ಫಾಸ್ಟ್ ಟ್ಯಾಗ್ ಮೂಲಕ ಭರ್ಜರಿ ಕಲೆಕ್ಷನ್: ನಗದು ಶುಲ್ಕ ಸಂಗ್ರಹ ಕುಸಿತ
ದೇಶಾದ್ಯಂತ ಫಾಸ್ಟ್ಟ್ಯಾಗ್ ಬಳಕೆದಾರರ ಪ್ರಮಾಣ ಹೆಚ್ಚಾಗತೊಡಗಿದ್ದು, ಟೋಲ್ಗಳಲ್ಲಿ ಫಾಸ್ಟ್ಟ್ಯಾಗ್ ಮೂಲಕ ಹಣ ಸಂಗ್ರಹದ ಪ್ರಮಾಣವು ದಿನಕ್ಕೆ 66 ಪರ್ಸೆಂಟ್ ಏರಿಕೆಯಾಗಿದೆ. ಇದಕ್ಕೆ ತದ್ವಿರುದ್ದವಾಗಿ ನಗದು ಶುಲ್ಕ ಸಂಗ್ರಹವು ಇಳಿಕೆ ಕಂಡಿದೆ.
ನವೆಂಬರ್ 17ರಿಂದ 23ರ ಅವಧಿಯಲ್ಲಿ ದೇಶಾದ್ಯಂತ ಫಾಸ್ಟ್ಟ್ಯಾಗ್ ಮೂಲಕ 26.4 ಕೋಟಿ ರುಪಾಯಿ ಸಂಗ್ರಹವಾಗಿದೆ. ಡಿಸೆಂಬರ್ 15 ರಿಂದ 21ರ ಅವಧಿಯಲ್ಲಿ 44 ಕೋಟಿ ರುಪಾಯಿಗೆ ಏರಿಕೆಯಾಗಿದೆ. ಇದೇ ಅವಧಿಯಲ್ಲಿ ಪ್ರತಿದಿನ ನಗದು ಶುಲ್ಕ ಸಂಗ್ರಹವು 33 ಪರ್ಸೆಂಟ್ ಇಳಿಕೆಯಾಗಿದ್ದು, 51 ಕೋಟಿಯಿಂದ 35.5 ಕೋಟಿ ರುಪಾಯಿ ಸಂಗ್ರಹವಾಗಿದೆ.

ಫಾಸ್ಟ್ ಟ್ಯಾಗ್ ಮೂಲಕ ಹಣ ಪಾವತಿ ಮಾಡುವ ವಾಹನಗಳ ಸಂಖ್ಯೆಯು ಡಿಸೆಂಬರ್ 1ರಂದು 19.5 ಲಕ್ಷ ಇದ್ದದ್ದು 16ರ ವೇಳೆಗೆ 24.8 ಲಕ್ಷಕ್ಕೆ ಏರಿಕೆಯಾಗಿದೆ. ಈ ಮೂಲಕ ಹೆಚ್ಚು ಜನರು ಫಾಸ್ಟ್ಟ್ಯಾಗ್ ಬಳಸುತ್ತಿದ್ದಾರೆ ಎಂಬುದು ಕೇಂದ್ರದ ವಾದ. ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಫಾಸ್ಟ್ಟ್ಯಾಗ್ ಅಳವಡಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.
ಟೋಲ್ಗಳ ಮೂಲಕ ಎಷ್ಟು ವಾಹನಗಳು ಹಾದು ಹೋಗುತ್ತವೆ ಎಂಬುದಕ್ಕೆ ನಿಖರವಾದ ಅಂಕಿ ಅಂಶಗಳು ಇಲ್ಲದಿದ್ದರೂ ಅಂದಾಜಿನ ಪ್ರಕಾರ ಒಂದು ದಿನದಲ್ಲಿ 60 ಲಕ್ಷಕ್ಕೂ ಅಧಿಕ ವಾಹನಗಳಿಂದ ಶುಲ್ಕ ಸಂಗ್ರಹಿಸುವ ಸಾಮರ್ಥ್ಯವನ್ನು ರಾಷ್ಟ್ರೀಯ ಹೆದ್ದಾರಿಯ ಟೋಲ್ಗಳು ಹೊಂದಿವೆ. ದೇಶಾದ್ಯಂತ 20 ಕೋಟಿ ನೊಂದಾಯಿತ ವಾಹನಗಳಿದ್ದು, ಇದರಲ್ಲಿ ಸುಮಾರು 6 ಕೋಟಿಯಷ್ಟು ನಾಲ್ಕು ಚಕ್ರದ ವಾಹನಗಳಿದ್ದು, 70 ಪರ್ಸೆಂಟ್ ದ್ವಿಚಕ್ರವಾಹನಗಳಿವೆ.