ಭಾರತವನ್ನು ಶಾಶ್ವತವಾಗಿ ಬದಲಾಯಿಸಿದ ವಾಜಪೇಯಿ ಸರ್ಕಾರದ ಟಾಪ್ 13 ಯೋಜನೆಗಳು

By Siddu
Subscribe to GoodReturns Kannada
For Quick Alerts
ALLOW NOTIFICATIONS  
For Daily Alerts

  ಕಾಂಗ್ರೆಸ್ ಹೊರತುಪಡಿಸಿದ ಪಕ್ಷದಿಂದ ಪ್ರಧಾನಿಯಾಗಿ, ಐದು ವರ್ಷಗಳ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ ಪ್ರಥಮ ಕಾಂಗ್ರೆಸ್ಸೇತರ ಪ್ರಧಾನಿ ಎಂಬ ಶ್ರೇಯಸ್ಸು ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಸಲ್ಲುತ್ತದೆ. ಒಂದು ಡಜನ್‌ಗಿಂತಲೂ ಅಧಿಕ ಚಿಕ್ಕ ಪುಟ್ಟ ಪಕ್ಷಗಳೊಂದಿಗೆ ಮೈತ್ರಿ ಸರಕಾರವನ್ನು ಮುನ್ನಡೆಸಿದ್ದು ಅವರ ಮತ್ತೊಂದು ಹೆಗ್ಗಳಿಕೆ.

  ಭಾರತದ ಅರ್ಥ ವ್ಯವಸ್ಥೆಯ ಸುಧಾರಣೆಗೆ ವಾಜಪೇಯಿ ಅವರ ಕೊಡುಗೆ ಬಹು ದೊಡ್ಡದು. ೧೯೯೧ ರಲ್ಲಿ ಪಿ.ವಿ. ನರಸಿಂಹರಾವ್ ಅವರ ಕಾಂಗ್ರೆಸ್ ಸರಕಾರ ಜಾರಿಗೆ ತಂದ ಆರ್ಥಿಕ ಸುಧಾರಣೆ ಕ್ರಮಗಳಿಗೆ ಪೂರಕವಾಗಿ ಅಟಲ್ ಬಿಹಾರಿ ವಾಜಪೇಯಿ ತಮ್ಮ ಅಧಿಕಾರಾವಧಿಯಲ್ಲಿ ಕೆಲಸ ಮಾಡಿದರು. ಹೀಗಾಗಿ ೨೦೦೪ ರಲ್ಲಿ ವಾಜಪೇಯಿ ಅವರ ನಂತರ ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸುವ ಸಂದರ್ಭದಲ್ಲಿ ಭಾರತದ ಅರ್ಥವ್ಯವಸ್ಥೆ ಅತ್ಯಂತ ಸುಭದ್ರ ಸ್ಥಿತಿಯಲ್ಲಿತ್ತು. ಆಗ ಶೇ. 8ಕ್ಕಿಂತ ಹೆಚ್ಚು ಜಿಡಿಪಿ ದರ, ಶೇ.4 ರ ಕೆಳಗೆ ಹಣದುಬ್ಬರ ಇದ್ದು, ವಿದೇಶಿ ಕರೆನ್ಸಿ ಅವಶ್ಯಕತೆಗಿಂತ ಹೆಚ್ಚು ಸಂಗ್ರಹವಾಗಿತ್ತು.

   

  ವಾಜಪೇಯಿ ಅವರ ಕ್ರಮಗಳಿಂದ ಬಿಜೆಪಿ, ಆರ್ಥಿಕ ಸುಧಾರಣೆಗಳ ವಿರೋಧಿ ಎಂಬ ಹಣೆಪಟ್ಟಿಯನ್ನು ಕಳಚಿಕೊಂಡು ನಿಜವಾದ ಬಲಪಂಥೀಯ ಆರ್ಥಿಕ ಸುಧಾರಣೆಗಳ ಹರಿಕಾರ ಎಂಬ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಂಡಿತು. ಜೊತೆಗೆ ವಾಜಪೇಯಿ ಸರಕಾರದ ಕ್ರಾಂತಿಕಾರಿ ಕ್ರಮಗಳಿಂದ ಭಾರತದ ಆರ್ಥಿಕ ವ್ಯವಸ್ಥೆ ಅಭಿವೃದ್ಧಿಯ ಕಡೆಗೆ ಮುಖ ಮಾಡಿತು.
  ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಕೈಗೊಂಡ ಪ್ರಮುಖ ಸುಧಾರಣಾ ಕ್ರಮಗಳು ಹೀಗಿವೆ:

