ಶುಲ್ಕವನ್ನು ಹೆಚ್ಚಿಸಲು ರೆಡಿಯಾಗಿವೆ ಏರ್ಟೆಲ್, ವೊಡಾಪೋನ್, ಐಡಿಯಾ
ದೇಶದ ಬಹುದೊಡ್ಡ ಟೆಲಿಕಾಂ ಕಂಪನಿಗಳಾದ ವೊಡಾಫೋನ್-ಐಡಿಯಾ, ಹಾಗೂ ಏರ್ಟೆಲ್ ಕರೆ ಮತ್ತು ಡೇಟಾ ಮೇಲಿನ ಶುಲ್ಕವನ್ನು ಹೆಚ್ಚಿಸಲು ಮುಂದಾಗಿವೆ.
ಈಗಾಗಲೇ ಹೆಚ್ಚುತ್ತಿರುವ ಬಾಕಿಯನ್ನು ಪೂರೈಸಲು ಕರೆ ಮತ್ತು ಡೇಟಾ ಮೇಲಿನ ಶುಲ್ಕವನ್ನು ಹೆಚ್ಚಿಸಲು ಯೋಜನೆ ಮಾಡಲಾಗುತ್ತಿದೆ ಎಂದು ದೇಶದ 2 ಬಹುದೊಡ್ಡ ಟೆಲಿಕಾಂ ಕಂಪನಿಗಳು ಸೋಮವಾರ ಘೋಷಿಸಿವೆ. ಆದರೆ ಎಷ್ಟು ಶುಲ್ಕ ಹೆಚ್ಚಾಗಲಿದೆ ಎಂಬುದನ್ನು ತಿಳಿಸಿಲ್ಲ. ಹೊಸ ದರವು ಡಿಸೆಂಬರ್ನಿಂದ ಅನ್ವಯವಾಗಲಿದೆ.
2019-20ರ ಹಣಕಾಸಿನ ವರ್ಷದ 2ನೇ ತ್ರೈಮಾಸಿಕ ಅವಧಿಯಲ್ಲಿ ಏರ್ಟೆಲ್, ವೊಡಾಫೋನ್-ಐಡಿಯಾ ಒಟ್ಟಾರೆ 74,000 ಕೋಟಿ ರುಪಾಯಿ ನಷ್ಟ ಅನುಭವಿಸಿವೆ.
ದಿವಾಳಿಯತ್ತ ವೊಡಾಫೋನ್, ಐಡಿಯಾ: ಭಾರತದಲ್ಲಿ ಸೇವೆ ಬಂದ್?
ಇತ್ತೀಚೆಗೆ ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಹೊಂದಾಣಿಕೆಯ ಒಟ್ಟು ಆದಾಯ ಕುರಿತಾಗಿ ವೋಡಾಫೋನ್ , ಐಡಿಯಾ ಏರ್ಟೆಲ್ ಸಂಸ್ಥೆಗಳು ಒಟ್ಟಾರೆ 92,000 ಕೋಟಿ ರುಪಾಯಿಯಷ್ಟು ಬಾಕಿ ಮೊತ್ತ ಹಾಗೂ ಬಡ್ಡಿ ಸೇರಿದ ಹಣವನ್ನು ಪಾವತಿಸಬೇಕಾಗಿತ್ತು. ಹೀಗಾಗಿ ಈ ಸಂಸ್ಥೆಗಳ ಆದಾಯದಲ್ಲಿ ತೀವ್ರ ಕುಸಿತ ದಾಖಲಾಗಿದ್ದು ನಷ್ಟದ ಹಾದಿ ಹಿಡಿದಿವೆ.
ಹೆಚ್ಚಿದ ಬಾಕಿಯಿಂದಾಗಿ ಈ ಕಂಪನಿಗಳು ಕರೆ ಮತ್ತು ಡೇಟಾ ಶುಲ್ಕ ಹೆಚ್ಚಳಕ್ಕೆ ಮುಂದಾಗಿವೆ. ಏರ್ಟೆಲ್-ವೊಡಾಫೋನ್ ಕಂಪನಿಗಳು ದರ ಹೆಚ್ಚಳವನ್ನು ಮಾಡಿದ ಬಳಿಕ ಜಿಯೋ ಕೂಡ ದರ ಹೆಚ್ಚಿಸುವ ಸಾಧ್ಯತೆ ಇದೆ. ಈಗಾಗಲೇ ಅಕ್ಟೋಬರ್ನಿಂದ ಜಿಯೋಯಿಂದ ಬೇರೆ ಯಾವುದೇ ನೆಟ್ವರ್ಕ್ಗೆ ನಿಮಿಷಕ್ಕೆ 6 ಪೈಸೆ ಶುಲ್ಕ ವಿಧಿಸುತ್ತದೆ. ಆರಂಭಿಕ 3 ವರ್ಷಗಳಲ್ಲಿ ಜಿಯೋ ವಾಯ್ಸ್ ಕರೆ ಉಚಿತವಾಗಿತ್ತು.