For Quick Alerts
ALLOW NOTIFICATIONS  
For Daily Alerts

ಕಾರ್ಪೊರೇಟ್ ತೆರಿಗೆ ಕಡಿತ - ಷೇರುಪೇಟೆಯಲ್ಲಿ ಗೂಳಿ ಕುಣಿತ

|

ಷೇರುಪೇಟೆಯ ನಡೆ ವಿಸ್ಮಯಕಾರಿಯಾಗಿರುತ್ತದೆ ಎಂಬುದನ್ನು ಇಂದಿನ ಪೇಟೆಯ ಚಲನೆ ಮತ್ತೊಮ್ಮೆ ದೃಢಪಡಿಸಿದೆ. ದಿನದ ಚಟುವಟಿಕೆ ಆರಂಭವಾದ ಸ್ವಲ್ಪ ಸಮಯದಲ್ಲೇ ಸೆನ್ಸೆಕ್ಸ್ ಹಾನಿಗೊಳಗಾದಂತೆ ಕಂಡು ನಂತರ ಸ್ಥಿರತೆಯನ್ನು ಪ್ರದರ್ಶಿಸಿತು. ನಂತರ ಕೇಂದ್ರ ಸರ್ಕಾರದ ವಿತ್ತ ಸಚಿವೆಯವರು ಕೆಲವು ಸುಧಾರಣೆಗಳನ್ನು ಘೋಷಿಸಲು ಮುಂದಾದಾಗ ಸಾಕಷ್ಟು ವಹಿವಾಟುದಾರರು, ಹೂಡಿಕೆದಾರರು ನಿರೀಕ್ಷಿಸದೆ ಇರುವಂತಹ ರೀತಿಯ ಸುಧಾರಣಾ ಕ್ರಮಕ್ಕೆ ಪೇಟೆ ಸ್ಪಂಧಿಸಿದ ರೀತಿ ಮಾತ್ರ ಅಭೂತಪೂರ್ವವಾಗಿದ್ದು, ದಾಖಲೆಯ ಮಟ್ಟದಲ್ಲಿತ್ತು. ಈ ಘೋಷಣೆಯು ಕವಡೆ ತೂರಿದಾಗ ಉಂಟಾಗುವ ರೇಖಾ ಚಿತ್ರದಂತೆ ಷೇರಿನ ಬೆಲೆಗಳು, ಸೂಚ್ಯಂಕಗಳು ಗಗನಕ್ಕೆ ಚಿಮ್ಮಿದವು.

ಷೇರುಪೇಟೆ ಸಂಚಲನ
 

ಷೇರುಪೇಟೆ ಸಂಚಲನ

ಒಂದು ಹಂತದಲ್ಲಿ 2,284 ಪಾಯಿಂಟುಗಳ ಏರಿಕೆ ಕಂಡಂತಹ ಸೆನ್ಸೆಕ್ಸ್, ದಿನದ ಅಂತ್ಯದಲ್ಲಿ 1,921 ಪಾಯಿಂಟುಗಳಷ್ಟು ಏರಿಕೆಯಿಂದ ಕೊನೆಗೊಂಡಿತು. ಈ ಏರಿಕೆಯ ಹಿಂದೆ ಪ್ರಮುಖ ಕೊಡುಗೆ ಎಂದರೆ ಬ್ಯಾಂಕಿಂಗ್ ವಲಯದ್ದಾಗಿದೆ. ಇಂಡಸ್ ಇಂಡ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬಜಾಜ್ ಫೈನಾನ್ಸ್, ಹೆಚ್ ಡಿ ಎಫ್ ಸಿ ಬ್ಯಾಂಕ್ ಗಳು ಸುಮಾರು ಶೇ.10 ರಷ್ಟು ಏರಿಕೆ ಕಂಡರೆ, ಐಸಿಐಸಿಐ ಬ್ಯಾಂಕ್ , ಕೋಟಕ್ ಮಹಿಂದ್ರಾ ಬ್ಯಾಂಕ್, ಆಕ್ಸಿಸ್ ಬ್ಯಾಕ್ ಗಳು ಸಹ ಸೆನ್ಸೆಕ್ಸ್ ಏರಿಕೆಗೆ ಹೆಚ್ಚಿನ ಕೊಡುಗೆ ನೀಡಿದವು. ಇಂದಿನ ಈ ಏರಿಕೆಯ ಹಿಂದೆ ಭಾರಿ ಪ್ರಮಾಣದ ಶಾರ್ಟ್ ಕವರಿಂಗ್ ಪ್ರಕ್ರಿಯೆಯು ಕಾರಣವಾಗಿದೆ. ಅಲ್ಲದೆ ಅನೇಕ ಅಗ್ರಮಾನ್ಯ ಕಂಪನಿಗಳು ಕಂಡಿದ್ದಂತಹ ಭಾರಿ ಕುಸಿತದ ಕಾರಣ ವಾಲ್ಯೂ ಪಿಕ್ ಚಟುವಟಿಕೆಯು ಕಾರಣವಾಗಿದೆ.