  1. ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ

  ದೇಶದ ಉದ್ದಗಲಕ್ಕೂ ವಿಶಾಲವಾದ ಹೆದ್ದಾರಿಗಳನ್ನು ಜೋಡಿಸುವ ಸುವರ್ಣ ಚತುಷ್ಪಥ ಯೋಜನೆ ಹಾಗೂ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಗಳು ಅಟಲ್‌ಜಿ ಅವಧಿಯ ಬಹುಮೂಲ್ಯ ಕೊಡುಗೆಗಳಾಗಿವೆ. ಚೆನ್ನೈ, ಕೋಲ್ಕತಾ, ದೆಹಲಿ ಹಾಗೂ ಮುಂಬೈಗಳನ್ನು ಸುವರ್ಣ ಚತುಷ್ಪಥ ಯೋಜನೆ ಜೋಡಿಸಿದರೆ, ಪ್ರಧಾನ ಮಂತ್ರಿ ಸಡಕ್ ಯೋಜನೆಯಿಂದ ಕುಗ್ರಾಮಗಳಲ್ಲಿಯೂ ಸುಸಜ್ಜಿತ ರಸ್ತೆಗಳು ನಿರ್ಮಾಣವಾದವು. ಈ ಎರಡೂ ಯಶಸ್ವಿ ಯೋಜನೆಗಳು ಭಾರತದ ಆರ್ಥಿಕಾಭಿವೃದ್ಧಿಗೆ ಅಮೂಲ್ಯ ಕೊಡುಗೆ ನೀಡಿವೆ.

  2. ಖಾಸಗೀಕರಣ

  ವ್ಯಾಪಾರ ಹಾಗೂ ಉದ್ಯಮಗಳನ್ನು ನಡೆಸಲು ಸರಕಾರದ ಪಾತ್ರವನ್ನು ಕಡಿಮೆಗೊಳಿಸುವುದು ವಾಜಪೇಯಿ ಅವರ ಗುರಿಯಾಗಿತ್ತು. ಸರಕಾರಿ ಸ್ವಾಮ್ಯದ ಹಾಗೂ ಸಾರ್ವಜನಿಕ ವಲಯದ ಕಂಪನಿಗಳಲ್ಲಿ ಸರಕಾರದ ಪಾಲು ಕಡಿಮೆ ಮಾಡುವ ಸಲುವಾಗಿಯೇ ಅವರು ಬಂಡವಾಳ ಹಿಂತೆಗೆತ ಖಾತೆಯನ್ನು ಸೃಷ್ಟಿಸಿ ಅದಕ್ಕೊಬ್ಬ ಮಂತ್ರಿಯನ್ನೂ ನೇಮಿಸಿದ್ದರು. ಭಾರತ ಅಲ್ಯುಮಿನಿಯಂ ಕಂಪನಿ, ಹಿಂದುಸ್ತಾನ್ ಜಿಂಕ್, ಇಂಡಿಯನ್ ಪೆಟ್ರೋಕೆಮಿಕಲ್ಸ್ ಕಾರ್ಪೊರೇಶನ್ ಲಿಮಿಟೆಡ್ ಮತ್ತು ವಿಎಸ್‌ಎನ್‌ಎಲ್ ಸೇರಿದಂತೆ ಅನೇಕ ಕಂಪನಿಗಳಿಂದ ಸರಕಾರಿ ಬಂಡವಾಳವನ್ನು ಹಿಂಪಡೆಯಲಾಯಿತು. ಸರಕಾರದ ಈ ನಿರ್ಧಾರ ಸಾಕಷ್ಟು ಟೀಕೆಗಳಿಗೆ ಗುರಿಯಾದರೂ ವಾಜಪೇಯಿ ಯಾವುದೇ ಸೊಪ್ಪು ಹಾಕಲಿಲ್ಲ.

