ಜಿಎಸ್ ಟಿ ಪರಿಹಾರ ಸೆಸ್ 2022ರ ನಂತರವೂ ವಿಸ್ತರಣೆ
ಜಿಎಸ್ ಟಿ ಪರಿಹಾರ ಸೆಸ್ ಅನ್ನು 2022ರ ನಂತರವೂ ವಿಸ್ತರಣೆ ಮಾಡುವುದಕ್ಕೆ ಜಿಎಸ್ ಟಿ ಸಮಿತಿ ಸಭೆಯು ಸೋಮವಾರ (ಅಕ್ಟೋಬರ್ 5, 2020) ನಿರ್ಧಾರ ಮಾಡಿತು. ಈ ಬಗ್ಗೆ ಮೂಲಗಳನ್ನು ಆಧರಿಸಿ ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ. ಇನ್ನೂ ಅಧಿಕೃತವಾಗಿ ಹೇಳಿಕೆ ಬಂದಿಲ್ಲ. ಈ ಸೆಸ್ 2024ರ ತನಕ ವಿಸ್ತರಣೆ ಮಾಡುವ ಪ್ರಸ್ತಾವ ಇತ್ತು. ಆದರೆ ಈ ಬಗ್ಗೆ ಪರಿಶೀಲನೆ ನಡೆಸಿ, ಆಯಾ ಕಾಲಕ್ಕೆ ಬದಲಾವಣೆ ಮಾಡಲಾಗುವುದು ಎಂದು ವರದಿ ಆಗಿದೆ.
GST ಸಮಿತಿ ಸಭೆಯಲ್ಲಿ ಕೆಂಡ ಉಗುಳಲಿವೆ ಬಿಜೆಪಿಯೇತರ ರಾಜ್ಯಗಳು
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಸಭೆಯ ಅಧ್ಯಕ್ಷತೆ ವಹಿಸಿದ್ದಾರೆ. ಜಿಎಸ್ ಟಿ ಪರಿಹಾರದಲ್ಲಿ ಗಣನೀಯ ಕುಸಿತ ಕಂಡುಬಂದ ಹಿನ್ನೆಲೆಯಲ್ಲಿ ಈ ಸಭೆ ಮಹತ್ವದ್ದಾಗಿದೆ. ಆರ್ ಬಿಐನಿಂದ ವಿಶೇಷ ಸಾಲ ಪಡೆಯುವುದು ಹಾಗೂ ಮಾರ್ಕೆಟ್ ನಲ್ಲಿ ಬಾಂಡ್ ವಿತರಣೆ ಮೂಲಕ ಹಣ ಸಂಗ್ರಹಿಸುವುದು, ಈ ಮೂಲಕ ಆದಾಯ ಕೊರತೆಯನ್ನು ತುಂಬಿಕೊಳ್ಳುವ ಪ್ರಸ್ತಾವವನ್ನು ರಾಜ್ಯಗಳ ಮುಂದೆ ಕೇಂದ್ರ ಇಟ್ಟಿತ್ತು.
ಆದರೆ, ಇದು ಕಾನೂನುಬದ್ಧ ಜವಾಬ್ದಾರಿ. ರಾಜ್ಯಗಳಿಗೆ ಆಗಿರುವ ನಷ್ಟವನ್ನು ಕೇಂದ್ರದಿಂದ ತುಂಬಿಕೊಡಬೇಕು. ಕೇಂದ್ರ ಸರ್ಕಾರವೇ ಸಾಲ ಮಾಡಬೇಕು ಎಂದು ಬಿಜೆಪಿಯೇತರ ರಾಜ್ಯಗಳ ಒತ್ತಾಯ ಆಗಿದೆ. "ಇಂದಿನ ಜಿಎಸ್ ಟಿ ಸಮಿತಿ ಸಭೆಯ ಫಲಿತಾಂಶವು ಸರ್ಕಾರದ ಕಾನೂನುಬದ್ಧತೆಗೆ ಹಾಗೂ ಅದು ಕೊಟ್ಟ ಮಾತಿಗೆ ಪರೀಕ್ಷೆ ಇದ್ದಂತೆ," ಎಂದು ಕೇಂದ್ರದ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಹೇಳಿದ್ದಾರೆ.