For Quick Alerts
ALLOW NOTIFICATIONS  
For Daily Alerts

'ಹಿಂದೂ ವರ್ಷನ್ ಆಫ್ ಐಎಂಎ' ಗುರುರಾಘವೇಂದ್ರ ಸಹಕಾರ ಬ್ಯಾಂಕ್ ನಲ್ಲಿ ವಂಚನೆ ನಡೆಯಿತೆ?

|

ಬೆಂಗಳೂರಿನ ಪ್ರಶಾಂತವಾದ ಬಡಾವಣೆಗಳಲ್ಲಿ ಎನ್. ಆರ್. ಕಾಲೋನಿ ಕೂಡ ಒಂದು. ಅಲ್ಲಿನ ನೆಟ್ಟಕಲ್ಲಪ್ಪ ಸರ್ಕಲ್ ಬಸ್ ಸ್ಟ್ಯಾಂಡ್ ಹತ್ತಿರವೇ ಜಾವಾ ಬೈಕ್ ಗಳ ಶೋರೂಮ್ ಇದ್ದು, ಅದರ ಎದುರಿಗೇ ಇರುವ ಶ್ರೀ ಗುರುರಾಘವೇಂದ್ರ ಸಹಕಾರ ಬ್ಯಾಂಕ್ ನ ಹೊರಗೆ ಮೂರ್ನಾಲ್ಕು ದಿನದಿಂದ ಹತ್ತಾರು ಪೊಲೀಸರಿದ್ದಾರೆ. ಜತೆಗೆ ಜನವೋ ಜನ. ಎಲ್ಲರ ಕೈಯಲ್ಲಿ ಒಂದೋ ಪಾಸ್ ಬುಕ್, ಇಲ್ಲದಿದ್ದಲ್ಲಿ ಆರ್.ಡಿ., ಎಫ್.ಡಿ. ಸರ್ಟಿಫಿಕೇಟ್ ಗಳು.

ಈ ಜನರಲ್ಲಿ ತುಂಬ ಸಾಮಾನ್ಯವಾಗಿ ಗಮನಿಸಬಹುದಾದದ್ದು ಏನೆಂದರೆ, ಶೇಕಡಾ ಎಂಬತ್ತಕ್ಕೂ ಹೆಚ್ಚು ಮಂದಿ ಹಿರಿಯ ನಾಗರಿಕರು, ಬ್ರಾಹ್ಮಣ ಸಮಾಜದ ಮಾಧ್ವ ಉಪಪಂಗಡದವರು. ಈ ಬ್ಯಾಂಕ್ ನ 'ಆರ್ಥಿಕ ಸ್ಥಿತಿ ಉತ್ತಮ ಆಗುವ ತನಕ ಕೆಲವು ನಿರ್ಬಂಧಗಳನ್ನು ಹೇರಿದ್ದೇವೆ' ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸುತ್ತೋಲೆ ಹೊರಡಿಸಿದ ಮೇಲೆ ಗಾಬರಿ ಗಾಬರಿಯಿಂದ ಬ್ಯಾಂಕ್ ಮುಂದೆ ಜಮಾಯಿಸುತ್ತಿದ್ದಾರೆ.

 

ಲಾಕರ್ ಅನ್ನು ಬಳಸಲು ಬರುತ್ತಿರುವ ಗ್ರಾಹಕರಿಗೆ ಬ್ಯಾಂಕ್ ಸಿಬ್ಬಂದಿ ಅನುವು ಮಾಡಿಕೊಡುತ್ತಿದ್ದಾರೆ. ಹಣ ವಿಥ್ ಡ್ರಾ ಮಾಡಬೇಕು ಅಂದರೆ ಬ್ಯಾಂಕ್ ನಿಂದ ನೀಡಿದ ದಾಖಲೆ ಯಾವುದಾದರೂ ತರಬೇಕಿದೆ.

