ಚೀನಾದಲ್ಲಿ ಜಾಕ್ ಮಾಗೆ ಚಳಿಯಾದರೆ ಭಾರತದ ಕಾರ್ಪೊರೇಟ್ ನಡುಗುವುದ್ಯಾಕೆ?
ಸಮುದ್ರದ ಉಪ್ಪಿಗೂ ಬೆಟ್ಟದ ನೆಲ್ಲಿಕಾಯಿಗೂ ಎಲ್ಲಿಂದೆಲ್ಲಿನ ಸಂಬಂಧ? ಆದರೂ ನೆಲ್ಲಿಕಾಯಿಯನ್ನು ಉಪ್ಪಿನ ಜತೆಗೆ ಸವಿದರೆ ಅದರೆ ರುಚಿಯೇ ಅದ್ಭುತ ಅಲ್ಲವಾ! ಈಗ ಚೀನಾದಲ್ಲಿ ಅಲಿಬಾಬ ಕಂಪೆನಿಯ ಸ್ಥಾಪಕ ಜಾಕ್ ಮಾಗೆ ವಿಪರೀತ ಕಷ್ಟದ ಸ್ಥಿತಿ ಎದುರಾಗಿದೆ. ಇದರಿಂದ ಭಾರತದ ಕಂಪೆನಿಗಳು ಹೇಗೆ ಪತರಗುಟ್ಟುತ್ತಿವೆ ಎಂಬುದನ್ನು ವಿವರಿಸುವ ಮುನ್ನ ನೆಲ್ಲಿಕಾಯಿ- ಉಪ್ಪಿನ ಉದಾಹರಣೆ ನೀಡಬೇಕಾಯಿತು.
ಚೀನಾ ಸರ್ಕಾರದ ಪಾಲಿನ 'ಡಾರ್ಲಿಂಗ್' ಜಾಕ್ ಮಾ ಜತೆಗೆ ಇದೆಂಥಾ ಬ್ರೇಕ್ ಅಪ್?
ಚೀನಾದಲ್ಲಿ 2020ರ ಅಕ್ಟೋಬರ್ ನಲ್ಲಿ ಕೊನೆಯದಾಗಿ ಕಾಣಿಸಿಕೊಂಡ ಜಾಕ್ ಮಾ ಆ ನಂತರ ಸಾರ್ವಜನಿಕವಾಗಿ ಕಂಡುಬಂದಿಲ್ಲ. ಚೀನಾ- ಭಾರತದ ಮಧ್ಯೆ ಭೌಗೋಳಿಕ ರಾಜಕೀಯ ಉದ್ವಿಗ್ನತೆ ಅದಾಗಲೇ ಇತ್ತು ಅನ್ನೋದು ಹೌದಾದರೂ ಅಲಿಬಾಬ ಸಮೂಹದಿಂದ ಭಾರತದ ಕಂಪೆನಿಗಳಲ್ಲಿ ಹೂಡಿಕೆ ಆಗಬೇಕಿದ್ದ ಮೊತ್ತಕ್ಕೆ ಈಗ ಬ್ರೇಕ್ ಬಿದ್ದಿದೆ.

