For Quick Alerts
ALLOW NOTIFICATIONS  
For Daily Alerts

ಈ 5 ವಿಮೆಗಳನ್ನು ಮಾಡಿಸಿದರೆ ಸಿಗುವ ಲಾಭಗಳೇನು ಗೊತ್ತೆ?

ದೇಶದಲ್ಲಿ ಹಲವಾರು ರೀತಿಯ ವಿಮಾ ಯೋಜನೆಗಳಿವೆ. ಯಾವೆಲ್ಲ ವಿಮಾ ಯೋಜನೆಗಳನ್ನು ಪಡೆದುಕೊಳ್ಳುವುದು ಅಗತ್ಯ ಎಂಬುದನ್ನು ತಿಳಿದುಕೊಳ್ಳಬೇಕಾಗುತ್ತದೆ. ಹೀಗಾಗಿ ಪ್ರಮುಖ ವಿಮಾ ಯೋಜನೆಗಳ ಬಗ್ಗೆ ಈ ಅಂಕಣದಲ್ಲಿ ತಿಳಿಸಲಾಗಿದೆ.

|

ಜೀವನ ಎಂಬುದು ಯಾವಾಗಲೂ ಅನಿಶ್ಚಿತತೆಗಳ ಆಟವಾಗಿದೆ. ಕುಟುಂಬಕ್ಕೆ ಆಧಾರವಾಗಿದ್ದ ವ್ಯಕ್ತಿಯ ಅಕಾಲಿಕ ಮರಣ, ಅಪಘಾತ, ಗುಣಪಡಿಸಲಾಗದ ರೋಗ ಅಥವಾ ಬೆಂಕಿ ಅನಾಹುತ, ಕಳ್ಳತನದಿಂದ ಕುಟುಂಬಕ್ಕೆ ದೊಡ್ಡ ಆರ್ಥಿಕ ಹಾನಿ ಮತ್ತು ಇನ್ನಾವುದೇ ರೀತಿಯಲ್ಲಿ ಭರಿಸಲಾಗದ ನಷ್ಟಗಳು ಸಂಭವಿಸಬಹುದು. ಇಂಥ ಅನಿರೀಕ್ಷಿತ ಹಾಗೂ ಅನಪೇಕ್ಷಿತ ಸಂದರ್ಭಗಳಲ್ಲಿ ಉಂಟಾಗಬಹುದಾದ ಆರ್ಥಿಕ ಹಾನಿಯನ್ನು ಸರಿದೂಗಿಸಲು ವಿಮೆಯ ಸುರಕ್ಷತೆ ಬೇಕಾಗುತ್ತದೆ. ಅಂದರೆ ನಮಗೆ ಉಂಟಾಗಬಹುದಾದ ಆರ್ಥಿಕ ಹಾನಿಯ ಅಪಾಯವನ್ನು ಆರ್ಥಿಕವಾಗಿ ಸಬಲವಾದ ವಿಮಾ ಕಂಪನಿಯ ಮೇಲೆ ಹೊರಿಸುವಿಕೆಯೇ ವಿಮೆ ಆಗಿದೆ.

 

ದೇಶದಲ್ಲಿ ಹಲವಾರು ರೀತಿಯ ವಿಮಾ ಯೋಜನೆಗಳಿವೆ. ಯಾವೆಲ್ಲ ವಿಮಾ ಯೋಜನೆಗಳನ್ನು ಪಡೆದುಕೊಳ್ಳುವುದು ಅಗತ್ಯ ಎಂಬುದನ್ನು ತಿಳಿದುಕೊಳ್ಳಬೇಕಾಗುತ್ತದೆ. ಹೀಗಾಗಿ ಪ್ರಮುಖ ವಿಮಾ ಯೋಜನೆಗಳ ಬಗ್ಗೆ ಈ ಅಂಕಣದಲ್ಲಿ ತಿಳಿಸಲಾಗಿದೆ.

