ಕ್ಷೀಣಿತ ಬೇಡಿಕೆ ವಾಸ್ತವ - ನೀಡಲಾಗಿದೆ ಆರ್ಥಿಕ ಹಿಂಜರಿತದ ಪಟ್ಟವ
ಪ್ರಮುಖ ಫಾಸ್ಟ್ ಮೂವಿಂಗ್ ಕನ್ಸೂಮರ್ಸ್ ಗೂಡ್ಸ್ ವಲಯದ ಕಂಪನಿಗಳು ಇತ್ತೀಚಿಗೆ ತಮ್ಮ ತ್ರೈಮಾಸಿಕ ಫಲಿತಾಂಶ ಪ್ರಕಟಿಸಿದ್ದು ಆ ಅಂಕಿ ಅಂಶಗಳು ಪ್ರೋತ್ಸಾಹದಾಯಕವಾಗಿರದೆ ನಿರಾಶಾದಾಯಕವಾಗಿದೆ. ನಮ್ಮ ದೇಶದ ನಾಗರಿಕರು ತಮ್ಮ ದಿನನಿತ್ಯದ ಅಗತ್ಯವಸ್ತುಗಳಾದ ಪೇಸ್ಟ್, ಸೋಪ್, ಟೀ ಕಾಫಿಪುಡಿ, ಸೌಂದರ್ಯವರ್ಧಕ ವಸ್ತುಗಳನ್ನು ಬಳಸದೆ ಇರುವಸ್ಟರ ಮಟ್ಟಿಗೆ ಆರ್ಥಿಕ ಹಿಂಜರಿತವೇನಿಲ್ಲ. ಇದುವರೆಗೂ ಈ ಎಫ್ ಎಂ ಸಿ ಜಿ ವಲಯದ ಕಂಪನಿಗಳು ತಮ್ಮ ವ್ಯಾವಹಾರಿಕ ಚತುರತೆ, ಕೌಶಲ್ಯಗಳ ಪ್ರಭಾವದಿಂದ ಹಿಂದಿನ ವರ್ಷಗಳಲ್ಲಿ ಮಾಡಿರುವ ಘನಂಧಾರಿ ಕಾರ್ಯದ ಪ್ರಭಾವವೇ ಇಂದಿನ ಈ ದುರಾವಸ್ಥೆಗೆ ಕಾರಣವಾಗಿದೆ ಎನ್ನಬಹುದು. ಈ ಹಿಂದೆ ಉಳಿತಾಯ ಎಂದರೆ ನಮ್ಮ ಗಳಿಕೆಯಲ್ಲಿ ಉಳಿಸುವುದಾಗಿತ್ತು, ಇಂದು ಉಳಿತಾಯ ಎಂದರೆ ವೆಚ್ಚದಲ್ಲಿ ಉಳಿಸುವುದಾಗಿದೆ.

