ಫ್ಲಿಪ್ ಕಾರ್ಟ್ ವಿರುದ್ಧ 'ದಿವಾಳಿ' ಅರ್ಜಿ; 26 ಕೋಟಿ ಬಾಕಿಗೆ ಕೋರ್ಟ್ ಮೆಟ್ಟಿಲೇರಿದ ಸಾಲಗಾರರು
ಆನ್ ಲೈನ್ ವ್ಯವಹಾರದ ದೈತ್ಯ ಕಂಪೆನಿ ಫ್ಲಿಪ್ ಕಾರ್ಟ್ ವಿರುದ್ಧ ಅದರ ಆಪರೇಷನಲ್ ಸಾಲಗಾರರು (ಕಾರ್ಯ ನಿರ್ವಹಣೆಗಾಗಿ ಸಾಲ ನೀಡುವವರು) 'ದಿವಾಳಿ' (ಇನ್ ಸಾಲ್ವೆನ್ಸಿ) ಪ್ರಕರಣವನ್ನು ದಾಖಲಿಸಿದ್ದಾರೆ. ಫ್ಲಿಪ್ ಕಾರ್ಟ್ ನಿಂದ 26 ಕೋಟಿ ರುಪಾಯಿ ಬಾಕಿ ಬರಬೇಕಿತ್ತು ಎಂಬುದು ಆ ಸಾಲಗಾರರ ವಾದ.
ಫ್ಲಿಪ್ ಕಾರ್ಟ್ ವಿರುದ್ಧ ಕ್ಲೌಡ್ ವಾಕರ್ ಸ್ಟ್ರೀಮಿಂಗ್ ಟೆಕ್ನಾಲಜಿ ಸಲ್ಲಿಸಿದ ಅರ್ಜಿಯನ್ನು ಬೆಂಗಳೂರಿನ ನ್ಯಾಷನಲ್ ಕಂಪೆನಿ ಲಾ ಟ್ರಿಬ್ಯುನಲ್ ಸ್ವೀಕರಿಸಿದೆ. ಮತ್ತು ನ್ಯಾಯಮಂಡಳಿ ಆದೇಶದ ಮೇರೆಗೆ ದೀಪಕ್ ಸರುಪರಿಯ ಅವರನ್ನು ಮಧ್ಯಂತರವಾಗಿ ವೃತ್ತಿಪರ ಸಂಧಾನಕಾರರಾಗಿ ನೇಮಿಸಲಾಗಿದೆ.
ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ ಕಂಪನಿಗಳಿಗೆ ಸರ್ಕಾರದಿಂದ ಸಂಕಷ್ಟ!
ಕ್ಲೌಡ್ ವಾಕರ್ ಸ್ಟ್ರೀಮಿಂಗ್ ಟೆಕ್ನಾಲಜೀಸ್ ಎಲ್ ಇಡಿ ಟೀವಿಗಳನ್ನು ಆಮದು ಮಾಡಿಕೊಂಡು ಫ್ಲಿಪ್ ಕಾರ್ಟ್ ಇಂಡಿಯಾಗೆ ಪೂರೈಸಿದೆ. ಆರಂಭದಲ್ಲಿ ಕೆಲವು ಬ್ಯಾಚ್ ಎಲ್ ಇಡಿ ಟೀವಿಗಳನ್ನು ಖರೀದಿಸಿದ ಫ್ಲಿಪ್ ಕಾರ್ಟ್, ಆ ನಂತರ ಗೋದಾಮಿನಲ್ಲಿ ಸ್ಥಳಾವಕಾಶ ಇಲ್ಲ ಎಂಬ ಕಾರಣ ನೀಡಿ, ಡೆಲಿವರಿ ತೆಗೆದುಕೊಳ್ಳುವುದನ್ನು ತಡೆಯುತ್ತಾ ಬಂದಿದೆ. ಒಂದು ಹಂತದಲ್ಲಿ ನಿಲ್ಲಿಸಿಯೇ ಬಿಟ್ಟಿದೆ.

