For Quick Alerts
ALLOW NOTIFICATIONS  
For Daily Alerts

ಷೇರುಪೇಟೆಯಲ್ಲಿ ಸುದ್ದಿಗಳ ದರ್ಬಾರು ಹೆಚ್ಚಿಸಿವೆ ಏರುಪೇರು

|

ಷೇರುಪೇಟೆಯ ಸೂಚ್ಯಂಕಗಳು ಶುಕ್ರವಾರದಂದು ವಿತ್ತ ಸಚಿವೆ ಪ್ರಕಟಿಸಿದ ತೆರಿಗೆ ರಿಯಾಯಿತಿ ಸೌಲಭ್ಯಗಳ ಕಾರಣ ಭಾರಿ ಜಿಗಿತ ಕಂಡವು. ಆದರೆ ಕೆಲವು ಅಗ್ರಮಾನ್ಯ ಕಂಪನಿಗಳು ಅಲ್ಪಕಾಲೀನದಲ್ಲೇ ಅನಿರೀಕ್ಷಿತ ಏರಿಳಿತ ಪ್ರದರ್ಶಿಸಿ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸಿಕೊಟ್ಟಿವೆ. ಸೋಮವಾರದಂದು ಇದೇ ವಾತಾವರಣ ಮುಂದುವರೆದು 1,075 ಪಾಯಿಂಟುಗಳ ಏರಿಕೆ ಕಂಡಿತು. ಈ ಬೃಹತ್ ಏರಿಕೆಗೆ ಅಂದು ವಿದೇಶಿ ವಿತ್ತೀಯ ಸಂಸ್ಥೆಗಳು ಮಾಡಿದ ರೂ.2,684 ಕೋಟಿಯ ಹೂಡಿಕೆ. ಈ ಏರಿಕೆಯ ಕಾರಣ ಬಂಡವಾಳೀಕರಣ ಮೌಲ್ಯವು ರೂ.148.89 ಲಕ್ಷ ಕೋಟಿಗೆ ಹೆಚ್ಚಾಗಿತ್ತು. ಇಂತಹ ಭಾರಿ ಬದಲಾವಣೆ ಕೇವಲ ಅಲ್ಪಕಾಲೀನವಾದಂತೆ ಕಂಡಿದೆ. ಕಾರಣ ನಂತರದ ದಿನಗಳಲ್ಲಿ ಹೆಚ್ಚಿನ ಮಾರಾಟದ ಒತ್ತಡ ಉಂಟಾಗಿ ಷೇರಿನ ಬೆಲೆಗಳು ಕುಸಿತ ಕಂಡಿವೆ. ಷೇರುಪೇಟೆಯ ಚಟುವಟಿಕೆ ಆರಂಭದಲ್ಲಿ ಹೂಡಿಕೆಯಾಗಿ ಪ್ರವೇಶಿಸಿದರೂ ನಂತರದಲ್ಲಿ ಅದನ್ನು ವ್ಯಾವಹಾರಿಕ ದೃಷ್ಟಿಯಿಂದ ಚಟುವಟಿಕೆ ನಡೆಸಿದಲ್ಲಿ ಮಾತ್ರ ಹೂಡಿಕೆಯ ಹಣವನ್ನು ಸ್ವಲ್ಪಮಟ್ಟಿನ ಸುರಕ್ಷತೆ ಕಾಣಲು ಸಾಧ್ಯ. ಷೇರುಪೇಟೆಯ ಚಟುವಟಿಕೆಯು ಹೆಚ್ಚಾಗಿ ನಕಾರಾತ್ಮಕವಾಗಿ ಬಿಂಬಿತವಾಗುತ್ತಿರುವ ಕಂಪೆನಿಗಳತ್ತ ಕೇಂದ್ರೀಕೃತವಾಗುತ್ತಿರುವುದನ್ನು ಕಾಣಬಹುದಾಗಿದೆ. ಇಂಡಿಯಾ ಬುಲ್ ಹೌಸಿಂಗ್ ಫೈನಾನ್ಸ್ ಷೇರಿನ ಬೆಲೆ ರೂ.430 ರ ಸಮೀಪವಿದ್ದಾಗ, ಈ ಷೇರಿನ ಬೆಲೆ ಡೆರಿವೇಟಿವ್ ಪೇಟೆಯಲ್ಲಿ ರೂ.390 ರ ಸಮೀಪ ವಹಿವಾಟಾಗುತ್ತಿದೆ ಎಂಬ ಸುದ್ಧಿ ತೇಲಾಡಿದ ಕಾರಣ ಅಂದು ಶುಕ್ರವಾರ 19 ರಂದು ಈ ಷೇರಿನ ಬೆಲೆ ರೂ.379 ವರೆಗೂ ಕುಸಿಯಿತು ನಂತರದ ದಿನದಲ್ಲಿ ರೂ.450 ತಲುಪಿತು. ಅಂದರೆ ಭಾವನೆಗಳನ್ನೇ ಬಂಡವಾಳವಾಗಿಸಿಕೊಂಡು ವ್ಯವಹಾರ ನಡೆಸಲಾಗುತ್ತಿದೆ.