ಭಾರತದ ಕಂಪೆನಿಗಳಲ್ಲಿ 14,600 ಕೋಟಿ ರುಪಾಯಿಗೂ ಜಾಸ್ತಿ ಹೂಡಿಕೆ
ಯು.ಎಸ್. ಮೂಲದ ಪಿಚ್ ಬುಕ್ ದತ್ತಾಂಶದ ಪ್ರಕಾರ, ಅಲಿಬಾಬ ಮತ್ತು ಅದರ ಸಹವರ್ತಿ ಅಲಿಬಾಬ ಕ್ಯಾಪಿಟಲ್ ಪಾರ್ಟನರ್ಸ್ ಮತ್ತು ಆಂಟ್ ಸಮೂಹ (ಈ ಹಿಂದೆ ಆಂಟ್ ಫೈನಾನ್ಷಿಯಲ್)ದಿಂದ 2015ರಿಂದ ಈಚೆಗೆ ಭಾರತೀಯ ಕಂಪೆನಿಗಳಲ್ಲಿ 200 ಕೋಟಿ ಅಮೆರಿಕನ್ ಡಾಲರ್ ಹೂಡಿಕೆ ಮಾಡಲಾಗಿದೆ. ಭಾರತದ ರುಪಾಯಿಗಳಲ್ಲಿ ಇಂದಿನ ಲೆಕ್ಕಕ್ಕೆ ಹೇಳುವುದಾದರೆ, 14,600 ಕೋಟಿ ರುಪಾಯಿಗೂ ಜಾಸ್ತಿ ಆಗುತ್ತದೆ. ಒಟ್ಟಾರೆಯಾಗಿ, ಕಳೆದ ಐದು ವರ್ಷಗಳಲ್ಲಿ ಚೀನಾ ಹೂಡಿಕೆದಾರರು (ಟೆನ್ಸೆಂಟ್ ಒಳಗೊಂಡಂತೆ) ಭಾರತದ ನವೋದ್ಯಮದಲ್ಲಿ (ಸ್ಟಾರ್ಟ್ ಅಪ್ ಗಳಲ್ಲಿ) 570 ಕೋಟಿ ಅಮೆರಿಕನ್ ಡಾಲರ್ ಹೂಡಿಕೆ ಮಾಡಿದ್ದಾರೆ ಎಂಬ ದತ್ತಾಂಶವನ್ನು ಮುಂದಿಡುತ್ತದೆ ವೆಂಚರ್ಸ್ ಇಂಟೆಲಿಜೆನ್ಸ್.

ಪೇಟಿಎಂ, ಝೊಮ್ಯಾಟೊ ಮತ್ತು ಬಿಗ್ ಬ್ಯಾಸ್ಕೆಟ್
ಅಲಿಬಾಬ ಸಮೂಹವೂ ತನ್ನ ಫಿನ್ ಟೆಕ್ ಮೂಲಕ ಡಿಜಿಟಲ್ ಪಾವತಿ ಪ್ಲಾಟ್ ಫಾರ್ಮ್ ಪೇಟಿಎಂ, ಆನ್ ಲೈನ್ ಫುಡ್ ಡೆಲಿವರಿ ಪ್ಲಾಟ್ ಫಾರ್ಮ್ ಝೊಮ್ಯಾಟೊ ಮತ್ತು ಬಿಗ್ ಬ್ಯಾಸ್ಕೆಟ್ ನಲ್ಲಿ ಹೂಡಿಕೆ ಮಾಡಿದೆ. ಝೊಮ್ಯಾಟೊ ಕಳೆದ ವರ್ಷದ ಜನವರಿಯಲ್ಲಿ ಆಂಟ್ ಫೈನಾನ್ಷಿಯಲ್ ನಿಂದ 15 ಕೋಟಿ ಯುಎಸ್ ಡಿ ಸಂಗ್ರಹಿಸಿದೆ. 2018ರಿಂದ ಝೊಮ್ಯಾಟೊದಲ್ಲಿ ಆಂಟ್ ಫೈನಾನ್ಷಿಯಲ್ ಹೂಡಿಕೆ ಮಾಡುತ್ತಿದೆ. ಈ ಮಧ್ಯೆ, ಆಂಟ್ ಗ್ರೂಪ್ ನಿಂದ ದೇಶೀ ಡಿಜಿಟಲ್ ಪೇಮೆಂಟ್ ಪ್ಲಾಟ್ ಫಾರ್ಮ್ ನಲ್ಲಿನ ಶೇಕಡಾ 30ರಷ್ಟು ಪಾಲನ್ನು ಮಾರಾಟ ಮಾಡಲು ಆಲೋಚಿಸಲಾಗುತ್ತಿದೆ ಎಂಬುದನ್ನು ಡಿಸೆಂಬರ್ ನಲ್ಲಿ ಪೇಟಿಎಂ ನಿರಾಕರಿಸಿತ್ತು. ಇದು 'ಸುಳ್ಳು ಮಾಹಿತಿ' ಎಂದು ಆಂಟ್ ಸಮೂಹ ಕೂಡ ಹೇಳಿತ್ತು.

