ಬಿಲ್ ಗೇಟ್ಸ್ ನ ಬ್ರೇಕ್ ಥ್ರೂ ಎನರ್ಜಿ ವೆಂಚರ್ಸ್ ನಲ್ಲಿ ರಿಲಯನ್ಸ್ 50 ಮಿಲಿಯನ್ USD ಹೂಡಿಕೆ
ಎನರ್ಜಿಯಿಂದ ಟೆಲಿಕಾಂ ತನಕ ವ್ಯವಹಾರ ನಡೆಸುವ ರಿಲಯನ್ಸ್ ಇಂಡಸ್ಟ್ರೀಸ್ ಗುರುವಾರದಂದು ಹೇಳಿರುವ ಪ್ರಕಾರ, ಬ್ರೇಕ್ ಥ್ರೂ ಎನರ್ಜಿ ವೆಂಚರ್ಸ್ II LP (BEV)ನಲ್ಲಿ 50 ಮಿಲಿಯನ್ ಯುಎಸ್ ಡಿ (371 ಕೋಟಿ ರುಪಾಯಿ) ತನಕ ಹೂಡಿಕೆ ಮಾಡಲಿದೆ. ಬ್ರೇಕ್ ಥ್ರೂ ಎನರ್ಜಿ ವೆಂಚರ್ಸ್ ನೇತೃತ್ವವನ್ನು ಮೈಕ್ರೋಸಾಫ್ಟ್ ಸ್ಥಾಪಕ ಬಿಲ್ ಗೇಟ್ಸ್ ವಹಿಸಿದ್ದಾರೆ.
50 ಮಿಲಿಯನ್ ಯುಎಸ್ ಡಿ ಹೂಡಿಕೆಗೆ ಸದ್ಯದ ಲೆಕ್ಕಾಚಾರದಲ್ಲಿ 5.75 ಪರ್ಸೆಂಟ್ ಪಾಲು ದೊರೆಯಲಿದೆ. ಈ ಹೂಡಿಕೆ ಮುಂದಿನ ಎಂಟರಿಂದ ಹತ್ತು ವರ್ಷಗಳಲ್ಲಿ ಕಂತು ಕಂತಿನಲ್ಲಿ ಹೂಡಿಕೆ ಮಾಡಲಾಗುವುದು ಎಂದು ರಿಲಯನ್ಸ್ ರೆಗ್ಯುಲೇಟರಿ ಫೈಲಿಂಗ್ ನಲ್ಲಿ ತಿಳಿಸಿದೆ.
ಜಿಯೋ- ಕ್ವಾಲ್ ಕಾಮ್ ನಿಂದ ಯಶಸ್ವಿ 5G ಪರೀಕ್ಷೆ; 1 Gbps ವೇಗದಲ್ಲಿ ಡೇಟಾ ಟ್ರಾನ್ಸ್ ಫರ್
ಬ್ರೇಕ್ ಥ್ರೂ ಎನರ್ಜಿ ಮತ್ತು ಕೃಷಿ ತಂತ್ರಜ್ಞಾನದಲ್ಲಿ ಹೂಡಿಕೆ ಮಾಡುವ ಮೂಲಕ ಹವಾಮಾನ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳುವುದಕ್ಕೆ ಬಿಇವಿ ಯತ್ನಿಸುತ್ತಿದೆ. ಬಿಇವಿಗೆ ಹೂಡಿಕೆದಾರರ ಮೂಲಕ ಬರುವ ಹಣವನ್ನು ಕ್ಲೀನ್ ಎನರ್ಜಿ ಆವಿಷ್ಕಾರವನ್ನು ಬೆಂಬಲಿಸುವುದಕ್ಕೆ ಬಳಸಲಾಗುತ್ತದೆ.
ಈಗಿನ ಪ್ರಯತ್ನದ ಫಲಿತಾಂಶದಿಂದ ಭಾರತಕ್ಕೆ ಮಹತ್ತರವಾದ ಪ್ರಾಮುಖ್ಯ ಇದೆ. ಇಡೀ ಮನುಕೂಲಕ್ಕೆ ಇದರಿಂದ ಅನುಕೂಲ ಆಗಲಿದೆ. ಜತೆಗೆ ಹೂಡಿಕೆದಾರರಿಗೆ ಉತ್ತಮ ರಿಟರ್ನ್ಸ್ ನೀಡಲಿದೆ ಎಂದು ರಿಲಯನ್ಸ್ ಹೇಳಿದೆ.
ರಿಲಯನ್ಸ್ ಇಂಡಸ್ಟ್ರೀಸ್ ನ ಈ ಹೂಡಿಕೆ ವ್ಯವಹಾರಕ್ಕೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಅನುಮತಿ ಬೇಕಾಗುತ್ತದೆ. ಈ ಹೂಡಿಕೆಯು ವ್ಯಕ್ತಿಗಳಿಗೆ ಸಂಬಂಧಿಸಿದ ಹೂಡಿಕೆ ಆಗಿರುವುದಿಲ್ಲ. ರಿಲಯನ್ಸ್ ಪ್ರವರ್ತಕರು ಅಥವಾ ಪ್ರವರ್ತಕರ ಗುಂಪು ಅಥವಾ ಗುಂಪಿನ ಕಂಪೆನಿಗಳಿಗೆ ಈ ವ್ಯವಹಾರದಲ್ಲಿ ಯಾವ ಹಿತಾಸಕ್ತಿ ಇರುವುದಿಲ್ಲ.