For Quick Alerts
ALLOW NOTIFICATIONS  
For Daily Alerts

ಮುಕೇಶ್ ಅಂಬಾನಿ ಆಸ್ತಿ ಕೊರೊನಾ ಬಿಕ್ಕಟ್ಟಿನ ಮಧ್ಯೆ ಹೆಚ್ಚಾಗಿದ್ದರ ಗುಟ್ಟೇನು ಗೊತ್ತಾ?

|

"Antilia" ಎಂಬ ಪದವನ್ನು ಗೂಗಲ್ ನಲ್ಲಿ ನಮೂದಿಸಿದರೆ 12,10,000 ಫಲಿತಾಂಶವನ್ನು ತೋರಿಸುತ್ತದೆ. ಇದು ವಿಶ್ವದ ನಾಲ್ಕನೇ ಶ್ರೀಮಂತ ಮುಕೇಶ್ ಅಂಬಾನಿ ತಮ್ಮ ಐಷಾರಾಮಿ ಬಂಗಲೆಗೆ ಇಟ್ಟಿರುವ ಹೆಸರು. ಈ ಬಂಗಲೆ ಬಗ್ಗೆಯೇ ಬರೆದರೂ ಒಂದು ಪುಸ್ತಕಕ್ಕಾಗುವಷ್ಟು ಮಾಹಿತಿ ಸಿಗುತ್ತದೆ. ಅಷ್ಟೇ ಇಲ್ಲ, ನೀವು ಈ ಸುದ್ದಿಯನ್ನು ಓದುತ್ತಿರುವ ಹೊತ್ತಿಗೇ ವಿಶ್ವದ ನಾಲ್ಕನೆ ಅತ್ಯಂತ ಶ್ರೀಮಂತ ಮುಕೇಶ್ ಒಂದು ಮೆಟ್ಟಿಲು ಮೇಲೇರಿ ಮೂರನೇ ಸ್ಥಾನದಲ್ಲಿ ನಿಂತಿದ್ದರೂ ಅಚ್ಚರಿ ಇಲ್ಲ.

ಇಲ್ಲಿ ಮುಕೇಶ್ ರ ಪರಮ ದುಬಾರಿ ಬಂಗಲೆ ಬಗ್ಗೆಯೇ ಮೊದಲಿಗೆ ಏಕೆ ಪ್ರಸ್ತಾವ ಮಾಡಬೇಕಾಯಿತು ಅಂದರೆ, ಅದರ ಮೌಲ್ಯವೇ ಹತ್ತಾರು ಸಾವಿರ ಕೋಟಿ ರುಪಾಯಿ ಆಗುತ್ತದೆ. ಇನ್ನು ಮುಕೇಶ್ ಆಸ್ತಿಯ ಮೌಲ್ಯ 8060 ಕೋಟಿ ಅಮೆರಿಕನ್ ಡಾಲರ್ ಎಂದು ಬ್ಲೂಮ್ ಬರ್ಗ್ ಲೆಕ್ಕವೊಂದನ್ನು ಮುಂದಿಟ್ಟಿದೆ. ಭಾರತದ ರುಪಾಯಿ ಲೆಕ್ಕದಲ್ಲಿ 6,04,500 ಕೋಟಿ ಆಗುತ್ತದೆ. ನೀವು ಸರಿಯಾಗಿ ಓದುತ್ತಿದ್ದೀರಿ. 6.04 ಲಕ್ಷ ಕೋಟಿ ರುಪಾಯಿ.

 

ಕರ್ನಾಟಕ ರಾಜ್ಯದ ಮೂರು ವರ್ಷದ ಬಜೆಟ್ ಇದಕ್ಕೆ ಸಮವಾಗುತ್ತದೆ. ಕರ್ನಾಟಕಕ್ಕೆ ಯಾವುದೇ ಆದಾಯ ಇಲ್ಲದಿದ್ದರೂ ಮುಕೇಶ್ ಅಂಬಾನಿ ಮೂರು ವರ್ಷ ರಾಜ್ಯಭಾರ ನಡೆಸಿಬಿಡಬಹುದು. ಅಷ್ಟು ಹಣ ಅವರ ಬಳಿ ಇದೆ ಎಂಬುದು ಸರಳ ಲೆಕ್ಕಾಚಾರದ ವಿವರಣೆ. ಅದೂ ಕೊರೊನಾದಿಂದ ಇಡೀ ಜಗತ್ತು ತತ್ತರಿಸಿ, ಹಣ ಹಣ ಎಂದು ಜ್ವರ ಬಂದಂತೆ ಕನವರಿಸುತ್ತಿರುವ ವೇಳೆಯಲ್ಲೇ ಈ ವ್ಯಕ್ತಿ ಇಷ್ಟು ಶ್ರೀಮಂತ ಆಗಿದ್ದು ಹೇಗೆ ಗೊತ್ತಾ?

ಮುಕೇಶ್ ಅಂಬಾನಿ ಈಗ ವಿಶ್ವದ 4ನೇ ಅತಿದೊಡ್ಡ ಶ್ರೀಮಂತ

ವಿಶ್ವದ ಹದಿಮೂರು- ಹದಿನಾಲ್ಕನೇ ಶ್ರೀಮಂತ ಎಂಬ ಲೆಕ್ಕದಲ್ಲಿ ಇದ್ದವರು ದೊಡ್ಡ ಜಿಗಿತ ಕಂಡು ನಾಲ್ಕರಲ್ಲಿ ಬಂದು ಕೂತಿದ್ದು ಹೇಗೆ ಎಂಬುದು ಹಲವರಿಗೆ ಯಕ್ಷ ಪ್ರಶ್ನೆಯಾಗಿಯೇ ಉಳಿದಿರಬಹುದು. ಅದನ್ನು ಈ ಲೇಖನದಲ್ಲಿ ವಿವರಿಸಲಾಗುತ್ತದೆ. ಸಾಧ್ಯವಾದಷ್ಟೂ ಸರಳವಾಗಿ ಹಾಗೂ ಸುಲಭವಾಗಿ ತಿಳಿಸಲಾಗುತ್ತದೆ.

ರಿಲಯನ್ಸ್ ಇಂಡಸ್ಟ್ರೀಸ್ ನಲ್ಲಿ ಮುಕೇಶ್ ಕುಟುಂಬದ ಪಾಲು 49.14%

ರಿಲಯನ್ಸ್ ಇಂಡಸ್ಟ್ರೀಸ್ ನಲ್ಲಿ ಮುಕೇಶ್ ಕುಟುಂಬದ ಪಾಲು 49.14%

ಮುಕೇಶ್ ಅಂಬಾನಿ ಅವರದು ರಿಲಯನ್ಸ್ ಇಂಡಸ್ಟ್ರೀಸ್ ಕಂಪೆನಿಯಲ್ಲಿ ಎಷ್ಟು ಷೇರಿದೆ ಎಂಬುದು ನಿಮಗೆ ಮೊದಲು ಗೊತ್ತಾಗಬೇಕು. ಈಚೆಗೆ ರಿಲಯನ್ಸ್ ನಿಂದ ಹಕ್ಕಿನ ಷೇರು (ರೈಟ್ಸ್ ಇಶ್ಯೂ) ವಿತರಿಸಲಾಯಿತಲ್ಲಾ, ಆ ಸಮಯಕ್ಕೆ ಮುಕೇಶ್ ಕಂಪೆನಿಯಲ್ಲಿನ ಷೇರಿನ ಪ್ರಮಾಣವನ್ನು ಹನ್ನೆರಡು ವರ್ಷದಲ್ಲೇ ಗರಿಷ್ಠ ಮಟ್ಟವಾದ 49.14%ಗೆ ಹೆಚ್ಚಿಸಿಕೊಂಡರು. 53,124 ಕೋಟಿ ಮೌಲ್ಯದ ರೈಟ್ಸ್ ಇಶ್ಯೂನಲ್ಲಿ ಅಂಬಾನಿ ಮತ್ತು ಕುಟುಂಬದವರು ಪ್ರವರ್ತಕರಾಗಿ, ಹೂಡಿಕೆ ಮಾಡಲು ಒಪ್ಪಿಕೊಂಡಿದ್ದದ್ದು 28,286 ಕೋಟಿ ರುಪಾಯಿ. ಅಂದರೆ 22.5 ಕೋಟಿ ಷೇರುಗಳನ್ನು ಆ ಕುಟುಂಬದವರೇ ಸಬ್ ಸ್ಕ್ರೈಬ್ ಮಾಡಿಕೊಂಡರು. ಸದ್ಯಕ್ಕೆ ಕಂಪೆನಿಯ ಪ್ರವರ್ತಕರಾಗಿರುವ ಮುಕೇಶ್ ಕುಟುಂಬದ ಪಾಲು 49.14% ಇದ್ದರೆ, ಸಾರ್ವಜನಿಕರು ಕಂಪೆನಿಯಲ್ಲಿ ಹೊಂದಿರುವ ಷೇರು 51.86% ಇದೆ.