ಡಿಸ್ಕೌಂಟ್ ವ್ಯಾಮೋಹ
ಈಗಿನ ಆಧುನಿಕ ಜೀವನವು ಜನಸಾಮಾನ್ಯರಾದಿಯಾಗಿ ಎಲ್ಲರಲ್ಲೂ ಡಿಸ್ಕೌಂಟ್ ಎಂಬ ಮೋಹಕ ವಿಷವನ್ನು ಬಿತ್ತಿದೆ. ಈ ಕಾರಣ ನಮ್ಮ ಸಮಾಜದ ಎಲ್ಲಾ ವರ್ಗದವರ ಮನದಲ್ಲಿ ಡಿಸ್ಕೌಂಟ್ ವ್ಯಾಮೋಹವು ತಮ್ಮ ಅಗತ್ಯವನ್ನು ಮೀರಿದ ಹಂತವನ್ನು ತಲುಪಿಸಿದೆ. ಅಂದರೆ ನಮಗೆ ಒಂದರ ಅಗತ್ಯವಿದ್ದರೆ ಮೂರರಷ್ಟನ್ನೋ, ನಾಲ್ಕನ್ನೋ ಖರೀದಿಸುವಂತೆ ಮಾಡಿ ಪ್ರತಿಯೊಂದು ಮನೆಯಲ್ಲಿಯು ಈ ಕಂಪನಿಗಳಿಗೆ ಗೋದಾಮಿನ ಅವಕಾಶ ಮಾಡಿಕೊಟ್ಟಿದ್ದೇವೆ. ಡಿಸ್ಕೌಂಟ್ ಸಿಗುತ್ತದೆ ಎಂದರೆ ನಮ್ಮ ಅಗತ್ಯಕ್ಕಿಂತ ಹೆಚ್ಚು ವೆಚ್ಚಮಾಡಿ ಉಳಿತಾಯ ಮಾಡಿದ್ದೇವೆಂದು ಬೀಗುತ್ತೇವೆ ಆದರೆ ಸಹಜವಾಗಿ ನಮ್ಮ ಮನೆಯ ಸ್ವಲ್ಪ ಭಾಗವನ್ನು ಕೆಲವು ಕಂಪನಿಗಳಿಗೆ ಗೋದಾಮಾಗಿ ನೀಡಿದ್ದಕ್ಕೆ ಅವರು ಬಾಡಿಗೆ ಕೊಟ್ಟಂತಾಗಿದೆ. ಅಂದರೆ ಸುಮಾರು ಆರು ತಿಂಗಳಿಗೋ ಅಥವಾ ಕೆಲವು ಬಾರಿ ವರ್ಷಕ್ಕಾಗುವಷ್ಟನ್ನು ನಮ್ಮ ಮನೆಯಲ್ಲಿ ತುಂಬಿಕೊಂಡಿದ್ದಾಗ ಮತ್ತೊಮ್ಮೆ ಖರೀದಿಸಲು ಮುಂದಾಗುವುದು ಹೇಗೆ ಸಾಧ್ಯ. ಅಂದರೆ ಈ ರೀತಿಯ ಅಗತ್ಯಗಳು ತುಂಬಿತುಳುಕುತ್ತಿರುವಾಗ ಮತ್ತಷ್ಟು ಖರೀದಿಸುವ ಪ್ರಯತ್ನಕ್ಕೆ ಹಣ ವ್ಯಯ ಮಾಡುವುದು ಸಾಧ್ಯವಿಲ್ಲ. ಈ ಕಾರಣದಿಂದ ಈ ಗೃಹೋಪಯೋಗಿ ವಸ್ತುಗಳ ಮಾರಾಟ ಕ್ಷೀಣಿತವಾಗಿ ಈ ಕಂಪನಿಗಳು ಪ್ರಕಟಿಸಿದ ಫಲಿತಾಂಶಗಳ ಅಂಕಿ ಅಂಶಗಳು ನಿರೀಕ್ಷಿತ ಮಟ್ಟದಲ್ಲಿಲ್ಲ. ಇದು ಆರ್ಥಿಕ ಹಿಂಜರಿತದ ಪ್ರಭಾವ ಎಂದು ಅರ್ಥೈಸುವುದು ಸರಿಯಲ್ಲ. ಕೇವಲ ಬೇಡಿಕೆ ಕ್ಷೀಣಿತವಾಗಿದೆಯಷ್ಟೆ.

