ಐಟಿ ಪೋರ್ಟಲ್ನ ಶೇ. 90 ರಷ್ಟು ತಾಂತ್ರಿಕ ದೋಷ ಸರಿಪಡಿಸಿದ ಇನ್ಫೋಸಿಸ್: ವರದಿ
ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಮಾಡುವ ಪೋರ್ಟಲ್ನಲ್ಲಿ ಹಲವಾರು ತಾಂತ್ರಿಕ ದೋಷಗಳು ಕಂಡುಬರುತ್ತಿದ್ದವು. ಈ ನಿಟ್ಟಿನಲ್ಲಿ ಆದಾಯ ತೆರಿಗೆ ರಿಟರ್ನ್ ಸಲ್ಲಿಸುವವರು ಭಾರೀ ಕಷ್ಟಕ್ಕೆ ಒಳಗಾಗುತ್ತಿದ್ದರು. ಆದರೆ ಈ ಐಟಿ ಪೋರ್ಟಲ್ನ ಶೇಕಡ 90 ರಷ್ಟು ತಾಂತ್ರಿಕ ದೋಷವನ್ನು ಈ ಪೋರ್ಟಲ್ನ ನಿರ್ವಹಣೆ ಮಾಡುತ್ತಿರುವ ಇನ್ಫೋಸಿಸ್ ಸರಿಪಡಿಸಿದೆ ಎಂದು ಸಿಎನ್ಬಿಸಿಟಿವಿ-18 ವರದಿ ಮಾಡಿದೆ.
"ಪ್ರಸ್ತುತ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಯ ಇ-ಪೋರ್ಟಲ್ ಸರಿಯಾಗಿ ಕಾರ್ಯ ನಿರ್ವಹಣೆ ಮಾಡಲು ಆರಂಭ ಮಾಡಿದೆ. ತಾಂತ್ರಿಕ ದೋಷವನ್ನು ಶೇಕಡ 90 ರಷ್ಟು ಸರಿಪಡಿಸಲಾಗಿದೆ. ಆದಾಯ ತೆರಿಗೆ ಪಾವತಿ ಮಾಡುವವರು ರಿಟರ್ನ್ ಅನ್ನು ಸಲ್ಲಿಕೆ ಮಾಡುವ ಕಾರ್ಯವನ್ನು ಆರಂಭ ಮಾಡಬಹುದು," ಎಂದು ಉಲ್ಲೇಖ ಮಾಡಲಾಗಿದೆ. ಹಾಗೆಯೇ ಇನ್ನುಳಿದ ತಾಂತ್ರಿಕ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಇನ್ಫೋಸಿಸ್ ಕಾರ್ಯ ನಿರ್ವಹಣೆ ಮಾಡುತ್ತಿದೆ ಎಂದು ಕೂಡಾ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.
ಐಟಿ ರಿಟರ್ನ್ ಸಲ್ಲಿಸುವಾಗ ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ..
ಆದರೆ ಈ ಬಗ್ಗೆ ಯಾವುದೇ ಅಧಿಕೃತ ಸ್ಪಷ್ಟನೆಗಳು ಬಂದಿಲ್ಲ. ಚಾರ್ಟರ್ಡ್ ಅಕೌಂಟೆಂಟ್ಸ್ಗಳು ಈ ವರದಿಯನ್ನು ಅಲ್ಲಗಳೆದಿದ್ದಾರೆ. ಪೋರ್ಟಲ್ ಈಗಲೂ ಕೂಡಾ ಸರಿಯಾಗಿ ಕಾರ್ಯ ನಿರ್ವಹಣೆ ಮಾಡುತ್ತಿಲ್ಲ. ಬಳಕೆದಾರರಿಗೆ ಒಟಿಪಿಯು ದೊರೆಯುತ್ತಿಲ್ಲ. ಅಧಿಕೃತ ಪ್ರತಿನಿಧಿಯನ್ನು ನಾಮನಿರ್ದೇಶನ ಮಾಡಲಾಗುತ್ತಿಲ್ಲ. ಹಲವಾರು ದೋಷಗಳು ಇನ್ನೂ ಕೂಡಾ ಈ ಐಟಿ ಪೋರ್ಟಲ್ನಲ್ಲಿ ಇದೆ ಎಂದು ಹೆಸರು ಹೇಳಲು ಬಯಸದ ಚಾರ್ಟರ್ಡ್ ಅಕೌಂಟೆಂಟ್ ಒಬ್ಬರು ಹೇಳಿದ್ದಾರೆ.

