ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು 8.5 ರೂ. ಕಡಿತಗೊಳಿಸಬಹುದು!
ಸಾರ್ವಕಾಲಿಕ ದಾಖಲೆ ಮಟ್ಟದಲ್ಲಿರುವ ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಲು ಈಗಾಗಲೇ ಕೇಂದ್ರ ಹಣಕಾಸು ಸಚಿವಾಲಯ ಚಿಂತನೆ ನಡೆಸಿದೆ. ಈಗಾಗಲೇ ರಾಜಸ್ಥಾನ, ಮಧ್ಯಪ್ರದೇಶದ ಕೆಲವು ಪ್ರದೇಶಗಳಲ್ಲಿ ಪೆಟ್ರೋಲ್ ಲೀಟರ್ಗೆ 100 ರೂಪಾಯಿ ಗಡಿದಾಟಿದೆ.
ಕಳೆದ ಹಲವು ವಾರಗಳಿಂದ ಹೆಚ್ಚುತ್ತಲೇ ಇರುವ ಕಚ್ಚಾ ತೈಲದ ಬೇಡಿಕೆ ಜೊತೆಗೆ ಪೆಟ್ರೋಲ್, ಡೀಸೆಲ್ ದರಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರವು ಅಬಕಾರಿ ಸುಂಕವನ್ನು 8.5 ರೂಪಾಯಿವರೆಗೆ ಕಡಿತಗೊಳಿಸಲು ಅವಕಾಶವಿದೆ ಎಂದು ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.

ಆದಾಯ ಹೆಚ್ಚು ಕಡಿತವಾಗದೆ 8.5 ರೂ. ಇಳಿಕೆ?
ಎರಡು ಇಂಧನಗಳ ಮೇಲಿನ ತೆರಿಗೆಯಿಂದ ಬರುವ ಆದಾಯದ ಗುರಿಯ ಮೇಲೆ ಪರಿಣಾಮ ಬೀರದಂತೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರ್ಗೆ 8.5 ರೂ.ವರೆಗೆ ಕಡಿತಗೊಳಿಸಲು ಸರ್ಕಾರಕ್ಕೆ ಅವಕಾಶವಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.

ಕಳೆದ 9 ತಿಂಗಳಿನಿಂದ ತೈಲ ಬೆಲೆ ಏರಿಕೆ
ಕಳೆದ ಒಂಬತ್ತು ತಿಂಗಳುಗಳಲ್ಲಿ ದರಗಳಲ್ಲಿ ಪಟ್ಟುಹಿಡಿದ ಏರಿಕೆಯ ನಂತರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಐತಿಹಾಸಿಕ ಗರಿಷ್ಠ ಮಟ್ಟದಲ್ಲಿವೆ. ಜನಸಾಮಾನ್ಯರ ನೋವನ್ನು ಕಡಿಮೆ ಮಾಡಲು ಇದೀಗ ಅಬಕಾರಿ ಸುಂಕವನ್ನು ಕಡಿಮೆ ಮಾಡಲೇ ಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ. ಜೊತೆಗೆ ಈಗಾಗಲೇ ವಿರೋಧ ಪಕ್ಷಗಳು, ಸಮಾಜದ ಪ್ರಮುಖ ಸಂಸ್ಥೆಗಳು ತೈಲ ದರ ಇಳಿಕೆಗೆ ಒತ್ತಾಯಿಸಿವೆ.

2020ರಲ್ಲಿ ಅಬಕಾರಿ ಸುಂಕ ಭಾರೀ ಹೆಚ್ಚಳ
ಕೋವಿಡ್-19 ಸಾಂಕ್ರಾಮಿಕ ಪ್ರೇರಿತ ಲಾಕ್ಡೌನ್ನಲ್ಲಿ ಆದಾಯವೇ ಕಾಣದ ಕೇಂದ್ರ ಸರ್ಕಾರವು ತನ್ನ ಪ್ರಮುಖ ಆದಾಯದ ಮೂಲಗಳಲ್ಲಿ ಒಂದಾದ ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ ಹೆಚ್ಚಿಸುವುದು ಅನಿವಾರ್ಯವಾಗಿತ್ತು. ಹೀಗಾಗಿ ಮಾರ್ಚ್ 2020ರಿಂದ ಮೇ 2020ರ ಅವಧಿಯಲ್ಲಿ ಪೆಟ್ರೋಲ್ ಮೇಲೆ ಲೀಟರ್ಗೆ 13 ರೂ ಹಾಗೂ ಡೀಸೆಲ್ ಮೇಲೆ 16ರೂ ಹೆಚ್ಚಿಸಲಾಗಿತ್ತು. ಪ್ರಸ್ತುತ ಪ್ರತಿ ಲೀಟರ್ ಡೀಸೆಲ್ ಮೇಲಿನ ಅಬಕಾರಿ ಸುಂಕ 31.8 ರೂ ಇದ್ದರೆ, ಪೆಟ್ರೋಲ್ ಮೇಲಿನ ಸುಂಕ 32.9 ರೂ. ಇದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಒಟ್ಟಾರೆ ತೆರಿಗೆ ಎಷ್ಟು?
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತೈಲದ ಮೇಲೆ ಪ್ರತ್ಯೇಕ ಅಬಕಾರಿ ಸುಂಕವನ್ನು ಹೇರಿವೆ. ಕೇಂದ್ರ ಮತ್ತು ರಾಜ್ಯದಿಂದ ಪೆಟ್ರೋಲ್ನ ಚಿಲ್ಲರೆ ಮಾರಾಟದ ಬೆಲೆ ಶೇಕಡಾ 60ರಷ್ಟು ಮತ್ತು ಡೀಸೆಲ್ ಮೇಲೆ ಶೇಕಡಾ 54 ಕ್ಕಿಂತ ಹೆಚ್ಚು ತೆರಿಗೆಯನ್ನು ಹೊಂದಿವೆ.

2014-15ರಲ್ಲೂ ಅಬಕಾರಿ ಸುಂಕ ಹೆಚ್ಚಿಸಲಾಗಿತ್ತು!
ಜಾಗತಿಕ ತೈಲ ಬೆಲೆಗಳು ಕುಸಿದಾಗ ಅದರಿಂದ ಉಂಟಾಗುವ ಲಾಭಗಳನ್ನು ಗ್ರಾಹಕರಿಗೆ ವಿತರಿಸದೆ ಸರ್ಕಾರವು ನವೆಂಬರ್ 2014 ಮತ್ತು ಜನವರಿ 2016 ರ ನಡುವೆ ಒಂಬತ್ತು ಬಾರಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಿಸಿತ್ತು.
ಒಟ್ಟಾರೆಯಾಗಿ, ಪೆಟ್ರೋಲ್ ದರದ ಸುಂಕವನ್ನು ಪ್ರತಿ ಲೀಟರ್ಗೆ 11.77 ರೂ.ಗೆ ಹೆಚ್ಚಿಸಲಾಗಿದೆ ಮತ್ತು ಆ 15 ತಿಂಗಳಲ್ಲಿ ಡೀಸೆಲ್ಗೆ 13.47 ರಷ್ಟು ಹೆಚ್ಚಳವಾಗಿದೆ. ಈ ಮೂಲಕ ಸರ್ಕಾರದ ಅಬಕಾರಿ ಸುಂಕದ ಆದಾಯವು 2014-15ರಲ್ಲಿ 99,000 ಕೋಟಿ ರೂಪಾಯಿಗಳಿಂದ 2016-17ರಲ್ಲಿ ಎರಡು ಪಟ್ಟು 2,42,000 ಕೋಟಿ ರೂ.ಗೆ ಏರಿದೆ.