ತಪ್ಪಾಗಿ PAN ಸಂಖ್ಯೆ ಉಲ್ಲೇಖಿಸಿದರೆ 10 ಸಾವಿರ ರುಪಾಯಿ ದಂಡ
ಬ್ಯಾಂಕಿಂಗ್ ವ್ಯವಹಾರಗಳಿಗೆ PAN (Permanent Account Number) ಕಾರ್ಡ್ ಮಹತ್ವದ್ದಾಗಿದೆ. ನಿರ್ದಿಷ್ಟ ವಹಿವಾಟುಗಳಿಗೆ ಪ್ಯಾನ್ ಸಂಖ್ಯೆಯನ್ನು ಒದಗಿಸುವುದನ್ನು ಆದಾಯ ತೆರಿಗೆ ಇಲಾಖೆ ಕಡ್ಡಾಯಗೊಳಿಸಿದೆ. ಆದರೆ ಈ PAN ಸಂಖ್ಯೆಯನ್ನು ನೀಡುವಾಗ ಎಚ್ಚರದಿಂದಿರಿ. ಯಾಕೆಂದರೆ ಇನ್ಮುಂದೆ ಎಲ್ಲಾದರೂ ತಪ್ಪಾಗಿ PAN ಸಂಖ್ಯೆ ನಮೂದಿಸಿದ್ದಲ್ಲಿ 10 ಸಾವಿರ ರುಪಾಯಿ ದಂಡ ಬೀಳಲಿದೆ. ಚಿಕ್ಕ ತಪ್ಪು ದೊಡ್ಡ ದಂಡಕ್ಕೆ ಆಹ್ವಾನವಾಗಿದೆ.
ಆದಾಯ ತೆರಿಗೆ ಇಲಾಖೆ 20 ವಿಚಾರಗಳಲ್ಲಿ PAN ಸಂಖ್ಯೆ ನಮೂದಿಸುವುದು ಕಡ್ಡಾಯಗೊಳಿಸಿದೆ. ಉದಾಹರಣೆಗೆ ಬ್ಯಾಂಕ್ ಖಾತೆ ತೆರೆಯುವಾಗ, ವಾಹನ ಖರೀದಿ ಹಾಗೂ ಮಾರಾಟ, ಮ್ಯೂಚ್ಯುವಲ್ ಫಂಡ್ಸ್ ಖರೀದಿ, ಷೇರುಗಳು, ಡಿಬೆಂಚರ್ ಗಳು, ಬಾಂಡ್ಗಳು ಸೇರಿದಂತೆ ಇತರೆ ಯಾವುದೇ 50 ಸಾವಿರಕ್ಕಿಂತಲೂ ಹೆಚ್ಚಿನ ಮೌಲ್ಯ ಹೊಂದಿರುವುದಾಗಿದೆ.

ಮುಂದಿನ ದಿನಗಳಲ್ಲಿ ನೀವು ಎಲ್ಲಾದರೂ ಅರ್ಜಿ ಭರ್ತಿ ಮಾಡುವಾಗ 10 ಸಂಖ್ಯೆಯಗಳನ್ನು ಹೊಂದಿರುವ PAN ನಮೂದಿಸುವಾಗ ಎಚ್ಚರವಹಿಸಿ. ಯಾಕೆಂದರೆ ತಪ್ಪು ಸಂಖ್ಯೆ ನೀಡುವುದರಿಂದ 10 ಸಾವಿರ ರುಪಾಯಿ ದಂಡ ವಿಧಿಸಬಹುದು.
ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್ 272B ಅಡಿಯಲ್ಲಿ, ಯಾರಾದರೂ ತಪ್ಪಾಗಿ PAN ಸಂಖ್ಯೆ ನೀಡಿರುವುದು ಕಂಡುಬಂದರೆ ಆದಾಯ ತೆರಿಗೆ ಇಲಾಖೆ 10 ಸಾವಿರ ರುಪಾಯಿ ದಂಡ ಹಾಕಬಹುದು. ಈ ನಿಬಂಧನೆ ನೀವು ಆದಾಯ ತೆರಿಗೆ ರಿಟರ್ನ್ (ITR) ಸಲ್ಲಿಸುವಾಗ ಅಥವಾ ನಿರ್ದಿಷ್ಟ ಹಣಕಾಸಿನ ವಹಿವಾಟುಗಳನ್ನು ನಡೆಸಲು, PAN ಕಾರ್ಡ್ ಸಂಖ್ಯೆಯನ್ನು ಉಲ್ಲೇಖಿಸುವುದು ಕಡ್ಡಾಯವಾಗಿರುವ ಸಂದರ್ಭದಲ್ಲಿ ಅನ್ವಯವಾಗುತ್ತದೆ.
PAN ಕಾರ್ಡ್ ತಕ್ಷಣವೇ ಪಡೆಯುವುದು ಹೇಗೆ? ಇಲ್ಲಿದೆ ಪೂರ್ಣ ಮಾಹಿತಿ
ಪ್ಯಾನ್ ಕಾರ್ಡ್ ಅನ್ನು ಒಮ್ಮೆ ಹಂಚಿಕೆ ಮಾಡಿದ ನಂತರ ಅದು ಜೀವಿತಾವಧಿಯಲ್ಲಿ ಮಾನ್ಯವಾಗಿರುತ್ತದೆ. ನೀವು ಮತ್ತೆ ಅದಕ್ಕೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ. ಮತ್ತು ನೀವು ವಿಳಾಸ ಬದಲಿಸಿದರೂ ಸಹ ಬದಲಾಗುವುದಿಲ್ಲ. ಎರಡು PAN ಕಾರ್ಡ್ ಹೊಂದಿರುವುದು ಸಹ ದಂಡಕ್ಕೆ ಆಹ್ವಾನವಾಗಿದೆ.
ಇಷ್ಟು ಮಹತ್ವ ಹೊಂದಿರುವ PAN ಸಂಖ್ಯೆ ಉಲ್ಲೇಖಿಸುವಾಗ ಎಚ್ಚರವಹಿಸಿ. ನಿಮಗೆ PAN ಸಂಖ್ಯೆ ನೆನಪಿಲ್ಲದಿದ್ದರೆ ಆಧಾರ್ ಕಾರ್ಡ್ ಸಂಖ್ಯೆಯನ್ನು ಕೂಡ ನಮೂದಿಸಬಹುದು. ಆದಾಗ್ಯೂ ಈ ಸಂದರ್ಭದಲ್ಲಿ ಆಧಾರ್ ಸಂಖ್ಯೆಯನ್ನು ತಪ್ಪಾಗಿ ನಮೂದಿಸಿರೂ 10 ಸಾವಿರ ರುಪಾಯಿ ದಂಡ ಅನ್ವಯಿಸುತ್ತದೆ.
ಯಾಕೆಂದರೆ PAN ಜೊತೆಗೆ ಆಧಾರ್ ನಂಬರ್ ಲಿಂಕ್ ಆಗಿರುತ್ತದೆ. ನೀವು ಒಂದು ವೇಳೆ PANಗೆ ಆಧಾರ್ ಲಿಂಕ್ ಮಾಡಿಸದಿದ್ದರೆ ತಕ್ಷಣವೇ ಮಾಡಿಸಿ, ಯಾಕೆಂದರೆ ಆಧಾರ್ ಸಂಖ್ಯೆ ಲಿಂಕ್ ಇರದ PAN ಅನ್ನು ಡಿಸೆಂಬರ್ 31ರ ನಂತರ ಅಮಾನ್ಯವೆಂದು ಘೋಷಿಸುವ ಸಾಧ್ಯತೆಯಿದೆ.