ಗೂಗಲ್ ಸಿಬ್ಬಂದಿಗೆ ಮುಂದಿನ ವರ್ಷದ ಜೂನ್ ತನಕ ವರ್ಕ್ ಫ್ರಮ್ ಹೋಮ್
ಕೊರೊನಾ ದಿನದಿನಕ್ಕೂ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಭಾರತ ಸೇರಿದಂತೆ ಜಗತ್ತಿನಾದ್ಯಂತ ಇರುವ ಗೂಗಲ್ ಸಿಬ್ಬಂದಿಗೆ ವರ್ಕ್ ಫ್ರಮ್ ಹೋಮ್ ಅವಕಾಶವನ್ನು 2021ರ ಜೂನ್ ತನಕ ವಿಸ್ತರಿಸಲಾಗಿದೆ. ಸಿಬ್ಬಂದಿಗೆ ಇಮೇಲ್ ಮಾಡಿರುವ ಸುಂದರ್ ಪಿಚೈ, ಕಚೇರಿಗಳಿಗೆ ಬಂದು ಕೆಲಸ ಮಾಡುವ ಅಗತ್ಯ ಇಲ್ಲದವರು ಮುಂದಿನ ದಿನಗಳಿಗಾಗಿ ಯೋಜನೆ ರೂಪಿಸಿಕೊಳ್ಳಲು ಜಾಗತಿಕ ಸ್ವಯಂಪ್ರೇರಿತ ವರ್ಕ್ ಫ್ರಮ್ ಹೋಮ್ ಆಯ್ಕೆಯನ್ನು ಜೂನ್ 30, 2021ರ ತನಕ ವಿಸ್ತರಿಸಿದ್ದೇವೆ ಎಂದಿದ್ದಾರೆ.
ಈ ನಡೆಯು ಗೂಗಲ್ ಹಾಗೂ ಅದರ ಮಾತೃ ಸಂಸ್ಥೆ ಆಲ್ಫಾಬೆಟ್ ನಲ್ಲಿ ಇರುವ ಎರಡು ಲಕ್ಷದಷ್ಟು ಇರುವ ಪೂರ್ಣಾವಧಿ ಹಾಗೂ ಗುತ್ತಿಗೆ ಸಿಬ್ಬಂದಿಯಲ್ಲಿ ಬಹುತೇಕರ ಮೇಲೆ ಪ್ರಭಾವ ಬೀರಲಿದೆ. ಅಂದ ಹಾಗೆ ಭಾರತದಲ್ಲೇ ಐದು ಸಾವಿರದಷ್ಟು ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ವರ್ಕ್ ಫ್ರಮ್ ಹೋಮ್ ಗಾಗಿ ನಾನಾ ಭತ್ಯೆಗಳನ್ನು ನೀಡಿದ ಕಂಪೆನಿಗಳಿವು
ಗೂಗಲ್ ಕಂಪೆನಿಗೆ ಭಾರತ ಪ್ರಮುಖ ಮಾರುಕಟ್ಟೆ. ಹೈದರಾಬಾದ್ ಮತ್ತು ಬೆಂಗಳೂರಿನಲ್ಲಿ ಮುಖ್ಯವಾಗಿ ಕಚೇರಿಗಳಿವೆ. ಮುಂದಿನ ಐದರಿಂದ ಏಳು ವರ್ಷದಲ್ಲಿ ಭಾರತದಲ್ಲಿ 75 ಸಾವಿರ ಕೋಟಿ ರುಪಾಯಿ ಹೂಡಿಕೆ ಮಾಡುವ ಬಗ್ಗೆ ಈಚೆಗಷ್ಟೇ ಸುಂದರ್ ಪಿಚೈ ಘೋಷಣೆ ಮಾಡಿದ್ದರು.

ಹೇಗೆ ಇತರ ಕಂಪೆನಿಗಳು ಮುಂಜಾಗ್ರತಾ ಕ್ರಮವಾಗಿ ವರ್ಕ್ ಫ್ರಮ್ ಹೋಮ್ ವಿಸ್ತರಣೆ ಮಾಡುತ್ತಿದೆಯೋ ಅದೇ ರೀತಿ ಗೂಗಲ್ ಸಹ ಕ್ರಮ ಕೈಗೊಂಡಿದೆ. ಇತ್ತೀಚೆಗೆ ಅಮೆಜಾನ್ ಕಂಪೆನಿಯು, ಜನವರಿ 8, 2021ರ ತನಕ ವರ್ಕ್ ಫ್ರಮ್ ಹೋಮ್ ವಿಸ್ತರಿಸಿತ್ತು. ಡೆಲ್ ಟೆಕ್ನಾಲಜಿಯ ಅಧ್ಯಕ್ಷ- ಎಂ.ಡಿ. ಅಲೋಕ್ ಒಹ್ರಿ ಮಾಧ್ಯಮದೊಂದಿಗೆ ಮಾತನಾಡಿ, ಕೊರೊನಾ ಬಿಕ್ಕಟ್ಟಿಗೂ ಮುಂಚೆಯೇ ಶೇಕಡಾ ನೂರರಷ್ಟು ಸಿಬ್ಬಂದಿಗೆ ನಾವು ವರ್ಕ್ ಫ್ರಮ್ ಅವಕಾಶ ಕೊಟ್ಟಿದ್ದೆವು ಎಂದಿದ್ದರು.