 

ಝೀ ಎಂಟರ್ಟೇನ್ಮೆಂಟ್

ಝೀ ಎಂಟರ್ಟೇನ್ಮೆಂಟ್

ಝೀ ಎಂಟರ್ಟೇನ್ಮೆಂಟ್ ಷೇರಿನ ಬೆಲೆ ಕಳೆದ ಕೆಲವು ದಿನಗಳಿಂದ ಸುದ್ಧಿಯಲ್ಲಿದೆ. ಈ ಕಂಪನಿಯು ಕೆಲವು ಮ್ಯುಚುಯಲ್ ಫಂಡ್ ಗಳಿಂದ ಪಡೆದುಕೊಂಡ ಸಾಲವನ್ನು ಸೂಕ್ತ ಸಮಯದಲ್ಲಿ ಹಿಂದಿರುಗಿಸಲು ಸಾಧ್ಯವಾಗದೆ ಇದ್ದ ಕಾರಣಕ್ಕಾಗಿ ಕೆಲವು ಫಂಡ್ ಹೌಸ್ ಗಳು ಪ್ಲೆಡ್ಜ್ ಆಗಿದ್ದ ಷೇರುಗಳನ್ನು ಮಾರಾಟಮಾಡಿವೆ ಎಂಬ ಸುದ್ಧಿಯು ಷೇರಿನ ಏರಿಳಿತಗಳಿಗೆ ಕಾರಣವಾಯಿತು.

ರಭಸದ ಏರಿಳಿತಕ್ಕೆ ಕಾರಣ
 

ರಭಸದ ಏರಿಳಿತಕ್ಕೆ ಕಾರಣ

ಈ ತಿಂಗಳ ಮೊದಲ ವಾರದಲ್ಲಿ ಸಾರ್ವಜನಿಕ ವಲಯದ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ನ್ನು ಇಂಡಿಯನ್ ಆಯಿಲ್ ಕಾರ್ಪೊರೇಷನ್ ನಲ್ಲಿ ವಿಲೀನಗೊಳಿಸುವ ಯೋಜನೆಯೊಂದು ತೇಲಿ ಬಂದಿತು. ಆದರೆ ಇದಕ್ಕೆ ವಿತ್ತೀಯ ಮಂತ್ರಾಲಯ ಒಪ್ಪದ ಕಾರಣ ತಡೆಯಾಯಿತು. ನಂತರದಲ್ಲಿ ಬಿಪಿಸಿಎಲ್ ನ್ನು ಖಾಸಗೀಕರಣ ಮಾಡುವ ಸುದ್ಧಿ ತೇಲಿಸಲಾಯಿತು. ಇದಕ್ಕೆ ಪೇಟೆಯಲ್ಲಿ ಹೆಚ್ಚು ಪುಷ್ಟಿ ದೊರೆತು ರಭಸದ ಏರಿಳಿತ ಪ್ರದರ್ಶಿಸುವ ಆಕರ್ಷಣೀಯ ಷೇರಾಗಿ ಪರಿವರ್ತಿತವಾಯಿತು. ಒಂದೇ ವಾರದಲ್ಲಿ ರೂ.373 ರಿಂದ ರೂ.482 ರ ವಾರ್ಷಿಕ ಗರಿಷ್ಠದ ದಾಖಲೆ ಬರೆಯಿತು. ಅಲ್ಲದೆ ಈ ಷೇರು ಪ್ರದರ್ಶಿಸಿದ ಏರಿಳಿತಗಳು ಎಷ್ಟರ ಮಟ್ಟಿಗೆ ಲಾಭದಾಯಕವಾಗಿದೆ ಎಂದರೆ 13 ರಂದು ಶುಕ್ರವಾರ ರೂ.377 ರ ಸಮೀಪದಿಂದ ರೂ.411 ರವರೆಗೂ ಏರಿಕೆ ಕಂಡು ರೂ.409 ರ ಸಮೀಪ ಕೊನೆಗೊಂಡಿದೆ. ಸುಮಾರು 34 ರೂಪಾಯಿಗಳ ಏರಿಳಿತ ಒಂದೇ ದಿನದಲ್ಲಿ. ಮತ್ತೆ ಶುಕ್ರವಾರ 20 ರಂದು ಇದೇ ಷೇರು ರೂ.372 ರಿಂದ ರೂ.436 ರವರೆಗೂ ಏರಿಳಿತ ಪ್ರದರ್ಶಿಸಿದೆ. ಅಂದರೆ ರೂ.64 ರಷ್ಟು ಏರಿಳಿತ ಪ್ರದರ್ಶಿಸಿದೆ. 23 ರ ಸೋಮವಾರ ರೂ.50, ಮಂಗಲವಾರ ರೂ.32, ಬುಧವಾರ ರೂ.24 ಗಳಷ್ಟು ಏರಿಳಿತ ಪ್ರದರ್ಶಿಸಿದೆ. ಕೇವಲ ನಾಲ್ಕು ದಿನಗಳಲ್ಲಿ ಶೇ.40 ರಷ್ಟು ಲಾಭ ತಂದುಕೊಡುವಷ್ಟು ಏರಿಳಿತಗಳನ್ನು ಪ್ರದರ್ಶಿಸಿದ ರೀತಿಯು ವ್ಯಾವಹಾರಿಕ ಚಟುವಟಿಕೆಯ ರೀತಿಗೆ ಹಿಡಿದ ಕನ್ನಡಿಯಾಗಿದೆ. ಗುರುವಾರದಂದು ರೂ.482 ರವರೆಗೂ ಏರಿಕೆ ಕಂಡು ವಾರ್ಷಿಕ ಗರಿಷ್ಠದ ದಾಖಲೆ ಬರೆದಿದೆ.