  3. ವಿತ್ತೀಯ ಶಿಸ್ತಿಗೆ ಪ್ರಾಧಾನ್ಯ

  ವಿತ್ತೀಯ ಕೊರತೆಯನ್ನು ನಿಭಾಯಿಸುವ ನಿಟ್ಟಿನಲ್ಲಿ 'ವಿತ್ತೀಯ ಜವಾಬ್ದಾರಿ ಕಾಯ್ದೆ' ಯನ್ನು ಜಾರಿಗೊಳಿಸಿದ್ದು ವಾಜಪೇಯಿ ಸರಕಾರದ ಇನ್ನೊಂದು ಸಾಧನೆಯಾಗಿದೆ. ಇದರಿಂದ ಸಾರ್ವಜನಿಕ ವಲಯದ ಉಳಿತಾಯದ ಪ್ರಮಾಣ ೨೦೦೦ನೇ ಇಸ್ವಿಯಲ್ಲಿ ಜಿಡಿಪಿಯ ಶೇ. -೦.೮ ಇದ್ದದ್ದು, ೨೦೦೫ ಕ್ಕೆ ಶೇ.೨.೩ ಕ್ಕೆ ಜಿಗಿಯಿತು.

  4. ದೂರಸಂಪರ್ಕ ವಲಯದಲ್ಲಿ ಕ್ರಾಂತಿ

  ವಾಜಪೇಯಿ ಸರಕಾರದ ನೂತನ ದೂರಸಂಪರ್ಕ ನೀತಿಯಿಂದ ದೇಶದ ದೂರಸಂಪರ್ಕ ವಲಯದಲ್ಲಿ ಕ್ರಾಂತಿಯನ್ನೇ ನಿರ್ಮಾಣ ಮಾಡಿತು. ನಿಶ್ಚಿತ ಲೈಸೆನ್ಸ್ ಶುಲ್ಕ ವಿಧಾನವನ್ನು ರದ್ದುಗೊಳಿಸಿ ಲಾಭಾಂಶ ಹಂಚಿಕೆಯ ಆಧಾರದಲ್ಲಿ ದೂರ ಸಂಪರ್ಕ ಕಂಪನಿಗಳಿಗೆ ಲೈಸೆನ್ಸ್ ನೀಡಲಾರಂಭಿಸಿದ್ದು ವಾಜಪೇಯಿ ಅವಧಿಯಲ್ಲಿ. ವ್ಯವಸ್ಥೆ ಹಾಗೂ ಸೇವೆಗಳ ಗುಣಮಟ್ಟ ಸುಧಾರಣೆಗೆ ಭಾರತ್ ಸಂಚಾರ ನಿಗಮ್ ಆರಂಭಿಸಲಾಯಿತು. ದೂರಸಂಪರ್ಕ ವಲಯದಲ್ಲಿನ ವ್ಯಾಜ್ಯಗಳ ವಿಚಾರಣೆಗೆ ಪ್ರತ್ಯೇಕ ದೂರು ಪರಿಹಾರ ಪ್ರಾಧಿಕಾರ ಸ್ಥಾಪಿಸುವ ಮೂಲಕ ಈ ಕ್ಷೇತ್ರದಲ್ಲಿನ ಸರಕಾರದ ಹಿಡಿತವನ್ನು ಕಡಿಮೆ ಮಾಡಲಾಯಿತು. ಜೊತೆಗೆ ವಿದೇಶಿ ದೂರಸಂಪರ್ಕ ವಲಯದಲ್ಲಿ ವಿದೇಶ್ ಸಂಚಾರ ನಿಗಮ್ ಹೊಂದಿದ್ದ ಏಕ ಪಾರಮ್ಯವನ್ನು ಇದೇ ಸಂದರ್ಭದಲ್ಲಿ ಕೊನೆಗೊಳಿಸಲಾಯಿತು.