3700 ಕೋಟಿ ಅಮೆರಿಕನ್ ಡಾಲರ್ ಮೌಲ್ಯದ ಐಪಿಒ ಅಮಾನತು
ಯಾವಾಗ ಕಳೆದ ನವೆಂಬರ್ ನಲ್ಲಿ 3700 ಕೋಟಿ ಅಮೆರಿಕನ್ ಡಾಲರ್ ಮೌಲ್ಯದ ಆಂಟ್ ಗ್ರೂಪ್ ಷೇರು ಲಿಸ್ಟಿಂಗ್ ಅನ್ನು ಶಾಂಘೈ ಸ್ಟಾಕ್ ಎಕ್ಸ್ ಚೇಂಜ್ ನಲ್ಲಿ ಚೀನಾ ಸರ್ಕಾರದಿಂದ ಮುಂದೂಡಲಾಯಿತೋ ಆಗಿನಿಂದ ಜಾಕ್ ಮಾ ಪಾಲಿಗೆ ಶನಿ ಕಾಟ ಶುರುವಾಯಿತು. ಆದರೆ ನಿಯಂತ್ರಕ ಸಂಸ್ಥೆಯಲ್ಲಿ ದಿಢೀರ್ ಬದಲಾವಣೆ ಆಗಿದ್ದರಿಂದ ಐಪಿಒ ಅಮಾನತು ಮಾಡಬೇಕಾಯಿತು ಎಂದು ಶಾಂಘೈ ಸ್ಟಾಕ್ ಎಕ್ಸ್ ಚೇಂಜ್ ನಿಂದ ಮಾಹಿತಿ ಹೊರಬಿತ್ತು. ಯಾವಾಗ ಐಪಿಒ ಅಮಾನತು ಆಯಿತು ಹಾಂಕಾಂಗ್ ನಲ್ಲಿ ಅಲಿಬಾಬ ಷೇರಿನ ಬೆಲೆಯಲ್ಲಿ 10 ಪರ್ಸೆಂಟ್ ಕುಸಿತವಾಯಿತು. ಜಾಕ್ ಮಾ ಆಸ್ತಿಯಲ್ಲಿ ನೋಡನೋಡುತ್ತಲೆ 300 ಕೋಟಿ ಅಮೆರಿಕನ್ ಡಾಲರ್ ಕರಗಿಹೋಯಿತು. ಆ ನಂತರ ಜಾಕ್ ಮಾ ಅದೆಲ್ಲಿ ಹೋದರೋ ಏನು ಕಥೆಯೋ ಒಂದೂ ಗೊತ್ತಾಗಿಲ್ಲ.

ಆಂಟ್ ಸಮೂಹದ ಸುತ್ತ ಸರ್ಕಾರಿ ಬಲೆ
ಪೀಪಲ್ಸ್ ಬ್ಯಾಂಕ್ ಆಫ್ ಚೀನಾ ಡಿಸೆಂಬರ್ 26ನೇ ತಾರೀಕಿನಂದು ಸಮನ್ಸ್ ನೀಡಿ, ನಿಯಂತ್ರಕರಿಂದ ಜಾರಿಗೆ ತಂದಿರುವ ನಿಯಮಗಳನ್ನು ಆಂಟ್ ಗ್ರೂಪ್ ನಿಂದ ಮೀರಲಾಗುತ್ತಿದೆ ಎಂದು ತಿಳಿಸಿತು. ಆಂಟ್ ಸಮೂಹಕ್ಕೆ ಐದು ಅಂಶದ ನಿಯಮಾವಳಿ ಕಾರ್ಯಸೂಚಿ ಪಟ್ಟಿಯನ್ನು ಸಿದ್ಧಪಡಿಸಲಾಯಿತು. ಪಾವತಿ ವಿಚಾರಕ್ಕೆ ಬಂದಲ್ಲಿ ಆಂಟ್ ಗ್ರೂಪ್ ಮತ್ತೆ ತನ್ನ ಮೂಲ ಸ್ಥಿತಿಗೆ ವಾಪಸಾಗಬೇಕು ಮತ್ತು ವಹಿವಾಟಿನಲ್ಲಿ ಹೆಚ್ಚು ಪಾರದರ್ಶಕವಾಗಿರಬೇಕು ಅನ್ನೋದು ಕಾರ್ಯಸೂಚಿ ಆಗಿತ್ತು. ಸಾಲ ನೀಡುವ ವ್ಯವಹಾರಕ್ಕೆ ಅಗತ್ಯ ಲೈಸೆನ್ಸ್ ಪಡೆಯಬೇಕು ಮತ್ತು ಬಳಕೆದಾರರ ಮಾಹಿತಿ ಖಾಸಗಿತನ ಸಂರಕ್ಷಿಸಬೇಕು ಮತ್ತು ಫೈನಾನ್ಷಿಯಲ್ ಹೋಲ್ಡಿಂಗ್ ಕಂಪೆನಿ ಶುರು ಮಾಡಬೇಕು ಹಾಗೂ ಅಗತ್ಯ ಪ್ರಮಾಣದ ಬಂಡವಾಳ ಇದೆ ಎಂಬುದನ್ನು ಖಾತ್ರಿ ಪಡಿಸಬೇಕು- ಇವಿಷ್ಟು ಆದೇಶವಾಗಿತ್ತು.

