ದುಡ್ಡಿನ ವಿಚಾರದಲ್ಲಿ 'ದೊಡ್ಡವರು' ಹೇಳಿದ 8 ಪಾಠಗಳು
ಈ ಶೀರ್ಷಿಕೆಯನ್ನು ನೋಡಿದ ಮೇಲೆ 'ದೊಡ್ಡವರು' ಅಂದರೆ ಬಿಲ್ ಗೇಟ್ಸ್, ವಾರೆನ್ ಬಫೆಟ್, ಮುಕೇಶ್ ಅಂಬಾನಿ, ರತನ್ ಟಾಟಾ ಅವರು ದುಡ್ಡಿನ ಬಗ್ಗೆ ಹೇಳಿದ ಪಾಠಗಳು ಇವು ಎನಿಸಿರಬಹುದು. ಬಹಳ ಜನಕ್ಕೆ ಮನೆಯ ಹಿರಿಯರು ಹೇಳಿದ ಮಾತುಗಳು ಎಷ್ಟು ಅಮೂಲ್ಯ ಎಂಬುದು ಸಮಯಕ್ಕೆ ಮರೆತು ಹೋಗುತ್ತದೆ.
ಆದರೆ, ಯಾವ ಬಿಲ್ ಗೇಟ್ಸ್ ಗೂ ಕಡಿಮೆ ಇಲ್ಲದ ಮಾತುಗಳು ಅವಾಗಿರುತ್ತವೆ. ನಿಮ್ಮೆದುರು ಎಂಟು ಪಾಠಗಳನ್ನು ನೆನಪಿಸಿ, ಮತ್ತೊಮ್ಮೆ ದೊಡ್ಡವರ ಮಾತುಗಳನ್ನು ಅನುಸರಿಸಲು ಪ್ರೇರಣೆ ನೀಡುವುದು ಈ ಲೇಖನದ ಉದ್ದೇಶ. ಹ್ಞಾಂ, ಒಂದಲ್ಲ ಒಂದು ಬಾರಿ ಈ ಮೇಲೆ ಹೆಸರಿಸಲಾದ ಮಹನೀಯರು ಸಹ ಅದೇ ಪಾಠಗಳನ್ನು ಹೇಳಿದ್ದಾರೆ. ಅವೆಲ್ಲವನ್ನೂ ಸರಳಗೊಳಿಸಿ ಇಲ್ಲಿ ನೀಡಲಾಗುತ್ತಿದೆ.

ಬ್ರ್ಯಾಂಡ್ ಮೇಲೆ ಹಣ ಹಾಕಬೇಡಿ
ಕೆವರಿಗೆ ಬ್ರ್ಯಾಂಡೆಡ್ ಬಟ್ಟೆ, ಮೊಬೈಲ್, ಕಾರು ಹೀಗೆ ಎಲ್ಲವೂ ಬ್ರ್ಯಾಂಡೆಡ್ ಆಗಿರಬೇಕು. ಹೀಗೆ ಅತ್ಯುತ್ತಮ ಬ್ರ್ಯಾಂಡ್ ಹುಡುಕುತ್ತಾ, ಖರೀದಿಸುತ್ತಾ ತಮ್ಮ ಸಂಪಾದನೆಯ ಬಹುಪಾಲನ್ನು ಅವುಗಳಿಗೇ ಖರ್ಚು ಮಾಡಿರುತ್ತಾರೆ. ಜಗತ್ತಿನ ಅತ್ಯಂತ ಶ್ರೀಮಂತ ಬಿಲ್ ಗೇಟ್ಸ್ ಕಟ್ಟುವುದು ಹತ್ತು ಡಾಲರ್ ಬೆಲೆಯ ವಾಚ್. ಲೆಕ್ಕವಿಲ್ಲದಷ್ಟು ರೋಲೆಕ್ಸ್ ವಾಚ್ ಕೊಳ್ಳುವ ಸಾಮರ್ಥ್ಯ ಇದ್ದರೂ ಸಮಯ ನೋಡಲು ಎಷ್ಟು ಬೆಲೆಯ ವಾಚ್ ಆದರೂ ಒಂದೇ ಅಲ್ಲವಾ ಎಂಬ ನಿರ್ಲಿಪ್ತ ಉತ್ತರ ಅವರದು. ಮನೆಗಳಲ್ಲಿ ಅಪ್ಪ- ಅಮ್ಮನಿಗೆ ದುಂಬಾಲು ಬಿದ್ದು, ದುಬಾರಿ ಫೋನ್, ಬೈಕ್, ಬಟ್ಟೆ ಮತ್ತೊಂದು ಖರೀದಿಸುವ ಮುನ್ನ ಆಲೋಚಿಸಿ. ಅಥವಾ ನಿಮಗೇ ಬ್ರ್ಯಾಂಡೆಡ್ ವಸ್ತುಗಳ ಖರೀದಿ ಆಸಕ್ತಿ ಇದ್ದರೆ ಜೇಬಿಗೆ ಭಾರವಾಗುವಷ್ಟು ಅತಿ ಮಾಡಿಕೊಳ್ಳಬೇಡಿ. ಅವು ವಸ್ತುಗಳು ಮಾತ್ರ. ಬಳಕೆಯ ಉದ್ದೇಶ ಈಡೇರಿದರೆ ಸಾಕು.