ಹಳೆಯ ಐಟಿ ಪೋರ್ಟಲ್ ಬದಲಿಗೆ ಹೊಸ ಐಟಿ ಪೋರ್ಟಲ್ ಅನ್ನು ಅಭಿವೃದ್ದಿ ಮಾಡುವ ಒಪ್ಪಂದವನ್ನು 2019 ರಲ್ಲಿ ಇನ್ಫೋಸಿಸ್ ಮಾಡಿಕೊಂಡಿದೆ. ಒಟ್ಟು 4,200 ಕೋಟಿ ರೂ.ಗಳಿಗೆ ಸಂಸ್ಕರಣೆಯ ಸಮಯವನ್ನು 63 ದಿನಗಳಿಂದ ಒಂದು ದಿನಕ್ಕೆ ಇಳಿಸುವ ಗುರಿ ಹೊಂದಿತ್ತು. ಆದರೆ ಇದು ಜೂನ್ 7, 2021 ರಂದು ಪ್ರಾರಂಭವಾದ ಕೆಲವೇ ದಿನಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಅದು ಕೂಡಾ ಈ ಸಂದರ್ಭವು ತೆರಿಗೆ ಪಾವತಿಯ ಸಂದರ್ಭವಾಗಿತ್ತು. ಆದ್ದರಿಂದಾಗಿ ಹಲವಾರು ತೊಂದರೆ ಉಂಟಾಗಿದೆ.
ಈ ಹಿನ್ನೆಲೆಯಿಂದಾಗಿ ಈ ಪೋರ್ಟಲ್ ವಿರುದ್ಧ ಜನರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಯಾವುದೇ ಪೋರ್ಟಲ್ ಆಗಿದ್ದರೂ ಜನರಿಗೆ ಸುಲಭವಾಗಿ ಅರ್ಥ ಮಾಡಲು ಸಾಧ್ಯವಾಗುವ ವ್ಯವಸ್ಥೆ, ವಿನ್ಯಾಸವನ್ನು ಹೊಂದಿರಬೇಕು. ಆದರೆ ಈ ಪೋರ್ಟಲ್ ಬಹಳ ಕ್ಲಿಷ್ಟವಾಗಿದೆ ಹಾಗೂ ಹಲವಾರು ತಾಂತ್ರಿಕ ದೋಷವನ್ನು ಹೊಂದಿದೆ ಎಂದು ಚಾರ್ಟರ್ಡ್ ಅಕೌಂಟೆಂಟ್ಸ್ಗಳು ಆರೋಪ ಮಾಡಿದ್ದಾರೆ.