'ಶ್ರೀ ಗುರು ರಾಘವೇಂದ್ರ' ಕಡೆ ಕೈ ತೋರುವ ಗ್ರಾಹಕರು

'ಶ್ರೀ ಗುರು ರಾಘವೇಂದ್ರ' ಕಡೆ ಕೈ ತೋರುವ ಗ್ರಾಹಕರು

ಈ ಹೂಡಿಕೆದಾರರನ್ನು ಮಾತನಾಡಿಸಿದರೆ, "ನಾನು ರಿಟೈರ್ ಆದ ಮೇಲೆ ಬಂದಿದ್ದ ಹಣವನ್ನೆಲ್ಲ ಇಲ್ಲಿ ಎಫ್.ಡಿ. ಮಾಡಿದ್ದೆ" ಎಂಬ ಉತ್ತರ ಕೂಡ ಸಾಮಾನ್ಯವಾಗಿ ಕೇಳಿಬರುತ್ತದೆ. ಎಷ್ಟೊಂದು ಬ್ಯಾಂಕ್ ಗಳಿವೆ, ಈಗಿನ ಬಡ್ಡಿ ದರ (ಬ್ಯಾಂಕ್ ನ ಹೊರಗೆ ಹಾಕಿರುವ ಬೋರ್ಡ್ ಪ್ರಕಾರ) ನೋಡಿದರೆ, ಯಾವುದಾದರೂ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲೇ ಹಣ ಇಡಬಹುದಿತ್ತಲ್ಲಾ ಎಂಬ ಪ್ರಶ್ನೆ ಮುಂದಿಟ್ಟರೆ, ಬ್ಯಾಂಕ್ ನ ಹೆಸರಿನಲ್ಲಿ ಇರುವ 'ಶ್ರೀ ಗುರು ರಾಘವೇಂದ್ರ' ಎಂಬುದರ ಕಡೆ ಕೈ ತೋರಿಸಿ, ಆ ಹೆಸರನ್ನು ನೋಡಿ, ನಮ್ಮವರಲ್ಲವಾ ಎಂದುಕೊಂಡು ಹಣ ಹಾಕಿದೆವು ಎನ್ನುತ್ತಾರೆ. ಅಂದ ಹಾಗೆ ಈ ಬ್ಯಾಂಕ್ ನಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮೊತ್ತ ಉಳಿತಾಯ ಖಾತೆಯಲ್ಲಿ ಇದ್ದರೆ ಅದಕ್ಕೇ ವಾರ್ಷಿಕ ಬಡ್ಡಿ ಆರು ಪರ್ಸೆಂಟ್ ಎಂದಿದೆ. ಆದರೆ ಎಫ್.ಡಿ. ಹೊರತಾಗಿ ಬೇರೆ ಬೇರೆ ಸ್ಕೀಮುಗಳು ಈ ಸಹಕಾರ ಬ್ಯಾಂಕ್ ನಲ್ಲಿ ಇದ್ದವು. ಆರಾಧನಾ ಎಂಬ ಯೋಜನೆಯಲ್ಲಿ ಹಣ ತೊಡಗಿಸಿದರೆ ಹೆಚ್ಚಿನ ಹಣ ಸಿಗುವಂತೆ ಬಡ್ಡಿ ದರ ದೊರೆಯುತ್ತಿತ್ತು ಎಂದರು ಈ ಬ್ಯಾಂಕ್ ನ ಸದಸ್ಯರು. ಹೀಗೆ ಮಾತನಾಡಿದ ಸದಸ್ಯರು, ಮತ್ತವರ ಪತ್ನಿ ಹಾಗೂ ಮಕ್ಕಳ ಹೆಸರಲ್ಲಿ ಇಪ್ಪತ್ತೆಂಟು ಲಕ್ಷ ರುಪಾಯಿ ಇರಿಸಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಅವರ ಖಾತೆ ಈ ಬ್ಯಾಂಕ್ ನಲ್ಲಿದೆ.

