ಸ್ಟಾರ್ಟ್ ಅಪ್ ಗಳಿಗೆ 1000 ಕೋಟಿ ರು. ಸೀಡ್ ಫಂಡ್ ಘೋಷಣೆ ಮಾಡಿದ ಪ್ರಧಾನಿ
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸ್ಟಾರ್ಟ್ ಅಪ್ ಗಳಿಗಾಗಿ ಸೀಡ್ ಫಂಡ್ ಘೋಷಣೆ ಮಾಡಿದ್ದಾರೆ. ಅದರ ಭಾಗವಾಗಿ ಹೊಸ ಉದ್ಯಮಿಗಳಿಗೆ 1000 ಕೋಟಿ ರುಪಾಯಿಯನ್ನು ನೀಡಲಿದ್ದಾರೆ. "ನಾವು 1000 ಕೋಟಿ ರುಪಾಯಿಯ ಸ್ಟಾರ್ಟ್ ಅಪ್ ಇಂಡಿಯಾ ಸೀಡ್ ಫಂಡ್ ಆರಂಭಿಸುತ್ತಿದ್ದೇವೆ. ಇದರಿಂದ ದೇಶದಲ್ಲಿ ಹೊಸ ಸ್ಟಾರ್ಟ್ ಅಪ್ ಗಳು ಬೆಳೆಯಲು ಸಹಾಯ ಆಗುತ್ತದೆ.
"ಸ್ಟಾರ್ಟ್ ಅಪ್ ವ್ಯವಸ್ಥೆಯನ್ನು ಯುವಜನರಿಂದ, ಯುವಜನರಿಗಾಗಿ ಎಂಬ ಮಂತ್ರದೊಂದಿಗೆ ರೂಪಿಸಲಿದ್ದೇವೆ," ಎಂದು ಮೋದಿ ಹೇಳಿದ್ದಾರೆ. ಸ್ಟಾರ್ಟ್ ಅಪ್ ಇಂಡಿಯಾ ಅಂತರರಾಷ್ಟ್ರೀಯ ಸಮಾವೇಶ, ಪ್ರಾರಂಭ್ 2021ರಲ್ಲಿ ಅವರು ಈ ಬಗ್ಗೆ ಮಾತನಾಡಿದ್ದಾರೆ. ಸ್ಟಾರ್ಟ್ ಅಪ್ ಇಂಡಿಯಾವನ್ನು ಐದು ವರ್ಷಗಳ ಹಿಂದೆ ಆರಂಭಿಸಲಾಗಿದೆ.
ಬಜೆಟ್ 2021: MSME ವಲಯಕ್ಕೆ ಏನು ಸಿಗಬಹುದು?
ಮೋದಿ ಮಾತನಾಡಿ, ಇಂದು ದೇಶದಲ್ಲಿ 41,000ಕ್ಕೂ ಹೆಚ್ಚು ಸ್ಟಾರ್ಟ್ ಅಪ್ ಗಳಿವೆ.ಈ ಪೈಕಿ 44%ರಷ್ಟನ್ನು ಅಧಿಕೃತವಾಗಿ ಗುರುತಿಸಲಾಗಿದೆ. ಇನ್ಫರ್ಮೇಷನ್ ಟೆಕ್ನಾಲಜಿಯಲ್ಲಿ 5700ಕ್ಕೂ ಹೆಚ್ಚು, ಹೆಲ್ತ್ ಕೇರ್ ನಲ್ಲಿ 3600ರ ಸಮೀಪ ಸ್ಟಾರ್ಟ್ ಅಪ್ ಗಳು ಹಾಗೂ ಕೃಷಿ ಸಂಬಂಧಿ ಸ್ಟಾರ್ಟ್ ಅಪ್ ಗಳು 1700ಕ್ಕೂ ಹೆಚ್ಚಿವೆ ಎಂದು ತಿಳಿಸಿದ್ದಾರೆ.
ಕೊರೊನಾ ಅಡೆತಡೆಗಳ ಮಧ್ಯೆಯೂ 11 ಸ್ಟಾರ್ಟ್ ಅಪ್ ಗಳು 2020ರಲ್ಲಿ ಯೂನಿಕಾರ್ನ್ ಆಗಿ ಬದಲಾಗಿವೆ. 30 ಸ್ಟಾರ್ಟ್ ಅಪ್ ಗಳು ಭಾರತದಲ್ಲಿ 1 ಬಿಲಿಯನ್ ಯುಎಸ್ ಡಿ ದಾಟಿವೆ. 2014ರ ಏಪ್ರಿಲ್ ನಲ್ಲಿ ಕೇವಲ 4 ಸ್ಟಾರ್ಟ್ ಅಪ್ ಗಳಿದ್ದವು.
ದೊಡ್ಡ ಕಂಪೆನಿಗಳೇ ಜಾಗತಿಕ ಮಟ್ಟದಲ್ಲಿ ಅಸ್ತಿತ್ವಕ್ಕಾಗಿ ಹೆಣಗುತ್ತಿವೆ. ಭಾರತದಲ್ಲಿ ಸ್ಟಾರ್ಟ್ ಅಪ್ ಗಳು ಸ್ವಾವಲಂಬಿಗಳಾಗಲು ಹೆಜ್ಜೆಗಳನ್ನು ಇಡುತ್ತಿವೆ. ಕೊರೊನಾ ಸಮಯದಲ್ಲಿ ಇ- ಗ್ರೋಸರಿಯಿಂದ, ಇ- ಹೆಲ್ತ್, ಶಿಕ್ಷಣ, ವಾಣಿಜ್ಯ ಹೀಗೆ ನಾನಾ ಬಗೆಯಲ್ಲಿ ಅಗತ್ಯಗಳ ಪೂರೈಸಿದವು. ಈಗ ಸ್ಟಾರ್ಟ್ ಅಪ್ ಗಳು ಮೆಟ್ರೋಗೆ ಸೀಮಿತವಲ್ಲ ಎಂದು ಮೋದಿ ಹೇಳಿದ್ದಾರೆ.