"ಸರ್ಕಾರದ ಜತೆ ಲವ್ ಇರಬೇಕು, ಆದರೆ ಎಂದೂ ಮದುವೆ ಆಗಬಾರದು"
"ನನ್ನ ಸಿದ್ಧಾಂತ ಏನೆಂದರೆ, ಸರ್ಕಾರದ ಜತೆ ಪ್ರೀತಿ (ಲವ್) ಇರಬೇಕು, ಆದರೆ ಯಾವತ್ತಿಗೂ ಮದುವೆ ಆಗಬಾರದು," 2007ರಲ್ಲಿ ನಡೆದ ವರ್ಲ್ಡ್ ಎಕನಾಮಿಕ ಫೋರಂನಲ್ಲಿ ಜಾಕ್ ಮಾ ಹೇಳಿದ್ದ ಮಾತು ಈಗ ಮತ್ತೆ ನೆನಪಾಗುತ್ತಿದೆ. ಚೀನಾದಲ್ಲಿ ಶ್ರೀಮಂತ ಜಾಕ್ ಮಾ ಸ್ಥಿತಿ ನೋಡಿದರೆ ಈಗ ಅಯ್ಯೋ, ಪಾಪ ಎನ್ನುವಂತಾಗಿದೆ. ಏನಾಯಿತು ಜಾಕ್ ಮಾ ಹಾಗೂ ಚೀನಾ ಸರ್ಕಾರದ ಮಧ್ಯೆ? ತುಂಬ ಇಂಟರೆಸ್ಟಿಂಗ್ ವರದಿ ಇಲ್ಲಿದೆ. ಮುಂದೆ ಓದಿ.
ಆತನ ಹೆಸರು ಜಾಕ್ ಮಾ. ಅಲಿಬಾಬ ಎಂಬ ಕಂಪೆನಿಯನ್ನು ಶುರು ಮಾಡಿ, ತನ್ನ ಜಾಣ್ಮೆಯಿಂದ ಗುರುತಿಸಿಕೊಂಡ ವ್ಯಕ್ತಿ. ಆತ ಬೆಳೆಯುತ್ತಿದ್ದ ಪರಿಯನ್ನು ಆರಂಭದಲ್ಲಿ ಚೀನಾ ಸರ್ಕಾರವೂ ಖುಷಿಯಿಂದ ಸಹಿಸಿತು. ಆದರೆ ಈಗ ಆತನಿಗೆ ಪಾಠ ಮಾಡುವುದಕ್ಕೆ ಸರ್ಕಾರ ನಿಂತಿದೆ: ನಮಗೆ ಪಕ್ಷಕ್ಕಿಂತ ಯಾವುದೂ ದೊಡ್ಡದಲ್ಲ ಎಂಬ ಪಾಠ ಅದು.
ಅಲಿಬಾಬ ಶಾಪಿಂಗ್ ಹಬ್ಬದಲ್ಲಿ 4.20 ಲಕ್ಷ ಕೋಟಿ ರು. ಮೀರಿದ ಆರ್ಡರ್
ಏಷ್ಯನ್ ಉದ್ಯಮಿಗಳ ಮಧ್ಯೆ ಎದ್ದು ಕಾಣುವ ಹೆಸರು ಜಾಕ್ ಮಾ ಅವರದು. ಆಸ್ತಿ ಮೌಲ್ಯ 5800 ಕೋಟಿ ಅಮೆರಿಕನ್ ಡಾಲರ್ ಸಮೀಪ ಇತ್ತು. ವಿಶ್ವದ ಅತಿ ದೊಡ್ಡ ಐಪಿಒ ಇನ್ನೇನು ಶುರುವಾಗಬೇಕು ಎಂಬುದರೊಳಗಾಗಿ ಚೀನೀ ನಿಯಂತ್ರಕರು ಅದಕ್ಕೆ ತಡೆ ಒಡ್ಡಿದರು. ಇನ್ನು ನವೆಂಬರ್ ನಲ್ಲಿ ಷೇರು ಮಾರಾಟ ಮಾಡಿದ್ದರಿಂದ ಜಾಕ್ ಮಾ ಆಸ್ತಿ 70 ಬಿಲಿಯನ್ ಯುಎಸ್ ಡಿಗೂ ಹೆಚ್ಚಾಯಿತು.