ಹಣ ಉಳಿಸಿದ ನಂತರ ಉಳಿದದ್ದು ಖರ್ಚು ಮಾಡಿ
ಹಣ ಉಳಿಸುವುದಕ್ಕೆ ಎಲ್ಲಿ ಆಗುತ್ತೆ, ಅದು ಈಗಿನ ಕಾಲದಲ್ಲಿ ಬರೀ ಖರ್ಚು ಅನ್ನೋರಿಗೆ ಈಗಿನ ಮಾತು ಅನ್ವಯಿಸುತ್ತದೆ. ಯಾವತ್ತೂ ಖರ್ಚಾದ ನಂತರ ಉಳಿದ ಹಣವನ್ನು ಉಳಿತಾಯ ಮಾಡುವ ಆಲೋಚನೆಯನ್ನು ಬಿಡಬೇಕು. ಮೊದಲು ಇಂತಿಷ್ಟು ಉಳಿತಾಯ ಅಂತ ಮಾಡಿ, ಆ ನಂತರ ಉಳಿದಿದ್ದನ್ನು ಖರ್ಚು ಮಾಡಬೇಕು. ಆರ್ಥಿಕ ಶಿಸ್ತು ಅಂದರೆ ಇದೇ.

ಕೈ ಸೇರದ ಹಣಕ್ಕೆ ಕಮಿಟ್ ಆಗಬಾರದು
ಸಂಪಾದನೆಯೇ ಮಾಡದ ಅಥವಾ ಇನ್ನೂ ನಿಮ್ಮ ಕೈ ಸೇರದ ಹಣಕ್ಕೆ ಮುಂಚಿತವಾಗಿಯೇ ಕಮಿಟ್ ಆಗಬಾರದು. ಯಾವುದೇ ಹಣ ನೀವು ಸಂಪಾದನೆ ಮಾಡಿದ ನಂತರ, ಅದು ಕೈ ಸೇರಿದ ನಂತರವಷ್ಟೇ ನಿಮ್ಮದು. ಅದು ಬರುವ ಮುನ್ನವೇ ಖರ್ಚಿಗೆ ದಾರಿ ಹುಡುಕಿಕೊಳ್ಳುವುದು ದುಡ್ಡಿನ ಬಗ್ಗೆ ಅಶಿಸ್ತು ತೋರಿಸುತ್ತದೆ.

