ವಿಶ್ವದ ಸಿರಿವಂತರ ಪಟ್ಟಿಯಲ್ಲಿ 11ನೇ ಸ್ಥಾನದಲ್ಲಿ ಮುಕೇಶ್; ಆಸ್ತಿ 5.78 ಲಕ್ಷ ಕೋಟಿ ರು.
ವಿಶ್ವದ ಅತ್ಯಂತ ಸಿರಿವಂತರ ಪಟ್ಟಿಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಎರಡು ಸ್ಥಾನಗಳನ್ನು ಮೇಲೇರಿದ್ದಾರೆ. ಸೆನ್ಸೆಕ್ಸ್, ನಿಫ್ಟಿ ದಾಖಲೆ ಎತ್ತರಕ್ಕೆ ಏರಿ, ಸ್ವಲ್ಪ ಮಟ್ಟಿಗೆ ಇಳಿಕೆ ಕಂಡಿದೆ. ಜನವರಿ 22, 2021ರಂದು ಬ್ಲೂಮ್ ಬರ್ಗ್ ಸೂಚ್ಯಂಕದ ದತ್ತಾಂಶ ತೆರೆದಿಟ್ಟಿರುವ ದತ್ತಾಂಶ ಇದು. ಮುಕೇಶ್ ಅಂಬಾನಿ ಈಗ 11ನೇ ಸ್ಥಾನದಲ್ಲಿದ್ದು, ನಿವ್ವಳ ಆಸ್ತಿ ಮೌಲ್ಯ 5.78 ಲಕ್ಷ ಕೋಟಿ ರುಪಾಯಿ ($ 79.2 ಬಿಲಿಯನ್) ಹೊಂದಿದ್ದಾರೆ.
ತೈಲದಿಂದ ಟೆಲಿಕಾಂ ತನಕದ ಉದ್ಯಮ ನಡೆಸುವ ರಿಲಯನ್ಸ್ ಇಂಡಸ್ಟ್ರೀಸ್ ಮೊನ್ನೆ ಶುಕ್ರವಾರದಂದು ಫಲಿತಾಂಶ ಪ್ರಕಟಿಸಿದೆ. ಅಕ್ಟೋಬರ್ ನಿಂದ ಡಿಸೆಂಬರ್ ತ್ರೈಮಾಸಿಕದಲ್ಲಿ ರು. 13,101 ಕೋಟಿ ನಿವ್ವಳ ಲಾಭ ಗಳಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದಲ್ಲಿ 12.55 ಪರ್ಸೆಂಟ್ ಹೆಚ್ಚು ಲಾಭ ದಾಖಲಿಸಿದೆ.
5 ವರ್ಷ ಕರ್ನಾಟಕ ನಡೆಸುವಷ್ಟು ಹಣ ಇರುವ ಮಸ್ಕ್ ಈಗ ವಿಶ್ವದ ನಂ. 1 ಶ್ರೀಮಂತ
2021ರ ಜನವರಿಯಲ್ಲಿ ಇಲ್ಲಿಯ ತನಕ ರಿಲಯನ್ಸ್ ಷೇರು 3 ಪರ್ಸೆಂಟ್ ಏರಿಕೆ ಕಂಡಿದೆ. ಆದರೆ ಈ ಷೇರಿನ ಬೆಲೆ ಸೆಪ್ಟೆಂಬರ್ 16, 2020ರಂದು ವಾರ್ಷಿಕ ಗರಿಷ್ಠ ಮಟ್ಟವಾದ ರು. 2368 ತಲುಪಿತ್ತು. ಆ ಹಂತದಿಂದ ಸದ್ಯಕ್ಕೆ 15.53 ಪರ್ಸೆಂಟ್ ಕೆಳ ಮಟ್ಟದಲ್ಲಿದೆ. ಇನ್ನು ರಿಲಯನ್ಸ್ ಮಾರ್ಚ್ 23, 2020ರಂದು ವಾರ್ಷಿಕ ಕನಿಷ್ಠ ಮಟ್ಟವಾದ ರು. 878ಕ್ಕೆ ಕುಸಿದಿತ್ತು. ಆ ನಂತರ 170% ಹೆಚ್ಚಳವಾಗಿ ಸಾರ್ವಕಾಲಿಕ ದಾಖಲೆ ಮುಟ್ಟಿತ್ತು.

ವಿಶ್ವದ ಟಾಪ್ ಟೆನ್ ಶ್ರೀಮಂತರು ಮತ್ತು ಅವರ ಆಸ್ತಿ ವಿವರ
* ಎಲಾನ್ ಮಸ್ಕ್- $ 202 ಬಿಲಿಯನ್
* ಜೆಫ್ ಬೆಜೋಸ್- $ 192 ಬಿಲಿಯನ್
* ಬಿಲ್ ಗೇಟ್ಸ್- $ 133 ಬಿಲಿಯನ್
* ಬರ್ನಾರ್ಡ್ ಅರ್ನಾಲ್ಟ್- $ 112 ಬಿಲಿಯನ್
* ಮಾರ್ಕ್ ಝುಕರ್ ಬರ್ಗ್- $ 104 ಬಿಲಿಯನ್
* ಝೋಂಗ್ ಶನ್ಷನ್- $ 88.9 ಬಿಲಿಯನ್
* ವಾರೆನ್ ಬಫೆಟ್- $ 88.4 ಬಿಲಿಯನ್
* ಲ್ಯಾರಿ ಪೇಜ್- $ 88.4 ಬಿಲಿಯನ್
* ಸೆರ್ಗೆ ಬ್ರಿನ್- $ 85.5 ಬಿಲಿಯನ್
* ಸ್ಟೀವ್ ಬಲ್ಮರ್- $ 81.6 ಬಿಲಿಯನ್
* ಲ್ಯಾರಿ ಎಲಿಸನ್- $ 78.4 ಬಿಲಿಯನ್