2022 ಹಣಕಾಸು ವರ್ಷದಲ್ಲಿ ಜಿಡಿಪಿ ಶೇ. 10 -10.5 ಕ್ಕೆ ಏರಿಕೆ ಸಾಧ್ಯತೆ
ದೇಶೀಯ ರೇಟಿಂಗ್ ಏಜೆನ್ಸಿ ಬ್ರಿಕ್ವರ್ಕ್ ರೇಟಿಂಗ್ಸ್ ಭಾರತದ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಅಂದಾಜು ಲೆಕ್ಕಾಚಾರವನ್ನು ಪರಿಷ್ಕರಣೆ ಮಾಡಿದೆ. ಭಾರತದ ಒಟ್ಟು ದೇಶೀಯ ಉತ್ಪನ್ನವು (ಜಿಡಿಪಿ) 2022 ರ ಹಣಕಾಸು ವರ್ಷದಲ್ಲಿ ಶೇ. 10-10.5 ಕ್ಕೆ ಏರಿಕೆ ಆಗುವ ಸಾಧ್ಯತೆ ಇದೆ ಎಂದು ದೇಶೀಯ ರೇಟಿಂಗ್ ಏಜೆನ್ಸಿ ಬ್ರಿಕ್ವರ್ಕ್ ರೇಟಿಂಗ್ಸ್ ಸೋಮವಾರ ಹೇಳಿದೆ.
ಈ ಹಿಂದೆ 2022 ರ ಹಣಕಾಸು ವರ್ಷದಲ್ಲಿ ಶೇಕಡ 9 ರಷ್ಟು ಜಿಡಿಪಿ ಏರಿಕೆ ಆಗುವ ಸಾಧ್ಯತೆ ಇದೆ ಎಂದು ದೇಶೀಯ ರೇಟಿಂಗ್ ಏಜೆನ್ಸಿ ಬ್ರಿಕ್ವರ್ಕ್ ರೇಟಿಂಗ್ಸ್ ಹೇಳಿತ್ತು. ಆದರೆ ಈಗ ಈ ಅಂದಾಜು ಲೆಕ್ಕಾಚಾರವನ್ನು ಪರಿಷ್ಕರಣೆ ಮಾಡಿರುವ ಬ್ರಿಕ್ವರ್ಕ್ ರೇಟಿಂಗ್ಸ್ ಏಜೆನ್ಸಿ 2022 ರ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಶೇ. 10-10.5 ಕ್ಕೆ ಏರಿಕೆ ಆಗುವ ಸಾಧ್ಯತೆ ಇದೆ ಎಂದು ತಿಳಿಸಿದೆ.
ಒಟ್ಟು ದೇಶೀಯ ಉತ್ಪನ್ನ ಎಂದರೇನು? ಹೇಗೆ ಲೆಕ್ಕ ಹಾಕುತ್ತಾರೆ?
"ನಾವು ನಿರೀಕ್ಷೆ ಮಾಡಿದ್ದಕ್ಕಿಂತ ಅಧಿಕವಾಗಿ ಆರ್ಥಿಕ ಬೆಳವಣಿಗೆ ಆಗುತ್ತಿದೆ. ಆರ್ಥಿಕ ಚಟುವಟಿಕೆಗಳಲ್ಲಿ ನಿರೀಕ್ಷೆಗಿಂತ ವೇಗವಾಗಿ ಪುನರುಜ್ಜೀವನ ಆಗುವ ಸಾಧ್ಯತೆ ಇದೆ ಎಂಬುವುದನ್ನು ಅನೇಕ ಆರ್ಥಿಕ ಬೆಳವಣಿಗೆ ಸೂಚ್ಯಂಕಗಳು ತೋರಿಸುತ್ತದೆ ಎಂದು ಕೂಡಾ ಈ ಬ್ರಿಕ್ವರ್ಕ್ ರೇಟಿಂಗ್ಸ್ ಏಜೆನ್ಸಿ ಉಲ್ಲೇಖ ಮಾಡಿದೆ.

"ನಾವು ಈ ಹಿಂದೆ 2022 ರ ಹಣಕಾಸು ವರ್ಷದಲ್ಲಿ ಶೇಕಡ 9 ರಷ್ಟು ಜಿಡಿಪಿ ಬೆಳವಣಿಗೆ ಆಗುವ ಸಾಧ್ಯತೆಯನ್ನು ಅಂದಾಜು ಮಾಡಿದ್ದೆವು. ಆದರೆ ಈಗಿನ ಎಲ್ಲಾ ಆರ್ಥಿಕ ಬೆಳವಣಿಗೆ ಸೂಚ್ಯಂಕಗಳನ್ನು ನಾವು ನೋಡಿದಾಗ ದೇಶದಲ್ಲಿ 2022 ರ ಹಣಕಾಸು ವರ್ಷದಲ್ಲಿ ಶೇಕಡ 10-10.5 ರಷ್ಟು ಜಿಡಿಪಿ ಬೆಳವಣಿಗೆ ಆಗುವ ಸಾಧ್ಯತೆ ಇದೆ," ಎಂದು ಸೋಮವಾರ ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆಯಲ್ಲಿ ದೇಶೀಯ ರೇಟಿಂಗ್ ಏಜೆನ್ಸಿಯಾದ ಬ್ರಿಕ್ವರ್ಕ್ ರೇಟಿಂಗ್ಸ್ ಏಜೆನ್ಸಿ ತಿಳಿಸಿದೆ.