ತೆರಿಗೆ ಕಡಿತ ಎಫೆಕ್ಟ್

ತೆರಿಗೆ ಕಡಿತ ಎಫೆಕ್ಟ್

ಮುಖ್ಯವಾಗಿ ವಿತ್ತ ಸಚಿವೆ ಇಂದು ಪ್ರಕಟಿಸಿದ ತೆರಿಗೆ ಕಡಿತಗಳಿಂದ ಸರ್ಕಾರಕ್ಕೆ ರೂ. 1.45 ಲಕ್ಷ ಕೋಟಿ ಹೊರೆಯಾಗಲಿದೆ ಎಂದಿದ್ದಾರೆ. ವಿಸ್ಮಯಕಾರಿ ಎಂದರೆ ಇದಕ್ಕೆ ಪ್ರತಿಯಾಗಿ ಷೇರುಪೇಟೆ ರೂ.6.83 ಲಕ್ಷ ಕೋಟಿ ಬಂಡವಾಳೀಕರಣ ಮೌಲ್ಯವನ್ನು ಹೆಚ್ಚಿಸಿದೆ. ಇದು ಹೂಡಿಕೆದಾರರಲ್ಲಿ ಆಶಾಭಾವನೆ ಮೂಡಿಸಿದೆಯಲ್ಲದೆ, ಸರ್ಕಾರ ಹೊಂದಿರುವ ವಿವಿಧ ಕಂಪನಿಗಳ ಷೇರುಗಳ ಮೌಲ್ಯ ಹೆಚ್ಚಾಗಿರುವುದು ಪರೋಕ್ಷ ಗಳಿಕೆಯಾಗಿದೆ. ವಿವಿಧ ರೀತಿಯ ಪ್ಯಾಕೇಜ್ ಗಳನ್ನು ನೀಡುವ ಬದಲು ಆರ್ಥಿಕ ವಲಯದ ಮೂಲಕ್ಕೆ ಚೇತರಿಕೆಯ ಚಿಕಿತ್ಸೆ ನೀಡಿದಂತಾಗಿದೆ. ಇದರ ಕಾರಣ, ಆರ್ಥಿಕ ಒತ್ತಡದಿಂದ ದಣಿದಿದ್ದ ವಿವಿಧ ವಲಯದ ಕಂಪನಿಗಳು ವಿಶೇಷವಾಗಿ ಆಟೋ ಮತ್ತು ಬ್ಯಾಂಕಿಂಗ್ ವಲಯದ ಕಂಪನಿಗಳು ಪುಟಿದೆದ್ದಿವೆ. ಸರ್ಕಾರದ ಈ ಕ್ರಮವು ಪ್ರೇರಕ, ಪ್ರಚೋದನಕಾರಿ ಘೋಷಣೆಗಳಿಗಿಂತ ಭಿನ್ನವಾಗಿದ್ದುದು ಎಲ್ಲಾ ವಲಯಗಳಲ್ಲಿ ಸಕಾರಾತ್ಮಕ ಸ್ಪಂಧನ ದೊರೆತಿದೆ.

