ಚೇತರಿಸಿಕೊಂಡ ನಿಫ್ಟಿ, ಸೆನ್ಸೆಕ್ಸ್: ಷೇರು ಮಾರುಕಟ್ಟೆ ಶುಭಾರಂಭ
ಕೊನೆಯ ವಹಿವಾಟಿನಲ್ಲಿ ನಷ್ಟದೊಂದಿಗೆ ಅಂತ್ಯ ಕಂಡಿದ್ದ ಷೇರು ಮಾರುಕಟ್ಟೆ ಇಂದು ಆರಂಭಿಕ ವಹಿವಾಟಿನಲ್ಲಿ ಚೇತರಿಕೆ ಕಂಡಿದೆ. ನಿಧಾನಗತಿಯ ಆರ್ಥಿಕತೆಯನ್ನು ಬೆಂಬಲಿಸಲು ಚೀನಾ ಪ್ರಮುಖ ಸಾಲದ ದರವನ್ನು ಕಡಿತಗೊಳಿಸಿದ ಬಳಿಕ ಏಷ್ಯಾದ ಷೇರುಗಳು ಜಿಗಿದವು.
ಆರಂಭಿಕ ವಹಿವಾಟಿನಲ್ಲಿ 30-ಷೇರು ಬಿಎಸ್ಇ ಸೆನ್ಸೆಕ್ಸ್ 1,016 ಪಾಯಿಂಟ್ಗಳು ಅಥವಾ ಶೇಕಡಾ 1.92 ರಷ್ಟು ಜಿಗಿದು 53,808 ಕ್ಕೆ ತಲುಪಿದೆ. ಎನ್ಎಸ್ಇ ನಿಫ್ಟಿ 323 ಪಾಯಿಂಟ್ ಅಥವಾ 2.04 ರಷ್ಟು ಏರಿಕೆಯಾಗಿ 16,132ರಂತೆ ವಹಿವಾಟು ಪ್ರಾರಂಭ ಮಾಡಿದೆ.
ನಿಫ್ಟಿ ಮಿಡ್ಕ್ಯಾಪ್ 100 ಶೇಕಡಾ 2.09 ಮತ್ತು ಸ್ಮಾಲ್ ಕ್ಯಾಪ್ ಶೇಕಡಾ 1.93 ರಷ್ಟು ಏರಿದ್ದರಿಂದ ಮಿಡ್ ಮತ್ತು ಸ್ಮಾಲ್ ಕ್ಯಾಪ್ ಷೇರುಗಳು ಲಾಭದೊಂದಿಗೆ ವಹಿವಾಟು ಆರಂಭ ಮಾಡಿದೆ. ನಿಫ್ಟಿ ಮೆಟಲ್, ನಿಫ್ಟಿ ಆಟೋ ಮತ್ತು ನಿಫ್ಟಿ ಪಿಎಸ್ಯು ಬ್ಯಾಂಕ್ ಕ್ರಮವಾಗಿ ಶೇಕಡಾ 3.39, 2.54 ಮತ್ತು ಶೇಕಡಾ 2.25 ರಷ್ಟು ಏರಿಕೆಯಾಗಿದೆ.

ಯಾವೆಲ್ಲ ಸ್ಟಾಕ್ ಕುಸಿತ, ಯಾವುದು ಏರಿಕೆ?
ಜೆಎಸ್ಡಬ್ಲ್ಯು ಸ್ಟೀಲ್ ಟಾಪ್ ಗೇನರ್ ಆಗಿದೆ. ಜೆಎಸ್ಡಬ್ಲ್ಯು ಸ್ಟೀಲ್ ಷೇರುಗಳು ಶೇಕಡಾ 4.51 ರಷ್ಟು ಏರಿಕೆಯಾಗಿ ರೂಪಾಯಿ 627.25 ಕ್ಕೆ ತಲುಪಿದೆ. ಟಾಟಾ ಮೋಟಾರ್ಸ್, ಡಾ ರೆಡ್ಡೀಸ್, ಟಾಟಾ ಸ್ಟೀಲ್ ಮತ್ತು ಅದಾನಿ ಪೋರ್ಟ್ಸ್ ಕೂಡ ಲಾಭ ಗಳಿಸಿದೆ.
ಬಿಎಸ್ಇಯಲ್ಲಿ 334 ಷೇರುಗಳು ಕುಸಿತ ಕಂಡರೆ, 2,223 ಷೇರುಗಳು ಲಾಭ ಗಳಿಸಿದೆ. ಎಲ್ಲಾ ಸೆನ್ಸೆಕ್ಸ್ ಘಟಕಗಳು ಲಾಭದೊಂದಿಗೆ ವಹಿವಾಟು ನಡೆಸುತ್ತಿವೆ. ಬಿಎಸ್ಇ ಸೂಚ್ಯಂಕದಲ್ಲಿ, ಟಾಟಾ ಸ್ಟೀಲ್, ಡಾ ರೆಡ್ಡೀಸ್, ಇಂಡಸ್ಇಂಡ್ ಬ್ಯಾಂಕ್, ಎಸ್ಬಿಐ, ಸನ್ ಫಾರ್ಮಾ, ನೆಸ್ಲೆ ಇಂಡಿಯಾ, ಹಿಂದೂಸ್ತಾನ್ ಯೂನಿಲಿವರ್, ಭಾರ್ತಿ ಏರ್ಟೆಲ್, ಐಟಿಸಿ, ಇನ್ಫೋಸಿಸ್, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಕೋಟಕ್ ಮಹೀಂದ್ರಾ ಬ್ಯಾಂಕ್ ಲಾಭವನ್ನು ಗಳಿಸಿದೆ.
ಭಾರತೀಯ ಜೀವ ವಿಮಾ ನಿಗಮದ (ಎಲ್ಐಸಿ) ಷೇರುಗಳು ಅದರ ಹಿಂದಿನ ಬೆಲೆ 840.75 ರೂಪಾಯಿಗಿಂತ ಕೊಂಚ ಏರಿಕೆ ಕಂಡಿದೆ. 1.39 ರಷ್ಟು ಏರಿಕೆಯಾಗಿ 852.45 ರೂಪಾಯಿಗೆ ತಲುಪಿದೆ. ಗುರುವಾರದಂದು ಸೆನ್ಸೆಕ್ಸ್ 1,416 ಅಂಕಗಳು ಅಥವಾ ಶೇಕಡಾ 2.61 ರಷ್ಟು ಇಳಿದು 52,792 ಕ್ಕೆ ತಲುಪಿದ್ದರೆ, ನಿಫ್ಟಿ 431 ಪಾಯಿಂಟ್ ಅಥವಾ 2.65 ಶೇಕಡಾ ಕುಸಿದು 15,809 ಕ್ಕೆ ವಹಿವಾಟು ಅಂತ್ಯ ಮಾಡಿದೆ.