ಜೀವವಿಮೆ

ಜೀವವಿಮೆ

ಸಾವು ನಿಶ್ಚಿತವಾದರೂ ಅದು ಅಕಾಲಿಕವಾಗಿ ಬಂದೆರಗಿದಾಗ ಕುಟುಂಬಕ್ಕೆ ಆಘಾತವನ್ನು ತರುತ್ತದೆ. ಬಹುಕಾಲದವರೆಗೆ ನೆಮ್ಮದಿಯಾಗಿ ಬದುಕಲು ಉತ್ತಮ ಹಣಕಾಸು ಹೂಡಿಕೆ ಹಾಗೂ ಪಿಂಚಣಿ ಯೋಜನೆಗಳು ನೆರವಾಗುತ್ತವೆ. ಅದೇ ರೀತಿ ಅಕಾಲಿಕ ಮರಣದ ರಿಸ್ಕ್ ನಿಭಾಯಿಸಲು ವಿಮಾ ಸುರಕ್ಷತೆ ಪಡೆಯಬೇಕಾಗುತ್ತದೆ.
ಕುಟುಂಬದ ಗಳಿಕೆಯ ಆಧಾರ ಸ್ಥಂಭವಾಗಿರುವ ವ್ಯಕ್ತಿಯು ಅಕಾಲಿಕವಾಗಿ ಸಾವನ್ನಪ್ಪಿದಾಗ ಆತನ ಕುಟುಂಬವು ಮೊದಲಿನಂತೆಯೇ ಆರ್ಥಿಕ ಸ್ಥಿತಿಯಲ್ಲಿ ಮುಂದುವರೆಯಲು ಹಾಗೂ ಅದೇ ರೀತಿಯ ಜೀವನ ನಡೆಸಲು ಅನುಕೂಲ ಮಾಡುವುದೇ ಜೀವವಿಮೆಯ ಉದ್ದೇಶವಾಗಿದೆ. ಅಂದರೆ ದುಡಿಯುವ ಸದಸ್ಯನ ಹೆಸರಲ್ಲಿ, ಆತ ಜೀವಿತಾವಧಿಯಲ್ಲಿ ದುಡಿಯಬಹುದಾದ ಮೊತ್ತದಷ್ಟು ವಿಮೆಯನ್ನು ಮಾಡಿಸಬೇಕಾಗುತ್ತದೆ. ಒಂದೊಮ್ಮೆ ಆತ ಅಕಾಲಿಕವಾಗಿ ಮರಣ ಹೊಂದಿದರೂ ಆತನ ಕುಟುಂಬಕ್ಕೆ ನೆಮ್ಮದಿಯ ಜೀವನ ನಡೆಸಲು ಸಾಕಷ್ಟು ಮೊತ್ತ ದೊರಕುವಂತಿರಬೇಕಾಗುತ್ತದೆ.
ಸಾಮಾನ್ಯವಾಗಿ ಎಂಡೋಮೆಂಟ್ ಪಾಲಿಸಿಗಳು ದುಬಾರಿಯಾಗಿರುತ್ತವೆ ಹಾಗೂ ಇವುಗಳಲ್ಲಿ ಸಿಗುವ ಪ್ರತಿಫಲವೂ ಕಡಿಮೆಯಾಗಿರುತ್ತದೆ. ಹೀಗಾಗಿ ಹೂಡಿಕೆ ಮತ್ತು ವಿಮೆಯನ್ನು ಮಿಶ್ರಣಗೊಳಿಸುವುದು ಸರಿಯಲ್ಲ. ಅವಶ್ಯಕ ಮೊತ್ತದ ಹಾಗೂ ಕಡಿಮೆ ಕಂತಿನ ಟರ್ಮ ಪಾಲಿಸಿ ಪಡೆದುಕೊಳ್ಳುವುದು ಮತ್ತು ಪಾಲಿಸಿಧಾರಕನ ಅಕಾಲಿಕ ಮೃತ್ಯು ಸಂಭವಿಸಿದಲ್ಲಿ ವಿಮೆಯ ಸಂಪೂರ್ಣ ಹಣ ನಾಮಿನಿಗೆ ಮಾತ್ರ ಸಿಗುವಂತೆ ಮಾಡಬೇಕಾಗುತ್ತದೆ. ಆದರೆ ಹೂಡಿಕೆಗಾಗಿ ಪಾಲಿಸಿ ಪಡೆಯುವುದಾದಲ್ಲಿ ಉತ್ತಮ ಆದಾಯ ನೀಡುವ ಯೋಜನೆಗಳನ್ನೇ ಆರಿಸಿಕೊಳ್ಳಬೇಕು.

