ಷೇರುಪೇಟೆ ವ್ಯವಹಾರದಿಂದ ಟ್ವಿಟ್ಟರ್ ಡೀಲಿಸ್ಟ್ ಆಗಿದ್ದು ಯಾಕೆ?
ವಿಶ್ವದ ನಂಬರ್ ಒನ್ ಶ್ರೀಮಂತ ಉದ್ಯಮಿ ಇಲಾನ್ ಮಸ್ಕ್ ಟ್ವಿಟ್ಟರ್ ಖರೀದಿಸಿರುವ ಸುದ್ದಿ ಎಲ್ಲರಿಗೂ ತಿಳಿದಿರುವಂಥದ್ದೇ. ಹಾಗೆಯೇ, ಟ್ವಿಟ್ಟರ್ ಖಾತೆಗೆ ಬ್ಲೂಟಿಕ್ ಪಡೆಯಲು ತಿಂಗಳಿಗೆ 8 ಡಾಲರ್ ಸಬ್ಸ್ಕ್ರಿಪ್ಷನ್ ದರ ನಿಗದಿ ಸೇರಿದಂತೆ ಹಲವು ಬದಲಾವಣೆಗಳನ್ನು ಮತ್ತು ಹಣ ಮಾಡುವ ತಂತ್ರವನ್ನು ಮಸ್ಕ್ ಹೂಡಿದ್ದಾರೆ. ಇದೇ ವೇಳೆ, ಅಮೆರಿಕದ ಷೇರುಪೇಟೆಯಿಂದ ಟ್ವಿಟ್ಟರ್ ಹೊರಬಿದ್ದಿದೆ. ನ್ಯೂಯಾರ್ಕ್ ಸ್ಟಾಕ್ ಎಕ್ಸ್ಚೇಂಜ್ನಿಂದ ಟ್ವಿಟ್ಟರ್ ಅನ್ನು ಮಂಗಳವಾರದಂದು ಡೀಲಿಸ್ಟ್ ಮಾಡಲಾಗಿದೆ.
ಅಮೆರಿಕದ ಸೆಕ್ಯೂರಿಟೀಸ್ ಅಂಡ್ ಎಕ್ಸ್ಚೇಂಜ್ ಕಮಿಷನ್ (ಎಸ್ಇಸಿ) ಹೊರಡಿಸಿದ ಹೊಸ ಆದೇಶಗಳ ಅನುಸಾರ ಷೇರು ವಿನಿಯಮ ಕೇಂದ್ರದ ಪಟ್ಟಿಯಿಂದ ಟ್ವಿಟ್ಟರ್ ಅನ್ನು ಅಧಿಕೃತವಾಗಿ ತೆಗೆಯಲಾಗಿದೆ. ಇನ್ಮುಂದೆ ಷೇರುಪೇಟೆಯಲ್ಲಿ ಟ್ವಿಟ್ಟರ್ ಷೇರುಗಳು ಮಾರಾಟಕ್ಕೆ ಇರುವುದಿಲ್ಲ. ನಿಯಮಗಳ ಪ್ರಕಾರ ಟ್ವಿಟ್ಟರ್ ಖರೀದಿ ಒಪ್ಪಂದ ಪೂರ್ಣಗೊಂಡ ಅಕ್ಟೋಬರ್ 28ರಂದೇ ಷೇರುಪೇಟೆಯಿಂದ ಟ್ವಿಟ್ಟರ್ ಹೊರಬಿದ್ದಿತಾದರೂ ನವೆಂಬರ್ 8ರಂದು ಅಧಿಕೃತವಾಗಿ ಡೀಲಿಸ್ಟ್ ಆಗಿದೆ.

ಡೀಲಿಸ್ಟ್ ಆಗಿದ್ದು ಯಾಕೆ?
