For Quick Alerts
ALLOW NOTIFICATIONS  
For Daily Alerts

Explained: ಕೇಂದ್ರ ಬಜೆಟ್ 2022ರ ಸಂಪೂರ್ಣ ಮಾಹಿತಿ ಓದಿ

|

ನವದೆಹಲಿ, ಫೆಬ್ರವರಿ 1: ದೇಶದ 2022-23ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಮಂಡಿಸಿದ್ದಾರೆ. 2014ರಲ್ಲಿ ಅಧಿಕಾರಕ್ಕೆ ಬಂದ ನಂತರ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರದ 10ನೇ ಬಜೆಟ್ ಮತ್ತು ನಿರ್ಮಲಾ ಸೀತಾರಾಮನ್ ಮಂಡಿಸಿದ ನಾಲ್ಕನೇ ಬಜೆಟ್ ಆಗಿದೆ.

 

ಉಭಯ ಸದನಗಳನ್ನು ಉದ್ದೇಶಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮಾತನಾಡಿದ ನಂತರ ಸಂಸತ್ತಿನಲ್ಲಿ ಬಜೆಟ್ ಅಧಿವೇಶನ ಪ್ರಾರಂಭಿಸಿದರು. ಬಳಿಕ ನಿರ್ಮಲಾ ಸೀತಾರಾಮನ್ ಆರ್ಥಿಕ ಸಮೀಕ್ಷೆ ಮಂಡಿಸಿದರು. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿ ಮಂಗಳವಾರ ಕಳೆದ ವರ್ಷದಂತೆ ಕಾಗದರಹಿತ ರೂಪದಲ್ಲಿ 2022-23ನೇ ಸಾಲಿನ ಬಜೆಟ್ ಅನ್ನು ಮಂಡಿಸಿದ್ದಾರೆ.

ಭಾರತದ 2022-23ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಘೋಷಿಸಿದ ಪ್ರಮುಖ ಯೋಜನೆಗಳು ಯಾವುವು?, ಕೇಂದ್ರ ಬಜೆಟ್‌ನಲ್ಲಿ ಯಾವ ವಲಯಕ್ಕೆ ಏನು ಕೊಡುಗೆ ನೀಡಲಾಗಿದೆ ಎಂಬುದರ ಕುರಿತು ವಿಸ್ತೃತ ವರದಿ ಇಲ್ಲಿದೆ ನೋಡಿ.

ಬಜೆಟ್‌ನ ಪ್ರಮುಖ ಅಂಶಗಳು

ಬಜೆಟ್‌ನ ಪ್ರಮುಖ ಅಂಶಗಳು

- ಭಾರತದ ಆರ್ಥಿಕ ಬೆಳವಣಿಗೆಯು ಶೇ.9.2 ಎಂದು ಅಂದಾಜಿಸಲಾಗಿದ್ದು, ಇದು ಎಲ್ಲಾ ದೊಡ್ಡ ಆರ್ಥಿಕತೆಗಳ ಪೈಕಿ ಅತ್ಯಧಿಕವಾಗಲಿದೆ.

- 14 ವಲಯಗಳಲ್ಲಿ ಉತ್ಪಾದಕತೆ ಆಧಾರಿತ ಪ್ರೋತ್ಸಾಹ ಯೋಜನೆಯಡಿಯಲ್ಲಿ 60 ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸಲಾಗುವುದು.

- ಪಿಎಲ್ಐ ಯೋಜನೆಗಳು 30 ಲಕ್ಷ ಕೋಟಿ ರೂ. ಹೆಚ್ಚುವರಿ ಉತ್ಪಾದನೆಯನ್ನು ಸೃಷ್ಟಿಸುವ ಸಾಮರ್ಥ್ಯವನ್ನು ಹೊಂದಿವೆ.

- ಭಾರತ @100ಕ್ಕೆ 25 ವರ್ಷಗಳ ದೀರ್ಘಾವಧಿಯ ಅಮೃತ್ ಕಾಲವನ್ನು ಪ್ರವೇಶಿಸುತ್ತಿದ್ದು, ಬಜೆಟ್ ನಾಲ್ಕು ಆದ್ಯತೆಗಳ ಜೊತೆಗೆ ಬೆಳವಣಿಗೆಗೆ ಉತ್ತೇಜನ ನೀಡುತ್ತದೆ

ಪಿಎಂ ಗತಿಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್:

ಪಿಎಂ ಗತಿಶಕ್ತಿಗೆ ರಸ್ತೆಗಳು, ರೈಲ್ವೆ, ವಿಮಾನ ನಿಲ್ದಾಣಗಳು, ಬಂದರುಗಳು, ಸಮೂಹ ಸಾರಿಗೆ, ಜಲಮಾರ್ಗಗಳು ಮತ್ತು ಲಾಜಿಸ್ಟಿಕ್ಸ್ ಮೂಲಸೌಕರ್ಯಗಳು ಏಳು ಎಂಜಿನ್‌ಗಳಾಗಿವೆ. ಪಿಎಂ ಗತಿಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್‌ನ ವ್ಯಾಪ್ತಿಯು ಆರ್ಥಿಕ ಪರಿವರ್ತನೆ, ತಡೆರಹಿತ ಬಹುಮಾದರಿ ಸಂಪರ್ಕ ಮತ್ತು ಲಾಜಿಸ್ಟಿಕ್ಸ್ ದಕ್ಷತೆಗಾಗಿ ಏಳು ಎಂಜಿನ್‌ಗಳನ್ನು ಒಳಗೊಂಡಿದೆ. ರಾಷ್ಟ್ರೀಯ ಮೂಲಸೌಕರ್ಯ ಪೈಪ್‌ಲೈನ್‌ನಲ್ಲಿ ಈ 7 ಎಂಜಿನ್‌ಗಳಿಗೆ ಸಂಬಂಧಿಸಿದ ಯೋಜನೆಗಳನ್ನು ಪಿಎಂ ಗತಿಶಕ್ತಿ ಚೌಕಟ್ಟಿನೊಂದಿಗೆ ರೂಪಿಸಲಾಗುತ್ತದೆ.

ರೈಲ್ವೆ ಮತ್ತು ರಸ್ತೆ ಸಾರಿಗೆಗೆ ಬಜೆಟ್ ಕೊಡುಗೆ
 

ರೈಲ್ವೆ ಮತ್ತು ರಸ್ತೆ ಸಾರಿಗೆಗೆ ಬಜೆಟ್ ಕೊಡುಗೆ

ರಾಷ್ಟ್ರೀಯ ಹೆದ್ದಾರಿಗಳ ಜಾಲವನ್ನು 2022-23 ರಲ್ಲಿ 25,000 ಕಿಮೀ ವಿಸ್ತರಿಸಲಾಗುವುದು. ರಾಷ್ಟ್ರೀಯ ಹೆದ್ದಾರಿಗಳ ಜಾಲ ವಿಸ್ತರಣೆಗೆ 20000 ಕೋಟಿ ರೂಪಾಯಿ ನೀಡಲಾಗಿದೆ. 2022-23 ರಲ್ಲಿ ನಾಲ್ಕು ಸ್ಥಳಗಳಲ್ಲಿ ಮಲ್ಟಿಮೋಡಲ್ ಲಾಜಿಸ್ಟಿಕ್ಸ್ ಪಾರ್ಕ್‌ಗಳ ಅನುಷ್ಠಾನಕ್ಕಾಗಿ ಪಿಪಿಪಿ ಮಾದರಿಯಲ್ಲಿ ಗುತ್ತಿಗೆ ನೀಡಲಾಗುವುದು.

ಸ್ಥಳೀಯ ವ್ಯವಹಾರಗಳು ಮತ್ತು ಪೂರೈಕೆ ಸರಪಳಿಗಳಿಗೆ ಸಹಾಯ ಮಾಡಲು ಒಂದು ನಿಲ್ದಾಣ ಒಂದು ಉತ್ಪನ್ನದ ಪರಿಕಲ್ಪನೆಯಿದೆ. 2022-23 ರಲ್ಲಿ ದೇಶೀಯ ವಿಶ್ವ ದರ್ಜೆಯ ತಂತ್ರಜ್ಞಾನ ಮತ್ತು ಸಾಮರ್ಥ್ಯ ವರ್ಧನೆಗಾಗಿ 2000 ಕಿಮೀ ರೈಲ್ವೆ ಜಾಲವನ್ನು 'ಕವಚ್' ಅಡಿಯಲ್ಲಿ ತರಲಾಗುವುದು. ಮುಂದಿನ ಮೂರು ವರ್ಷಗಳಲ್ಲಿ 400 ಹೊಸ ಪೀಳಿಗೆಯ ವಂದೇ ಭಾರತ್ ರೈಲುಗಳನ್ನು ತಯಾರಿಸಲಾಗುವುದು. ಮಲ್ಟಿಮೋಡಲ್ ಲಾಜಿಸ್ಟಿಕ್ಸ್‌ಗಾಗಿ 100 ಪಿಎಂ ಗತಿಶಕ್ತಿ ಕಾರ್ಗೋ ಟರ್ಮಿನಲ್‌ಗಳನ್ನು ಮುಂದಿನ ಮೂರು ವರ್ಷಗಳಲ್ಲಿ ಅಭಿವೃದ್ಧಿಪಡಿಸಲಾಗುವುದು.

ಕೃಷಿ ವಲಯಕ್ಕೆ ನೀಡಿದ ಕೊಡುಗೆ

ಕೃಷಿ ವಲಯಕ್ಕೆ ನೀಡಿದ ಕೊಡುಗೆ

- ಗೋಧಿ ಮತ್ತು ಭತ್ತದ ಖರೀದಿಗಾಗಿ 1.63 ಕೋಟಿ ರೈತರಿಗೆ 2.37 ಲಕ್ಷ ಕೋಟಿ ರೂ.ನೇರ ಪಾವತಿ.

- ದೇಶದಾದ್ಯಂತ ರಾಸಾಯನಿಕ ಮುಕ್ತ ಸಹಜ ಕೃಷಿಯನ್ನು ಉತ್ತೇಜಿಸಲಾಗುವುದು.