ಆಂಟ್ ಗ್ರೂಪ್ ಫೈನಾನ್ಷಿಯಲ್
ಅಲಿಬಾಬ ಸಮೂಹದ ಹಣಕಾಸು ಸಂಸ್ಥೆಯಾದ ಆಂಟ್ ಗ್ರೂಪ್ ಫೈನಾನ್ಷಿಯಲ್ ಹಾಂಕಾಂಗ್ ಹಾಗೂ ಶಾಂಘೈನಲ್ಲಿ ಲಿಸ್ಟಿಂಗ್ ಆಗುವುದರಲ್ಲಿತ್ತು. ಆದರೆ ಚೀನಾದ ನಿಯಂತ್ರಕರು ಅದಕ್ಕೆ ತಡೆ ಹಾಕಿದರು. ಹತ್ತಾರು ಕೋಟಿ ಚೀನಿಯರ ಹಣಕಾಸು ಅಗತ್ಯಗಳಿಗೆ ಈ ಸಂಸ್ಥೆ ಎಲ್ಲಿ ಪರಿಷ್ಕರಣೆಯ ರೀತಿ ಕಂಡುಬರುತ್ತದೋ ಎಂಬ ಆತಂಕ ಚೀನಾದ ಬ್ಯಾಂಕಿಂಗ್ ವಲಯದಲ್ಲಿತ್ತು ಎಂಬುದು ಚರ್ಚೆಯಾಯಿತು. ಸಾರ್ವಜನಿಕ ಜೀವನದಲ್ಲಿ ಜಾಕ್ ಮಾಗೆ ಬಿದ್ದ ಭರ್ತಿ ಪೆಟ್ಟು ಅದಾಯಿತು. ಆ ನಂತರ ಸುದ್ದಿ ಕೇಂದ್ರದಿಂದಲೇ ಜಾಕ್ ಮಾ ದೂರ ಉಳಿದುಬಿಟ್ಟರು. ಇದೀಗ ಗುರುವಾರದಂದು ಚೀನಾ ಕಮ್ಯುನಿಸ್ಟ್ ಸರ್ಕಾರವು ಜಾಕ್ ಮಾಗೆ ಮತ್ತೊಂದು ಶಾಕ್ ನೀಡಿದೆ. ಅಲಿಬಾಬ ವಿರುದ್ಧ ಏಕಸ್ವಾಮ್ಯ ವಿರೋಧಿ ತನಿಖೆಗೆ ಆದೇಶ ನೀಡಿದೆ. ಆಂಟ್ ಸಮೂಹಕ್ಕೆ ನಿಯಂತ್ರಕರಿಂದ ನೋಟಿಸ್ ಬಂದಿದೆ.

ಹೇಗಿದ್ದರು ಜಾಕ್ ಮಾ?
ಒಂದು ಕಾಲಕ್ಕೆ ಹಣವೇ ಇಲ್ಲದೆ ಹತ್ತಾರು ಕೆಲಸ ಮಾಡಿಕೊಂಡು, ಆ ನಂತರ ಇಂಗ್ಲಿಷ್ ಹೇಳಿಕೊಡುವ ಶಿಕ್ಷಕ ಆಗಿದ್ದ ವ್ಯಕ್ತಿ ಜಾಕ್ ಮಾ. 1990ರ ದಶಕದಲ್ಲಿ ಹೀಗೇ ಯಾರೋ ಒಬ್ಬರು ಆತನಿಗೆ ಇಂಟರ್ ನೆಟ್ ಅನ್ನೋದನ್ನು ತೋರಿಸಿಕೊಟ್ಟರು. ಅಲ್ಲಿಂದ ಆತ ಮುಂದೆ ಇಟ್ಟ ಹೆಜ್ಜೆಗಳು ವಾಮನನನ್ನು ತ್ರಿವಿಕ್ರಮನನ್ನಾಗಿಸಿತು. 1999ರಲ್ಲಿ ಸ್ನೇಹಿತರೆಲ್ಲ ನೀಡಿದ 60,000 USD ಹಣದಿಂದ ಇಂದಿನ ಅಗಾಧ ಸಾಮ್ರಾಜ್ಯವನ್ನು ಆತ ಕಟ್ಟಿ ನಿಲ್ಲಿಸಿದ್ದಾರೆ. ಆತ ಇ-ಕಾಮರ್ಸ್ ವ್ಯವಹಾರ ಶುರು ಮಾಡಿದ್ದು ಹಂಗ್ಝೌನಲ್ಲಿನ ತನ್ನ ಮನೆಯ ಮಲಗುವ ಕೋಣೆಯಿಂದ. ಆ ನಂತರ ಆನ್ ಲೈನ್ ಶಾಪಿಂಗ್ ಕ್ರಾಂತಿಗೆ ಅದು ಕಾರಣವಾಯಿತು.