ಇಲಾನ್ ಮಸ್ಕ್ ಅವರು ಟ್ವಿಟ್ಟರ್ ಎಂಬ ಜೇನುಗೂಡಿಗೆ ಕೈಹಾಕುವ ಮುನ್ನ ಆ ಕಂಪನಿಯ ಪ್ರತೀ ಷೇರು 75 ಡಾಲರ್ (ಸುಮಾರು 6,100 ರೂಪಾಯಿ) ಬೆಲೆ ಹೊಂದಿತ್ತು. ಮಸ್ಕ್ ಪ್ರತೀ ಷೇರಿಗೆ 54.20 ರೂಪಾಯಿಯಂತೆ ಎಲ್ಲಾ ಷೇರುಗಳನ್ನೂ ಖರೀದಿಸಿದ್ದಾರೆ. ಈ ಮೂಲಕ ಸಂಪೂರ್ಣ ಖಾಸಗಿ ಸ್ವಾಮ್ಯದ ಕಂಪನಿಯಾಗಿ ಮಾಡಿದ್ದಾರೆ.
ನಿಯಮದ ಪ್ರಕಾರ, ಕಂಪನಿಯ ಎಲ್ಲಾ ಷೇರುಗಳು ಸಂಪೂರ್ಣವಾಗಿ ಖಾಸಗಿ ಒಡೆತನದಲ್ಲಿದ್ದರೆ ಅದನ್ನು ಸ್ಟಾಕ್ ಎಕ್ಸ್ಚೇಂಜ್ನಲ್ಲಿ ಲಿಸ್ಟ್ ಮಾಡಲು ಆಗುವುದಿಲ್ಲ. ಪಬ್ಲಿಕ್ ಲಿಸ್ಟಿಂಗ್ಗೆ ಬರಬೇಕಾದರೆ ಅದರ ನಿರ್ದಿಷ್ಟ ಪ್ರಮಾಣದ ಷೇರುಗಳು ಸಾರ್ವಜನಿಕವಾಗಿ ಲಭ್ಯ ಇರಬೇಕು.
ಎಲಾನ್ ಮಸ್ಕ್ ಮಾಲೀಕತ್ವದ ಎಕ್ಸ್ ಹೋಲ್ಡಿಂಗ್ಸ್-1 ಕಂಪನಿಯ ಅಂಗಸಂಸ್ಥೆಯಾದ ಎಕ್ಸ್ ಹೋಲ್ಡಿಂಗ್ಸ್-2 ಮತ್ತು ಟ್ವಿಟ್ಟರ್ ಕಂಪನಿಗಳು ಅಕ್ಟೋಬರ್ 27ರಂದು ವಿಲೀನಗೊಂಡವು. ಈ ಮೂಲಕ ಟ್ವಿಟ್ಟರ್ನ ಎಲ್ಲಾ ಷೇರುಗಳನ್ನೂ ಎಕ್ಸ್ ಹೋಲ್ಡಿಂಗ್ಸ್-2 ಕಂಪನಿ ಖರೀದಿಸಿದೆ. ಇದೀಗ ಟ್ವಿಟ್ಟರ್ನ ಷೇರುಗಳನ್ನು ಹೊಂದಿದ್ದವರಿಗೆ ಅವರ ಪಾಲಿನ ಹಣ ಸಂದಾಯವಾಗಲಿದೆ. ಮತ್ತೆ ಷೇರುಪೇಟೆಯಲ್ಲಿ ಟ್ವಿಟ್ಟರ್ನ ಷೇರು ಮಾರಾಟಕ್ಕಿರುವುದಿಲ್ಲ. ಅದು ಸಂಪೂರ್ಣ ಮಸ್ಕ್ ಸ್ವತ್ತಾಗಿದೆ.
ಇಲಾನ್ ಮಸ್ಕ್ ಟ್ವಿಟ್ಟರ್ ಖರೀದಿಸುವ ಪ್ರಸ್ತಾವ ಇಟ್ಟಾಗಲೇ ಷೇರು ಪೇಟೆಯಿಂದ ಡೀಲಿಸ್ಟ್ ಮಾಡುವ ತಮ್ಮ ಯೋಜನೆಯನ್ನು ಪ್ರಸ್ತಾಪಿಸಿದ್ದರು. ಅದರಂತೆಯೇ ಬೆಳವಣಿಗೆ ಆಗಿದೆ.

