18,000 ಕೋಟಿ ರೂಪಾಯಿಗೆ ಏರ್ ಇಂಡಿಯಾ ಬಿಡ್ ಗೆದ್ದ ಟಾಟಾ ಗ್ರೂಪ್
ಅಂತೂ ಇಂತೂ ಏರ್ಇಂಡಿಯಾ ಟಾಟಾ ಸನ್ಸ್ ತೆಕ್ಕೆಗೆ ಬೀಳುವಲ್ಲಿ ಯಶಸ್ವಿಯಾಗಿದೆ. ಟಾಟಾ ಸನ್ಸ್ನ ಪ್ರೈವೇಟ್ ಲಿಮಿಟೆಡ್ 18,000 ಕೋಟಿ ರೂಪಾಯಿಗಳಿಗೆ ಹರಾಜಿನಲ್ಲಿ ವಿಜೇತರಾಗಿ ಹೊರಹೊಮ್ಮಿದೆ. ಇಡೀ ವಹಿವಾಟು ಈ ವರ್ಷದ ಡಿಸೆಂಬರ್ನಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
ಈ ಕುರಿತು ಅಧಿಕೃತ ಘೋಷಣೆಯನ್ನು ಮಾಡಿರುವ ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣಾ ಇಲಾಖೆಯ ಕಾರ್ಯದರ್ಶಿ ತುಹಿನ್ ಕಾಂತ್ ಪಾಂಡೆ ಟಾಟಾ ಸನ್ಸ್ ಗೆಲುವಿನ ಕುರಿತು ತಿಳಿಸಿದರು. ಈ ಹರಾಜು ಪ್ರಕ್ರಿಯೆ ಪೂರ್ಣಗೊಂಡ ನಂತರ, ಸುಮಾರು 68 ವರ್ಷಗಳ ನಂತರ, ಟಾಟಾ ಕಂಪನಿಯು ಮತ್ತೆ ಏರ್ ಇಂಡಿಯಾದಲ್ಲಿ ಮಾಲೀಕತ್ವದ ಹಕ್ಕುಗಳನ್ನು ಪಡೆದುಕೊಂಡಿದೆ.

18,000 ಕೋಟಿಯ ಬಿಡ್ ಗೆಲುವು
ಜೆಆರ್ಡಿ ಟಾಟಾ ಅವರ ಕನಸಿನ ಕೂಸಾದ ಏರ್ ಇಂಡಿಯಾ ಇದೀಗ ಟಾಟಾ ಸನ್ಸ್ಗೆ ಹಿಂದಿರುಗಿದೆ. ಈ ಹರಾಜಿನ ಫಲಿತಾಂಶವನ್ನು ಪ್ರಕಟಿಸಿದ ಡಿಐಪಿಎಎಮ್ ಕಾರ್ಯದರ್ಶಿ ತುಹಿನ್ ಕಾಂತ್ ಪಾಂಡೆ, "ಟಾಟಾ ಸನ್ಸ್ ಟೇಲ್ಸ್ ಪ್ರೈವೇಟ್ ಲಿಮಿಟೆಡ್ 18,000 ಕೋಟಿ ಬಿಡ್ನೊಂದಿಗೆ ವಿಜೇತರಾಗಿದೆ" ಎಂದು ಹೇಳಿದರು.
ಡಿಸೆಂಬರ್ 2021 ರ ಅಂತ್ಯದ ವೇಳೆಗೆ ವಹಿವಾಟು ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ. ಏರ್ ಇಂಡಿಯಾದ ಮೀಸಲು ಬೆಲೆಯನ್ನು ಭಾರತ ಸರ್ಕಾರವು ರೂ 12,906 ಕೋಟಿಗೆ ನಿಗದಿಪಡಿಸಿದೆ.
ಬಿಡ್ ಗೆಲುವಿನ ಹರ್ಷ ವ್ಯಕ್ತಪಡಿಸಿದ ರತನ್ ಟಾಟಾ
ಏರ್ ಇಂಡಿಯಾ 68 ವರ್ಷಗಳ ಬಳಿಕ ತನ್ನ ಸಂಸ್ಥಾಪಕರ ಮಾಲೀಕತ್ವಕ್ಕೆ ವಾಪಸ್ಸಾಗಿರುವುದಕ್ಕೆ ರತನ್ ಟಾಟಾ ಭಾರೀ ಖುಷಿ ಪಟ್ಟಿದ್ದಾರೆ. ಈ ಕುರಿತು ಟ್ವೀಟ್ನಲ್ಲಿ ಏರ್ ಇಂಡಿಯಾವನ್ನ ಸ್ವಾಗತಿಸಿದ್ದಾರೆ.
ಏರ್ ಇಂಡಿಯಾ ಬಿಡ್ ಗೆದ್ದ ನಂತರ, ರತನ್ ಟಾಟಾ ಹೀಗೆ ಟ್ವೀಟ್ ಮಾಡಿದ್ದಾರೆ: "ಏರ್ ಇಂಡಿಯಾ, ವೆಲ್ಕಂ ಬ್ಯಾಕ್"