- ಆರಂಭಿಕವಾಗಿ ಗಂಗಾ ನದಿಯ ಉದ್ದಕ್ಕೂ 5 ಕಿಮೀ ಅಗಲದ ಕಾರಿಡಾರ್‌ಗಳಲ್ಲಿ ರೈತರ ಜಮೀನುಗಳ ಮೇಲೆ ಗಮನವನ್ನು ಕೇಂದ್ರೀಕರಿಸಲಾಗುವುದು.

- ಕೃಷಿ ಮತ್ತು ಗ್ರಾಮೀಣ ಉದ್ಯಮಗಳ ಸ್ಟಾರ್ಟಪ್‌ಗಳಿಗೆ ಹಣಕಾಸು ಒದಗಿಸಲು ಸಂಯೋಜಿತ ಬಂಡವಾಳ ನಿಧಿಯನ್ನು ನಬಾರ್ಡ್ ಸುಗಮಗೊಳಿಸುತ್ತದೆ.

- ಬೆಳೆ ಮೌಲ್ಯಮಾಪನ, ಭೂ ದಾಖಲೆಗಳ ಡಿಜಿಟಲೀಕರಣ, ಕೀಟನಾಶಕಗಳು ಮತ್ತು ಪೋಷಕಾಂಶಗಳ ಸಿಂಪರಣೆಗಾಗಿ 'ಕಿಸಾನ್ ಡ್ರೋನ್ಸ್'.

- ಕೆನ್ - ಬೆಟ್ವಾ ಜೋಡಣೆ ಯೋಜನೆಯ ಅನುಷ್ಠಾನಕ್ಕೆ 1400 ಕೋಟಿ ರೂ.ವೆಚ್ಚ.

- ಕೆನ್-ಬೆಟ್ವಾ ಜೋಡಣೆ ಯೋಜನೆಯಿಂದ 9.08 ಲಕ್ಷ ಹೆಕ್ಟೇರ್ ರೈತರ ಜಮೀನುಗಳಿಗೆ ನೀರಾವರಿ.

ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮ:

- ಉದ್ಯಮ್, ಇ-ಶ್ರಮ್, ಎನ್ ಸಿ ಎಸ್ ಮತ್ತು ಅಸೀಮ್ ಪೋರ್ಟಲ್‌ಗಳ ಪರಸ್ಪರ ಜೋಡಣೆ.

- 130 ಲಕ್ಷ ಎಂಎಸ್ಎಂಇಗಳಿಗೆ ತುರ್ತು ಸಾಲ ಖಾತ್ರಿ ಯೋಜನೆ (ಇ ಸಿ ಎಲ್ ಜಿ ಎಸ್ ) ಅಡಿಯಲ್ಲಿ ಹೆಚ್ಚುವರಿ ಸಾಲ ಒದಗಿಸಲಾಗಿದೆ.

- ಇ ಸಿ ಎಲ್ ಜಿ ಎಸ್ ಅನ್ನು ಮಾರ್ಚ್ 2023 ರವರೆಗೆ ವಿಸ್ತರಿಸಲಾಗುವುದು.

- ಇ ಸಿ ಎಲ್ ಜಿ ಎಸ್ ಅಡಿಯಲ್ಲಿ ಖಾತರಿ ಕವರ್ ಅನ್ನು 50000 ಕೋಟಿ ರೂ.ಗಳಿಂದ ಒಟ್ಟು 5 ಲಕ್ಷ ಕೋಟಿ ರೂ.ಗಳಿಗೆ ವಿಸ್ತರಿಸಲಾಗುವುದು.

- ಮೈಕ್ರೋ ಮತ್ತು ಸ್ಮಾಲ್ ಎಂಟರ್‌ಪ್ರೈಸಸ್ ಕ್ರೆಡಿಟ್ ಗ್ಯಾರಂಟಿ ಟ್ರಸ್ಟ್ (ಸಿಜಿಟಿಎಂಎಸ್ಇ) ಅಡಿಯಲ್ಲಿ ಕಿರು ಮತ್ತು ಸಣ್ಣ ಉದ್ಯಮಗಳಿಗೆ 2 ಲಕ್ಷ ಕೋಟಿ ಹೆಚ್ಚುವರಿ ಸಾಲ.

- 6000 ಕೋಟಿ ರೂ.ಗಳ ವೆಚ್ಚದಲ್ಲಿ ಎಂಎಸ್ಎಂಇ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಮತ್ತು ವೇಗಗೊಳಿಸುವ ಕಾರ್ಯಕ್ರಮವನ್ನು ಹೊರತರಲಾಗುವುದು.

 

ಶಿಕ್ಷಣ ಹಾಗೂ ಕೌಶಲ್ಯ ಅಭಿವೃದ್ಧಿ

ಶಿಕ್ಷಣ ಹಾಗೂ ಕೌಶಲ್ಯ ಅಭಿವೃದ್ಧಿ

- ಪಿಎಂ ಇ-ವಿದ್ಯಾದ 'ಒಂದು ತರಗತಿ -ಒಂದು ಟಿವಿ ಚಾನೆಲ್' ಕಾರ್ಯಕ್ರಮವನ್ನು 200 ಟಿವಿ ಚಾನೆಲ್‌ಗಳಿಗೆ ವಿಸ್ತರಿಸಲಾಗುವುದು.

