ಜಿಎಸ್ ಟಿ ಪರಿಹಾರ ವಿಚಾರವಾಗಿ ರಾಜ್ಯಗಳು ಸುಪ್ರೀಂ ಮೊರೆ ಹೋಗುವ ಸಾಧ್ಯತೆ
ಜಿಎಸ್ ಟಿ ಪರಿಹಾರ ವಿಚಾರವಾಗಿ ಕೆಲವು ರಾಜ್ಯಗಳು ಸುಪ್ರೀಂ ಕೋರ್ಟ್ ಮೊರೆ ಹೋಗುವ ಸಾಧ್ಯತೆ ಇದೆ. ಕೇರಳದ ಹಣಕಾಸು ಸಚಿವ ಥಾಮಸ್ ಐಸಾಕ್ ಗುರುವಾರದಂದು ಈ ಬಗ್ಗೆ ಟ್ವೀಟ್ ಮಾಡಿದ್ದಾರೆ.
"ಜಿಎಸ್ ಟಿ ಪರಿಹಾರ ಪಾವತಿ ವಿಚಾರದಲ್ಲಿ ಕೇಂದ್ರದ ತಾರತಮ್ಯ ಹಾಗೂ ಕಾನೂನುಬಾಹಿರ ಕ್ರಮದ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋಗಬಹುದು. ಕಾನೂನು, ತೆರಿಗೆ ಹಾಗೂ ಹಣಕಾಸು ಇಲಾಖೆ ಒಳಗೊಂಡ ಸಭೆಯು ಕೇರಳ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆಯುತ್ತಿದೆ. ಕೇರಳ ನಿಲುವಿನ ಬಗ್ಗೆ ನಾಳೆ ಮಧ್ಯಾಹ್ನ ಅಡ್ವೊಕೇಟ್ ಜನರಲ್ ಗಳು ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ," ಎಂದು ಐಸಾಕ್ ಹೇಳಿದ್ದಾರೆ.
ಇಪ್ಪತ್ತು ರಾಜ್ಯಗಳಿಗೆ 68,825 ಕೋಟಿ ಸಾಲ ಮಾಡಲು ಅನುಮತಿಸಿದ ಕೇಂದ್ರ
ಜಿಎಸ್ ಟಿ ಸಮಿತಿ ಸಭೆಯ ನಂತರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ್ದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಹಣ ಸಾಲ ಪಡೆಯುವ ವಿಚಾರವಾಗಿ ಜಿಎಸ್ ಟಿ ಸಮಿತಿಯೊಳಗೆ ಭಿನ್ನಾಭಿಪ್ರಾಯ ಇದೆ. ಆದರೆ ಅದು ಬಿಕ್ಕಟ್ಟಾಗಿ ಪರಿವರ್ತನೆ ಆಗುವುದಿಲ್ಲ ಎಂದು ಹೇಳಿದ್ದರು.
ಜಿಎಸ್ ಟಿ ಪರಿಹಾರ ವಿಚಾರವಾಗಿ ಹಲವು ಸುತ್ತಿನ ಮಾತುಕತೆ ನಂತರವೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮಧ್ಯೆ ಒಮ್ಮತದ ಅಭಿಪ್ರಾಯಕ್ಕೆ ಬರಲು ಸಾಧ್ಯವಾಗಿಲ್ಲ.
ಯಾವುದೇ ಷರತ್ತು ವಿಧಿಸದೆ ಹೆಚ್ಚುವರಿಯಾಗಿ ಎರಡು ಪರ್ಸೆಂಟ್ ಸಾಲ ಪಡೆಯುವುದಕ್ಕೆ ಅನುಮತಿ ನೀಡುವಂತೆ ಸಮಿತಿ ಸಭೆಯಲ್ಲಿ ಮನವಿ ಮಾಡಿದೆವು. ಮಾತುಕತೆ ಬಹಳ ಕಾಲ ನಡೆಯಿತು. ಇದೀಗ ಕೇಂದ್ರದಿಂದ ರಾಜ್ಯಗಳನ್ನು ವಿಭಜಿಸುವ ಕೆಲಸ ಆಗುತ್ತಿದೆ. ಈಗಲೂ ಕೇಂದ್ರವು ಒಮ್ಮತವನ್ನು ಬಯಸುತ್ತಿದೆ ಎಂದಿದ್ದಾರೆ ಐಸಾಕ್.
ಜಿಎಸ್ ಟಿಯ ಆದಾಯ ಕೊರತೆ ಭರಿಸಲು ಇಪ್ಪತ್ತೊಂದು ರಾಜ್ಯಗಳಿಗೆ ಒಂದನೇ ಆಯ್ಕೆ ಮೂಲಕ 78,542 ಕೋಟಿ ರುಪಾಯಿ ಸಂಗ್ರಹಿಸಲು ಕೇಂದ್ರ ಅನುಮತಿ ನೀಡಿದೆ.