ಯೆಸ್ ಬ್ಯಾಂಕ್ ರಾಣಾ ಕಪೂರ್ ಗೆ ಸೇರಿದ 127 ಕೋಟಿಯ ಲಂಡನ್ ಫ್ಲ್ಯಾಟ್ ಇ.ಡಿ. ವಶಕ್ಕೆ
ಸದ್ಯಕ್ಕೆ ಜೈಲಿನಲ್ಲಿ ಇರುವ ಯೆಸ್ ಬ್ಯಾಂಕ್ ಸ್ಥಾಪಕ ರಾಣಾ ಕಪೂರ್ ಗೆ ಸೇರಿದ ಲಂಡನ್ ನಲ್ಲಿನ 127 ಕೋಟಿ ರುಪಾಯಿ ಮೌಲ್ಯದ ವಿಲಾಸಿ ಬಂಗಲೆಯನ್ನು ಜಾರಿ ನಿರ್ದೇಶನಾಲಯ (ಇ.ಡಿ.) ವಶಕ್ಕೆ ಪಡೆದಿದೆ. ಯೆಸ್ ಬ್ಯಾಂಕ್ ಮಾಜಿ ಮುಖ್ಯಸ್ಥರೂ ಆದ ರಾಣಾ ಕಪೂರ್ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣ ಇದ್ದು, ಅದು ಬಗೆದಷ್ಟೂ ಹೊರಗೆ ಬರುತ್ತಲೇ ಇದೆ.
ಲಂಡನ್ 77 ಸೌತ್ ಆಡ್ಲೆ ಸ್ಟ್ರೀಟ್ ನ ಈ ಅಪಾರ್ಟ್ ಮೆಂಟ್ ಮಾರ್ಕೆಟ್ ಮೌಲ್ಯ 13.5 ಮಿಲಿಯನ್ ಪೌಂಡ್ ಇದೆ. ಈ ಆಸ್ತಿಯನ್ನು 2017ರಲ್ಲಿ 9.9 ಮಿಲಿಯನ್ ಪೌಂಡ್ ಅಥವಾ 93 ಕೋಟಿ ರುಪಾಯಿಗೆ ಖರೀದಿ ಮಾಡಲಾಗಿದೆ ಎಂದು ಇ.ಡಿ. ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಯೆಸ್ ಬ್ಯಾಂಕ್ ಕಪೂರ್, ವಾಧ್ವಾನ್ 2200 ಕೋಟಿ ಆಸ್ತಿ ಜಪ್ತಿ ಮಾಡಿದ ಇ.ಡಿ.
ಈ ವರ್ಷದ ಮಾರ್ಚ್ ನಲ್ಲಿ ಜಾರಿ ನಿರ್ದೇಶನಾಲಯವು ರಾಣಾ ಕಪೂರ್ ರನ್ನು ಬಂಧಿಸಿತ್ತು. ಬ್ಯಾಂಕ್ ನಲ್ಲಿ ನಡೆದಿದೆ ಎನ್ನಲಾದ 4300 ಕೋಟಿ ರುಪಾಯಿಯ ಹಗರಣದಲ್ಲಿ ಕಪೂರ್ ಹೆಸರು ಇದೆ. ಕೊರೊನಾ ಲಾಕ್ ಡೌನ್ ಗೂ ಮುಂಚೆ ರಾಣಾ ಕಪೂರ್ ಬಂಧನವಾಯಿತು. ಆ ಸಂದರ್ಭದಲ್ಲಿ ಯೆಸ್ ಬ್ಯಾಂಕ್ ಗ್ರಾಹಕರಿಗೆ ತಿಂಗಳಿಗೆ ಗರಿಷ್ಠ 50 ಸಾವಿರ ರುಪಾಯಿ ಮಾತ್ರ ವಿಥ್ ಡ್ರಾ ಮಾಡಬಹುದು ಎಂದು ಆರ್ ಬಿಐ ಮಿತಿ ಹಾಕಿತ್ತು.
ಭಾರತದ ನಾಲ್ಕನೇ ಅತಿ ದೊಡ್ಡ ಖಾಸಗಿ ಬ್ಯಾಂಕ್ ಆದ ಯೆಸ್ ಬ್ಯಾಂಕ್ ನಲ್ಲಿನ ಹಗರಣಕ್ಕೆ ಸಂಬಂಧಿಸಿದಂತೆ ಹದಿಮೂರು ಮಂದಿಯನ್ನು ಆರೋಪಿಗಳನ್ನಾಗಿ ಹೆಸರಿಸಲಾಗಿದೆ. ಅದರಲ್ಲಿ ಕಪೂರ್ ಹೆಂಡತಿ, ಮೂವರು ಹೆಣ್ಣುಮಕ್ಕಳು ಸಹ ಇದ್ದಾರೆ.