ಬಿಡ್ನಲ್ಲಿ ಟಾಟಾಗೆ ಪ್ರಬಲ ಪೈಪೋಟಿ ನೀಡಿದ ಸ್ಪೈಸ್ಜೆಟ್
ಟಾಟಾ ಸನ್ಸ್ 18,000 ಕೋಟಿ ರೂ.ಗೆ ಗೆಲ್ಲುವ ಬಿಡ್ಡರ್ ಆಗಿ ಹೊರಹೊಮ್ಮುವ ಮೊದಲು ಟಾಟಾಗೆ ಸ್ಪೈಸ್ ಜೆಟ್ ಪ್ರಬಲ ಪೈಪೋಟಿಯನ್ನು ನೀಡಿತು. ಸ್ಪೈಸ್ ಜೆಟ್ ಸಿಎಂಡಿ ಅಜಯ್ ಸಿಂಗ್ ನೇತೃತ್ವದ ಒಕ್ಕೂಟವು ಏರ್ ಇಂಡಿಯಾವನ್ನು ಸ್ವಾಧೀನಪಡಿಸಿಕೊಳ್ಳಲು 15,100 ಕೋಟಿ ರೂ.ವರೆಗೂ ಪ್ರಯತ್ನ ಮಾಡಿತು.
''ಏರ್ ಇಂಡಿಯಾದ ಯಶಸ್ವಿ ಬಂಡವಾಳ ಹೂಡಿಕೆಗೆ ನಾನು ಸರ್ಕಾರವನ್ನು ಅಭಿನಂದಿಸುತ್ತೇನೆ. ಅವರು ಪಾರದರ್ಶಕ ಮತ್ತು ಹೊಂದಿಕೊಳ್ಳುವ ಪ್ರಕ್ರಿಯೆಯನ್ನು ನಡೆಸಿದರು ಮತ್ತು ಭಾರತದ ಬಂಡವಾಳ ಹೂಡಿಕೆಯ ಕಾರ್ಯಕ್ರಮಕ್ಕೆ ಹೊಸ ಉತ್ತೇಜನ ನೀಡಿದರು. ನನ್ನ ಜೀವನದುದ್ದಕ್ಕೂ ನಾನು ಏರ್ ಇಂಡಿಯಾ ಅಭಿಮಾನಿಯಾಗಿದ್ದೆ ಮತ್ತು ಏರ್ ಇಂಡಿಯಾ ವಿಶ್ವದ ಪ್ರಮುಖ ವಿಮಾನಯಾನ ಸಂಸ್ಥೆಯಾಗಿ ತನ್ನ ಸ್ಥಾನವನ್ನು ಮರಳಿ ಪಡೆಯುವ ಸಮಯ ಬಂದಿದೆ'' ಎಂದು ಸ್ಪೈಸ್ ಜೆಟ್ ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಜಯ್ ಸಿಂಗ್ ಹೇಳಿದರು.

ಬಿಡ್ ಗೆದ್ದ ಖುಷಿಯಲ್ಲಿ ಟಾಟಾ ಸನ್ಸ್ ಅಧ್ಯಕ್ಷ ಎನ್. ಚಂದ್ರಶೇಖರನ್
ಬಹುನಿರೀಕ್ಷಿತ ಏರ್ ಇಂಡಿಯಾ ಬಿಡ್ ಗೆಲ್ಲುವಲ್ಲಿ ಯಶಸ್ವಿಯಾಗಿರುವ ಟಾಟಾ ಸನ್ಸ್ ಕುರಿತಾಗಿ ಅಧ್ಯಕ್ಷ ಎನ್. ಚಂದ್ರಶೇಖರನ್ ಹರ್ಷ ವ್ಯಕ್ತಪಡಿಸಿದ್ದಾರೆ.
"ಟಾಟಾ ಸಮೂಹದಲ್ಲಿ, ನಾವು ಏರ್ ಇಂಡಿಯಾ ಗಾಗಿ ಬಿಡ್ ವಿಜೇತರಾಗಿ ಘೋಷಿಸಲ್ಪಟ್ಟಿದ್ದು ಸಂತೋಷವಾಗಿದೆ. ಇದೊಂದು ಐತಿಹಾಸಿಕ ಕ್ಷಣವಾಗಿದ್ದು, ದೇಶದ ಧ್ವಜ ಹೊತ್ತ ವಿಮಾನಯಾನ ಸಂಸ್ಥೆಯನ್ನು ನಮ್ಮ ಗುಂಪು ಹೊಂದಲು ಮತ್ತು ನಿರ್ವಹಿಸಲು ಇದು ಅಪರೂಪದ ಅವಕಾಶವಾಗಿದೆ. ಪ್ರತಿಯೊಬ್ಬ ಭಾರತೀಯನು ಹೆಮ್ಮೆ ಪಡುವಂತಹ ವಿಶ್ವ ದರ್ಜೆಯ ವಿಮಾನಯಾನ ಸಂಸ್ಥೆಯನ್ನು ನಿರ್ಮಿಸುವುದು ನಮ್ಮ ಪ್ರಯತ್ನವಾಗಿದೆ. ಈ ಸಂದರ್ಭದಲ್ಲಿ, ನಾನು ಜೆಆರ್ಡಿಗೆ ಗೌರವ ಸಲ್ಲಿಸಲು ಬಯಸುತ್ತೇನೆ. ಟಾಟಾ, ಭಾರತೀಯ ವಾಯುಯಾನದ ಪ್ರವರ್ತಕ, ಅವರ ಸ್ಮರಣೆಯನ್ನು ನಾವು ಗೌರವಿಸುತ್ತೇವೆ'' ಎಂದು ಎನ್. ಚಂದ್ರಶೇಖರನ್ ಹೇಳಿದ್ದಾರೆ.