ಆರೋಗ್ಯ ವಿಮೆ
 

ಆರೋಗ್ಯ ವಿಮೆ

ಸರಕಾರಿ ಆಸ್ಪತ್ರೆಗಳಲ್ಲಿನ ಜನ ಜಂಗುಳಿ ಹಾಗೂ ಅಲ್ಲಿನ ದೀರ್ಘಾವಧಿ ಕಾಯುವಿಕೆಯನ್ನು ತಪ್ಪಿಸಲು ಸಾಮಾನ್ಯವಾಗಿ ಜನರು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡುತ್ತಾರೆ. ಆದರೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ವೆಚ್ಚ ದುಬಾರಿಯಾಗಿರುವುದು ಗೊತ್ತೇ ಇದೆ. ದೀರ್ಘಾವಧಿ ಚಿಕಿತ್ಸೆಯ ಕಾಯಿಲೆಗಳ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಾದರೆ, ಅಲ್ಲಿನ ಚಿಕಿತ್ಸಾ ವೆಚ್ಚಗಳನ್ನು ಭರಿಸುವುದು ಅಸಾಧ್ಯವಾಗಿ ಪರಿಣಮಿಸುವ ಸಾಧ್ಯತೆ ಇರುತ್ತದೆ. ಅಲ್ಲದೆ ಜೀವಿತಾವಧಿಯಲ್ಲಿ ಕೂಡಿಟ್ಟ ಎಲ್ಲ ಹಣವನ್ನು ಖರ್ಚು ಮಾಡಿದರೂ ಸಾಲದಿರಬಹುದು. ಇದು ಅತಂತ್ರದ ಭವಿಷ್ಯ ಜೀವನಕ್ಕೂ ಕಾರಣವಾಗಬಹುದು.
ಇನ್ನು ಆರೋಗ್ಯ ಸೇವೆಗಳ ವಲಯದಲ್ಲಿ ಚಿಕಿತ್ಸಾ ದರಗಳು ಪದೇ ಪದೇ ಹೆಚ್ಚಳವಾಗುತ್ತಿರುತ್ತವೆ. ಹೀಗಾಗಿ ಕಾಯಿಲೆ ಬರುವುದನ್ನು ಕಾಯುತ್ತ ಕೂರದೆ ಆದಷ್ಟು ಬೇಗ ಆರೋಗ್ಯ ವಿಮೆಯ ಸುರಕ್ಷತೆಯನ್ನು ಪಡೆಯುವುದು ಅಗತ್ಯ. ಅಂದರೆ ಆಸ್ಪತ್ರೆಗೆ ದಾಖಲಾದಾಗ ಎದುರಾಗಬಹುದಾದ ಅನಿರೀಕ್ಷಿತ ಖರ್ಚುಗಳನ್ನು ವಾರ್ಷಿಕ ಕಂತಿನ ಮೂಲಕ ನಿರೀಕ್ಷಿತವಾಗಿ ಪರಿವರ್ತಿಸುವುದೇ ಆರೋಗ್ಯ ವಿಮೆಯಾಗಿದೆ.

ಅನಾರೋಗ್ಯ ವಿಮೆ

ಅನಾರೋಗ್ಯ ವಿಮೆ

ಗಂಭೀರ ಸ್ವರೂಪದ ಕಾಯಿಲೆಗಳ ಚಿಕಿತ್ಸೆಗಾಗಿ ಪದೇ ಪದೇ ಆಸ್ಪತ್ರೆಗೆ ದಾಖಲಾಗುವುದರಿಂದ ವ್ಯಕ್ತಿಯ ಆರ್ಥಿಕ ಸ್ಥಿತಿ ಸಂಪೂರ್ಣವಾಗಿ ಹಾಳಾಗಬಹುದು. ಅಲ್ಲದೆ ಕಾಯಿಲೆಯ ಕಾರಣದಿಂದ ಇರುವ ಉದ್ಯೋಗವನ್ನು ಸಹ ಕಳೆದುಕೊಳ್ಳುವ ಸ್ಥಿತಿ ಬರಬಹುದು. ಒಂದೊಮ್ಮೆ ಗಂಭೀರ ಕಾಯಿಲೆಗಳ ಚಿಕಿತ್ಸೆಗಾಗಿ ವಿಮೆ ಪಡೆದುಕೊಂಡಿದ್ದರೆ, ಈ ಮುನ್ನ ಕಾಯಿಲೆಯ ಚಿಕಿತ್ಸೆಗೆ ಮಾಡಲಾದ ಖರ್ಚನ್ನು ಪರಿಗಣಿಸದೆ ಏಕಗಂಟಿನಲ್ಲಿ ವಿಮೆಯ ಮೊತ್ತ ಸಿಗುತ್ತದೆ. ಗಂಭೀರ ಕಾಯಿಲೆಯು ಪತ್ತೆಯಾದ ನಂತರ ಒಂದು ತಿಂಗಳವರೆಗೆ ಪಾಲಿಸಿದಾರ ಬದುಕಿದರೆ ಆತನಿಗೆ ವಿಮಾ ಮೊತ್ತವನ್ನು ನೀಡಲಾಗುವುದು ಎಂಬ ಷರತ್ತನ್ನು ಸಾಮಾನ್ಯವಾಗಿ ವಿಧಿಸಲಾಗಿರುತ್ತದೆ. ಗಂಭೀರ ಕಾಯಿಲೆಗಳ ನಿರ್ದಿಷ್ಟ ವಿಮೆಯ ಹೊರತಾಗಿ, ಆರೋಗ್ಯ ವಿಮೆ ಹಾಗೂ ಜೀವವಿಮೆಗಳಲ್ಲಿಯೂ ಹೆಚ್ಚುವರಿಯಾಗಿ ಈ ಸೌಲಭ್ಯವನ್ನು ಪಡೆಯಬಹುದು.

