂತರ ಸೆಪ್ಟೆಂಬರ್ ತಿಂಗಳಲ್ಲಿ ರು. 106ರ ವರೆಗೂ ವಾರ್ಷಿಕ ಕನಿಷ್ಠಕ್ಕೆ ಕುಸಿದು, ನಂತರ ರು. 200ರ ಹಂತಕ್ಕೆ ಜನವರಿ 2020ರಲ್ಲಿ ಪುಟಿದೆದ್ದು. ಕೇವಲ ಒಂದೇ ತಿಂಗಳಲ್ಲಿ ರು. 158ರ ಸಮೀಪಕ್ಕೆ ಕುಸಿದಿದೆ.

ಮುಖ್ಯವಾಗಿ ಈ ಕಂಪೆನಿಯ ಷೇರಿನ ದರಗಳ ಏರಿಳಿತಗಳಿಗೆ ಮುಖ್ಯವಾದ ಕಾರಣ ಮಾಸಿಕ ಮಾರಾಟದ ಅಂಶಗಳಾಗಿವೆ. ಜಾಗತಿಕ ಮಟ್ಟದ ಜಾಗ್ವಾರ್ ಲ್ಯಾಂಡ್ ರೋವರ್ ನ ಮಾರಾಟದ ಅಂಕಿ- ಅಂಶಗಳು ಹೆಚ್ಚು ಪ್ರಭಾವ ಬೀರಿ, ಷೇರಿನ ಬೆಲೆಯಲ್ಲಿ ಹೆಚ್ಚಿನ ಏರಿಳಿತ ಪ್ರದರ್ಶಿತವಾಗುತ್ತಿದೆ.

ಬಿರ್ಲಾ ಸಮೂಹದ ಆದಿತ್ಯ ಬಿರ್ಲಾ ಕ್ಯಾಪಿಟಲ್

ಬಿರ್ಲಾ ಸಮೂಹದ ಆದಿತ್ಯ ಬಿರ್ಲಾ ಕ್ಯಾಪಿಟಲ್

ಈ ಷೇರು ಡಿಸೆಂಬರ್ 2017ರಲ್ಲಿ ರು.188 ರಲ್ಲಿದ್ದು, ಮೂರು ವರ್ಷಗಳ ನಂತರವೂ ಅದು ರು.90 ರ ಸಮೀಪವಿದೆ. ಅಂದರೆ ಹೂಡಿಕೆಯ ಅರ್ಧ ಭಾಗವನ್ನು ಮೂರು ವರ್ಷಗಳ ಅವಧಿಯಲ್ಲಿ ಕರಗಿಸಿಕೊಂಡಂತಾಗಿದೆ. ಈಗಿನ ಪರಿಸ್ಥಿತಿಯಲ್ಲಿ ಹೂಡಿಕೆ ಹಣದ ಬೆಲೆ ರು.188ರ ಸಮೀಪ ತಲುಪುವುದು ಸಾಧ್ಯವಿಲ್ಲ.

ಆದರೆ, ಅಕ್ಟೊಬರ್ 2019ರಲ್ಲಿ ರು.76ರ ವಾರ್ಷಿಕ ಕನಿಷ್ಠದಲ್ಲಿದ್ದಂತಹ ಷೇರಿನ ಬೆಲೆ ಜನವರಿ 2020ರಲ್ಲಿ ಬೆಲೆ ರು. 115 ತಲುಪಿ, ವಾರ್ಷಿಕ ಗರಿಷ್ಠದ ದಾಖಲೆ ನಿರ್ಮಿಸಿತು. ಕೇವಲ ಮೂರು ತಿಂಗಳಲ್ಲಿ ಶೇಕಡಾ 50ರಷ್ಟು ಏರಿಕೆ ಕಂಡಿದೆ.