  5. ಸರ್ವ ಶಿಕ್ಷಣ ಅಭಿಯಾನ

  ೬ ರಿಂದ ೧೪ ವಯೋಮಾನದ ದೇಶದ ಎಲ್ಲಾ ಮಕ್ಕಳಿಗೆ ಉಚಿತವಾಗಿ ಮೂಲ ಶಿಕ್ಷಣ ನೀಡಲು ಸರ್ವ ಶಿಕ್ಷಣ ಅಭಿಯಾನವನ್ನು ಆರಂಭಿಸಲಾಯಿತು. ೨೦೦೧ ರಲ್ಲಿ ಈ ಯೋಜನೆ ಆರಂಭವಾದ ಕೇವಲ ನಾಲ್ಕು ವರ್ಷಗಳಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆ ಶೇ.೬೦ ರಷ್ಟು ಕಡಿಮೆಯಾಯಿತು.

  6. ಆರ್ಥಿಕ ಸುಧಾರಣಾ ಕ್ರಮಗಳು

  ವಾಜಪೇಯಿ ಸರಕಾರ ಕೈಗೊಂಡ ದಿಟ್ಟ ಆರ್ಥಿಕ ಸುಧಾರಣಾ ಕ್ರಮಗಳಿಂದ ದೇಶದ ಆರ್ಥಿಕ ವ್ಯವಸ್ಥೆಗೆ ವೇಗ ಸಿಕ್ಕಿತು. ವಿಶೇಷ ಆರ್ಥಿಕ ವಲಯಗಳ ಸ್ಥಾಪನೆ, ದೂರಸಂಪರ್ಕ ವಲಯದಲ್ಲಿ ಖಾಸಗಿ ಕಂಪನಿಗಳಿಗೆ ಅವಕಾಶ ಮುಂತಾದ ಕ್ರಮಗಳಿಂದ ಅರ್ಥ ವ್ಯವಸ್ಥೆಯ ಬೆಳವಣಿಗೆಗೆ ಸಹಕಾರಿಯಾಯಿತು.

  7. ಪೋಖ್ರಾನ್‌ನಲ್ಲಿ ಪರಮಾಣು ಬಾಂಬ್ ಪರೀಕ್ಷೆ

  ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಷ್ಟೇ ಒತ್ತಡವಿದ್ದರೂ ಅದಕ್ಕೆ ತಲೆ ಬಾಗದೆ ಪೋಖ್ರಾನ್‌ನಲ್ಲಿ ಪರಮಾಣು ಬಾಂಬ್ ಪರೀಕ್ಷೆ ನಡೆಸಲು ವಾಜಪೇಯಿ ಅನುಮತಿ ನೀಡಿದರು. ಈ ನಿರ್ಧಾರ ಅವರ ಧೈರ್ಯ ಹಾಗೂ ದಿಟ್ಟತನಕ್ಕೆ ಸಾಕ್ಷಿಯಾಗಿದೆ. ಈ ನಿರ್ಧಾರಿಂದ ಪರಮಾಣು ಆಧಾರಿತ ಇಂಧನ ಯೋಜನೆಗೆ ಸಹಕಾರಿ ಆಯಿತು. ಜೊತೆಗೆ ಪರಮಾಣು ಬಾಂಬ್ ತೋರಿಸಿ ಬೆದರಿಸುವ ಶತ್ರು ರಾಷ್ಟ್ರಗಳು ಬಾಲ ಮುದುರಿಕೊಂಡು ಕುಳಿತುಕೊಂಡವು.

