ಭಾರತೀಯ ಮಾರುಕಟ್ಟೆಯಲ್ಲಿ 55,000 ಕೋಟಿ ರೂ. ದಾಖಲೆಯ ವಿದೇಶಿ ಹೂಡಿಕೆ
ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್ಐಐ) ಇದುವರೆಗೆ ನವೆಂಬರ್ನಲ್ಲಿ ಭಾರತೀಯ ಮಾರುಕಟ್ಟೆಗಳಲ್ಲಿ 50,000 ಕೋಟಿ ರೂ.ಗಳಿಗಿಂತ ಹೆಚ್ಚಿನ ಮೊತ್ತವನ್ನು ಹೂಡಿಕೆ ಮಾಡಿದ್ದಾರೆ. ಇದು ಒಂದು ತಿಂಗಳಲ್ಲಿ ಹೂಡಿಕೆಯ ಒಳಹರಿವಿನಲ್ಲಿ ಇದು ದಾಖಲೆಯ ಮಟ್ಟಕ್ಕೆ ತಲುಪಿದ್ದು, ಭಾರತೀಯ ಮಾರುಕಟ್ಟೆಯತ್ತ ಆಕರ್ಷಿತರಾಗಿದ್ದಾರೆ.
ರಾಷ್ಟ್ರೀಯ ಷೇರುಪೇಟೆ ಎನ್ಎಸ್ಇಯಲ್ಲಿ ಲಭ್ಯವಿರುವ ತಾತ್ಕಾಲಿಕ ಮಾಹಿತಿಯ ಪ್ರಕಾರ, ಎಫ್ಐಐ ನವೆಂಬರ್ 24 ರವರೆಗೆ 55,552.64 ಕೋಟಿ ರೂ.ಗಳ ಷೇರುಗಳನ್ನು ಖರೀದಿಸಿದೆ.

ಒಂದು ತಿಂಗಳಿನಲ್ಲಿ ಅತಿ ಹೆಚ್ಚಿನ ಹೂಡಿಕೆ
ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ)ಯೊಂದಿಗೆ ಲಭ್ಯವಿರುವ ನೈಜ ಅಂಕಿ-ಅಂಶಗಳ ಪ್ರಕಾರ ಎಫ್ಐಐಗಳು ನವೆಂಬರ್ 23 ರವರೆಗೆ 54,521.68 ಕೋಟಿ ರೂ. ಹೂಡಿಕೆ ಮಾಡಿದ್ದಾರೆ. ಇದು ಒಂದು ತಿಂಗಳಲ್ಲಿ ದಾಖಲಾದ ಅತಿ ಹೆಚ್ಚಿನ ಮೊತ್ತವಾಗಿದ್ದು, ಹಿಂದೆಂದೂ ಕಾಣದ ರೀತಿಯಲ್ಲಿ ಹೂಡಿಕೆ ಹರಿದುಬಂದಿದೆ. ವಿಶ್ಲೇಷಕರ ಪ್ರಕಾರ ಈ ಮೊತ್ತವು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಮಾರ್ಚ್ನಿಂದ ಈವರೆಗೆ ಶೇ. 74ರಷ್ಟು ಏರಿಕೆ
ಮಾರ್ಚ್ನಿಂದ ಈವರೆಗೆ ಸೂಚ್ಯಂಕಗಳಲ್ಲಿ ಶೇ. 74ರಷ್ಟು ಏರಿಕೆ ಕಂಡಿದ್ದು, ವಿದೇಶಿ ಹೂಡಿಕೆದಾರರ ಒಲವು ಹೆಚ್ಚಾಗಿದೆ. ಎಫ್ಐಐಗಳ ಬಲವಾದ ಒಳಹರಿವಿನಿಂದಾಗಿ ನಿಫ್ಟಿ ಕೇವಲ 14 ವಹಿವಾಟು ಅವಧಿಗಳಲ್ಲಿ 12,000 ರಿಂದ 13,000 ಅಂಕಗಳನ್ನು ದಾಟಲು ಸಹಾಯ ಮಾಡಿತು.

ಈ ವರ್ಷ 96,766 ಕೋಟಿ ರೂ. ಹೂಡಿಕೆ
ಇನ್ನು 2020 ರಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಎಫ್ಐಐ ನಿವ್ವಳ ಖರೀದಿ ಇದುವರೆಗೆ 96,766 ಕೋಟಿ ರೂ. ತಲುಪಿದೆ. ಡಾಲರ್ ಸೂಚ್ಯಂಕದಲ್ಲಿನ ದೌರ್ಬಲ್ಯದಿಂದಾಗಿ ಭಾರತೀಯ ಮಾರುಕಟ್ಟೆಗಳಲ್ಲಿ ಒಳಹರಿವು ಹೆಚ್ಚಾಗಿದೆ.

ಭಾರತೀಯ ಮಾರುಕಟ್ಟೆಗೆ ಏಕೆ ಈ ಆಕರ್ಷಣೆ?
ಹಲವಾರು ಯುರೋಪಿಯನ್ ರಾಷ್ಟ್ರಗಳು ಮತ್ತು ಅಮೆರಿಕಾ ರಾಷ್ಟ್ರವು ಕೊರೊನಾವೈರಸ್ ಎರಡನೇ ಸುತ್ತಿನಲ್ಲಿ ಹೋರಾಡುತ್ತಿರುವಾಗಲೂ, ಭಾರತವು ಕೋವಿಡ್-19 ವೈರಸ್ ಸೋಂಕಿನ ಚೇತರಿಕೆ ಮತ್ತು ನಿಧಾನಗೊಳ್ಳುವ ಲಕ್ಷಣಗಳನ್ನು ತೋರಿಸುತ್ತಿದೆ. ಇದು ಭಾರತಕ್ಕೆ ಎಫ್ಐಐಗಳನ್ನು ಆಕರ್ಷಿಸುತ್ತಿದೆ ಎಂದು ತಜ್ಞರು ಹೇಳಿದ್ದಾರೆ.
ಇದರ ಜೊತೆಗೆ ಕೋವಿಡ್-19 ಲಸಿಕೆಯ ಆಶಾವಾದವು ಸಹ ಹೂಡಿಕೆದಾರರು ತಮ್ಮ ಹಣವನ್ನು ಹೆಚ್ಚಿಸಲು ಪ್ರೇರೇಪಿಸಿದೆ.