26 ಕೋಟಿ ಬಾಕಿ ಉಳಿದಿದೆ
ಕಳೆದ ವರ್ಷದ ಮಾರ್ಚ್ ಹೊತ್ತಿಗೆ, ಫ್ಲಿಪ್ ಕಾರ್ಟ್ ನೀಡಿದ್ದ ಆರ್ಡರ್ ಪೈಕಿ ಶೇಕಡಾ ಎಪ್ಪತ್ತಕ್ಕಿಂತ ಹೆಚ್ಚು ಟೀವಿಗಳನ್ನು ಡೆಲಿವರಿ ತೆಗೆದುಕೊಂಡಿಲ್ಲ. ಇದೀಗ ಎನ್ ಸಿಎಲ್ ಟಿ ಎದುರು ಕ್ಲೌಡ್ ವಾಕರ್ ಆರೋಪ ಏನೆಂದರೆ, ಸರಕಿನ ಬಾಕಿ 13.95 ಕೋಟಿ ರುಪಾಯಿ, ಗ್ರಾಹಕರ ಶುಲ್ಕ 5.25 ಕೋಟಿ, ಮಾರ್ಚ್ 2019ರ ತನಕ ಬಡ್ಡಿ 7.75 ಕೋಟಿ ಸೇರಿ 26 ಕೋಟಿ ಬಾಕಿ ಉಳಿದಿದೆ.

ದಿವಾಳಿ ಪ್ರಕರಣವನ್ನು ಮುಂದಿಟ್ಟುಕೊಂಡು ಕಾನೂನು ಬಾಹಿರ ಬೇಡಿಕೆ
ಆದರೆ, ಫ್ಲಿಪ್ ಕಾರ್ಟ್ ಈ ಎಲ್ಲ ಆರೋಪವನ್ನು ಅಲ್ಲಗಳೆದಿದೆ. ಈಗಾಗಲೇ ಎಂಬತ್ತೈದು ಕೋಟಿ ರುಪಾಯಿಗೂ ಹೆಚ್ಚು ಪಾವತಿ ಮಾಡಿದ್ದೇವೆ. ಏನೂ ಬಾಕಿ ಉಳಿಸಿಕೊಂಡಿಲ್ಲ. ಈಗ ದಿವಾಳಿ ಪ್ರಕರಣವನ್ನು ಮುಂದಿಟ್ಟುಕೊಂಡು ಫ್ಲಿಪ್ ಕಾರ್ಟ್ ನ ಮುಂದೆ ಕಾನೂನು ಬಾಹಿರ ಬೇಡಿಕೆ ಇಡಲಾಗುತ್ತಿದೆ ಎಂದು ಆರೋಪಿಸಿದೆ. ಮತ್ತು ಕ್ಲೌಡ್ ವಾಕರ್ ಜತೆಗೆ ಮಾಡಿಕೊಂಡಿದ್ದ ಒಪ್ಪಂದದ ಹಲವು ನಿಯಮಗಳನ್ನು ಪಾಲಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದೆ.

ಇ ಮೇಲ್ ಮಾತುಕತೆಯೇ ಆಧಾರ
ಆದರೆ, ಫ್ಲಿಪ್ ಕಾರ್ಟ್ ಮತ್ತು ಕ್ಲೌಡ್ ವಾಕರ್ ಮಧ್ಯ ನಡೆದ ಇ ಮೇಲ್ ಮಾತುಕತೆಯ ಆಧಾರದ ಮೇಲೆ ಎನ್ ಸಿಎಲ್ ಟಿ ಪ್ರಕರಣವನ್ನು ಪರಿಗಣಿಸಿದೆ. ಕ್ಲೌಡ್ ವಾಕರ್ ಕಳುಹಿಸಿರುವ ಬೇಡಿಕೆಯ ನೋಟಿಸ್ ಗೆ ಫ್ಲಿಪ್ ಕಾರ್ಟ್ ಇಂಡಿಯಾ ಎಲ್ಲೂ ಆಕ್ಷೇಪ ವ್ಯಕ್ತಪಡಿಸಿಲ್ಲ. ಆದ್ದರಿಂದ ಫ್ಲಿಪ್ ಕಾರ್ಟ್ ನಿಂದ ಹಣ ಪಾವತಿಯಾಗಿಲ್ಲ ಎಂಬ ಅಂಶವೇ ಹೆಚ್ಚು ಗಮನ ಸೆಳೆಯುತ್ತಿದೆ.