  8. ದೆಹಲಿ ಮೆಟ್ರೊ

  ಜಗತ್ತಿನಲ್ಲಿಯೇ ಅತ್ಯುತ್ತಮ ಮೆಟ್ರೊ ಎಂದು ಹೆಸರಾಗಿರುವ ದೆಹಲಿ ಮೆಟ್ರೊ ವ್ಯವಸ್ಥೆಯನ್ನು ಮೊದಲು ಆರಂಭಿಸಿದ್ದು ವಾಜಪೇಯಿ ಅವರ ಕಾಲಾವಧಿಯಲ್ಲಿ. ಸಾಮಾನ್ಯ ಜನತೆಗೂ ಅತ್ಯುತ್ತಮ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕೆಂಬ ವಾಜಪೇಯಿ ಅವರ ಗಟ್ಟಿ ನಿರ್ಧಾರವೇ ಇಂದಿನ ಮೆಟ್ರೊ ವ್ಯವಸ್ಥೆಗೆ ಕಾರಣವಾಗಿದೆ.

  9. ಅಂತಾರಾಷ್ಟ್ರೀಯ ಬಾಂಧವ್ಯ ಸುಧಾರಣೆ

  ಯಾವಾಗಲೂ ಕಾಡುವ ಪಕ್ಕದ ದೇಶ ಸೇರಿದಂತೆ ಜಗತ್ತಿನ ಎಲ್ಲ ದೇಶಗಳೊಂದಿಗೆ ವಾಜಪೇಯಿ ಅವರು ಒಳ್ಳೆಯ ರಾಜತಾಂತ್ರಿಕ ಸಂಬಂಧಗಳನ್ನು ಹೊಂದಿದ್ದರು. ಪಾಕಿಸ್ತಾನದೊಂದಿಗೆ ಶಾಂತಿಯ ಸಂಬಂಧ ಹೊಂದುವ ನಿಟ್ಟಿನಲ್ಲಿ ಮೇಲಿಂದ ಮೇಲೆ ಶಾಂತಿ ಮಾತುಕತೆಗಳನ್ನು ನಡೆಸಿದ ಅವರು, ಅದೇ ಪಾಕಿಸ್ತಾನ ನಮ್ಮ ಗಡಿಯನ್ನು ದಾಟಿದಾಗ ಬಂದೂಕಿನಿಂದ ದಿಟ್ಟ ಉತ್ತರ ನೀಡಿ ಅವರನ್ನು ಹಿಮ್ಮೆಟ್ಟಿಸಿದರು. ಇದು ಭಾರತವನ್ನು ಜಾಗತಿಕ ಶಕ್ತಿಯಾಗಿ ಗುರುತಿಸಿಕೊಳ್ಳುವಂತೆ ಮಾಡಿತು.

  10. ಪೋಟಾ ಕಾಯಿದೆ

  ಭಯೋತ್ಪಾದನೆಯನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ವಾಜಪೇಯಿ ಸರಕಾರದ ಅವಧಿಯಲ್ಲಿ ಭಯೋತ್ಪಾದನಾ ವಿರೋಧಿ ಕಾಯ್ದೆ 'ಪೋಟಾ' ವನ್ನು ಜಾರಿಗೆ ತರಲಾಯಿತು. ಈ ಕಾಯ್ದೆಯ ವಿರುದ್ಧ ಪ್ರತಿಪಕ್ಷಗಳು ದೊಡ್ಡ ಹೋರಾಟವನ್ನೇ ನಡೆಸಿದವು. ಆದರೆ ಯುಪಿಎ ಸರಕಾರ ಬಂದ ನಂತರ ಪೋಟಾವನ್ನು ಹಿಂಪಡೆಯಲಾಯಿತು. ಇದರ ಪರಿಣಾಮವಾಗಿಯೇ ಭಯೋತ್ಪಾದನಾ ದಾಳಿಗಳಲ್ಲಿ ವಿಪರೀತ ಹೆಚ್ಚಳವಾಯಿತು ಎಂಬುದನ್ನು ಮರೆಯುವಂತಿಲ್ಲ.