ಥರ್ಡ ಪಾರ್ಟಿ ಇನ್ಸುರೆನ್ಸ್

ಥರ್ಡ ಪಾರ್ಟಿ ಇನ್ಸುರೆನ್ಸ್

ಥರ್ಡ ಪಾರ್ಟಿ ಇನ್ಸುರೆನ್ಸ್ ಎಂಬುದು ಹೊಣೆಗಾರಿಕೆಯನ್ನು ನಿಭಾಯಿಸುವ ವಿಮಾ ಯೋಜನೆಯಾಗಿದೆ. ಇದರಲ್ಲಿ ವಿಮೆ ಪಡೆದ ವ್ಯಕ್ತಿಯಿಂದ (ಫಸ್ಟ್ ಪಾರ್ಟಿ) ಇನ್ನೊಬ್ಬ ವ್ಯಕ್ತಿಗೆ (ಥರ್ಡ ಪಾರ್ಟಿ) ಯಾವುದೇ ನಷ್ಟ ಅಥವಾ ಹಾನಿ ಉಂಟಾದಲ್ಲಿ, ಅದನ್ನು ವಿಮಾ ಕಂಪನಿಯ (ಸೆಕೆಂಡ ಪಾರ್ಟಿ) ಮೂಲಕ ಭರಿಸಲಾಗುತ್ತದೆ.
ಮೋಟರ್ ವೆಹಿಕಲ್ ಕಾಯ್ದೆಯ ಪ್ರಕಾರ ಎಲ್ಲ ವಾಹನಗಳೂ ಥರ್ಡ ಪಾರ್ಟಿ ಇನ್ಸುರೆನ್ಸ್ ಹೊಂದಿರುವುದು ಕಡ್ಡಾಯವಾಗಿದೆ. ಒಂದೊಮ್ಮೆ ಯಾವುದೋ ಅಪಘಾತ ಸಂಭವಿಸಿ, ಮತ್ತೊಬ್ಬ ವ್ಯಕ್ತಿ (ಥರ್ಡ ಪಾರ್ಟಿ) ಗೆ ಗಾಯವಾದರೆ ಅಥವಾ ಆತ ಸಾವನ್ನಪ್ಪಿದರೆ ಆತನ ಆರ್ಥಿಕ ಪರಿಸ್ಥಿತಿಗೆ ತಕ್ಕಂತೆ ಪರಿಹಾರ ನೀಡಬೇಕಾಗುತ್ತದೆ. ಈ ಮೊತ್ತ ಕೆಲವೊಮ್ಮೆ ಲಕ್ಷ ಅಥವಾ ಕೋಟಿ ರೂಪಾಯಿಗಳನ್ನು ಮೀರಬಹುದು.
ಇಂಥ ಸಂದರ್ಭಗಳಲ್ಲಿ ವಿಮೆ ಇರದಿದ್ದರೆ ಏನಾಗಬಹುದು ಎಂಬುದನ್ನು ಊಹಿಸುವುದೂ ಕಷ್ಟ. ಆದರೆ ಥರ್ಡ ಪಾರ್ಟಿ ವಿಮೆ ಮಾಡಿಸಿದ್ದರೆ ಅಪಘಾತ ಮಾಡಿದವನ ಹೊಣೆಗಾರಿಕೆಯು ವಿಮಾ ಕಂಪನಿಗೆ ವರ್ಗಾವಣೆಯಾಗುತ್ತದೆ ಹಾಗೂ ಕಂಪನಿಯೇ ಸಂತ್ರಸ್ತ ವ್ಯಕ್ತಿಗೆ ಪರಿಹಾರ ನೀಡುತ್ತದೆ. ಮೋಟಾರು ವಾಹನಗಳಲ್ಲದೆ ಯಾರಿಗಾದರೂ ಗಾಯ ಅಥವಾ ಹಾನಿ ಮಾಡಬಹುದಾದ ಯಂತ್ರಗಳು, ಸಾಧನ-ಸಲಕರಣೆಗಳು ಮುಂತಾದುವುಗಳಿಗೂ ಥರ್ಡ ಪಾರ್ಟಿ ವಿಮೆ ಮಾಡಿಸಲಾಗುತ್ತದೆ. ಉದಾಹರಣೆಗೆ ನಾವು ನಿತ್ಯ ಬಳಸುವ ಲಿಫ್ಟ್‌ಗಳಿಗೂ ವಿಮೆ ಮಾಡಿಸಬೇಕು.