ಗುರುನರಸಿಂಹ ಕಲ್ಯಾಣ ಮಂಟಪದಲ್ಲಿ ಸಭೆ
 

ಗುರುನರಸಿಂಹ ಕಲ್ಯಾಣ ಮಂಟಪದಲ್ಲಿ ಸಭೆ

ತನ್ನ್ ತಂದೆ- ತಾಯಿ ಪರವಾಗಿ ಬ್ಯಾಂಕ್ ನ ಬಳಿ ಬಂದಿದ್ದ ವ್ಯಕ್ತಿಯೊಬ್ಬರ ಮಾತು ಸಹ, 'ಗುರು ರಾಘವೇಂದ್ರ' ಹೆಸರಿನೊಂದಿಗೆ ಶುರು ಆಯಿತು. ಜನವರಿ ಹದಿಮೂರನೇ ತಾರೀಕು (ಸೋಮವಾರ) ಸಂಜೆ ಆರು ಗಂಟೆಗೆ ಗುರುನರಸಿಂಹ ಕಲ್ಯಾಣ ಮಂಟಪದಲ್ಲಿ (ರಾಮಕೃಷ್ಣಾಶ್ರಮದ ಹತ್ತಿರ ಇದೆ) ಸಭೆ ಇದೆ. ಅದರಲ್ಲಿ ಬ್ಯಾಂಕ್ ಅಧ್ಯಕ್ಷ ರಾಮಕೃಷ್ಣ ಮಾತನಾಡುತ್ತಾರೆ. ಅವರು ಏನು ಹೇಳುತ್ತಾರೋ ನೋಡಬೇಕು. ಯಾವುದೇ ಬ್ಯಾಂಕ್ ನಲ್ಲಿ ಇಂಥ ಸ್ಥಿತಿ ರಾತ್ರೋ ರಾತ್ರಿ ಉದ್ಭವಿಸಲ್ಲ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ನಿಯಮಿತವಾಗಿ ಪರಿಶೀಲನೆ ನಡೆದರೆ ಹೀಗೆ ಆಗುವುದಿಲ್ಲ. ಒಂದೋ ಕಣ್ತಪ್ಪಿನಿಂದ ಇಂಥ ಸ್ಥಿತಿ ಉದ್ಭವಿಸಿರಬೇಕು ಅಥವಾ ಅಲ್ಲಿನ ಯಾರೋ ಈ ಬಗ್ಗೆ ಗೊತ್ತಿದ್ದೂ ಸುಮ್ಮನಿರಬೇಕು. ಪಂಜಾಬ್ ನ್ಯಾಷನಲ್ ಬ್ಯಾಂಕ್ ನಂಥ ನ್ಯಾಷನಲೈಸ್ಡ್ ಬ್ಯಾಂಕ್ ನಲ್ಲೇ ವಂಚನೆ ಆಗುತ್ತದೆ. ಅಂಥದ್ದರಲ್ಲಿ ಇಂಥಲ್ಲಿ ಆಗಿದ್ದರಲ್ಲಿ ಯಾವ ಆಶ್ಚರ್ಯವೂ ಇಲ್ಲ. ನನ್ನ ತಂದೆ-ತಾಯಿಯದು ಒಂದೂಮುಕ್ಕಾಲು ಲಕ್ಷ ರುಪಾಯಿ ಹಣ ಡೆಪಾಸಿಟ್ ಇದೆ. ಒಂದು ಲಕ್ಷದ ಮೊತ್ತಕ್ಕೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಇನ್ಷೂರೆನ್ಸ್ ಇರುತ್ತದೆ ಎನ್ನುತ್ತಾರೆ. ಆದರೆ ಅದೇನು ಉಳಿತಾಯ ಖಾತೆಗೋ, ಡೆಪಾಸಿಟ್ ಗೋ ಅಥವಾ ಯಾವ ಆಧಾರದ ಮೇಲೆ, ಎಷ್ಟು ಸಮಯದೊಳಗೆ ಹಣ ಹಿಂತಿರುಗಿಸುತ್ತಾರೆ ಎಂಬ ಸ್ಪಷ್ಟನೆ ಇಲ್ಲ ಎಂದರು.