- ವರ್ಚುವಲ್ ಲ್ಯಾಬ್‌ಗಳು ಮತ್ತು ಸ್ಕಿಲಿಂಗ್ ಇ-ಲ್ಯಾಬ್‌ಗಳನ್ನು ನಿರ್ಣಾಯಕ ಚಿಂತನಾ ಕೌಶಲ್ಯ ಮತ್ತು ಕಲಿಕೆಯ ವಾತಾವರಣವನ್ನು ಉತ್ತೇಜಿಸಲು ಸ್ಥಾಪಿಸಲಾಗುವುದು.

- ಡಿಜಿಟಲ್ ಶಿಕ್ಷಕರ ಮೂಲಕ ತಲುಪಿಸಲು ಉತ್ತಮ ಗುಣಮಟ್ಟದ ಇ-ಕಂಟೆಂಟ್ ಅಭಿವೃದ್ಧಿಪಡಿಸಲಾಗುವುದು.

- ವೈಯಕ್ತಿಕ ನೆಲೆಯ ಕಲಿಕಾ ಅನುಭವದೊಂದಿಗೆ ವಿಶ್ವದರ್ಜೆಯ ಗುಣಮಟ್ಟದ ಸಾರ್ವತ್ರಿಕ ಶಿಕ್ಷಣಕ್ಕಾಗಿ ಡಿಜಿಟಲ್ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗುವುದು.

ಕೌಶಲ್ಯ:

- ಕೌಶಲ್ಯ ಮತ್ತು ಜೀವನೋಪಾಯಕ್ಕಾಗಿ ಡಿಜಿಟಲ್ ಪರಿಸರ ವ್ಯವಸ್ಥೆ (DESH-ಸ್ಟಾಕ್ ಇ-ಪೋರ್ಟಲ್) ಅನ್ನು ಆನ್‌ಲೈನ್ ತರಬೇತಿಯ ಮೂಲಕ ನಾಗರಿಕರಿಗೆ ಕೌಶಲ್ಯ, ಮರುಕೌಶಲ್ಯ ಅಥವಾ ಕೌಶಲ್ಯವನ್ನು ಹೆಚ್ಚಿಸಲು ಪ್ರಾರಂಭಿಸಲಾಗುವುದು.

- 'ಡ್ರೋನ್ ಶಕ್ತಿ' ಮತ್ತು ಡ್ರೋನ್-ಆಸ್-ಎ-ಸೇವೆಗೆ (DrAAS) ಅನುಕೂಲವಾಗುವಂತೆ ಸ್ಟಾರ್ಟ್‌ಅಪ್‌ಗಳನ್ನು ಉತ್ತೇಜಿಸಲಾಗುತ್ತದೆ.

ಕೇಂದ್ರ ಬಜೆಟ್ ಇತರೆ ಪ್ರಮುಖ ಯೋಜನೆಗಳ ಮಾಹಿತಿ

ಕೇಂದ್ರ ಬಜೆಟ್ ಇತರೆ ಪ್ರಮುಖ ಯೋಜನೆಗಳ ಮಾಹಿತಿ

ಆರೋಗ್ಯ:

- ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಪರಿಸರ ವ್ಯವಸ್ಥೆಗಾಗಿ ಮುಕ್ತ ವೇದಿಕೆಯನ್ನು ಆರಂಭಿಸಲಾಗುವುದು.

- ಗುಣಮಟ್ಟದ ಮಾನಸಿಕ ಆರೋಗ್ಯ ಸಮಾಲೋಚನೆ ಮತ್ತು ಆರೈಕೆ ಸೇವೆಗಳಿಗಾಗಿ 'ರಾಷ್ಟ್ರೀಯ ಟೆಲಿ ಮಾನಸಿಕ ಆರೋಗ್ಯ ಕಾರ್ಯಕ್ರಮ' ಪ್ರಾರಂಭಿಸಲಾಗುವುದು.

- 23 ಟೆಲಿ- ಮಾನಸಿಕ ಆರೋಗ್ಯ ಕೇಂದ್ರಗಳ ನೆಟ್‌ವರ್ಕ್ ಅನ್ನು ಸ್ಥಾಪಿಸಲಾಗುವುದು, ಇದಕ್ಕೆ ನಿಮ್ಹಾನ್ಸ್ ನೋಡಲ್ ಕೇಂದ್ರವಾಗಿರುತ್ತದೆ ಮತ್ತು ಇಂಟರ್‌ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ - - ಇನ್ಫರ್ಮೇಷನ್ ಟೆಕ್ನಾಲಜಿ-ಬೆಂಗಳೂರು (ಐಐಐಟಿಬಿ) ತಂತ್ರಜ್ಞಾನ ಬೆಂಬಲವನ್ನು ಒದಗಿಸುತ್ತದೆ.

