2020ರ ಜನವರಿಯಿಂದ ಮಾರುತಿ ಕಾರುಗಳ ಬೆಲೆಯಲ್ಲಿ ಹೆಚ್ಚಳ!
ಕಾರು ತಯಾರಿಕೆ ಮತ್ತು ಮಾರಾಟ ಕಂಪೆನಿ ಮಾರುತಿ ತನ್ನ ಎಲ್ಲಾ ಮಾದರಿಯ ಕಾರುಗಳ ಬೆಲೆಯನ್ನು ಹೆಚ್ಚಿಸಲಿದೆ. ಉತ್ಪಾದನೆ ಮತ್ತು ಆಂತರಿಕ ಆಡಳಿತಾತ್ಮಕ ವೆಚ್ಚಗಳ ಹೆಚ್ಚಳದಿಂದಾಗಿ ಈ ನಿರ್ಧಾರಕ್ಕೆ ಬರಲಾಗಿದೆ. ಈ ಬೆಲೆ ಹೆಚ್ಚಳದ ಪ್ರಮಾಣವು ಒಂದು ಮಾದರಿಯಿಂದ ಇನ್ನೊಂದಕ್ಕೆ ವಿಭಿನ್ನವಾಗಿರಬಹುದು ಎಂದು ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ತಿಳಿಸಿದೆ.
ಮಾರುತಿ ಮತ್ತು ಇನ್ನಿತರ ಕಾರು ತಯಾರಿಕೆ ಮತ್ತು ಮಾರಾಟ ಕಂಪೆನಿಗಳು ಕಾರು ಮಾರಾಟ ಮಾಡಲು ವಿವಿಧ ಕಾರಣಗಳಿಂದಾಗಿ ಹೆಣಗಾಡುತ್ತಿರುವ ಹೊತ್ತಿನಲ್ಲೇ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ತನ್ನ ಕಾರುಗಳ ಬೆಲೆ ಏರಿಕೆ ಘೋಷಿಸಿರುವುದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.
ಈ ಬೆಲೆ ಏರಿಕೆಯು 2020ರ ಜನವರಿಯಿಂದ ಜಾರಿಗೆ ಬರುವುದಾಗಿ ಹೇಳಿದ್ದು, ಕಂಪೆನಿಯು ಬೆಲೆ ಏರಿಕೆಯ ಪ್ರಮಾಣ ಮತ್ತು ದಿನಾಂಕವನ್ನು ಇನ್ನೂ ನಿಗದಿ ಪಡಿಸಿಲ್ಲ. ಇನ್ನೊಂದು ಅಂಶವೇನೆಂದರೆ, ಕಂಪೆನಿಯ ಒಟ್ಟು ಸಗಟು (ಹೋಲ್ ಸೇಲ್) ಮಾರಾಟವು ಕಳೆದ ನವೆಂಬರ್ ತಿಂಗಳಲ್ಲಿ 141,400 ಯೂನಿಟ್ ಆಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ, ಶೇ. 3.2ರಷ್ಟು ಮಾರಾಟದ ಪ್ರಮಾಣ ಕಡಿಮೆಯಾಗಿದೆ.
ಕಂಪೆನಿಯ ವಾಹನಗಳ ಆಂತರಿಕ ವೆಚ್ಚಗಳ ಹೆಚ್ಚಳದಿಂದಾಗಿ ವಾಹನಗಳ ಬೆಲೆಯ ಮೇಲೂ ಪ್ರತಿಕೂಲ ಪರಿಣಾಮ ಬೀರಿದೆ. ಈ ಹೆಚ್ಚಳದಿಂದಾಗಿ ಮತ್ತು ಇದರಲ್ಲಿ ಸ್ವಲ್ಪ ಪ್ರಮಾಣವನ್ನು ಗ್ರಾಹಕರ ಮೇಲೆ ಹೊರಿಸಬೇಕಾದ ಅನಿವಾರ್ಯದಲ್ಲಿರುವ ಸಂಸ್ಥೆ, ಬೆಲೆ ಏರಿಕೆಯ ನಿರ್ಧಾರಕ್ಕೆ ಬಂದಿದೆ.
ಈಗಾಗಲೇ ಕೆಲವು ದೇಶಗಳಲ್ಲಿ ಕಾರು ತಯಾರಿಕೆ ಕಂಪೆನಿಗಳು ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸುವತ್ತ ಒಲವನ್ನು ತೋರಿಸುತ್ತಿವೆ. ಭಾರತದಲ್ಲಿ ಇದಕ್ಕಾಗಿ ಇನ್ನೂ ಯಾವುದೇ ಗಡುವನ್ನು ರೂಪಿಸಿಲ್ಲವಾದರೂ ಸ್ವಚ್ಛ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ವಾಹನಗಳಿಗೆ ಉಪಯೋಗಿಸುವಂತೆ 2020ರ ಏಪ್ರಿಲ್ ನಿಂದ ಭಾರತ್ ಸ್ಟೇಜ್ -VI(ಬಿಎಸ್- VI)ಜಾರಿಗೊಳಿಸಲಿದೆ.
ಭಾರೀ ಷೇರು ಕುಸಿತ, ಮಾರುತಿ ಸುಜುಕಿಯ ಗುರುಗ್ರಾಮ್, ಮಾನೆಸರ್ ಘಟಕಗಳು ಬಂದ್
ಹೀಗೆ ಜಾರಿಯಾದ ನಂತರ ಡೀಸೆಲ್ ವಾಹನಗಳ ತಯಾರಿಕೆ ವೆಚ್ಚ ಹೆಚ್ಚಾಗಿ, ಮಾರಾಟ ಬೆಲೆಯನ್ನೂ ಗಣನೀಯವಾಗಿ ಹೆಚ್ಚಿಸಬೇಕಾಗುತ್ತದೆ. ಆ ಕಾರಣಕ್ಕೆ ಹಲವು ಕಂಪೆನಿಗಳು ಸಣ್ಣ ಪ್ರಮಾಣದ ಡೀಸೆಲ್ ಕಾರುಗಳ ಉತ್ಪಾದನೆ ಮತ್ತು ಮಾರಾಟ ನಿಲ್ಲಿಸಲು ಯೋಜನೆ ರೂಪಿಸಿವೆ.
ಈ ಹೊಸ ಬಿಎಸ್-VI ಮಾನದಂಡಗಳ ಜಾರಿಯಾದ ಮೇಲೆ ವಾಹನ ಖರೀದಿ ಮಾಡುವ ಬಗ್ಗೆ ಆಲೋಚಿಸುತ್ತಿರುವ ಅದಕ್ಕೂ ಮುನ್ನ ವಾಹನ ಖರೀದಿಸಲು ಹಿಂಜರಿಯುತ್ತಿದ್ದಾರೆ. ಇದೇ ವೇಳೆ ಬಿಎಸ್- IV ಸೆಕೆಂಡ್ ಹ್ಯಾಂಡ್ ವಾಹನವನ್ನು ಖರೀದಿಸಲು ಸಹ ಆಲೋಚಿಸುತ್ತಿದ್ದಾರೆ.