ಅನವಶ್ಯಕ ಖರ್ಚು ತಡೆದರೆ ಉಳಿತಾಯ ಮಾಡಿದಂತೆ
ಅನವಶ್ಯಕ ಖರ್ಚು ತಡೆದರೆ ಉಳಿತಾಯ ಮಾಡಿದಂತೆ ಎಂಬುದು ಬಹಳ ಪ್ರಸಿದ್ಧವಾದ ಮಾತು. ಪ್ರತಿ ದಿನ ಅಥವಾ ವಾರ ಅಥವಾ ತಿಂಗಳಿಗೊಮ್ಮೆ ಖರ್ಚು ಯಾವ್ಯಾವುದರ ಸಲುವಾಗಿ ಆಗುತ್ತಿದೆ ಎಂಬುದನ್ನು ಪರೀಕ್ಷಿಸಿಕೊಳ್ಳಿ. ಅನವಶ್ಯಕವಾಗಿ ಆಗುತ್ತಿರುವ ಖರ್ಚನ್ನು ತಡೆದರೆ ಅಷ್ಟು ಹಣ ಉಳಿತಾಯ ಮಾಡಿದಂತೆಯೇ ಸರಿ. ಎರಡೆರಡು ಪೋಸ್ಟ್ ಪೇಯ್ಡ್ ಸಿಮ್ ಕಾರ್ಡ್ ಗಳು, ಮನೆಯಲ್ಲಿ ತಿಂಡಿ ಮಾಡಿದ್ದರೂ ಹೊರಗೆ ತಿಂಡಿ- ಊಟ ಮಾಡುವ ಅಭ್ಯಾಸ... ಇಂಥವೆಲ್ಲ ಖರ್ಚಿನ ದಾರಿಗಳು.

ಉಳಿತಾಯ ಮತ್ತು ಹೂಡಿಕೆ ಮಧ್ಯ ವ್ಯತ್ಯಾಸ ತಿಳಿದಿರಲಿ
ಉಳಿತಾಯ ಹಾಗೂ ಹೂಡಿಕೆ ಎರಡರ ಮಧ್ಯೆ ಇರುವ ವ್ಯತ್ಯಾಸವನ್ನು ತಿಳಿದುಕೊಳ್ಳಬೇಕು. ಉಳಿತಾಯ ಎಂಬುದು ಕೂಡಿಟ್ಟ ಹಣಕ್ಕೆ ಒಂದಿಷ್ಟು ಸೇರ್ಪಡೆ ಹಾಗೂ ತುಂಬ ಕಡಿಮೆ ಮೊತ್ತದ ಬಡ್ಡಿ ಸೇರಿಕೊಳ್ಳುತ್ತದೆ. ಆದರೆ ಹೂಡಿಕೆ ದೊಡ್ಡ ಮೊತ್ತವಾಗಿ, ದುಡ್ಡು ಮತ್ತಷ್ಟು ದುಡ್ಡನ್ನು ದುಡಿಯುತ್ತದೆ. ಆದರೆ ಹೂಡಿಕೆ ಮಾಡುವಾಗ ಭವಿಷ್ಯದ ಸಾಧ್ಯತೆ, ಸುರಕ್ಷತೆ ಮತ್ತಿತರ ವಿಚಾರಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು.

ಯಾರೊಂದಿಗೂ ಹೋಲಿಕೆ ಮಾಡಿಕೊಳ್ಳಬಾರದು
'ನವಿಲನ್ನು ನೋಡಿ ಕೆಂಬೂತ ಪುಕ್ಕ ಕೆದರಿಕೊಂಡು ಹಾಗೆ' ಎಂಬ ಮಾತನ್ನು ಆಗಾಗ ನೆನಪಿಸಿಕೊಳ್ಳಿ. ಯಾರೊಂದಿಗೂ ಹೋಲಿಕೆ ಮಾಡಿಕೊಳ್ಳಬಾರದು. ಯಾರೋ ಆಗಾಗ ಫಾರಿನ್ ಟೂರ್ ಮಾಡ್ತಾರೆ, ವರ್ಷಕ್ಕೊಂದು ಕಾರು ಬದಲಾಯಿಸ್ತಾರೆ, ತಿಂಗಳು ತಿಂಗಳಿಗೂ ಮೊಬೈಲ್ ಫೋನ್ ಹೊಸದು ಖರೀದಿಸುತ್ತಾರೆ... ಹೀಗೆ ಮತ್ತೊಬ್ಬರನ್ನು ಹೋಲಿಕೆ ಮಾಡಿಕೊಳ್ಳುತ್ತಾ ಹೋದರೆ ದುಡ್ಡು, ನೆಮ್ಮದಿ ಎಲ್ಲವೂ ಹಾಳು.