ಏರ್ ಇಂಡಿಯಾ ಸ್ಥಾಪಿಸಿದ್ದು ಜೆಆರ್ಡಿ ಟಾಟಾ
1932 ರಲ್ಲಿ ಏರ್ಇಂಡಿಯಾವನ್ನು ಜೆಆರ್ಡಿ ಟಾಟಾ ಸ್ಥಾಪಿಸಿದರು, ಆದರೆ ವಾಯುಯಾನ ಕ್ಷೇತ್ರವನ್ನು ರಾಷ್ಟ್ರೀಕರಣಗೊಳಿಸಿದ ನಂತರ, ಸರ್ಕಾರವು ತನ್ನ ಪಾಲನ್ನು ಖರೀದಿಸಿತು. ಏರ್ ಇಂಡಿಯಾವನ್ನು ಸಾರ್ವಜನಿಕ ಕಂಪನಿಯಾಗಿ ಮಾಡಲಾಗಿದೆ. ಇದನ್ನು 1953ರಲ್ಲಿ ರಾಷ್ಟ್ರೀಕರಣ ಮಾಡಲಾಗಿತ್ತು. ಹೀಗೆ ಸರಕಾರದ ಒಡೆತನಕ್ಕೆ ಸೇರಿದ ಸಂಸ್ಥೆಯನ್ನು ಮತ್ತೆ ಟಾಟಾ ಸನ್ಸ್ ಖರೀದಿಸಿದೆ.

ಮೊದಲ ಪ್ರಯತ್ನದಲ್ಲಿ ವಿಫಲಗೊಂಡಿದ್ದ ಸರ್ಕಾರ
ಹೌದು ಏರ್ ಇಂಡಿಯಾದಲ್ಲಿನ ಪಾಲನ್ನು ಹಿಂತೆಗೆದುಕೊಳ್ಳಲು ಸರ್ಕಾರ ನಡೆಸಿದ ಎರಡನೇ ಪ್ರಯತ್ನ ಇದಾಗಿದ್ದು, ಕೊನೆಗೂ ಸಫಲಗೊಂಡಿದೆ. ಈ ಹಿಂದೆ 2018ರಲ್ಲಿ ವಿಮಾನಯಾನ ಸಂಸ್ಥೆಯಲ್ಲಿರುವ ಶೇ. 76ರಷ್ಟು ಷೇರನ್ನು ಮಾರಾಟ ಮಾಡುವ ಸರಕಾರದ ಪ್ರಸ್ತಾವನೆಗೆ ಯಾವುದೇ ಹೂಡಿಕೆದಾರರು ಆಸಕ್ತಿ ವ್ಯಕ್ತಪಡಿಸಿರಲಿಲ್ಲ. ಕಾರಣ ಏರ್ ಇಂಡಿಯಾ ಖಾಸಗೀಕರಣಗೊಳಿಸಿದ ನಂತರವೂ ಸರ್ಕಾರ ಇದರಲ್ಲಿ ಶೇ. 26ರಷ್ಟು ಪಾಲನ್ನು ಉಳಿಸಿಕೊಳ್ಳಲು ಯೋಜಿಸಿತ್ತು. ಆದರೆ ಈ ಬಾರಿ ಶೇಕಡಾ 100ರಷ್ಟು ಪಾಲನ್ನು ಮಾರಾಟ ಮಾಡಲು ಒಪ್ಪಿಕೊಂಡಾಗ ಅನೇಕ ಕಂಪನಿಗಳು ಬಿಡ್ಗೆ ಮುಂದಾಗಿದ್ದವು, ಅಂತಿಮವಾಗಿ ಟಾಟಾ ಸನ್ಸ್ ಫೈನಲ್ ಬಿಡ್ ಗೆದ್ದುಕೊಂಡಿದೆ.