- ಸಕ್ಷಮ್ ಅಂಗನವಾಡಿ: ಮಿಷನ್ ಶಕ್ತಿ, ಮಿಷನ್ ವಾತ್ಸಲ್ಯ, ಸಕ್ಷಮ್ ಅಂಗನವಾಡಿ ಮತ್ತು ಪೋಶಣ್ 2.0 ಮೂಲಕ ಮಹಿಳೆಯರು ಮತ್ತು ಮಕ್ಕಳಿಗೆ ಸಮಗ್ರ ಪ್ರಯೋಜನಗಳು. ಎರಡು ಲಕ್ಷ ಅಂಗನವಾಡಿಗಳನ್ನು ಸಕ್ಷಮ್ ಅಂಗನವಾಡಿಗಳಾಗಿ ಮೇಲ್ದರ್ಜೆಗೇರಿಸಲಾಗುವುದು.

- ಹರ್ ಘರ್, ನಲ್ ಸೇ ಜಲ್: ಹರ್ ಘರ್, ನಲ್ ಸೇ ಜಲ್ ಅಡಿಯಲ್ಲಿ 2022-23ರಲ್ಲಿ 3.8 ಕೋಟಿ ಮನೆಗಳಿಗೆ ನಲ್ಲಿ ನೀರು ಒದಗಿಸಲು 60,000 ಕೋಟಿ ರೂ. ಮೀಸಲಿಡಲಾಗಿದೆ.

- ಎಲ್ಲರಿಗೂ ವಸತಿ: ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ 2022-23ರಲ್ಲಿ 80 ಲಕ್ಷ ಮನೆಗಳನ್ನು ಪೂರ್ಣಗೊಳಿಸಲು 48,000 ಕೋಟಿ ರೂ. ಮೀಸಲಿಡಲಾಗಿದೆ.

- ಬ್ಯಾಂಕಿಂಗ್: 1.5 ಲಕ್ಷ ಅಂಚೆ ಕಛೇರಿಗಳಲ್ಲಿ ಶೇಕಡಾ 100 ರಷ್ಟು ಕೋರ್ ಬ್ಯಾಂಕಿಂಗ್ ವ್ಯವಸ್ಥೆ ಬರಲಿದೆ. 75 ಜಿಲ್ಲೆಗಳಲ್ಲಿ 75 ಡಿಜಿಟಲ್ ಬ್ಯಾಂಕಿಂಗ್ ಘಟಕ (ಡಿಬಿಯು) ಗಳನ್ನುವಾಣಿಜ್ಯ ಬ್ಯಾಂಕ್‌ಗಳು ಸ್ಥಾಪಿಸಲಿವೆ.

- ಇ- ಪಾಸ್‌ಪೋರ್ಟ್‌: ಎಂಬೆಡೆಡ್ ಚಿಪ್ ಮತ್ತು ಫ್ಯೂಚರಿಸ್ಟಿಕ್ ತಂತ್ರಜ್ಞಾನದೊಂದಿಗೆ ಇ-ಪಾಸ್‌ಪೋರ್ಟ್‌ಗಳನ್ನು ಹೊರತರಲಾಗುವುದು.

- ನಗರ ಯೋಜನೆ: ಕಟ್ಟಡದ ಬೈಲಾಗಳ ಆಧುನೀಕರಣ, ಟೌನ್ ಪ್ಲಾನಿಂಗ್ ಸ್ಕೀಮ್‌ಗಳು (ಟಿಪಿಎಸ್), ಮತ್ತು ಟ್ರಾನ್ಸಿಟ್ ಓರಿಯೆಂಟೆಡ್ ಡೆವಲಪ್‌ಮೆಂಟ್ (ಟಿಒಡಿ) ಅನುಷ್ಠಾನಗೊಳಿಸಲಾಗುವುದು. ನಗರ ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲು ಬ್ಯಾಟರಿ ವಿನಿಮಯ ನೀತಿಯನ್ನು ಹೊರತರಲಾಗುವುದು.

- ಭೂ ದಾಖಲೆಗಳ ನಿರ್ವಹಣೆ: ಭೂ ದಾಖಲೆಗಳ ಐಟಿ-ಆಧಾರಿತ ನಿರ್ವಹಣೆಗಾಗಿ ವಿಶಿಷ್ಟ ಭೂಮಿ ಗುರುತಿನ ಸಂಖ್ಯೆ.

- ಟೆಲಿಕಾಂ ವಲಯ: ಉತ್ಪಾದನೆ ಆಧಾರಿತ ಪ್ರೋತ್ಸಾಹ ಯೋಜನೆ ಭಾಗವಾಗಿ 5G ಗಾಗಿ ಬಲವಾದ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ವಿನ್ಯಾಸ-ನೇತೃತ್ವದ ಉತ್ಪಾದನೆ ಯೋಜನೆಯನ್ನು ಪ್ರಾರಂಭಿಸಲಾಗುವುದು.

-ರಫ್ತು ಉತ್ತೇಜನ: 'ಉದ್ಯಮ ಮತ್ತು ಸೇವಾ ಕೇಂದ್ರಗಳ ಅಭಿವೃದ್ಧಿ'ಯಲ್ಲಿ ಪಾಲುದಾರರಾಗಲು ರಾಜ್ಯಗಳನ್ನು ಸಕ್ರಿಯಗೊಳಿಸಲು ವಿಶೇಷ ಆರ್ಥಿಕ ವಲಯಗಳ ಕಾಯಿದೆಯನ್ನು ಹೊಸ ಕಾಯ್ದೆಯ ಮೂಲಕ ಬದಲಾಯಿಸಲಾಗುವುದು.