ಫೇಸ್ ಬುಕ್ ಹೂಡಿಕೆಯಿಂದ ಶುರುವಾದ ಏರಿಕೆ
 

ಫೇಸ್ ಬುಕ್ ಹೂಡಿಕೆಯಿಂದ ಶುರುವಾದ ಏರಿಕೆ

ಭಾರತದಲ್ಲಿ ಕೊರೊನಾ ಬಿಕ್ಕಟ್ಟಿನ ಕಾರಣಕ್ಕೆ ಲಾಕ್ ಡೌನ್ ಘೋಷಣೆ ಮಾಡಿದ್ದು ಮಾರ್ಚ್ ತಿಂಗಳ ಕೊನೆ ವಾರದಲ್ಲಿ. ಅದೇ ಸಮಯದಲ್ಲಿ ರಿಲಯನ್ಸ್ ಕಂಪೆನಿಯ ಷೇರು ವಾರ್ಷಿಕ ಕನಿಷ್ಠ ಮಟ್ಟವಾದ 867.45 ರುಪಾಯಿ ತಲುಪಿತು. ಆ ನಂತರ ಏಪ್ರಿಲ್ ನಲ್ಲಿ ಫೇಸ್ ಬುಕ್ ನಿಂದ ಜಿಯೋ ಡಿಜಿಟಲ್ ನಲ್ಲಿ ಹೂಡಿಕೆ ಆಯಿತು. ರಿಲಯನ್ಸ್ ಇಂಡಸ್ಟ್ರೀಸ್ ಕಂಪೆನಿಯನ್ನು ಸಾಲಮುಕ್ತ ಕಂಪೆನಿ ಮಾಡುವ ಮುಕೇಶ್ ಆಸೆಗೆ ಆರಂಭ ಆಗಿದ್ದು ಅಲ್ಲಿಂದ. ಅದಾದ ಮೇಲೆ ಜಾಗತಿಕ ಮಟ್ಟದ ಹಲವಾರು ಕಂಪೆನಿಗಳು ಹೂಡಿಕೆ ಮಾಡಿದವು. ಜತೆಗೆ ರೈಟ್ಸ್ ಇಶ್ಯೂ ಮೂಲಕವೂ ಹಣ ಸಂಗ್ರಹಿಸಲಾಯಿತು. ಕೊನೆಗೆ ಕಳೆದ ಜೂನ್ ನಲ್ಲಿ, ಇನ್ನು 'ರಿಲಯನ್ಸ್ ಸಾಲಮುಕ್ತ' ಕಂಪೆನಿ ಎಂದು ಘೋಷಿಸಲಾಯಿತು. ಯಾವಾಗ ಬಂಡವಾಳ ಹರಿದುಬಂತೋ ರಿಲಯನ್ಸ್ ಇಂಡಸ್ಟ್ರೀಸ್ ಬೆಳವಣಿಗೆ ಅಗಾಧವಾಗಿದೆ ಎಂಬುದು ಗೊತ್ತಾಗುತ್ತಾ ಹೋಯಿತು.