ಕರಗಿತು ಹೂಡಿಕೆದಾರರ ಬಂಡವಾಳ

ಕರಗಿತು ಹೂಡಿಕೆದಾರರ ಬಂಡವಾಳ

ಕೆಲವು ಕಂಪನಿಗಳು ಯಾವರೀತಿ ಹೂಡಿದ ಬಂಡವಾಳವನ್ನು ಕರಗಿಸಿವೆ ಎಂಬುದನ್ನು ಗಮನಿಸಿ.

ಜನವರಿ 2018ರಲ್ಲಿ ರು. 253 ರಲ್ಲಿದ್ದ ಎನ್ ಬಿಸಿಸಿ ಕಂಪೆನಿ ಷೇರು ಮುಖಬೆಲೆಯನ್ನು ರು. 2ರಿಂದ ರು. 1ಕ್ಕೆ ಸೀಳಿದ ಮೇಲೆ ಈಗ ರು. 28ರ ಸಮೀಪವಿದೆ.

ರು. 115 ರಲ್ಲಿದ್ದ ಬಾಂಬೆ ರೇಯಾನ್ ಷೇರಿನ ಬೆಲೆ ರು. 4ರ ಸಮೀಪವಿದೆ.

ರು. 400ರ ಸಮೀಪವಿದ್ದ ವಕ್ರಾಂಗಿ ಷೇರಿನ ಬೆಲೆ ಈಗ ರು. 45 ಸಮೀಪವಿದೆ.

ರು. 800ರಲ್ಲಿದ್ದ ಅಪೆಕ್ಸ್ ಫ್ರೋಜನ್ ಫುಡ್ಸ್ ಷೇರಿನ ಬೆಲೆ ಈಗ ರು. 357ರ ಸಮೀಪವಿದೆ.

ರು. 280ರಲ್ಲಿದ್ದ ಅಪೋಲೋ ಟೈರ್ಸ್ ಷೇರಿನ ಬೆಲೆ ರು.157 ರಲ್ಲಿದೆ.

ರು. 530 ರಲ್ಲಿದ್ದ ಶೇಮರೂ ಎಂಟರ್ ಟೇನ್ ಮೆಂಟ್ ಷೇರಿನ ಬೆಲೆ ರು. 70ರ ಸಮೀಪಕ್ಕೆ ಕುಸಿದಿದೆ.

ರು. 415ರಲ್ಲಿದ್ದ ಚೆನ್ನೈ ಪೆಟ್ರೋಲಿಯಂ ಷೇರಿನ ಬೆಲೆ ರು.113ಕ್ಕೆ ಜಾರಿದೆ.

ರು. 250ರಲ್ಲಿದ್ದ ಬಾಂಬೆ ಡೈಯಿಂಗ್ ಷೇರಿನ ಬೆಲೆ ರು.81ರ ಸಮೀಪವಿದೆ.

ರು. 370ರಲ್ಲಿ ಇದ್ದ ಯುನಿಕೆಮ್ ಲ್ಯಾಬೊರೇಟರೀಸ್ ಷೇರಿನ ಬೆಲೆ ರು. 136ರ ಸಮೀಪಕ್ಕೆ ಇಳಿದಿದೆ.

ಏಪ್ರಿಲ್ 2018 ರಲ್ಲಿ ರೂ.1,000 ದ ಸಮೀಪವಿದ್ದ ಗೋವಾ ಕಾರ್ಬನ್ ಕಂಪನಿ ಷೇರಿನ ಬೆಲೆ ರೂ.235 ರ ಸಮೀಪಕ್ಕೆ ಜಾರಿದೆ.

ಜುಲೈ 2018 ರಲ್ಲಿ ರು.1,000 ಸಮೀಪವಿದ್ದ ಗ್ರಾಫೈಟ್ ಇಂಡಿಯಾ ಷೇರಿನ ಬೆಲೆ ರು. 268ರ ಸಮೀಪವಿದೆ.

English summary

How To Make Money In Share Market? Here Is The Secret Mantra

How to think while investing in small and mid cap shares in stock market? Here is analysis by columnist KG Krupal.
Story first published: Monday, February 24, 2020, 16:26 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X