ಷೇರು ಮೌಲ್ಯ
 

ಷೇರು ಮೌಲ್ಯ

ಈ ಘೋಷಣೆಯ ಹಿನ್ನೆಲೆಯಲ್ಲಿ ಸಾರ್ವಜನಿಕ ವಲಯದ ತೈಲ ಕಂಪನಿಗಳಾದ ಭಾರತ್ ಪೆಟ್ರೋಲಿಯಂ ಷೇರಿನ ಬೆಲೆ ದಿನದ ಕನಿಷ್ಠ ಬೆಲೆ ರೂ. 372 ರ ಸಮೀಪದಿಂದ ರೂ.455 ರವರೆಗೂ ಚಿಮ್ಮಿತು. ರೂ.404 ರ ಸಮೀಪ ಕೊನೆಗೊಂಡಿತು. ಹಿಂದುಸ್ಥಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಷೇರಿನ ಬೆಲೆ ರೂ. 247 ಸಮೀಪದಿಂದ ರೂ.286 ರ ಸಮೀಪಕ್ಕೆ ಜಿಗಿದು ರೂ. 277 ರಲ್ಲಿ ಕೊನೆಗೊಂಡಿದೆ.

ಲಾರ್ಸನ್ ಅಂಡ್ ಟೊಬ್ರೋ ಕಂಪನಿ ಷೇರಿನ ಬೆಲೆ ರೂ.1,289 ರ ಕನಿಷ್ಠ ಬೆಲೆಯಿಂದ ರೂ.1,416 ರ ವರೆಗೂ ಜಿಗಿತ ಕಂಡು ರೂ.1,411ರಲ್ಲಿ ಕೊನೆಗೊಂಡಿದೆ.

ಅಂತೆಯೇ, ಅಲ್ಟ್ರ ಟೆಕ್ ಸಿಮೆಂಟ್ ಷೇರಿನ ಬೆಲೆ ರೂ.3,853 ರ ಸಮೀಪದಿಂದ ರೂ.4,323 ರವರೆಗೂ ಜಿಗಿದು ರೂ.4,269 ರಲ್ಲಿ ಕೊನೆಗೊಂಡಿದೆ. ಎಸಿಸಿ, ಅಂಬುಜಾ ಸಿಮೆಂಟ್, ಇಂಡಿಯಾ ಸಿಮೆಂಟ್ ಮುಂತಾದವು ಏರಿಕೆ ಕಂಡಿವೆ.

ದಿನದ ಆರಂಭಿಕ ಚಟುವಟಿಕೆಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಷೇರಿನ ಬೆಲೆ ರೂ.1,174.30 ರ ಕನಿಷ್ಟದಲ್ಲಿದ್ದು, ಸುಧಾರಣಾ ಕ್ರಮ ಘೋಷಿಸಿದ ನಂತರ ರೂ.1,269 ರ ಗಡಿ ದಾಟಿತು.

ಮಾರುತಿ ಸುಜುಕಿ ಷೇರಿನ ಬೆಲೆ ರೂ.5,982 ರ ಸಮೀಪದಿಂದ ರೂ.6,949 ರವರೆಗೂ ಜಿಗಿತ ಕಂಡು ರೂ.6,513 ರ ಸಮೀಪ ಕೊನೆಗೊಂಡಿದೆ.

ಸೋಜಿಗವೆಂದರೆ ದ್ವಿಚಕ್ರ ವಾಹನ ವಲಯದ ಐಶರ್ ಮೋಟಾರ್ಸ್ ಷೇರಿನ ಬೆಲೆ ರೂ.15,800 ರ ಸಮೀಪದಿಂದ ರೂ.18,320 ರವರೆಗೂ ಜಿಗಿದು ಅಂತ್ಯದಲ್ಲಿ 17,841 ರಲ್ಲಿ ಕೊನೆಗೊಂಡಿದೆ.

ಗಮನಾರ್ಹ ಏರಿಕೆ

ಗಮನಾರ್ಹ ಏರಿಕೆ

ಹೀರೊ ಮೋಟೋ ಕಾರ್ಪ್ , ಅಶೋಕ್ ಲೇಲ್ಯಾಂಡ್ , ಟಿವಿಎಸ್ ಮೋಟಾರ್ ಗಳು ಸಹ ಗಮನಾರ್ಹ ಏರಿಕೆಯಿಂದ ಪೇಟೆಯನ್ನು ಬೆಂಬಲಿಸಿದವು.