ಅಲಿಬಾಬ ವ್ಯವಹಾರ ಮಾಮೂಲಿನಂತೆಯೇ ನಡೆಯುತ್ತಿದೆ
ಇನ್ನು ಆಂಟ್ ಗ್ರೂಪ್ ನಿಂದ ಸಾಲ, ಇನ್ಷೂರೆನ್ಸ್, ವೆಲ್ತ್ ಮ್ಯಾನೇಜ್ ಮೆಂಟ್ ಹಾಗೂ ಇತರ ಹಣಕಾಸು ವ್ಯವಹಾರಗಳನ್ನು ಕಾನೂನು ಬದ್ಧವಾಗಿ ಮಾಡಬೇಕು ಮತ್ತು ಸೆಕ್ಯೂರಿಟೀಸ್ ಬಿಜಿನೆಸ್ ನಲ್ಲಿ ನಿಯಮಾವಳಿ ಪಾಲನೆ ಹೆಚ್ಚಿಸಬೇಕು ಎಂದು ಕೂಡ ತಿಳಿಸಲಾಯಿತು. ಈ ಮಧ್ಯೆ ಚೀನಾ ಸರ್ಕಾರದಿಂದ ಅಲಿಬಾಬ ವ್ಯವಹಾರದ ವಿರುದ್ಧ ತನಿಖೆ ಕೂಡ ಶುರುವಾಯಿತು. ಸ್ಪರ್ಧೆ ವಿರೋಧಿ ಪದ್ಧತಿಯನ್ನು ಅಲಿಬಾಬ ಅನುಸರಿಸುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ತನಿಖೆಯೇ ಶುರುವಾಗಿ ಹೋಯಿತು. ಅಲಿಬಾಬ ಕಂಪೆನಿಯು "ಎರಡರಲ್ಲಿ ಒಂದನ್ನು ಆರಿಸಿಕೊಳ್ಳಬೇಕು" ಎಂಬ ನೀತಿ ಅನುಸರಿಸುತ್ತಿದೆ ಎಂಬ ಆರೋಪವನ್ನು ಹೊರಿಸಿ ತನಿಖೆ ಶುರು ಮಾಡಲಾಯಿತು. ಈ ಎರಡರಲ್ಲಿ ಒಂದನ್ನು ಆರಿಸಿಕೊಳ್ಳಬೇಕು ಎಂಬ ನೀತಿ ಅಂದರೇನು ಗೊತ್ತಾ, ವರ್ತಕರು ಅಲಿಬಾಬ ಇ ಕಾಮರ್ಸ್ ಪ್ಲಾಟ್ ಫಾರ್ಮ್ ನಲ್ಲಿ ಮಾತ್ರ ತಮ್ಮ ಉತ್ಪನ್ನಗಳ ಮಾರಾಟ ಮಾಡಬೇಕು. ಮತ್ತು ಅದರ ಪ್ರತಿಸ್ಪರ್ಧಿಯಾದ JD.comನಂಥ ಕಡೆ ಮಾಡುವಂತಿಲ್ಲ ಎಂದು ಒತ್ತಡ ಹೇರುವುದು. ಅಲಿಬಾಬದಿಂದ ನಿಯಂತ್ರಕ ಸಂಸ್ಥೆಗಳ ವಿಚಾರಣೆಗೆ ಸಂಪೂರ್ಣ ಸಹಕಾರ ನೀಡಲಾಗುತ್ತಿದೆ ಎಂದು ಕಂಪೆನಿ ಹೇಳಿದೆ. ಇನ್ನು ವ್ಯವಹಾರ ಮಾಮೂಲಿನಂತೆ ನಡೆಯುತ್ತಿದೆ ಎಂದು ಕೂಡ ತಿಳಿಸಿದೆ.