- ರಕ್ಷಣೆಯಲ್ಲಿ ಆತ್ಮನಿರ್ಭರತೆ: 2022-23 ರಲ್ಲಿ ದೇಶೀಯ ಉದ್ಯಮಕ್ಕಾಗಿ ಶೇ.68 ಬಂಡವಾಳ ಖರೀದಿ ಬಜೆಟ್ ಅನ್ನು ಮೀಸಲಿಡಲಾಗಿದೆ. 2021-22ರಲ್ಲಿ ಇದು ಶೇ.58 ಇತ್ತು. ರಕ್ಷಣಾ ಆರ್ ಮತ್ತು ಡಿ ಅನ್ನು ಉದ್ಯಮಗಳಿಗೆ ಮುಕ್ತಗೊಳಿಸಲಾಗುವುದು, ಸ್ಟಾರ್ಟ್‌ಅಪ್‌ಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ಶೇ.25 ರಕ್ಷಣಾ ಆರ್ ಮತ್ತು ಡಿ ಬಜೆಟ್‌ನಲ್ಲಿ ಮೀಸಲಿಡಲಾಗಿದೆ. ಪರೀಕ್ಷೆ ಮತ್ತು ಪ್ರಮಾಣೀಕರಣದ ಅವಶ್ಯಕತೆಗಳನ್ನು ಪೂರೈಸಲು ಸ್ವತಂತ್ರ ನೋಡಲ್ ವ್ಯವಸ್ಥೆಯನ್ನು ಸ್ಥಾಪಿಸಲಾಗುವುದು.

- ಇಂಧನ ಪರಿವರ್ತನೆ ಮತ್ತು ಹವಾಮಾನ ಕ್ರಿಯೆ: 2030 ರ ವೇಳೆಗೆ 280 ಗಿಗಾವ್ಯಾಟ್ ಸ್ಥಾಪಿತ ಸೌರಶಕ್ತಿಯ ಗುರಿಯನ್ನು ಪೂರೈಸಲು ಹೆಚ್ಚಿನ ದಕ್ಷತೆಯ ಸೌರ ಮಾಡ್ಯೂಲ್‌ಗಳ ತಯಾರಿಕೆಗೆ ಉತ್ಪಾದನೆ ಆಧಾರಿತ ಪ್ರೋತ್ಸಾಹ ಯೋಜನೆಗಾಗಿ 19,500 ಕೋಟಿ ರೂ. ಹೆಚ್ಚುವರಿ ಹಂಚಿಕೆ. ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳಲ್ಲಿ ಶೇ. ಐದರಿಂದ ಏಳರಷ್ಟು ಬಯೋಮಾಸ್ ಉಂಡೆಗಳನ್ನು ಉರಿಸಲಾಗುವುದು.

ರಾಜ್ಯಗಳಿಗೆ ಹೆಚ್ಚಿನ ಹಣಕಾಸು ಅವಕಾಶ ಒದಗಿಸುವುದು:

- ಬಂಡವಾಳ ಹೂಡಿಕೆಗಾಗಿ ರಾಜ್ಯಗಳಿಗೆ ಹಣಕಾಸು ನೆರವು ಯೋಜನೆಗಾಗಿ ವರ್ಧಿತ ವೆಚ್ಚ.

- ಬಜೆಟ್ ಅಂದಾಜುಗಳಲ್ಲಿ 10,000 ಕೋಟಿ ರೂ.ಗಳಿಂದ ಪ್ರಸಕ್ತ ವರ್ಷಕ್ಕೆ 15,000 ಕೋಟಿ ರೂ.ಪರಿಷ್ಕೃತ ಅಂದಾಜು.

- ಆರ್ಥಿಕತೆಯಲ್ಲಿ ಒಟ್ಟಾರೆ ಹೂಡಿಕೆಗಳನ್ನು ವೇಗಗೊಳಿಸಲು ರಾಜ್ಯಗಳಿಗೆ ಸಹಾಯ ಮಾಡಲು 2022-23 ರಲ್ಲಿ 1 ಲಕ್ಷ ಕೋಟಿ ರೂ.ಹಂಚಿಕೆ: ಐವತ್ತು ವರ್ಷಗಳ ಬಡ್ಡಿ ರಹಿತ ಸಾಲಗಳು.

- 2022-23 ರಲ್ಲಿ, ರಾಜ್ಯಗಳಿಗೆ ಜಿ ಎಸ್ ಡಿ ಪಿಯ ಶೇ.4 ರಷ್ಟು ವಿತ್ತೀಯ ಕೊರತೆಯನ್ನು ಅನುಮತಿಸಲಾಗುವುದು, ಅದರಲ್ಲಿ ಶೇ.0.5 ವಿದ್ಯುತ್ ವಲಯದ ಸುಧಾರಣೆಗಳಿಗೆ ಸಂಬಂಧಿಸಿರುತ್ತದೆ.