ಸೌದಿ ಅರಾಮ್ಕೋ ವ್ಯವಹಾರವೂ ಆಗಬಹುದು

ಸೌದಿ ಅರಾಮ್ಕೋ ವ್ಯವಹಾರವೂ ಆಗಬಹುದು

867 ರುಪಾಯಿ ಇದ್ದ ಷೇರಿನ ಬೆಲೆ ಆಗಸ್ಟ್ 10ನೇ ತಾರೀಕಿಗೆ ಮಧ್ಯಾಹ್ನ 12.10ರ ಹೊತ್ತಿಗೆ 2147.70 ರುಪಾಯಿ ಇದೆ. ಇನ್ನು ಮಾರುಕಟ್ಟೆ ಬಂಡವಾಳ ಮೌಲ್ಯ 14,58,496.10 ಕೋಟಿ ಇದೆ. ಅಂದರೆ 14.58 ಲಕ್ಷ ಕೋಟಿ ರುಪಾಯಿ. ಈ ಮೊತ್ತದಲ್ಲಿ ಸಾರ್ವಜನಿಕರ ಪಾಲು ಶೇಕಡಾ 51.86% ಇದ್ದರೆ, ಮುಕೇಶ್ ಅಂಬಾನಿ ಮತ್ತವರ ಕುಟುಂಬದ ಪಾಲು 49.14%. ಕೊರೊನಾ ಇರುವ ವೇಳೆಯೇ ರಿಲಯನ್ಸ್ ಇಂಡಸ್ಟ್ರೀಸ್ ಗೆ ಒಂದು ಲಕ್ಷ ಕೋಟಿಗೂ ಹೆಚ್ಚು ಮೊತ್ತದ ಬಂಡವಾಳ ಜಿಯೋ ಡಿಜಿಟಲ್ ಹೂಡಿಕೆ ರೂಪದಲ್ಲಿ ಹರಿದುಬಂತು. ಕಂಪೆನಿಯ ಬೆಳವಣಿಗೆ ಹಾಗೂ ಭವಿಷ್ಯದ ದೃಷ್ಟಿಯಿಂದ ಇದು ಉತ್ತಮ ಬೆಳವಣಿಗೆ. ಇನ್ನು ಕಂಪೆನಿಯ ರಿಫೈನರಿಯಿಂದ ಕೆಮಿಕಲ್ ವ್ಯವಹಾರದ ತನಕ ಎಲ್ಲದರಲ್ಲೂ ಶೇಕಡಾ ಇಪ್ಪತ್ತರಷ್ಟು ಷೇರು ಖರೀದಿಗೆ ಸೌದಿ ಅರಾಮ್ಕೋ ವ್ಯವಹಾರ ಯಾವುದೇ ಸಮಯದಲ್ಲಿ ಅಂತಿಮ ಆಗಬಹುದು. ಅದರಿಂದ 1500 ಕೋಟಿ ಅಮೆರಿಕನ್ ಡಾಲರ್ ಬರಲಿದೆ. ಅಂದರೆ, ಸುಮಾರು 1.12 ಲಕ್ಷ ಕೋಟಿ ರುಪಾಯಿ.

ಎಲ್ಲ ಕ್ಷೇತ್ರದಲ್ಲೂ ಇದೆ ರಿಲಯನ್ಸ್

ಎಲ್ಲ ಕ್ಷೇತ್ರದಲ್ಲೂ ಇದೆ ರಿಲಯನ್ಸ್

ಇದರ ಜತೆಗೆ ರಿಲಯನ್ಸ್ ರೀಟೇಲ್ ವ್ಯವಹಾರವೂ ವಿಸ್ತರಣೆ ಹಾದಿಯಲ್ಲಿದ್ದು, ಅದಕ್ಕೂ ಜಾಗತಿಕ ಮಟ್ಟದ ಕಂಪೆನಿಗಳಿಂದ ಬಂಡವಾಳ ಹರಿದುಬರಲಿದೆ. ಇಂಟರ್ನೆಟ್ ಇರಲಿ, ರೀಟೇಲ್ ಇರಲಿ ಭಾರತವು ವಿಶ್ವದಲ್ಲೇ ಅತಿ ದೊಡ್ಡ ಮಾರುಕಟ್ಟೆ. ರಿಲಯನ್ಸ್ ಇಲ್ಲದ ಅಥವಾ ನಡೆಸದ ವ್ಯವಹಾರವೇ ಇಲ್ಲ. ಅಂಥದ್ದರಲ್ಲಿ ವಿಶ್ವ ಮಟ್ಟದ ಕಂಪೆನಿಗಳು ಜತೆಯಾಗಿ, ಬಂಡವಾಳವೂ ಸಿಕ್ಕಲ್ಲಿ ಇನ್ಯಾವ ಪರಿಯಲ್ಲಿ ಬೆಳೆಯಬಹುದು?! ಈ ನಿರೀಕ್ಷೆಯಿಂದಲೇ ರಿಲಯನ್ಸ್ ಇಂಡಸ್ಟ್ರೀಸ್ ಷೇರಿನ ಮೇಲೆ ಖರೀದಿದಾರರ ಆಸಕ್ತಿ ಜಾಸ್ತಿ ಆಗುತ್ತಿದೆ. ಕಂಪೆನಿಯಲ್ಲಿ ಅತಿ ದೊಡ್ಡ ಷೇರಿನ ಪಾಲನ್ನು ಹೊಂದಿರುವ ಮುಕೇಶ್ ಆಸ್ತಿ ಪ್ರಮಾಣವೂ ಹೆಚ್ಚಾಗುತ್ತಿದೆ. ಇನ್ನೊಂದು ವಿಚಾರ, ವಿಶ್ವದ ಶ್ರೀಮಂತರ ಪಟ್ಟಿ ಎಂದು ಮಾಡುವುದು ಅವರ ಬಳಿ ಇಷ್ಟು ನಗದು ಇದೆ ಎಂದಲ್ಲ. ಬಹುತೇಕ ಅವರು ಹೊಂದಿರುವ ಕಂಪೆನಿಗಳ ಷೇರಿನ ಲೆಕ್ಕಾಚಾರದ ಮೇಲೆ.