ಕಂಪನಿಗಳಾದ ಹ್ಯಾವೆಲ್ಸ್, ಬ್ರಿಟಾನಿಯ, ಟೈಟಾನ್, ನಾನ್ ಬ್ಯಾಂಕಿಂಗ್ ಫೈನಾನ್ಸ್ ಕಂಪನಿಗಳಾದ ಚೋಳಮಂಡಲಂ ಇನ್ವೆಸ್ಟ್, ಎಡೆಲ್ವಿಸ್, ಎಲ್ ಅಂಡ್ ಟಿ ಫೈನಾನ್ಸ್ ಹೋಲ್ಡಿಂಗ್ಸ್, ಗಳಲ್ಲದೆ ಗೃಹ ಸಾಲ ಕಂಪನಿಗಳಾದ ಎಲ್ ಐ ಸಿ ಹೌಸಿಂಗ್, ಗೃಹ ಫೈನಾನ್ಸ್, ಪಿ ಏನ್ ಬಿ ಹೌಸಿಂಗ್ ಮುಂತಾದವು ಗಮನಾರ್ಹ ಏರಿಕೆ ಕಂಡಿವೆ.

ಹೂಡಿಕೆದಾರರು ಗಮನಿಸಬೇಕಾದ ಅಂಶ

ಹೂಡಿಕೆದಾರರು ಗಮನಿಸಬೇಕಾದ ಅಂಶ

ಒಟ್ಟಾರೆ ಇಂದಿನ ಬೃಹತ್ ಏರಿಕೆ ಪೇಟೆಯ ಚಿತ್ರಣವನ್ನೇ ಬದಲಿಸಿದೆ. ಈ ಎಲ್ಲಾ ಸುಧಾರಣಾ ಕ್ರಮಗಳು ವಿದೇಶಿ ಹೂಡಿಕೆದಾರರನ್ನು ಆಕರ್ಷಿಸಲು ಎಷ್ಟರ ಮಟ್ಟಿಗೆ ಯಶಸ್ಸು ಕಾಣುತ್ತದೆ ಎಂಬುದು ಕುತೂಹಲಕಾರಿಯಾಗಿದೆ.

ಈ ಸಂದರ್ಭದಲ್ಲಿ ಹೂಡಿಕೆದಾರರು ಗಮನಿಸಬೇಕಾದ ಅಂಶ ಎಂದರೆ, ಷೇರುಪೇಟೆಗಳು ಉತ್ತುಂಗದಲ್ಲಿದ್ದಲ್ಲಿ ಮಾತ್ರ ಸರ್ಕಾರದ ಗುರಿಯಾದ ರೂ.1.05 ಲಕ್ಷ ಕೋಟಿ ಬಂಡವಾಳ ಹಿಂತೆಗೆತ ಕಾರ್ಯಕ್ರಮ ಯಶಸ್ಸು ಕಾಣಬಹುದು. ಹಾಗಾಗಿ ಸರ್ಕಾರದ ಈ ಕ್ರಮದಿಂದ ಸಾರ್ವಜನಿಕ ವಲಯದ ಕಂಪನಿಗಳ ಷೇರುಗಳಲ್ಲಿ ಗಮನಾರ್ಹ ಏರಿಕೆ ಕಂಡುಬಂದಲ್ಲಿ ಲಾಭದ ನಗದೀಕರಣಕ್ಕೆ ಹೆಚ್ಚು ಒತ್ತು ನೀಡುವುದು ಉತ್ತಮ. ಹಣ ಕೈಲಿದ್ದಲ್ಲಿ ಅವಕಾಶಗಳನ್ನು ಪೇಟೆಗಳು ಒದಗಿಸುತ್ತವೆ.

English summary

Corporate Tax cut Ordinance - market exhibits bulls dance

Sensex jumped is record in 10 years. Shortcovering, Value pick pushed up the share prices. Secular participation in today's market rise is very rare opportunity to watch.
Company Search
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more