ಐನೂರು ಕೋಟಿ ರುಪಾಯಿಗೂ ಹೆಚ್ಚು ಎನ್ ಪಿಎ

ಐನೂರು ಕೋಟಿ ರುಪಾಯಿಗೂ ಹೆಚ್ಚು ಎನ್ ಪಿಎ

ಶ್ರೀ ಗುರುರಾಘವೇಂದ್ರ ಸಹಕಾರ ಬ್ಯಾಂಕ್ ನ ಮುಖ್ಯ ಕಚೇರಿ ಬಸವನಗುಡಿಯಲ್ಲಿ ಇದೆ. ಇನ್ನು ಬೆಂಗಳೂರಿನ ಕನಕಪುರ ರಸ್ತೆ, ಪೂರ್ಣಪ್ರಜ್ಞ ಲೇಔಟ್, ಕೆಂಗೇರಿ, ರಾಜರಾಜೇಶ್ವರಿ ನಗರ್, ವಿದ್ಯಾರಣ್ಯಪುರ, ಬಿಟಿಎಂ ಲೇಔಟ್, ರಾಜಾಜಿನಗರ್ ನಲ್ಲಿ ಶಾಖೆಗಳು ಇವೆ. ಪ್ರಾಥಮಿಕ ಮಾಹಿತಿ ಪ್ರಕಾರ, ಬ್ಯಾಂಕ್ ನ ನಾನ್ ಪರ್ಫಾರ್ಮಿಂಗ್ ಅಸೆಟ್ಸ್ (ಅನುತ್ಪಾದಕ ಆಸ್ತಿ) ಐನೂರು ಕೋಟಿ ರುಪಾಯಿಗೂ ಹೆಚ್ಚಿದೆ. ಇನ್ನು ಸದಸ್ಯರ ಹಾಗೂ ಖಾತೆದಾರರ ಸಂಖ್ಯೆ ಗಮನಿಸಿದರೆ ಸುಲಭವಾಗಿ ಹನ್ನೆರಡು ಸಾವಿರ ದಾಟಿ ಹೋಗುತ್ತದೆ. ನೆಟ್ಟಕಲ್ಲಪ್ಪ ಸರ್ಕಲ್ ಬಳಿ ಸಾಲುಗಟ್ಟಿ ನಿಂತಿದ್ದ ಹತ್ತು ಹನ್ನೆರಡು ಜನರನ್ನು ಮಾತನಾಡಿಸಿದರೂ ಈ ಬ್ಯಾಂಕ್ ನಲ್ಲಿ ಅವರು ಇಟ್ಟಿದ್ದ ಮೊತ್ತ ಮೂರ್ನಾಲ್ಕು ಕೋಟಿ ದಾಟಿಹೋಗುತ್ತದೆ. ನಿವೃತ್ತಿ ನಂತರ ಬಂದ ಹಣವನ್ನು ಇಡಿಇಡಿಯಾಗಿ ಈ ಬ್ಯಾಂಕ್ ನಲ್ಲಿ ಇಟ್ಟಿದ್ದಾರೆ. ಭಾನುವಾರದಂದು ಬ್ಯಾಂಕ್ ಬಳಿ ಬಂದವರಿಗೆ ಮ್ಯಾನೇಜರ್ ಮಾತನಾಡಲು ಸಿಕ್ಕಿದ್ದರಂತೆ. ಆ ಕಾರಣಕ್ಕೆ ಬ್ಯಾಂಕ್ ಆಡಳಿತ ಮಂಡಳಿಯವರಿಗೆ ಮೋಸ ಮಾಡುವ ಉದ್ದೇಶ ಇಲ್ಲ ಎಂಬುದು ಹೂಡಿಕೆದಾರರ ಬಲವಾದ ವಿಶ್ವಾಸ.

