ಭಾರತದಲ್ಲಿ ಮತ್ತೊಂದು ಹೊಸ ಸಾರ್ವಕಾಲಿಕ ದಾಖಲೆ ಬರೆದ ಪೆಟ್ರೋಲ್; ಎಷ್ಟು ದರ?
ಭಾರತದಲ್ಲಿ ಶುಕ್ರವಾರ (ಜನವರಿ 22, 2021) ಪೆಟ್ರೋಲ್- ಡೀಸೆಲ್ ದರ ಹೊಸ ಸಾರ್ವಕಾಲಿಕ ಎತ್ತರಕ್ಕೆ ಏರಿದೆ. ಪೆಟ್ರೋಲ್ ದರ ಲೀಟರ್ ಗೆ 25 ಪೈಸೆ ಏರಿಕೆ ಆಗಿ, ಬೆಂಗಳೂರಿನಲ್ಲಿ ರು. 88.33, ನವದೆಹಲಿಯಲ್ಲಿ ರು. 85.45, ಕೋಲ್ಕತ್ತಾದಲ್ಲಿ ರು. 86.87, ಮುಂಬೈನಲ್ಲಿ ರು. 92.04, ಚೆನ್ನೈನಲ್ಲಿ ರು. 88.07 ಇದೆ.
ಇನ್ನು ಡೀಸೆಲ್ ದರ ಕೂಡ ಲೀಟರ್ ಗೆ 25 ಪೈಸೆ ಹೆಚ್ಚಳವಾಗಿದ್ದು, ಬೆಂಗಳೂರಿನಲ್ಲಿ ರು. 80.20, ನವದೆಹಲಿಯಲ್ಲಿ ರು. 75.63, ಕೋಲ್ಕತ್ತಾದಲ್ಲಿ ರು. 79.23, ಮುಂಬೈನಲ್ಲಿ ರು. 82.40, ಚೆನ್ನೈನಲ್ಲಿ ರು. 80.90 ಇದೆ. ಅಂತರರಾಷ್ಟ್ರೀಯ ಕಚ್ಚಾ ತೈಲ ದರ, ವಿದೇಶಿ ವಿನಿಮಯ ದರ, ಕೇಂದ್ರ ಸರ್ಕಾರದ ಸುಂಕ ಮತ್ತು ಸ್ಥಳೀಯ ತೆರಿಗೆಗಳು ಅಥವಾ ವ್ಯಾಟ್ ಆಧಾರದ ಮೇಲೆ ಭಾರತದಲ್ಲಿ ನಿತ್ಯವೂ ತೈಲ ದರದ ಪರಿಷ್ಕರಣೆ ಆಗುತ್ತದೆ.
ಪ್ರತಿ ಲೀಟರ್ ಪೆಟ್ರೋಲ್- ಡೀಸೆಲ್ ಗೆ ನೀವು ನೀಡುವ ಬೆಲೆಯಲ್ಲಿ 48% ಕೇಂದ್ರದ ಸುಂಕ
ಗುರುವಾರದಂದು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಇಳಿಕೆ ಕಂಡಿತ್ತು. ಜಾಗತಿಕ ಬೆಂಚ್ ಮಾರ್ಕ್, ಬ್ರೆಂಟ್ ಕಚ್ಚಾ ಫ್ಯೂಚರ್ಸ್ 3 ಪರ್ಸೆಂಟ್ ಇಳಿಕೆ ಕಂಡು, ಬ್ಯಾರೆಲ್ ಗೆ $ 56.05 ಇತ್ತು. ಆದರೆ ಭಾರತದಲ್ಲಿ ಪೆಟ್ರೋಲ್ -ಡೀಸೆಲ್ ದರ ನಿಗದಿ ಮಾಡಿವಾಗ ಅಂತರರಾಷ್ಟ್ರೀಯ ಮಟ್ಟದ ಬೆಲೆಯ ಹದಿನೈದು ದಿನಗಳ ಸರಾಸರಿಯನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ.
ಯು.ಎಸ್. ಹೊಸ ಅಧ್ಯಕ್ಷ ಜೋ ಬೈಡನ್ ಕೊರೊನಾ ಉತ್ತೇಜನ ಪ್ಯಾಕೇಜ್ ದೊಡ್ಡ ಮಟ್ಟದಲ್ಲಿ ಘೋಷಣೆ ಮಾಡುವ ನಿರೀಕ್ಷೆಯಲ್ಲಿ ಕಳೆದ ಎರಡು ದಿನಗಳು ಬೆಂಚ್ ಮಾರ್ಕ್ ಮೇಲೇರಿತ್ತು. ಒಪೆಕ್ ಮತ್ತು ಸಹವರ್ತಿಗಳಿಂದ ಉತ್ಪಾದನೆ ಕಡಿತ ಮಾಡುವ ನಿರ್ಧಾರಕ್ಕೆ ಬಂದಿರುವುದು ಸಹ ತೈಲ ಬೆಲೆ ಏರಿಕೆಗೆ ಕಾರಣವಾಗಿದೆ.
ಈ ಮಧ್ಯೆ, ವಿಶ್ವದಲ್ಲೇ ಅತಿ ಹೆಚ್ಚು ತೈಲ ಆಮದು ಮಾಡಿಕೊಳ್ಳುವ ದೇಶ ಚೀನಾದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವುದರಿಂದ ತೈಲ ಬೆಲೆ ಮೇಲೆ ಪರಿಣಾಮ ಆಗುತ್ತಿದೆ.