ವಜಾ ಪರ್ವ
ಇಲಾನ್ ಮಸ್ಕ್ ಟ್ವಿಟ್ಟರ್ ಖರೀದಿಸಿದ ಬಳಿಕ ಮಾಡಿದ ಮೊದಲ ಕೆಲಸವೆಂದರೆ ಆಯಕಟ್ಟಿನ ಜಾಗದಲ್ಲಿರುವ ಪ್ರಮುಖರನ್ನು ಕೆಲಸದಿಂದ ವಜಾ ಮಾಡಿದ್ದು. ಸಿಇಒ ಪರಾಗ್ ಅಗರ್ವಾಲ್, ಲೀಗಲ್ ಮುಖ್ಯಸ್ಥೆ ವಿಜಯಾ ಗದ್ದೆ, ಸಿಎಫ್ಒ ಇತ್ಯಾದಿ ಎಕ್ಸಿಕ್ಯೂಟಿವ್ಗಳು ಟ್ವಿಟ್ಟರ್ನಿಂದ ಹೊರಬಿದ್ದಿದ್ದಾರೆ. ಅರ್ಧಕ್ಕಿಂತ ಹೆಚ್ಚು ಮಂದಿಯನ್ನು ಕೆಲಸದಿಂದ ಕಿತ್ತುಹಾಕಲು ಮಸ್ಕ್ ನಿರತರಾಗಿದ್ದಾರೆ. ಟ್ವಿಟ್ಟರ್ನ ಭಾರತೀಯ ವಿಭಾಗದಿಂದ ಶೇ. 90ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ. ಇಲ್ಲಿ ಸದ್ಯ ಉಳಿದಿರುವ ಸಿಬ್ಬಂದಿಯ ಸಂಖ್ಯೆ ಎರಡಂಕಿಯೂ ದಾಟುವುದಿಲ್ಲ.
ಕೆಲ ವರದಿಗಳ ಪ್ರಕಾರ ಬಹಳಷ್ಟು ಟ್ವಿಟ್ಟರ್ ಉದ್ಯೋಗಿಗಳು ಫೇಸ್ಬುಕ್ ಮಾಲೀಕ ಸಂಸ್ಥೆ ಮೆಟಾ, ಗೂಗಲ್ ಇತ್ಯಾದಿ ಸಂಸ್ಥೆಗಳತ್ತ ಮುಖ ಮಾಡುತ್ತಿದ್ದಾರೆ.

ಎಕ್ಸ್ ಅಗುತ್ತಾ ಟ್ವಿಟ್ಟರ್?
ಇಲಾನ್ ಮಸ್ಕ್ ಟ್ವಿಟ್ಟರ್ ಇಟ್ಟುಕೊಂಡು ಏನು ಮಾಡಹೊರಟಿದ್ದಾರೆ ಎಂಬುದೇ ಬಹಳ ಕುತೂಹಲ ಮೂಡಿಸಿರುವ ಸಂಗತಿ. ಟ್ವಿಟ್ಟರ್ಗೆ ಆದಾಯ ಮೂಲ ಹೆಚ್ಚಿಸುವ ಮಾರ್ಗಗಳ ಶೋಧನೆಯಲ್ಲಿ ಮಸ್ಕ್ ತೊಡಗಿದ್ದಾರೆ. ಅದರಲ್ಲಿ ಕಣ್ಣಿಗೆ ಕುಕ್ಕುವಂತೆ ಕಾಣುತ್ತಿರುವುದು ಬ್ಲೂಟಿಕ್ ವಿಚಾರ. ಟ್ವಿಟ್ಟರ್ ಖಾತೆಗೆ ಅಧಿಕೃತವೆಂದು ಜಾಹೀರುಗೊಳಿಸಲು ಬ್ಲೂಟಿಕ್ ಕೊಡಲಾಗುತ್ತಿತ್ತು. ಈಗ ಮಸ್ಕ್ ಬಂದ ಬಳಿಕ ಬ್ಲೂಟಿಕ್ಗೆ ತಿಂಗಳಿಗೆ 8 ಡಾಲರ್ ಕೊಡಬೇಕೆಂದು ಬೆಲೆ ನಿಗದಿ ಮಾಡಲಾಗಿದೆ.
