ಓಮಿಕ್ರಾನ್ ಭೀತಿ ನಡುವೆ, ಸಾಲದ ದರಗಳು ಯಥಾಸ್ಥಿತಿ: RBI
ನವದೆಹಲಿ, ಡಿಸೆಂಬರ್ 8: ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಕೊರೊನಾವೈರಸ್ನ ಹೊಸ ರೂಪಾಂತರಿ ಓಮಿಕ್ರಾನ್ ಭೀತಿ ನಡುವೆ ಆರ್ಥಿಕ ನೀತಿ ಪರಾಮರ್ಶೆಯಲ್ಲಿ ತೊಡಗಿದೆ. ಬುಧವಾರದಂದು ದ್ವೈಮಾಸಿಕ ನೀತಿ ರೂಪಿಸುವ ಸಭೆ ನಡೆಸಿದ್ದು, ಬಹುತೇಕ ಎಲ್ಲಾ ದರಗಳನ್ನು ಯಥಾಸ್ಥಿತಿಯಲ್ಲೇ ಮುಂದುವರೆಸಿದೆ. ಸತತ 9ನೇ ಬಾರಿ ಪ್ರಮುಖ ಸಾಲದ ದರಗಳನ್ನು ಯಥಾಸ್ಥಿತಿಯಲ್ಲಿ ಆರ್ ಬಿ ಐ ಮುಂದುವರೆಸಿದೆ.
ಕೊರೊನಾವೈರಸ್ ಸಾಂಕ್ರಾಮಿಕದಿಂದ ಉಂಟಾಗಿರುವ ಈ ಹಿಂದಿನ ಆರ್ಥಿಕ ಸಂಕಷ್ಟ ಪರಿಸ್ಥಿತಿ ಮುಂದುವರೆದಿದ್ದು, ಇನ್ನೂ ಆರ್ಥಿಕ ಅನಿಶ್ಚಿತತೆ ಇದೆ. ಈ ನಡುವೆ ಆರ್ ಬಿ ಐ ತನ್ನ ದ್ವೈಮಾಸಿಕ ನೀತಿ ಪರಾಮರ್ಶೆ ಮೇಲೆ ಆರ್ಥಿಕ ವಲಯದ ಕಣ್ಣು ನೆಟ್ಟಿದೆ. ಅಕ್ಟೋಬರ್ನಲ್ಲಿ ನಡೆದ ಕೊನೆಯ ನೀತಿ ಪರಾಮರ್ಶೆಯಲ್ಲಿ ಆರ್ಬಿಐ ಸತತ ಎಂಟು ಬಾರಿ ಪ್ರಮುಖ ಸಾಲದ ದರಗಳನ್ನು ಯಥಾಸ್ಥಿತಿಯಲ್ಲಿಟ್ಟಿತ್ತು.
ಸಭೆಗೂ ಮುನ್ನ ನೀವು ತಿಳಿದುಕೊಳ್ಳಬೇಕಾದ ಅಂಕಿ ಅಂಶ:
* ರೆಪೊ ದರವನ್ನು 4% ನಲ್ಲಿ ಬದಲಾಯಿಸದೆ ಇರಿಸಲಾಗಿದೆ
* ರಿವರ್ಸ್ ರೆಪೊ ದರವನ್ನು 3.35% ನಲ್ಲಿ ಬದಲಾಯಿಸದೆ ಇರಿಸಲಾಗಿದೆ
* ಮಾರ್ಜಿನಲ್ ಸ್ಟ್ಯಾಂಡಿಂಗ್ ಫೆಸಿಲಿಟಿ (MSF) ದರವನ್ನು 4.25% ನಲ್ಲಿ ಬದಲಾಯಿಸದೆ ಇರಿಸಲಾಗಿದೆ
ಕೋವಿಡ್-19 ಅಪ್ಪಳಿಸಿದ ನಂತರ ಭಾರತದ ಆರ್ಥಿಕತೆಯಲ್ಲಿ ಉಂಟಾದ ಸಂಚಲನ
* ಏಪ್ರಿಲ್-ಜೂನ್ 2020 ತ್ರೈಮಾಸಿಕದಲ್ಲಿ, ಭಾರತದ GDP 24.4% ರಷ್ಟು ಕುಸಿದಿದೆ.
* 2021 ರ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಆರ್ಥಿಕತೆಯು 20.1% ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ
* ಜಿಡಿಪಿಯು ಜುಲೈ-ಸೆಪ್ಟೆಂಬರ್ 2021 ತ್ರೈಮಾಸಿಕದಲ್ಲಿ 8.4% ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ, ಹಿಂದಿನ ವರ್ಷದ ಅವಧಿಯಲ್ಲಿ 7.4% ನಷ್ಟಿತ್ತು.

ಅಕ್ಟೋಬರ್ ನೀತಿ ಪರಾಮರ್ಶೆ ಬಳಿಕ:
ಅಕ್ಟೋಬರ್ ನೀತಿ ಪರಾಮರ್ಶೆಯಲ್ಲಿ ಆರ್ಬಿಐ ಹೊಂದಾಣಿಕೆಯ ನಿಲುವನ್ನು ಉಳಿಸಿಕೊಂಡಿತ್ತು. ಅಕ್ಟೋಬರ್ 8 ರ ಸಭೆಯ ನಂತರ, ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್, ಕೇಂದ್ರ ಬ್ಯಾಂಕ್ ನೀತಿ ದರಗಳ ಮೇಲೆ 'ಹೊಂದಾಣಿಕೆ' ನಿಲುವನ್ನು ನಿರ್ವಹಿಸುತ್ತದೆ ಮತ್ತು ಹಣದುಬ್ಬರವು ಗುರಿಯ ವ್ಯಾಪ್ತಿಯಲ್ಲಿ ಉಳಿಯುತ್ತದೆ ಎಂದು ಖಚಿತಪಡಿಸುತ್ತದೆ. ಹೊಂದಾಣಿಕೆಯ ನಿಲುವು ದರಗಳನ್ನು ಕಡಿತಗೊಳಿಸುವ ಅಥವಾ ಯಥಾಸ್ಥಿತಿ ಕಾಯ್ದುಕೊಳ್ಳುವ ಇಚ್ಛೆಯನ್ನು ಸೂಚಿಸುತ್ತದೆ.
ಹಣದುಬ್ಬರ ಕಾಳಜಿ: ಹಣದುಬ್ಬರದಲ್ಲೂ ವ್ಯಾಪಕ ಏರಿಳಿತ ಕಂಡುಬಂದಿದೆ. ಆದರೆ, ಈ ಏರಿಳಿತಗಳು ತನ್ನ ನಿಯಂತ್ರಣಕ್ಕೆ ಮೀರಿದ ಅಂಶಗಳಿಂದ ಮಾರ್ಗದರ್ಶಿಸಲ್ಪಟ್ಟಿರುವುದರಿಂದ ಆರ್ಬಿಐ ಸದ್ಯಕ್ಕೆ ಕಾಯ್ದು ನೋಡುವ ವಿಧಾನವನ್ನು ಅನುಸರಿಸುತ್ತಿದೆ.