ರೂಪಾಯಿ - ಡಾಲರ್

ರೂಪಾಯಿ - ಡಾಲರ್

ಇದೇ ರೀತಿ ಟೆಕ್ನಾಲಜಿ ವಲಯದ ಇನ್ಫೋಸಿಸ್ ಕಂಪನಿಯ ಷೇರಿನಲ್ಲೂ ಹೆಚ್ಚಿನ ಏರಿಳಿತ ಪ್ರದರ್ಶಿತವಾಯಿತು.ಈ ಒಂದೇ ವಾರದಲ್ಲಿ ರೂ. 742 ರ ಸಮೀಪಕ್ಕೆ ರೂ. 835 ರ ಸಮೀಪದಿಂದ ಕುಸಿಯುವಂತೆ ಮಾಡಿ ನಂತರದಲ್ಲಿ ರೂ.800 ಕ್ಕೆ ಹಿಂದಿರುಗುವಂತೆ ಮಾಡಲಾಯಿತು. ಈ ಪ್ರಕ್ರಿಯೆಯಲ್ಲಿ ಕಂಪನಿಯ ಆಂತರಿಕ ಬೆಳವಣಿಗೆಗಳು ಕಾರಣವಾಗಿಲ್ಲ. ಸೋಮವಾರದಂದು ರೂ.743 ರ ಸಮೀಪಕ್ಕೆ ಕುಸಿಯಲು ಕಾರಣ, ಸೆನ್ಸೆಕ್ಸ್ ಜೊತೆಗೆ ಪೇಟೆಯ ಎಲ್ಲಾ ವಲಯದ ಷೇರುಗಳು ಚುರುಕಾದ ಏರಿಕೆ ಕಂಡಾಗ ಈ ಏರಿಕೆಯ ಹಿಂದೆ ವಿದೇಶಿ ವಿತ್ತೀಯ ಸಂಸ್ಥೆಗಳು ಭಾರಿ ಬೆಂಬಲ ನೀಡುತ್ತವೆ/ ನೀಡಲಿವೆ ಎಂಬ ಚಿಂತನೆ ಎಲ್ಲರ ಮನದಲ್ಲಿ ಮೂಡಿ ಬಂದುದೇ ಆಗಿದೆ. ಈ ಕಾರಣದಿಂದ ವಿದೇಶಿ ವಿನಿಮಯ ದೇಶದೊಳಗೆ ಹರಿದುಬರುವುದರಿಂದ ರುಪಾಯಿಯ ಬೆಲೆ ಏರಿಕೆ ಕಂಡು ಡಾಲರ್ ಬೆಲೆ ಕುಸಿಯುವುದಾರಿಂದ ರಫ್ತು ವಲಯದ ಟೆಕ್ನಾಲಜಿ ಕಂಪನಿಗಳಿಗೆ ಹಿತವಲ್ಲ. ಇಂತಹ ಚಿಂತನೆಗಳ ಕಾರಣ ವ್ಯಾವಹಾರಿಕ ಲಾಭ ಪಡೆಯಲು ಈ ರೀತಿಯ ಭಿನ್ನ ದಾರಿಯನ್ನು ಅಳವಡಿಸಲಾಗಿದೆಯೇ? ಯೋಚಿಸಿ?