ಶಾಪಿಂಗ್ ಹವ್ಯಾಸವನ್ನೇ ಬದಲಿಸಿತು
ಕೋಟ್ಯಂತರ ಚೀನೀಯರ ಖರೀದಿ ಹವ್ಯಾಸವನ್ನೇ ಬದಲಿಸಿತು ಈ ಕಂಪೆನಿ. ಜಾಕ್ ಮಾ ಅವರು ಜಾಗತಿಕ ಮಟ್ಟದಲ್ಲಿ ಹೆಸರಾದರು. "ನಾನು ಮೊದಲ ಸಲ ಇಂಟರ್ ನೆಟ್ ಬಳಸಿದಾಗ, ನಾನು ಕೀ ಬೋರ್ಡ್ ಮುಟ್ಟಿದ್ದಾಗ ಮತ್ತು ನನಗೆ ಗೊತ್ತಾಯೊತು, ಇದನ್ನು ನಂಬಬೇಕು. ಇದು ಜಗತ್ತನ್ನೇ ಬದಲಾಯಿಸಲಿದೆ ಮತ್ತು ಚೀನಾವನ್ನು ಬದಲಿಸಲಿದೆ ಎಂದುಕೊಂಡಿದ್ದೆ," ಎಂದು ಸಿಎನ್ ಎನ್ ಜತೆಗಿನ ಸಂದರ್ಶನದಲ್ಲಿ ಒಮ್ಮೆ ಜಾಕ್ ಮಾ ಹೇಳಿದ್ದರು. 2014ರಲ್ಲಿ ಅಲಿಬಾಬ ನ್ಯೂಯಾರ್ಕ್ ನಲ್ಲಿ ವಿಶ್ವದಾಖಲೆಯ 2500 ಕೋಟಿ ಡಾಲರ್ ಆಫರಿಂಗ್ ಗೆ ಲಿಸ್ಟ್ ಆಯಿತು. ಆಂಟ್ ಸಮೂಹದಲ್ಲಿ ಜಾಕ್ ಮಾ ಅತಿ ದೊಡ್ಡ ಪಾಲುದಾರರು. ಅದೀಗ ವಿಶ್ವದ ಅತಿ ದೊಡ್ಡ ಡಿಜಿಟಲ್ ಪೇಮೆಂಟ್ ಪ್ಲಾಟ್ ಫಾರ್ಮ್. Alipay ಅಪ್ಲಿಕೇಷನ್ ನಲ್ಲಿ 73.1 ಕೋಟಿ ಒಂದು ತಿಂಗಳಿಗೆ ಬಳಕೆದಾರರಿದ್ದಾರೆ.

ಜಾಕ್ ಮಾ ಕಮ್ಯುನಿಸ್ಟ್ ಪಕ್ಷದ ಸದಸ್ಯ
ಆದರೆ, ಸಾಮಾನ್ಯ ಚೀನಿಯರ ಜೇಬಿಗೂ ಅದು ತಲುಪುತ್ತಿದ್ದಂತೆ ಆತಂಕ ಶುರುವಾಯಿತು. ಕಿರು ಸಾಲ ಯೋಜನೆ, ಹೂಡಿಕೆ ಮತ್ತು ಇನ್ಷೂರೆನ್ಸ್ ಪ್ರಾಡಕ್ಟ್ ಗಳ ಮೂಲಕ ಅದು ಜನಪ್ರಿಯವಾಯಿತು. ಜಾಕ್ ಮಾ ದಯಾಳು ಹಾಗೂ ಅಸಾಂಪ್ರಾದಾಯಿಕವಾದ ಶತಕೋಟ್ಯಧಿಪತಿ ಎಂಬ ಇಮೇಜ್ ತಂದುಕೊಟ್ಟಿದೆ. ಜತೆಗೆ ಆತನ ದಾನ ಗುಣವೂ ಸೇರಿಕೊಂಡು ಜನಪ್ರಿಯ ಮಾಡಿದೆ. ಆದರೆ, ಚೀನಾದ ಹಣಕಾಸು ವ್ಯವಸ್ಥೆಯ ಬಗ್ಗೆಯೇ ಜಾಕ್ ಮಾ ಆಗಾಗ ವಿಮರ್ಶೆ ಮಾಡುತ್ತಿದ್ದರು. ಆದರೆ ಯಾವಾಗ ಪೀಪಲ್ಸ್ ಡೈಲಿ ಎಂಬ ಸರ್ಕಾರದ ಒಡೆತನದ ಪತ್ರಿಕೆಯು "ಜಾಕ್ ಮಾ ಕಮ್ಯುನಿಸ್ಟ್ ಪಕ್ಷದ ಸದಸ್ಯ" ಎಂಬುದನ್ನು ಬಯಲು ಮಾಡಿತೋ ಎಲ್ಲರ ಹುಬ್ಬೇರುವಂತೆ ಆಯಿತು. ಏಕೆಂದರೆ ಆ ಬಗ್ಗೆ ಜಾಕ್ ಮಾ ಒಂದಕ್ಷರ ಮಾತನಾಡಿರಲಿಲ್ಲ. ಸರ್ಕಾರದ ಜತೆಗೆ ಲವ್ ಇರಬೇಕೇ ಹೊರತು, ಮದುವೆ ಆಗಬಾರದು ಎಂದಿದ್ದ ವ್ಯಕ್ತಿಯ ಸಿದ್ಧಾಂತವನ್ನು ಚೀನೀಯರು ನೆನಪಿಸಿಕೊಳ್ಳುತ್ತಿದ್ದಾರೆ. ಜಾಕ್ ಮಾ ಮುಂದೆ ದೊಡ್ಡ ಸವಾಲಿದೆ. ಸಂಬಂಧಗಳು ಸುಧಾರಿಸಬೇಕಿದೆ.