ಅಂದಾಜು ಆಸ್ತಿ ಮೌಲ್ಯ ಮಾತ್ರ, ನಿಖರವಾದ ಸಂಖ್ಯೆ ಅಲ್ಲ

ಅಂದಾಜು ಆಸ್ತಿ ಮೌಲ್ಯ ಮಾತ್ರ, ನಿಖರವಾದ ಸಂಖ್ಯೆ ಅಲ್ಲ

ಆ ಕಾರಣಕ್ಕೆ ಷೇರು ಮಾರುಕಟ್ಟೆ ಭಾರೀ ಕುಸಿತ ಕಂಡರೆ ಅವರ ಆಸ್ತಿಯಲ್ಲೂ ಇಳಿಕೆ ಆಗುತ್ತದೆ. ಅದೇ ರೀತಿ ಷೇರಿನ ಬೆಲೆಯಲ್ಲಿ ಏರಿಕೆ ಆದಾಗ ಆಸ್ತಿ ಹೆಚ್ಚಾಗುತ್ತದೆ. ಇನ್ನು 'ನಿವ್ವಳ ಆಸ್ತಿ' ಎನ್ನಲಾಗುತ್ತದೆ. ಹಾಗಂದರೆ, ಅವರ ಒಟ್ಟು ಆಸ್ತಿಯಿಂದ ಸಾಲದ ಮೊತ್ತವನ್ನು ಕಳೆದ ಮೇಲೆ ಉಳಿಯುವಂಥದ್ದು. ರಿಲಯನ್ಸ್ ಇಂಡಸ್ಟ್ರೀಸ್ ಷೇರಿನ ಮೌಲ್ಯ ಒಂದು ರುಪಾಯಿ ಜಾಸ್ತಿ ಆದರೂ ಮುಕೇಶ್ ಆಸ್ತಿ ಅದೆಷ್ಟೋ ಲಕ್ಷ ಜಾಸ್ತಿ ಆಗುತ್ತದೆ. ಉದಾಹರಣೆಗೆ, ರಿಲಯನ್ಸ್ ಷೇರಿನ ಬೆಲೆ 1162 ರುಪಾಯಿಯಿಂದ 1288.30 ರು.ಗೆ ಏರಿಕೆ ಆದಾಗ ಅವರ ಆಸ್ತಿಗೆ 28,684 ಕೋಟಿ ರುಪಾಯಿ ಸೇರ್ಪಡೆ ಆಗಿತ್ತು. ಇದರ ಜತೆಗೆ ರಿಲಯನ್ಸ್ ಅಧ್ಯಕ್ಷರಾಗಿ ವೇತನ, ಇತರ ಹೂಡಿಕೆ ಹಾಗೂ ಅವುಗಳ ಮೇಲೆ ಲಾಭಾಂಶ, ಬಂಗಲೆ, ಷೇರುಗಳ ಮೇಲಿನ ಲಾಭಾಂಶ, ಇತರ ವ್ಯವಹಾರಗಳು ಎಲ್ಲವೂ ಸೇರಿ ಅಂಬಾನಿ ಆಸ್ತಿಯನ್ನು ಅಂದಾಜು ಮಾಡಲಾಗುತ್ತದೆ. ನೆನಪಿರಲಿ, ಇದು ಅಂದಾಜು ಹೊರತು ಅಂತಿಮ ಅಲ್ಲ. ಈ ಮಾತು ವಿಶ್ವದ ಎಲ್ಲ ಶ್ರೀಮಂತರಿಗೂ ಅನ್ವಯ ಆಗುತ್ತದೆ.

English summary

How Mukesh Ambani Become World's 4th Richest Amidst Corona Crisis?

Reliance Industries chairman Mukesh Ambani how become world's 4th richest amidst corona crisis? Here is an explainer.
Company Search
COVID-19