ಕೇಂದ್ರ ಬಜೆಟ್ ನಲ್ಲಿ ನೇರ ಮತ್ತು ಪರೋಕ್ಷ ತೆರಿಗೆ ನೀತಿ

ಕೇಂದ್ರ ಬಜೆಟ್ ನಲ್ಲಿ ನೇರ ಮತ್ತು ಪರೋಕ್ಷ ತೆರಿಗೆ ನೀತಿ

ಸ್ಥಿರ ಮತ್ತು ಉತ್ತಮ ತೆರಿಗೆ ಪದ್ಧತಿಯ ನೀತಿಯನ್ನು ಮುಂದುವರೆಸಲು ನಂಬಲರ್ಹ ತೆರಿಗೆ ಪದ್ಧತಿಯನ್ನು ಸ್ಥಾಪಿಸುವ ದೃಷ್ಟಿಕೋನ ಹೊಂದಲಾಗಿದೆ. ಈ ಹಿನ್ನೆಲೆ ತೆರಿಗೆ ವ್ಯವಸ್ಥೆಯನ್ನು ಇನ್ನಷ್ಟು ಸರಳಗೊಳಿಸಲು ಮತ್ತು ದಾವೆಗಳನ್ನು ಕಡಿಮೆ ಮಾಡಲು ಹೊಸ 'ಅಪ್ ಡೇಟೆಡ್ ರಿಟರ್ನ್' ಅನ್ನು ಪರಿಚಯಿಸಲಾಗುತ್ತಿದೆ. ಹೆಚ್ಚುವರಿ ತೆರಿಗೆ ಪಾವತಿಯ ಮೇಲೆ ಅಪ್ ಡೇಟೆಡ್ ರಿಟರ್ನ್ ಅನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ. ಮೌಲ್ಯಮಾಪಕನಿಗೆ ಆದಾಯ ತಪ್ಪಿಹೋಗಿರುವ ಆದಾಯವನ್ನು ಘೋಷಿಸಲು ಅನುವು ಮಾಡಿಕೊಡುತ್ತದೆ. ಇದನ್ನು ಸಂಬಂಧಿತ ಮೌಲ್ಯಮಾಪನ ವರ್ಷದ ಅಂತ್ಯದಿಂದ ಎರಡು ವರ್ಷಗಳಲ್ಲಿ ಸಲ್ಲಿಸಬಹುದು.

- ಸಹಕಾರ ಸಂಘಗಳು:

ಸಹಕಾರಿ ಸಂಘಗಳು ಪಾವತಿಸುವ ಪರ್ಯಾಯ ಕನಿಷ್ಠ ತೆರಿಗೆಯನ್ನು ಶೇಕಡಾ 18.5 ರಿಂದ ಶೇಕಡಾ 15 ಕ್ಕೆ ಇಳಿಸಲಾಗಿದೆ. ಸಹಕಾರ ಸಂಘಗಳು ಮತ್ತು ಕಂಪನಿಗಳಿಗೆ ಸಮಾನ ಅವಕಾಶ ನೀಡುತ್ತದೆ. 1 ಕೋಟಿ ರೂ.ಗಿಂತ ಹೆಚ್ಚು ಮತ್ತು 10 ಕೋಟಿ ರೂ.ವರೆಗಿನ ಒಟ್ಟು ಆದಾಯ ಹೊಂದಿರುವ ಸಹಕಾರಿ ಸಂಘಗಳ ಮೇಲಿನ ಸರ್ಚಾರ್ಜ್ ಅನ್ನು ಶೇಕಡಾ 12 ರಿಂದ ಶೇಕಡಾ 7 ಕ್ಕೆ ಇಳಿಸಲಾಗಿದೆ.

- ವಿಕಲಾಂಗ ವ್ಯಕ್ತಿಗಳಿಗೆ ತೆರಿಗೆ ವಿನಾಯಿತಿ:

ವಿಮಾ ಯೋಜನೆಯಿಂದ ಬರುವ ವರ್ಷಾಶನ ಮತ್ತು ಒಟ್ಟು ಮೊತ್ತದ ಪಾವತಿಯನ್ನು ಪೋಷಕರು/ಪಾಲಕರ ಜೀವಿತಾವಧಿಯಲ್ಲಿ ಅಂದರೆ, 60 ವರ್ಷ ವಯಸ್ಸಿನ ಪೋಷಕರು/ಪಾಲಕರ ಮೇಲೆ ಅಂಗವಿಕಲ ಅವಲಂಬಿತರಿಗೆ ಅನುಮತಿಸಲಾಗುವುದು.

- ರಾಷ್ಟ್ರೀಯ ಪಿಂಚಣಿ ಯೋಜನೆ ಕೊಡುಗೆಯಲ್ಲಿ ಸಮಾನತೆ:

ರಾಜ್ಯ ಸರ್ಕಾರಿ ನೌಕರರ ಎನ್ ಪಿ ಎಸ್ ಖಾತೆಗೆ ಉದ್ಯೋಗದಾತರ ಕೊಡುಗೆಯ ಮೇಲೆ ತೆರಿಗೆ ಕಡಿತದ ಮಿತಿಯನ್ನು ಶೇ.10 ರಿಂದ ಶೇ.14 ಕ್ಕೆ ಹೆಚ್ಚಿಸಲಾಗಿದೆ. ಅವರನ್ನು ಕೇಂದ್ರ ಸರ್ಕಾರಿ ನೌಕರರಿಗೆ ಸಮನಾಗಿ ತರುತ್ತದೆ. ಸಾಮಾಜಿಕ ಭದ್ರತೆ ಪ್ರಯೋಜನಗಳನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ.