ಟೈಮ್ ಈಸ್ ಮನಿ ಎಂಬುದು ಮೂಲ ಮಂತ್ರ
ನಿಮ್ಮ ಸಮಯದ ಬಳಕೆ ಹೇಗೆ ಆಗುತ್ತಿದೆ ಎಂಬ ಬಗ್ಗೆ ಸದಾ ನಿಗಾ ಇರಲಿ. ದಿನಕ್ಕೆ ಆರರಿಂದ ಎಂಟು ಗಂಟೆ ಟೀವಿ ನೋಡುವ, ಗೇಮ್ಸ್ ಆಡುವ, ಫೇಸ್ ಬುಕ್, ಚಾಟಿಂಗ್, ಫೋನ್ ಕಾಲ್ ನಲ್ಲಿ ಕಳೆಯುವ ಸಮಯದಲ್ಲಿ ಹೊಸ ವಿಚಾರ- ಸಂಗತಿ ಕಲಿಯಬಹುದು. ಸ್ವಾವಲಂಬನೆ ರೂಢಿಸಿಕೊಳ್ಳಬಹುದು. 'ಟೈಮ್ ಈಸ್ ಮನಿ' ಎಂಬ ಮಾತು ಎಲ್ಲರೂ ಹೇಳಿದ್ದಾರೆ. ಅದನ್ನು ಹೇಗೆಂದರೆ ಹಾಗೆ ಬಳಸಿಕೊಳ್ಳುತ್ತಿದ್ದೇವೆ ಅಂದರೆ ಹಣವನ್ನು ವ್ಯರ್ಥ ಮಾಡಿದಂತೆಯೇ.

ಜೂಜಿನಲ್ಲಿ ಹಣ ದುಡಿದವರಿಲ್ಲ, ಉದ್ಧಾರ ಆದವರಿಲ್ಲ.
ಅದೆಷ್ಟು ಹಣ ಇದ್ದರೂ ಸುಲಭವಾಗಿ ಕಳೆದುಕೊಳ್ಳುವ ದಾರಿಯೆಂದರೆ ಜೂಜು. ಆದ್ದರಿಂದ ಹಣದ ಜೂಜಾಟ ಸರ್ವಥಾ ಕೂಡದು. ಜೂಜಿನಿಂದಲೇ ಹಣ ಮಾಡಿದವರು ಎಲ್ಲೂ ಸಿಗುವುದಿಲ್ಲ. ಇವತ್ತು ಹಣ ಬಂದರೆ ಇನ್ನಷ್ಟು ಸಂಪಾದಿಸಬೇಕು ಎಂದು ಕೈಲಿ ಇದ್ದದ್ದನ್ನು ಕಳೆದುಕೊಂಡವರನ್ನು ನೋಡಬಹುದು. ಇನ್ನು ಇವತ್ತು ಹಣ ಹೋಯಿತು ಎಂಬ ಕಾರಣಕ್ಕೆ ಮತ್ತೆ ಅಲ್ಲೇ ಸಂಪಾದನೆ ಮಾಡಬೇಕೆಂದು ಸಾಲ- ಸೋಲ ಮಾಡಿ, ಎಲ್ಲ ಕಳೆದುಕೊಂಡವರನ್ನೂ ನೋಡಬಹುದು. ಒಟ್ಟಿನಲ್ಲಿ ಜೂಜಿನಲ್ಲಿ ಹಣ ದುಡಿದವರಿಲ್ಲ, ಉದ್ಧಾರ ಆದವರಿಲ್ಲ.