ಐಟಿ ಇ-ಪೋರ್ಟಲ್ನಲ್ಲಿ ಮುಂದುವರಿದ ತಾಂತ್ರಿಕ ದೋಷ: ಇನ್ಫೋಸಿಸ್ CEOಗೆ ಸಮನ್ಸ್ ನೀಡಿದ FM
ಇನ್ಫೋಸಿಸ್ಗೆ ಸಮನ್ಸ್ ನೀಡಿದ್ದ ಕೇಂದ್ರ ಹಣಕಾಸು ಸಚಿವಾಲಯ
ಇನ್ಫೋಸಿಸ್ ನಿರ್ವಹಣೆ ಮಾಡುವ ಈ ಹೊಸ ಪೋರ್ಟಲ್ ಜಾರಿ ಆದ ಕೆಲವೇ ಗಂಟೆಯಲ್ಲಿ ಟ್ವಿಟ್ಟರ್ನಲ್ಲಿ ತೆರಿಗೆ ವೃತ್ತಿಪರರು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಟ್ಯಾಗ್ ಮಾಡಿ, "ಪೋರ್ಟಲ್ ಕಾರ್ಯ ನಿರ್ವಹಣೆ ಮಾಡುತ್ತಿಲ್ಲ," ಎಂದು ದೂರಿದ್ದರು. ಒಂದು ದಿನದ ಬಳಿಕ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಈ ಸಮಸ್ಯೆಯ ಬಗ್ಗೆ ಪರಿಶೀಲನೆ ಮಾಡಿ, ಬಗೆಹರಿಸುವಂತೆ ಇನ್ಫೋಸಿಸ್ ಸಹ ಸಂಸ್ಥಾಪಕ ಮತ್ತು ಅಧ್ಯಕ್ಷ ನಂದನ್ ನಿಲೇಕಣಿಗೆ ಸೂಚನೆ ನೀಡಿದರು. ಈ ಸಮಸ್ಯೆಯು ಬಳಿಕವೂ ಬಗೆಹರಿಯದ ಕಾರಣದಿಂದಾಗಿ ಜೂನ್ 22 ರಂದು ಇನ್ಫೋಸಿಸ್ಗೆ ಕೇಂದ್ರ ಹಣಕಾಸು ಸಚಿವಾಲಯ ಸಮನ್ಸ್ ನೀಡಿದೆ.
ಇನ್ನು ಈ ಸಭೆಯನ್ನು ಇನ್ಫೋಸಿಸ್ ಸಿಇಒ ಸಲೀಲ್ ಪಾರೇಖ್ ವರ್ಚುವಲ್ ಆಗಿ ಹಾಗೂ ಇನ್ಫೋಸಿಸ್ ಸಿಒಒ ಪ್ರವೀಣ್ ರಾವ್ ವೈಯಕ್ತಿಕವಾಗಿ ಹಾಜರಾಗಿದ್ದರು. ಈ ಸಮಸ್ಯೆಯನ್ನು ತಂಡವು ಬಗೆಹರಿಸುತ್ತದೆ ಎಂದು ಈ ಸಂದರ್ಭದಲ್ಲಿ ಸಿಇಒ ಸಲೀಲ್ ಪಾರೇಖ್ ಹಾಗೂ ಸಿಒಒ ಪ್ರವೀಣ್ ರಾವ್ ಭರವಸೆಯನ್ನು ನೀಡಿದ್ದರು. ಬಳಿಕ ಆಗಸ್ಟ್ 23 ರಂದು ತಂಡವು ಮತ್ತೆ ಹಣಕಾಸು ಸಚಿವೆಯನ್ನು ಭೇಟಿಯಾಗಿದೆ. ಸೆಪ್ಟೆಂಬರ್ 15 ರ ಒಳಗೆ ಸಮಸ್ಯೆಯನ್ನು ಬಗೆಹರಿಸಲಾಗುತ್ತದೆ ಎಂದು ಆಶ್ವಾಸನೆ ನೀಡಿದೆ. ಈ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಸಂಸ್ಥೆಯು ಒಟ್ಟು 750 ಮಂದಿಯನ್ನು ನಿಯೋಜನೆ ಮಾಡಿದೆ ಎಂದು ಕೂಡಾ ಇನ್ಫೋಸಿಸ್ ಹೇಳಿಕೊಂಡಿದೆ. ಆದರೆ ಪೋರ್ಟಲ್ನಲ್ಲಿ ಯಾವ ಸಮಸ್ಯೆ ಉಂಟಾಗಿದೆ ಎಂಬ ಬಗ್ಗೆ ಈವರೆಗೂ ಯಾವುದೇ ಸರಿಯಾದ ಸ್ಪಷ್ಟನೆ ದೊರೆತಿಲ್ಲ.