  11. ಆಪರೇಷನ್ ವಿಜಯ್

  ಆಪರೇಷನ್ ವಿಜಯ್ ಅಥವಾ ಕಾರ್ಗಿಲ್ ಯುದ್ಧ ನಮಗೆಲ್ಲರಿಗೂ ಗೊತ್ತು. ಶತ್ರುರಾಷ್ಟ್ರ ಪಾಕಿಸ್ತಾನ ಆಕ್ರಮಿಸಿಕೊಂಡ ನಮ್ಮ ಪ್ರದೇಶಗಳನ್ನು ಅವರ ಗಡಿಯೊಳಗೆ ಕಾಲಿಡದೆಯೇ ಮರಳಿ ಪಡೆದಿದ್ದು ಆಪರೇಷನ್ ವಿಜಯ್ ಸಾಧನೆಯಾಗಿದೆ. ಮುಸ್ಕೋ ವ್ಯಾಲಿ, ಬಟಾಲಿಕ್ ಸೆಕ್ಟರ್, ಟೊಲೊಲಿಂಗ್ ಟಾಪ್, ಟೈಗರ್ ಹಿಲ್, ದ್ರಾಸ್ ಮುಂತಾದ ಆಕ್ರಮಿತ ಪ್ರದೇಶಗಳನ್ನು ಮರಳಿ ವಶಕ್ಕೆ ಪಡೆಯಲಾಯಿತು. ಇಂಥ ಒಂದು ಬೃಹತ್ ಮಿಲಿಟರಿ ಕಾರ್ಯಾಚರಣೆಗೆ ಅನುಮತಿ ನೀಡಿ ಅದು ಯಶಸ್ವಿಯಾಗುವಂತೆ ನೋಡಿಕೊಂಡಿದ್ದು ಇದೇ ಅಟಲ್ ಬಿಹಾರಿ ವಾಜಪೇಯಿ.

  12. ವಿಶ್ವಸಂಸ್ಥೆಯಲ್ಲಿ ಹಿಂದಿಯಲ್ಲಿ ಭಾಷಣ

  ೨೦೦೨ ರ ಸೆಪ್ಟೆಂಬರ್ ೧೩ ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಅಟಲ್ ಬಿಹಾರಿ ವಾಜಪೇಯಿ ಪ್ರಥಮ ಬಾರಿಗೆ ಹಿಂದಿಯಲ್ಲಿ ಭಾಷಣ ಮಾಡಿ ಭಾರತಕ್ಕೆ ಗರಿ ಮೂಡಿಸಿದ್ದರು. ಪಾಕಿಸ್ತಾನ ಭಯೋತ್ಪಾದನಾ ಕೃತ್ಯಗಳನ್ನು ನಿಲ್ಲಿಸಿದರೆ ಮಾತ್ರ ಮಾತುಕತೆ ಎಂದು ಅವರು ಇದೇ ಭಾಷಣದಲ್ಲಿ ದಿಟ್ಟತನದಿಂದ ಹೇಳಿದ್ದರು.

  13. ಚಂದ್ರಯಾನ ಪ್ರೊಜೆಕ್ಟ್

  56 ನೇ ಸ್ವಾತಂತ್ರ್ಯೋತ್ಸವ ದಿನದಂದು ಚಂದ್ರಯಾನ್-೧ ಯೋಜನೆಗೆ ಹಸಿರು ನಿಶಾನೆ ನೀಡಿದ ವಾಜಪೇಯಿ, ಚಂದ್ರನ ಮೇಲೆ ಭಾರತ ತನ್ನ ಉಪಗ್ರಹವನ್ನು ಕಳುಹಿಸಲು ಪ್ರಥಮ ಪ್ರಯತ್ನಗಳಿಗೆ ಮುನ್ನುಡಿ ಬರೆದರು.

  English summary

  Atal Bihari Vajpayee's Top 13 steps that changed India forever

  The steps Vajpayee took on the economic front not only gave his party, the BJP, the image of a true economic right-wing hitherto viewed as a nativist party not comfortable with modern trends, but also put India on the road to later economic progress.
  Story first published: Friday, August 17, 2018, 11:09 [IST]
  Company Search
  Enter the first few characters of the company's name or the NSE symbol or BSE code and click 'Go'

  Find IFSC

  Get Latest News alerts from Kannada Goodreturns

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more