ಯಾವುದೇ ಆಸ್ತಿ ಮಾರಾಟ ಮಾಡುವಂತಿಲ್ಲ
ದಿವಾಳಿ ಪ್ರಕ್ರಿಯೆಗಾಗಿ ಕ್ಲೌಡ್ ವಾಕರ್ ಅರ್ಜಿ ಹಾಕಿಕೊಂಡ ಜುಲೈ ಇಪ್ಪತ್ತೆರಡರಿಂದ ಆರಂಭಗೊಂಡು ವ್ಯಾಜ್ಯ ಪರಿಹರಿಸಿಕೊಳ್ಳಲು ಹಲವು ಅವಕಾಶ ನೀಡಲಾಗಿದೆ. ಇನ್ನು ಹೆಚ್ಚು ಕಾಲ ಪ್ರಕರಣ ಬಾಕಿ ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಎನ್ ಸಿಎಲ್ ಟಿ ಹೇಳಿದೆ. ಆದ್ದರಿಂದ ಕ್ಲೌಡ್ ವಾಕರ್ ಸಲ್ಲಿಸಿದ 'ದಿವಾಳಿ' ಅರ್ಜಿಯನ್ನು ಸ್ವೀಕರಿಸಲಾಗಿದೆ. ಫ್ಲಿಪ್ ಕಾರ್ಟ್ ಇಂಡಿಯಾವು ಯಾವುದೇ ಆಸ್ತಿಯನ್ನು ವರ್ಗಾವಣೆ, ಮಾರಾಟ ಅಥವಾ ಅಡಮಾನ ಮಾಡಬಾರದು ಎಂದು ನಿರ್ದೇಶನ ನೀಡಲಾಗಿದೆ.

ಹೈ ಕೋರ್ಟ್ ನಿಂದ ತಡೆಯಾಜ್ಞೆ ನೀಡಿದೆ
ಮಧ್ಯಂತರ ಸಂಧಾನ ವೃತ್ತಿಪರರು ಈ ಪ್ರಕರಣದ ಬೆಳವಣಿಗೆ ಬಗ್ಗೆ ನವೆಂಬರ್ ಇಪ್ಪತ್ತೈದನೇ ತಾರೀಕು ಎನ್ ಸಿಎಲ್ ಟಿಗೆ ವರದಿ ಸಲ್ಲಿಸಬೇಕು. ಆದರೆ ಫ್ಲಿಪ್ ಕಾರ್ಟ್ ಇಂಡಿಯಾ ಹೇಳುವ ಪ್ರಕಾರ, ಎನ್ ಸಿಎಲ್ ಟಿ ಆದೇಶಕ್ಕೆ ಕರ್ನಾಟಕ ಹೈ ಕೋರ್ಟ್ ನಿಂದ ತಡೆ ನೀಡಲಾಗಿದೆ. ಅದು ಫ್ಲಿಪ್ ಕಾರ್ಟ್ ಪರವಾಗಿದೆ. "ಇದು ಸದ್ಯಕ್ಕೆ ನಡೆಯುತ್ತಿರುವ ವಾಣಿಜ್ಯ ವ್ಯಾಜ್ಯ. ನಾವು ಅದನ್ನು ಪ್ರಶ್ನೆ ಮಾಡಿದ್ದೇವೆ" ಎಂದು ಫ್ಲಿಪ್ ಕಾರ್ಟ್ ಹೇಳಿದೆ.