ಗುರು ರಾಘವೇಂದ್ರರೇ ಕಾಪಾಡಬೇಕು

ಗುರು ರಾಘವೇಂದ್ರರೇ ಕಾಪಾಡಬೇಕು

ಒಂದು ಸಮುದಾಯದ ನಂಬಿಕೆಯು ಬ್ಯಾಂಕ್ ನ ಹೆಸರಿನ ಮೇಲೆ ಈ ಪರಿ ಅವಲಂಬನೆ ಆಗುತ್ತದೆಯಾ? 'ಗುರು ರಾಘವೇಂದ್ರ ಸಹಕಾರ ಬ್ಯಾಂಕ್' ಪ್ರಕರಣದಲ್ಲಿ ಅದು ನಿಜವಾಗಿರುವುದು ಸ್ಪಷ್ಟವಾಗುತ್ತದೆ. ಇನ್ನು ಹಣ ಹೂಡಿದವರು ಒಂದು ಹಂತದ ಶಿಕ್ಷಣ ಪಡೆದವರು, ನಿತ್ಯದ ವಿದ್ಯಮಾನಗಳನ್ನು ಗಮನಿಸುವವರು. ಆದರೂ ಹತ್ತಾರು ಲಕ್ಷ ರುಪಾಯಿಯನ್ನು ಹೆಚ್ಚಿನ ಬಡ್ಡಿ ಆಸೆಗೆ ಬ್ಯಾಂಕ್ ನಲ್ಲಿ ಇಟ್ಟಿದ್ದಾರೆ. ಹೀಗೆ ಹಣ ಇಟ್ಟವರ ಭಾವನೆಗಳು ಒಂದೇ ರೀತಿ ಸ್ಪಂದಿಸಿರುವುದು ಸಹ ಬ್ಯಾಂಕ್ ನ ಹೆಸರಲ್ಲಿ ಇರುವ 'ಶ್ರೀ ಗುರು ರಾಘವೇಂದ್ರ' ಎಂಬುದಕ್ಕೆ. ಬ್ಯಾಂಕ್ ನ ಹಣ ಎನ್ ಪಿಎ ಆಗಿರುವುದು ಹೌದಾಗಿ, ಅವು ಬ್ಯಾಡ್ ಡೆಟ್ ಅಂತಾದಲ್ಲಿ ಹೂಡಿಕೆದಾರರ ಹಣಕ್ಕೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ನಿಯಮಾವಳಿ ಪ್ರಕಾರ, ಒಂದು ಲಕ್ಷದ ಇನ್ಷೂರೆನ್ಸ್ ದೊರೆಯಬಹುದು. ಅದರ ನಿಯಮಾವಳಿಗಳು ಕೂಡ ಗೆರೆ ಕೊಯ್ದಂತೆ ಸ್ಪಷ್ಟವಾಗಿಲ್ಲ. ಸದ್ಯದ ಸ್ಥಿತಿಯಲ್ಲಿ ಹೇಳಬೇಕೆಂದರೆ, ಹೂಡಿಕೆದಾರರು ನಂಬಿದ ಶ್ರೀ ಗುರು ರಾಘವೇಂದ್ರರೇ ಕಾಪಾಡಬೇಕು.

ಕೆಲ ಸಮಯದ ಹಿಂದೆ ಬೆಂಗಳೂರಿನಲ್ಲಿ ಮುಸ್ಲಿಮರಿಗೆ ಹೆಚ್ಚಿನ ಪ್ರಮಾಣದಲ್ಲಿ ವಂಚನೆಯಾದ ಪ್ರಕರಣ ಹಸಿರಾಗಿದೆ. ಅಲ್ಲಿ ಧರ್ಮದ ಆಧಾರದಲ್ಲಿ ಜನರು ಒಬ್ಬ ವ್ಯಕ್ತಿಯನ್ನು ನಂಬಿ, ಹಣ ಹೂಡಿದರು. ಈಗಿನ ಪ್ರಕರಣದಲ್ಲಿ 'ಶ್ರೀ ಗುರು ರಾಘವೇಂದ್ರ'ರ ಮೇಲೆ ನಂಬಿಕೆಗೆ ಜನರು ತಮ್ಮ ಹಣ ಹೂಡಿದ್ದಾರೆ.

English summary

Sri Guru Raghavendra Sahakara Bank Inside Story; Who Lost What, At What Cost?

Sri Guru Raghavendra Sahakara bank head office at Basavanagudi. RBI imposed some restrictions on this bank. Here is the inside story.
Story first published: Monday, January 13, 2020, 16:46 [IST]
Company Search
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more