ವಾಹನ ತೆರಿಗೆ ಪಾವತಿ ಅವಧಿಯನ್ನ ಮತ್ತೆ ವಿಸ್ತರಿಸಿದ ಕರ್ನಾಟಕ ಸರ್ಕಾರ
ಕೋವಿಡ್-19 ಸಾಂಕ್ರಾಮಿಕದ ಎರಡನೇ ಅಲೆಯಿಂದಾಗಿ ವಾಹನ ತೆರಿಗೆ ಪಾವತಿ ಅವಧಿಯನ್ನು ಕರ್ನಾಟಕ ರಾಜ್ಯ ಸರ್ಕಾರ ಮತ್ತೆ ವಿಸ್ತರಿಸಿದೆ. ಈ ಹಿಂದೆ ಮೇ 15ರೊಳಗೆ ತೆರಿಗೆ ಪಾವತಿಗೆ ಸೂಚಿಸಲಾಗಿತ್ತು. ಇದಕ್ಕೂ ಮೊದಲು ಏಪ್ರಿಲ್ 15ರೊಳಗೆ ತೆರಿಗೆ ಕಟ್ಟಲು ಆದೇಶ ಹೊರಡಿಸಿತ್ತು. ಇದೀಗ ಜುಲೈ 15ರವರೆಗೆ ದಂಡ ರಹಿತವಾಗಿ ತೆರಿಗೆ ಪಾವತಿಸಲು ಸರ್ಕಾರ ಆದೇಶಿಸಿದೆ.
ಎಲ್ಲಾ ನೊಂದಾಯಿತ ಸಾರಿಗೆ ಪ್ರಯಾಣಿಕ ವಾಹನಗಳಿಗೆ (ಹೊಸ ವಾಹನಗಳ ನೊಂದಣಿಯನ್ನು ಹೊರತುಪಡಿಸಿ) ಈ ವಿಸ್ತರಣೆ ಘೋಷಿಸಲಾಗಿದೆ. ಮೇ 15 ರ ಒಳಗಾಗಿ ಪಾವತಿಸಬೇಕಾಗಿದ್ದ ತೆರಿಗೆಯನ್ನು ದಂಡ ರಹಿತವಾಗಿ ಪಾವತಿಸಲು ವಿಸ್ತರಿಸಿದ್ದ ಅವಧಿ ಜುಲೈ 15ರವರೆಗೆ ವಿಸ್ತರಣೆ ಮಾಡಲಾಗಿದೆ.
ಇನ್ನು 2021-22ನೇ ಆರ್ಥಿಕ ವರ್ಷದಲ್ಲಿ ಹೋಟೆಲ್, ರೆಸಾರ್ಟ್, ರೆಸ್ಟೋರೆಂಟ್ ಮತ್ತು ಮನರಂಜನಾ ಪಾರ್ಕ್ಗಳಿಗೆ ಶೇ. 50 ರಷ್ಟು ಆಸ್ತಿ ತೆರಿಗೆ ವಿನಾಯಿತಿ ನೀಡಲಾಗಿದೆ. ಏಪ್ರಿಲ್, ಮೇ ಮತ್ತು ಜೂನ್ ತಿಂಗಳ ವಿದ್ಯುಚ್ಛಕ್ತಿ ಬೇಡಿಕೆ ಶುಲ್ಕ ಪಾವತಿಗೂ ವಿನಾಯಿತಿಯನ್ನು ನೀಡಲಾಗಿದೆ.

ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಾಯಿತ ಪ್ರವಾಸಿ ಮಾರ್ಗದರ್ಶಿಗಳಿಗೆ 5000 ರೂ. ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾಯಿಸಲಾಗುವುದು. ಅಬಕಾರಿ ಸನ್ನದು ಶುಲ್ಕ ಮತ್ತು ಹೆಚ್ಚುವರಿ ಸನ್ನದು ಶುಲ್ಕದ ಶೇ. 50ರಷ್ಟು ಮೊತ್ತ ಪಾವತಿಸಬೇಕು, ಉಳಿದ ಶೇ. 50 ರಷ್ಟು ಶುಲ್ಕ ಮೊತ್ತ ಡಿಸೆಂಬರ್ 31 ರೊಳಗೆ ಪಾವತಿಸಬೇಕು ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಕೋವಿಡ್-19 ಪೀಡಿತ ಪ್ರದೇಶಗಳಿಗೆ ಪರಿಚಯಿಸಲಾದ ಸಾಲ ಖಾತರಿ ಯೋಜನೆಯ ಮೂಲಕ 11,000 ಕ್ಕೂ ಹೆಚ್ಚು ನೋಂದಾಯಿತ ಪ್ರವಾಸಿ ಮಾರ್ಗದರ್ಶಿಗಳು / ಪ್ರಯಾಣ ಮತ್ತು ಪ್ರವಾಸೋದ್ಯಮ ಮಧ್ಯಸ್ಥಗಾರರಿಗೆ ಹಣಕಾಸು ಸಹಾಯವನ್ನು ಕೇಂದ್ರ ಹಣಕಾಸು ಸಚಿವರು ಘೋಷಿಸಿದರು. ಪ್ರತಿ ಪ್ರವಾಸಿ ಮಾರ್ಗದರ್ಶಿಗೆ 1 ಲಕ್ಷ ರೂ.ವರೆಗೆ ಸಾಲ 100% ಖಾತರಿಯೊಂದಿಗೆ ಲಭ್ಯವಿರುತ್ತದೆ. ಮರು ವಿತರಣೆ ಪ್ರಕ್ರಿಯೆಯ ನಂತರ, ಮೊದಲ 5 ಲಕ್ಷ ಪ್ರವಾಸಿಗರಿಗೆ ಉಚಿತ ಪ್ರವಾಸಿ ವೀಸಾ ನೀಡಲಾಗುವುದು. ಇದರ ಒಟ್ಟು ಮೊತ್ತ 100 ಕೋಟಿ ರೂ. ಆಗಿದೆ.