ಕಾಗ್ನಿಜೆಂಟ್ ಉದ್ಯೋಗಿಗಳಿಗೆ ಬೋನಸ್ ಹಾಗೂ ಬಡ್ತಿ ಘೋಷಣೆ
ಪ್ರಮುಖ ಐಟಿ ಸೇವಾ ಸಂಸ್ಥೆ ಕಾಗ್ನಿಜೆಂಟ್ ತನ್ನ ಉದ್ಯೋಗಿಗಳಿಗೆ 2019ಕ್ಕಿಂತ ಹೆಚ್ಚಿನ ಬೋನಸ್ ನೀಡುವುದಾಗಿ ಗುರುವಾರ ಘೋಷಿಸಿದೆ. ಜೊತೆಗೆ ತನ್ನ ವಿವಿಧ ವಿಭಾಗದಲ್ಲಿರುವ 24,000 ಉದ್ಯೋಗಿಗಳಿಗೆ ಬಡ್ತಿ ನೀಡಿರುವುದಾಗಿ ತಿಳಿಸಿದೆ.
2021ರ ಜೂನ್ ತ್ರೈಮಾಸಿಕದಿಂದ ಪ್ರಾರಂಭವಾಗುವಂತೆ ಹಿರಿಯ ಸಹಾಯಕ ಮಟ್ಟದಲ್ಲಿ ಮತ್ತು ಅದಕ್ಕಿಂತ ಕೆಳಗಿನ ಮಟ್ಟದ ಉದ್ಯೋಗಿಗಳಿಗೆ ತ್ರೈಮಾಸಿಕವಾಗಿ ಬಡ್ತಿ ನೀಡುವ ಯೋಜನೆಯನ್ನು ಹೊಂದಿದೆ.
''ಈ ಸುದೀರ್ಘ ಸಾಂಕ್ರಾಮಿಕ ಸಮಯದಲ್ಲಿ ನಮ್ಮ ಗ್ರಾಹಕರಿಗೆ ಸೇವೆ ಸಲ್ಲಿಸುವಲ್ಲಿ ನಮ್ಮ ಉದ್ಯೋಗಿಗಳ ವೃತ್ತಿಪರತೆ, ಕ್ಲೈಂಟ್-ಕೇಂದ್ರಿತತೆ, ಕೆಲಸದ ನೀತಿ ಮತ್ತು ಪರಿಶ್ರಮವನ್ನು ಗುರುತಿಸಿ 2020ರ ಕೋವಿಡ್ ಅಸಾಧಾರಣ ಸವಾಲಿನ ಹೊರತಾಗಿಯೂ, ನಾವು ಕಂಪನಿಯ ಕಾರ್ಯಕ್ಷಮತೆಯ ಮಟ್ಟಕ್ಕಿಂತ ಗಣನೀಯವಾಗಿ ಹೆಚ್ಚಿನ ಬೋನಸ್ಗಳನ್ನು ನೀಡುತ್ತಿದ್ದೇವೆ '' ಎಂದು ಕಾಗ್ನಿಜಂಟ್ ಇಂಡಿಯಾ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ನಂಬಿಯಾರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನಮ್ಮ ಉದ್ಯೋಗಿಗಳಿಗೆ ಅವರ ಕಠಿಣ ಪರಿಶ್ರಮ ಮತ್ತು ಹೆಚ್ಚಿನ ಕಾರ್ಯಕ್ಷಮತೆಗಾಗಿ ಹೆಚ್ಚು ಪ್ರತಿಫಲ ನೀಡುವ ಸಲುವಾಗಿ, ಜೂನ್ 2021ರಿಂದ ವಿವಿಧ ವಿಭಾಗದಲ್ಲಿ ಬಡ್ತಿ ನೀಡುತ್ತಿರುವುದಾಗಿ ತಿಳಿಸಿದ್ದಾರೆ.
ಕಂಪನಿಯು ಜಾಗತಿಕವಾಗಿ ಸುಮಾರು 1,60,000 ಉದ್ಯೋಗಿಗಳಿಗೆ ಮೆರಿಟ್ ಆಧಾರದಲ್ಲಿ ಆಫರ್ ನೀಡಿದ್ದು, ಪ್ರತಿ ಹಂತದಲ್ಲೂ 24,000ಕ್ಕೂ ಹೆಚ್ಚು ಉದ್ಯೋಗಿಗಳಿಗೆ ಬಡ್ತಿ ನೀಡಿದೆ ಎಂದು ಹೇಳಿದೆ.