ದೇಶೀಯ ರೇಟಿಂಗ್ ಏಜೆನ್ಸಿಯಾದ ಬ್ರಿಕ್ವರ್ಕ್ ರೇಟಿಂಗ್ಸ್ ಏಜೆನ್ಸಿಯು ಹಣಕಾಸು ವರ್ಷ 2022 ರ ಎರಡನೇ ತ್ರೈಮಾಸಿಕದಲ್ಲಿ ಶೇಕಡ 8.3 ಜಿಡಿಪಿ ಬೆಳವಣಿಗೆ ಹೊಂದಲಿದೆ ಎಂದು ಅಂದಾಜು ಮಾಡಿತ್ತು. 2021 ರ ಎರಡನೇ ತ್ರೈಮಾಸಿಕದ ಹಣಕಾಸು ವರ್ಷದಲ್ಲಿ ಶೇಕಡ 7.4 ಆಗಿತ್ತು. 2022ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ದೇಶದ ಜಿಡಿಪಿ ಶೇ.20.1ಕ್ಕೆ ಏರಿಕೆಯಾಗಿದೆ.
2021-22ರ ಭಾರತದ ಜಿಡಿಪಿ ಬೆಳವಣಿಗೆ ದರವನ್ನ 8.3% ಅಂದಾಜಿಸಿದ ವಿಶ್ವಬ್ಯಾಂಕ್
ಕೋವಿಡ್ 3 ನೇ ಅಲೆ ಎಚ್ಚರಿಕೆ ನಡುವೆಯೂ ಜಿಡಿಪಿ ಏರಿಕೆ ನಿರೀಕ್ಷೆ
ಕೊರೊನಾ ವೈರಸ್ ಸೋಂಕಿನ ಮೂರನೇ ಅಲೆಯು ಕಾಣಿಸಿಕೊಳ್ಳದಿದ್ದರೆ, ಇನ್ನು ನಂತರದ ತ್ರೈಮಾಸಿಕಗಲ್ಲಿಯೂ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಚೇತರಿಕೆ ಕಾಣುವ ಸಾಧ್ಯತೆ ಇದೆ ಎಂದು ಈ ಸಂಸ್ಥೆಯು ಅಭಿಪ್ರಾಯ ಪಟ್ಟಿದೆ. "ಕೊರೊನಾ ವೈರಸ್ ಸೋಂಕಿನ ಮೂರನೇ ಅಲೆಯ ಸಾಧ್ಯತೆಯ ಬಗ್ಗೆ ಎಚ್ಚರಿಕೆಯನ್ನು ತಜ್ಞರುಗಳು ನೀಡುತ್ತಿದ್ದಾರೆ. ಆದರೆ ನಾವು ವರ್ಷದ ಉಳಿದ ಭಾಗದಲ್ಲಿ ಆರ್ಥಿಕತೆಯು ಉತ್ತಮ ರೀತಿಯಲ್ಲಿ ಬೆಳವಣಿಗೆಯನ್ನು ಹೊಂದುತ್ತದೆ ಎಂಬ ನಿರೀಕ್ಷೆಯನ್ನು ಇಟ್ಟುಕೊಂಡಿದ್ದೇವೆ," ಎಂದು ಬ್ರಿಕ್ವರ್ಕ್ ರೇಟಿಂಗ್ಸ್ ಏಜೆನ್ಸಿ ಉಲ್ಲೇಖ ಮಾಡಿದೆ.
ಇನ್ನು ಇದೇ ಸಂದರ್ಭದಲ್ಲಿ ಕೊರೊನಾ ವೈರಸ್ ಸೋಂಕಿನ ವಿರುದ್ಧವಾಗಿ ದೇಶದಲ್ಲಿ ಲಸಿಕೆ ನೀಡುವಿಕೆಯು ಪ್ರಗತಿಯನ್ನು ಸಾಧಿಸಿದೆ. ಈ ಹಿನ್ನೆಲೆಯಿಂದಾಗಿ ಕೊರೊನಾ ವೈರಸ್ ಸೋಂಕಿನ ಸಂಭವನೀಯ ಮೂರನೇ ಅಲೆಯ ಅಪಾಯಗಳು ಸೀಮಿತವಾಗಿರಬಹುದು ಎಂದು ಕೂಡಾ ಬ್ರಿಕ್ವರ್ಕ್ ರೇಟಿಂಗ್ಸ್ ಏಜೆನ್ಸಿ ಅಭಿಪ್ರಾಯವನ್ನು ಹೇಳಿಕೆಯಲ್ಲಿ ವ್ಯಕ್ತಪಡಿಸಿದೆ.
ಆದರೆ ಈ ನಡುವೆ ಏರಿಕೆ ಕಾಣುತ್ತಿರುವ ಕಚ್ಚಾ ತೈಲ ಬೆಲೆಗಳು, ಖನಿಜ ಉತ್ಪನ್ನಗಳು, ಕಚ್ಚಾ ವಸ್ತುಗಳ ಬೆಲೆಗಳು ಮತ್ತು ಸರಕು ಸಾಗಣೆ ದರಗಳು, ಸೆಮಿಕಂಡಕ್ಟರ್ ಪೂರೈಕೆಯಲ್ಲಿ ಅಡಚಣೆಗಳು ಮತ್ತು ಕಲ್ಲಿದ್ದಲು ಪೂರೈಕೆಯ ಕೊರತೆಯಿಂದ ಉಂಟಾಗುವ ಸಮಸ್ಯೆಗಳು ದೇಶದಲ್ಲಿ ಜಿಡಿಪಿ ಬೆಳವಣಿಗೆಯ ವೇಗವನ್ನು ಕಡಿಮೆ ಮಾಡುವ ಸಾಧ್ಯತೆಗಳೂ ಇದೆ ಎಂದು ಕೂಡಾ ಈ ದೇಶೀಯ ರೇಟಿಂಗ್ ಏಜೆನ್ಸಿ ಮಾಹಿತಿ ನೀಡಿದೆ.