ಇವೆಲ್ಲವಕ್ಕೂ ಹೆಚ್ಚು ಪ್ರಭಾವಿ ಅಂಶವೆಂದರೆ ಗುರುವಾರ 26, ಡೆರಿವೇಟಿವ್ ಪೇಟೆಯ ಚುಕ್ತಾಚಕ್ರದ ಕೊನೆಯ ದಿನವಾದ್ದರಿಂದ ಶಾರ್ಟ್ ಕವರಿಂಗ್, ಕ್ಯಾರಿ ಓವರ್, ಮುಂತಾದವು ಕಾರಣ ಹೆಚ್ಚು ಏರಿಳಿತಗಳು ಉಂಟಾಯಿತು .

ಬಂಡವಾಳ ಹಿಂತೆಗೆತ

ಬಂಡವಾಳ ಹಿಂತೆಗೆತ

ಜಾಗತಿಕ ಮಟ್ಟದ ಬೆಳವಣಿಗೆಗಳು, ಸ್ಥಳೀಯ ಆಗುಹೋಗುಗಳು ಎಲ್ಲವನ್ನು ಪರಿಗಣಿಸಿ ಪೇಟೆಯ ವಹಿವಾಟುದಾರರು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುವುದರಿಂದ ಸ್ಥಿರತೆ ಕಾಣುವುದು ಅಸಾಧ್ಯ. ಷೇರುಪೇಟೆಗಳು ಉತ್ತುಂಗದಲ್ಲಿದ್ದಲ್ಲಿ ಮಾತ್ರ ಸರ್ಕಾರದ ಗುರಿಯಾದ ರೂ.1.05 ಲಕ್ಷ ಕೋಟಿ ಬಂಡವಾಳ ಹಿಂತೆಗೆತ ಕಾರ್ಯಕ್ರಮ ಯಶಸ್ಸು ಕಾಣಬಹುದು. ಹಾಗಾಗಿ ಸರ್ಕಾರ ಸಾರ್ವಜನಿಕ ವಲಯದ ಕಂಪನಿಗಳ ಷೇರುಗಳಲ್ಲಿ ಗಮನಾರ್ಹ ಏರಿಕೆ ಬಯಸುತ್ತದೆ. ಇಂತಹ ಸಂದರ್ಭಗಳಲ್ಲಿ ಲಾಭದ ನಗದೀಕರಣಕ್ಕೆ ಹೆಚ್ಚು ಒತ್ತು ನೀಡುವುದು ಉತ್ತಮ. ಅದೇ ಷೇರನ್ನು ಕಡಿಮೆ ದರದಲ್ಲಿ ಖರೀದಿಸಲು ಪೇಟೆಗಳು ಅವಕಾಶ ಮಾಡಿಕೊಡುತ್ತವೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಪ್ರಮುಖ ಕಂಪನಿಗಳಾದ ಲಾರ್ಸನ್ ಅಂಡ್ ಟೊಬ್ರೋ, ಕೆನರಾ ಬ್ಯಾಂಕ್ , ಎಸ್ ಬಿ ಐ, ಇನ್ಫೋಸಿಸ್, ಮಾರುತಿ ಸುಜುಕಿ ಮುಂತಾದ ಅಗ್ರಮಾನ್ಯ ಕಂಪನಿಗಳು ಪ್ರದರ್ಶಿಸಿದ ಏರಿಳಿತಗಳೇ ಸಾಕ್ಷಿಯಾಗಿವೆ.

Read more about: stock stock market sensex money
English summary

Present stock markets exhibit high volatility

Present stock markets exhibit high volatality because of the local & international news that is being floated. This provides very good opportunities for short term in frontline stocks.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X