ಗೃಹ ವಿಮೆ

ಗೃಹ ವಿಮೆ

ಬೆಂಕಿ ಆಕಸ್ಮಿಕ, ಭೂಕಂಪ, ನೆರೆ ಹಾವಳಿ ಅಥವಾ ಇನ್ನಿತರ ನೈಸರ್ಗಿಕ ಪ್ರಕೋಪಗಳಿಂದ ಮನೆಗೆ ಉಂಟಾಗಬಹುದಾದ ಹಾನಿ ಅಥವಾ ಕಳ್ಳತನ ಸೇರಿದಂತೆ ಇನ್ನಾವುದೇ ರೀತಿಯ ಹಾನಿಯಿಂದ ಸಂರಕ್ಷಣೆ ಪಡೆಯಲು ಗೃಹ ವಿಮೆ ಮಾಡಿಸಬೇಕಾಗುತ್ತದೆ. ಎಲ್ಲ ರಿಸ್ಕ್‌ಗಳನ್ನು ಕವರ್ ಮಾಡುವ ವಿಮೆ ಪಡೆದಲ್ಲಿ ಮನೆಯಲ್ಲಿನ ತಟ್ಟೆ, ಲೋಟಗಳಿಂದ ಹಿಡಿದು ಬೈಸಿಕಲ್ ಹಾಗೂ ಚಿನ್ನಾಭರಣ ಮತ್ತು ಎಲ್ಲ ಬಹುತೇಕ ಎಲ್ಲ ವಸ್ತುಗಳಿಗೂ ವಿಮೆಯ ಸಂರಕ್ಷಣೆ ಸಿಗುತ್ತದೆ. ಪ್ರಯಾಣ ಸಂದರ್ಭದಲ್ಲಿ ಲಗೇಜ್ ಕಳವು ಅಥವಾ ವೈಯಕ್ತಿಕ ಅಪಘಾತಗಳು ಸೇರಿದಂತೆ ಅಪಘಾತದಿಂದ ಥರ್ಡ ಪಾರ್ಟಿಗೆ ಆಗಬಹುದಾದ ಹಾನಿಗಳಿಗೂ ಈ ರೀತಿಯ ವಿಮೆಗಳು ಸಂರಕ್ಷಣೆ ನೀಡುತ್ತವೆ. ಹೀಗಾಗಿ ಅನೇಕ ವಿಧದಲ್ಲಿ ಉಪಯುಕ್ತವಾಗುವ ಹಾಗೂ ಸಮಗ್ರವಾಗಿ ಹೊಣೆಗಾರಿಕೆಯನ್ನು ನಿಭಾಯಿಸುವ ಗೃಹವಿಮೆ ಮಾಡಿಸಲು ಪ್ರತಿಯೊಬ್ಬರೂ ಚಿಂತಿಸಬೇಕು.

Read more about: insurance money savings ವಿಮೆ
English summary

You are risking a lot if you do not have these 5 types of insurance

Life is full of uncertainties. Untimely death of an earning member of a family, meeting with an accident, illness or burglary at one’s house may cause immense financial loss and even irreversible damage to someone.
Story first published: Monday, October 15, 2018, 17:43 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X