ವಾಹನ ಉದ್ಯಮ ಕುಸಿತ
ಇನ್ನು ಆಟೋ ವಲಯದಲ್ಲಿ ಹಿಂಜರಿತ ಎಂಬುದು ಕೇವಲ ಪ್ರಚಾರವಷ್ಟೇ. ವಾಹನಗಳ ಮಾರಾಟದ ಸಂಖ್ಯೆ ಕುಸಿತಕಾಣುತ್ತಿದೆ ಎಂಬುದು ಕಂಪನಿಗಳ ಮಾರಾಟದ ಅಂಶಗಳಿಂದ ತಿಳಿಯುತ್ತದೆ. ಆದರೆ ಜನರಲ್ಲಿ ವಾಹನ ಖರೀದಿಯ ಹಂಬಲವೇನು ಕಡಿಮೆಯಾಗಿಲ್ಲ. ಇಲ್ಲಿ ಸತ್ಯಂಶವೆಂದರೆ ಶ್ವಾನದ ಗೂಡಲ್ಲಿ -ಮಾನವನಿಗೆ ಸ್ಥಾನವೆಲ್ಲಿ ಎಂಬಂತಾಗಿದೆ. 2008 ರ ಡಿಸೆಂಬರ್ ನಲ್ಲಿ ಬಾಂಬೆ ಸ್ಟಾಕ್ ಎಕ್ಸ್ ಚೇಂಜ್ ಆಟೋ ಇಂಡೆಕ್ಸ್ 2 ,127 ರಲ್ಲಿತ್ತು. ಪಾಯಿಂಟುಗಳಲ್ಲಿತ್ತು. ಒಂಬತ್ತು ವರ್ಷಗಳಲ್ಲಿ ಅಂದರೆ ಡಿಸೆಂಬರ್ 2017 ರಲ್ಲಿ ಈ ಆಟೋ ಇಂಡೆಕ್ಸ್ 27 ,031 ಪಾಯಿಂಟುಗಳಿಗೆ ತಲುಪಿ ಸುಮಾರು 12 ಪಟ್ಟಿಗೂ ಹೆಚ್ಚು ಏರಿಕೆ ಕಂಡಿದೆ. ಇಂತಹ ಅಗಾಧವಾದ ಮಟ್ಟದಲ್ಲಿ ವಾಹನ ವಲಯದ ಅಭಿವೃದ್ಧಿಗೆ ಕಾರಣ ವಲಯದ ಕಂಪನಿಗಳು ತಮ್ಮ ವಾಹನಗಳನ್ನು ಸ್ಪರ್ಧಾತ್ಮಕವಾಗಿ ಮಾರಾಟಮಾಡಿರುವುದೇ ಆಗಿದೆ. ಈ ಕಂಪನಿಗಳು, ಸರ್ಕಾರ, ಸ್ಥಳೀಯ ಆಡಳಿತಗಳು ಒಂದು ಮುಖ್ಯ ಅಂಶವನ್ನು ಮರೆತುಹೋಗಿವೆ. ಅದೆಂದರೆ ವಾಹನಗಳನ್ನು ಖರೀದಿಮಾಡಿದವರು ಅವನ್ನು ತಮ್ಮ ಗೂಡಿನಲ್ಲಿಡದೆ ರಸ್ತೆಗೆ ಬಿಡುತ್ತಾರೆ ಎಂಬ ಅಂಶವನ್ನು ಈ ಆಡಳಿತಗಳು ಗಮನಿಸಲೇ ಇಲ್ಲ. ಹಾಗಾಗಿ ಈ ಮಟ್ಟದ ವಾಹನ ವಲಯ ಬೆಳೆದರೂ ಅವಕ್ಕೆ ಅವಶ್ಯಕವಿರುವ ರಸ್ತೆಗಳು ವಿಶೇಷವಾಗಿ ನಗರ ಪ್ರದೇಶದಲ್ಲಿ ಅಗತ್ಯ ಮಟ್ಟದಲ್ಲಿ ಬೆಳೆಯಲಿಲ್ಲ. ಇದು ಇಂದಿನ ಟ್ರಾಫಿಕ್ ಜಾಮ್ ಗೆ ಮುಖ್ಯ ಕಾರಣವಾಗಿದೆ. ಸಧ್ಯದ ಪರಿಸ್ಥಿತಿಯಲ್ಲಿ ನಗರಗಳ ಕೇಂದ್ರೀಯ ಭಾಗದಲ್ಲಿ ವಾಹನ ಸಂಚಾರಕ್ಕಿಂತ ಪಾದಚಾರಿಯಾಗಿ ಕಾರ್ಯ ನಿರ್ವಹಿಸಿದಲ್ಲಿ ತಲುಪಬೇಕಾದ ಗುರಿಯನ್ನು ಬೇಗ ಸೇರಿಕೊಳ್ಳುವಂತಿದೆ. ಇದು ಕಣ್ಣಾರೆ ಕಂಡಿರುವುದರೊಂದಿಗೆ ಅನುಭವಕ್ಕೂ ಹೆಚ್ಚಿನವರಿಗೆ ಬಂದಿರುತ್ತದೆ. ಈ ಅಂಶವು ವಾಹನ ಖರೀದಿಗೆ ನಕಾರಾತ್ಮಕ ಅಂಶವಾಗಿದೆ. ಡಿಸೆಂಬರ್ 2017 ರಲ್ಲಿ ತಲುಪಿದ್ದ ಗರಿಷ್ಠದ ನಂತರದಲ್ಲಿ ಆಟೋ ಇಂಡೆಕ್ಸ್ ಕುಸಿಯುತ್ತಾ ಇದ್ದು ಈ ತಿಂಗಳ 4 ರಂದು 15 ,169 ಕ್ಕೆ ಜಾರಿದೆ. ಅಂದರೆ 21 ತಿಂಗಳಲ್ಲಿ ಸುಮಾರು ಹನ್ನೆರಡು ಸಾವಿರ ಪಾಯಿಂಟುಗಳಷ್ಟು ಇಳಿಕೆ ಕಂಡಿದೆ. ಶುಕ್ರವಾರದಂದು ಈ ಇಂಡೆಕ್ಸ್ 16 ,541 ಕ್ಕೆ ಚೇತರಿಕೆ ಕಂಡಿದೆ.

ಸಂಚಾರಿ ನಿಯಮ
ಜೊತೆಗೆ ಸಂಚಾರಿ ನಿಯಮಗಳಲ್ಲಾಗುವ ವಿವಿಧ ಲೋಪಗಳಿಗೆ ವಿಧಿಸುವ ದಂಡದ ಪ್ರಮಾಣವನ್ನು ಹೆಚ್ಚಿಸಿರುವುದು ಸಹ ನಗರಪ್ರದೇಶಗಳಲ್ಲಿ ವಾಹನ ಖರೀದಿಗೆ ನಿರುತ್ಸಾಹ ವಾತಾವರಣ ನಿರ್ಮಿತವಾಗಿದೆ. ಮುಂದಿನ ದಿನಗಳಲ್ಲಿ ವಾಹನ ಮಾರಾಟ ಸಂಖ್ಯೆ ಹೆಚ್ಚುವಂತೆ ಮಾಡಲು ವಾಹನ ಮಾರಾಟದ ಕಂಪನಿಗಳು ವಾಹನ ವಿಮೆಯ ವೆಚ್ಚ ಭರಿಸುವಂತೆ, ಆ ವಾಹನ ಬಳಕೆಯ ಸಂದರ್ಭದಲ್ಲಿ ವಿಧಿಸಬಹುದಾದ ದಂಡವನ್ನು ತುಂಬಿಸಿಕೊಡುವ ಯೋಜನೆ ಪ್ರಕಟಿಸಿದರು ಅಚ್ಚರಿಯಿಲ್ಲ.
ಒಟ್ಟಾರೆ ವಿವಿಧ ವಲಯಗಳಲ್ಲಿ ಕಂಡುಬರುತ್ತಿರುವ ಕ್ಷೀಣಿತ ಬೇಡಿಕೆಯನ್ನು ಹಿಂಜರಿತ ಎಂಬ ಹಣೆಪಟ್ಟಿ ಕಟ್ಟುವುದಕ್ಕಿಂತ ವಾಸ್ತವ ಅಂಶಗಳನ್ನು ಗಮನಿಸಿ, ಸುಧಾರಣಾ ಕ್ರಮಗಳ ಅಗತ್ಯವಿದೆ. ವಿಳಂಬವಾದಲ್ಲಿ ಹಿಂಜರಿತ ಕಟ್ಟಿಟ್ಟ ಬುತ್ತಿ.