Budget 2022: ವಜ್ರಗಳು ಮತ್ತು ರತ್ನದ ಮೇಲಿನ ಆಮದು ಸುಂಕ ಶೇ.5ಕ್ಕೆ ಇಳಿಕೆ
ಕತ್ತರಿಸಿದ ಮತ್ತು ಪಾಲಿಶ್ ಮಾಡಿದೆ ವಜ್ರಗಳು ಮತ್ತು ರತ್ನದ ಮೇಲಿನ ಆಮದು ಸುಂಕವನ್ನು ಶೇಕಡಾ 5 ಕ್ಕೆ ಇಳಿಸಲಾಗುವುದು ಮತ್ತು ವಲಯವನ್ನು ಉತ್ತೇಜಿಸುವ ಸಲುವಾಗಿ ವಜ್ರದ ಮೇಲಿನ ಆಮದು ಸುಂಕವನ್ನು ಶೂನ್ಯಕ್ಕೆ ಇಳಿಸಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಹೇಳಿದ್ದಾರೆ. ಪ್ರಸ್ತುತ, ಕತ್ತರಿಸಿದ ಮತ್ತು ಪಾಲಿಶ್ ಮಾಡಿದ ವಜ್ರಗಳು ಮತ್ತು ರತ್ನದ ಕಲ್ಲುಗಳ ಮೇಲಿನ ಆಮದು ಸುಂಕವು ಶೇಕಡಾ 7.5 ರಷ್ಟಿದೆ.
ಲೋಕಸಭೆಯಲ್ಲಿ 2022-23 ರ ಬಜೆಟ್ ಅನ್ನು ಪ್ರಸ್ತುತಪಡಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇ-ಕಾಮರ್ಸ್ ಮೂಲಕ ಆಭರಣಗಳನ್ನು ರಫ್ತು ಮಾಡಲು ಸರ್ಕಾರವು ಅನುಕೂಲ ಮಾಡಿಕೊಡಲಿದೆ ಎಂದು ಘೋಷಣೆ ಮಾಡಿದ್ದಾರೆ. ಹಾಗೆಯೇ ಇದಕ್ಕಾಗಿ ಈ ವರ್ಷದ ಜೂನ್ ವೇಳೆಗೆ "ಸರಳೀಕೃತ ನಿಯಂತ್ರಣ ಚೌಕಟ್ಟನ್ನು" ಜಾರಿಗೆ ತರಲಿದೆ ಎಂದಿದ್ದಾರೆ.
ಬಜೆಟ್ 2022: ಚಿನ್ನದ ಮೇಲಿನ ಆಮದು ತೆರಿಗೆ ತೆಗೆದರೆ ಜನರಿಗೆ ಏನು ಲಾಭ?
"ರತ್ನಗಳು ಮತ್ತು ಆಭರಣ ವಲಯಕ್ಕೆ ಉತ್ತೇಜನ ನೀಡಲು, ಪಾಲಿಶ್ ಮಾಡಿದ ವಜ್ರಗಳು ಮತ್ತು ರತ್ನದ ಕಲ್ಲುಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇಕಡಾ 5 ಕ್ಕೆ ಇಳಿಸಲಾಗುತ್ತಿದೆ. ಸ್ವಾನ್ ವಜ್ರದ ಮೇಲಿನ ಆಮದು ಸುಂಕವನ್ನು ತೆಗೆದುಹಾಕಲಾಗುತ್ತದೆ," ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ಚಿನ್ನ ಸೇರಿ ಆಭರಣ ಆಮದು ಶುಲ್ಕ ಕಡಿತಕ್ಕೆ ಆಗ್ರಹ
ಭಾರತದಲ್ಲಿ ಚಿನ್ನದ ಕಳ್ಳಸಾಗಣೆ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಆಮದು ಸುಂಕ ಕಡಿತಗೊಳಿಸುವ ಒತ್ತಾಯ ಕೇಳಿ ಬಂದಿತ್ತು. ದೇಶೀಯ ಮಾರುಕಟ್ಟೆಯನ್ನು ಬಲಪಡಿಸಲು ಚೀನಾ, ಯುಎಸ್ಎ ಮತ್ತು ಸಿಂಗಾಪುರದಂತಹ ದೇಶಗಳು ಚಿನ್ನದ ಮೇಲಿನ ಆಮದು ಸುಂಕವನ್ನು ತೆಗೆದುಹಾಕಿವೆ. ಅದೇ ರೀತಿ ಮುಂಬರುವ ಕೇಂದ್ರ ಬಜೆಟ್ನಲ್ಲಿ ಚಿನ್ನದ ಮೇಲಿನ ಆಮದು ಸುಂಕವನ್ನು ಶೇ.7.5 ರಿಂದ ಶೇ.4ಕ್ಕೆ ಇಳಿಸಬೇಕು ಎಂದು ದೇಶದ ಪ್ರಮುಖ ಆಭರಣ ವ್ಯಾಪಾರಿಗಳು ಸರ್ಕಾರವನ್ನು ಒತ್ತಾಯ ಮಾಡಿದ್ದರು.
"ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2022ರ ಬಜೆಟ್ನಲ್ಲಿ ಚಿನ್ನದ ಆಮದು ಸುಂಕವನ್ನು ಕಡಿತಗೊಳಿಸಲು ಆದ್ಯತೆ ನೀಡಬೇಕು. ಶೇ.7.5% ಕಸ್ಟಮ್ಸ್ ತೆರಿಗೆಯನ್ನು ವಿಧಿಸುವುದರಿಂದ ಚಿನ್ನದ ಆಮದಿನ ಮೇಲಿನ ಒಟ್ಟು ಶೇ.10.75% ಲೆವಿಯನ್ನು ನಿಗದಿಪಡಿಸಿದಂತೆ ಆಗುತ್ತದೆ. ಇದರಿಂದ ಚಿನ್ನದ ಕಳ್ಳಸಾಗಣೆ ಹೆಚ್ಚಾಗುತ್ತದೆ," ಎಂದು ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಅಧ್ಯಕ್ಷ ಅಹಮ್ಮದ್ ಎಂಪಿ ತಿಳಿಸಿದ್ದರು.
"ಚಿನ್ನದ ಮೇಲೆ ಹೆಚ್ಚಿನ ಆಮದು ಸುಂಕವನ್ನು ವಿಧಿಸುವುದರಿಂದ ಚಿನ್ನವು ದುಬಾರಿ ಆಗುತ್ತದೆ. ಬಡ ಕುಟುಂಬದವರು ಇದರಿಂದ ಚಿನ್ನ ಖರೀದಿಸುವುದು ಮತ್ತಷ್ಟು ಕಷ್ಟಕರವಾಗಲಿದೆ. ಚಿನ್ನದ ಮೇಲಿನ ಸುಂಕ ಕಡಿತದ ಬಗ್ಗೆ ಪ್ರಸ್ತಾಪಿಸುವುದು, ಆ ಮೂಲಕ ಚಿನ್ನದ ವ್ಯಾಪಾರ ಮತ್ತು ಬಳಕೆ ಎರಡನ್ನೂ ಸುಲಭ ಹಾಗೂ ನ್ಯಾಯಯುತಗೊಳಿಸುವುದು ಅಗತ್ಯವಾಗಿದೆ. ಸಾರ್ವಜನಿಕವಾಗಿ ವಿಧಿಸುವ ತೆರಿಗೆಗಳಲ್ಲಿ ಕಡಿತವನ್ನು ಮಾಡುವುದರ ಮೂಲಕ ಜನರು ಹೆಚ್ಚು ಹೆಚ್ಚು ಹಣವನ್ನು ಖರ್ಚು ಮಾಡುವುದಕ್ಕೆ ಅವಕಾಶ ನೀಡಬೇಕು. ಇದರಿಂದ ಆರ್ಥಿಕತೆಗೆ ಉತ್ತೇಜನ ನೀಡಿದಂತೆ ಆಗುತ್ತದೆ," ಪಿಪಿ ಜ್ಯುವೆಲರ್ಸ್ ನಿರ್ದೇಶಕ ಪವನ್ ಗುಪ್ತಾ ಹೇಳಿದ್ದಾರೆ.
ಚಿನ್ನದ ಮೇಲಿನ ಆಮದು ಸುಂಕವನ್ನು ಶೇ.4ಕ್ಕೆ ಇಳಿಸುವುದು ಮತ್ತು ಚಿನ್ನದ ಮೇಲಿನ ಎಲ್ಲಾ ಸುಂಕಗಳನ್ನು ತೆಗೆದುಹಾಕುವುದರಿಂದ ವ್ಯಾಪಾರದಲ್ಲಿ ಪಾರದರ್ಶಕತೆ ಮೂಡುತ್ತದೆ. ಚಿನ್ನದ ಕಳ್ಳಸಾಗಣೆ ತಡೆಯಲು ಸಾಧ್ಯವಾಗುತ್ತದೆ. ದೇಶೀಯ ಮಾರುಕಟ್ಟೆಯನ್ನು ಬಲಪಡಿಸಲು ಚಿನ್ನದ ಮೇಲಿನ ಆಮದು ಸುಂಕವನ್ನು ರದ್ದುಪಡಿಸಿದ ಚೀನಾ, ಯುಎಸ್ಎ, ಸಿಂಗಾಪುರ್ ಮತ್ತು ಮಲೇಷ್ಯಾದಂತಹ ದೇಶಗಳ ಕ್ರಮಗಳನ್ನು ಸರ್ಕಾರ ಅನುಕರಿಸಬೇಕು," ಎಂದು ಅಹಮ್ಮದ್ ಸಲಹೆ ನೀಡಿದ್ದಾರೆ.