ಆದರೆ, ಈಗಿರುವ ಸಂದರ್ಭದಲ್ಲಿ ಯಾರಾದರೂ ಮಾಸಿಕ ಚಂದಾದಾರಿಕೆಗೆ ಮುಂದಾಗುತ್ತಾರಾ ಎಂಬುದು ಕುತೂಹಲ ಮೂಡಿಸಿರುವ ಸಂಗತಿ.
ಇನ್ನೊಂದು ಗಮನಾರ್ಹ ಅಂಶ, ಎಲಾನ್ ಮಸ್ಕ್ ಅವರ ಭವಿಷ್ಯ ಯೋಜನೆಯದ್ದು. ಚೀನಾದ ವೀಚಾಟ್ ಮಾದರಿಯಲ್ಲಿ ಟ್ವಿಟ್ಟರ್ ಅನ್ನು ರೂಪಿಸುವ ಇರಾದೆಯಲ್ಲಿ ಮಸ್ಕ್ ಇದ್ದಾರೆ. ಮೆಸೇಜಿಂಗ್ ಪ್ಲಾಟ್ಫಾರ್ಮ್ ಆಗಿ ಆರಂಭಗೊಂಡ ವೀಚ್ಯಾಟ್ ಈಗ ಬಹು ಆಯಾಮಗಳ ಮತ್ತು ಹಲವು ಕಾರ್ಯಗಳನ್ನು ಒಂದೇ ಸ್ಥಳದಲ್ಲಿ ಮಾಡಬಲ್ಲ ವೇದಿಕೆಯಾಗಿದೆ. ಪೇಟಿಎಂಗೆ ಹೋದರೆ ಪೇಮೆಂಟ್ನಿಂದ ಹಿಡಿದು ಶಾಪಿಂಗ್ವರೆಗೆ ಅನೇಕ ಕಾರ್ಯಗಳನ್ನು ಮಾಡುವ ರೀತಿಯಲ್ಲಿ ಟ್ವಿಟ್ಟರ್ ಅನ್ನೂ ಕೂಡ ವಿವಿಧ ಕಾರ್ಯಗಳ ಏಕಸ್ಥಳವಾಗಿ ಮಾಡುವ ಉದ್ದೇಶ ಮಸ್ಕ್ಗೆ ಇದೆ.
ತಮ್ಮ ಈ ಭವಿಷ್ಯದ ಟ್ವಿಟ್ಟರ್ಗೆ ಮಸ್ಕ್ ಅವರು ಎಕ್ಸ್ ಎಂದು ಮರುನಾಮಕರಣ ಮಾಡುವ ಸಾಧ್ಯತೆಯೂ ಇದೆ. ಟ್ವಿಟ್ಟರ್ ಅನ್ನು ಪೂರ್ಣ ಖಾಸಗಿ ಕಂಪನಿಯಾಗಿ ಮಾಡದೇ ಹೋಗಿದ್ದರೆ ತಮ್ಮ ಪ್ರತಿಯೊಂದು ಬದಲಾವಣೆಯ ಪ್ರಯತ್ನಕ್ಕೂ ಷೇರುದಾರರಿಗೆ ಉತ್ತರ ಕೊಡಬೇಕಾಗುತ್ತಿತ್ತು. ಮುಕ್ತ ಸ್ವಾತಂತ್ರ್ಯ ಇರುತ್ತಿರಲಿಲ್ಲ. ಹೀಗಾಗಿ ಮಸ್ಕ್ ಅವರು ಟ್ವಿಟ್ಟರ್ ಅನ್ನು ಸ್ಟಾಕ್ ಎಕ್ಸ್ಚೇಂಜ್ನಿಂದ ಡೀಲಿಸ್ಟ್ ಆಗುವಂತೆ ನೋಡಿಕೊಂಡಿದ್ದಾರೆ. ಇನ್ನೀಗ ಅವರು ಟ್ವಿಟ್ಟರ್ಗೆ ಎಕ್ಸ್ ರೂಪ ಕೊಡುವ ಕಾಯಕದಲ್ಲಿ ತೊಡಗಬಹುದು. ಅವರ ಎಕ್ಸ್ನಲ್ಲಿ ಏನೆಲ್ಲಾ ಇರಲಿದೆ ಎಂಬುದು ಕುತೂಹಲ ಮೂಡಿಸಿರುವ ಸಂಗತಿ.