- ಸ್ಟಾರ್ಟ್-ಅಪ್‌ಗಳಿಗೆ ಪ್ರೋತ್ಸಾಹ:

ಅರ್ಹ ಸ್ಟಾರ್ಟ್-ಅಪ್‌ಗಳು ತೆರಿಗೆ ಪ್ರಯೋಜನವನ್ನು ಪಡೆಯಲು ಒಂದು ವರ್ಷದವರೆಗೆ ಅಂದರೆ, 31.03.2023 ರವರೆಗೆ ಸ್ಥಾಪನೆಯ ಅವಧಿಯನ್ನು ವಿಸ್ತರಿಸಲಾಗಿದೆ.

ಈ ಹಿಂದೆ ಇದು 31.03.2022 ವರೆಗೆ ಮಾತ್ರ ಇತ್ತು. ಸೆಕ್ಷನ್ 115BAB ಅಡಿಯಲ್ಲಿ ಉತ್ಪಾದನೆ ಅಥವಾ ತಯಾರಿಕೆಯನ್ನು ಪ್ರಾರಂಭಿಸುವ ಕೊನೆಯ ದಿನಾಂಕವನ್ನು ಒಂದು ವರ್ಷದವರೆಗೆ ಅಂದರೆ 31ನೇ ಮಾರ್ಚ್, 2023 ರಿಂದ 31ನೇ ಮಾರ್ಚ್, 2024 ರವರೆಗೆ ವಿಸ್ತರಿಸಲಾಗಿದೆ.

- ಪ್ರಾಜೆಕ್ಟ್ ಆಮದು ಮತ್ತು ಬಂಡವಾಳ ಸರಕುಗಳು:

ಬಂಡವಾಳ ಸರಕುಗಳು ಮತ್ತು ಪ್ರಾಜೆಕ್ಟ್ ಆಮದುಗಳಲ್ಲಿನ ರಿಯಾಯಿತಿ ದರಗಳನ್ನು ಕ್ರಮೇಣವಾಗಿ ತೆಗೆದುಹಾಕುವುದು ಮತ್ತು 7.5 ಪ್ರತಿಶತದಷ್ಟು ಸಾಧಾರಣ ಸುಂಕವನ್ನು ಅನ್ವಯಿಸುವುದು. ದೇಶೀಯ ವಲಯದ ಬೆಳವಣಿಗೆಗೆ ಮತ್ತು 'ಮೇಕ್ ಇನ್ ಇಂಡಿಯಾ' ಕ್ಕೆ ಅನುಕೂಲಕರವಾಗಿದೆ. ದೇಶದೊಳಗೆ ಉತ್ಪಾದಿಸದ ಸುಧಾರಿತ ಯಂತ್ರೋಪಕರಣಗಳಿಗೆ ಕೆಲವು ವಿನಾಯಿತಿಗಳು ಮುಂದುವರೆಯುತ್ತವೆ. ಬಂಡವಾಳ ಸರಕುಗಳ ದೇಶೀಯ ಉತ್ಪಾದನೆಯನ್ನು ಉತ್ತೇಜಿಸಲು - ವಿಶೇಷವಾಗಿ ಎರಕಹೊಯ್ದ, ಬಾಲ್ ಸ್ಕ್ರೂ ಮತ್ತು ಲೀನಿಯರ್ ಮೋಷನ್ ಗೈಡ್‌ನಂತಹ ಕಚ್ಚಾ ವಸ್ತುಗಳ ಮೇಲೆ ಕೆಲವು ವಿನಾಯಿತಿಗಳನ್ನು ಪರಿಚಯಿಸಲಾಗಿದೆ.

- ಕಸ್ಟಮ್ಸ್ ವಿನಾಯಿತಿಗಳು ಮತ್ತು ಸುಂಕದ ಸರಳೀಕರಣದ ಪರಿಶೀಲನೆ

ಕೆಲವು ಕೃಷಿ ಉತ್ಪನ್ನಗಳು, ರಾಸಾಯನಿಕಗಳು, ಬಟ್ಟೆಗಳು, ವೈದ್ಯಕೀಯ ಸಾಧನಗಳು ಮತ್ತು ಔಷಧಿಗಳಂತಹ 350 ಕ್ಕೂ ಹೆಚ್ಚು ವಿನಾಯಿತಿ ನಮೂದುಗಳನ್ನು ಹಂತಹಂತವಾಗಿ ತೆಗೆದುಹಾಕಲು ಪ್ರಸ್ತಾಪಿಸಲಾಗಿದೆ. ನಿರ್ದಿಷ್ಟವಾಗಿ ರಾಸಾಯನಿಕಗಳು, ಜವಳಿ ಮತ್ತು ಲೋಹಗಳಂತಹ ವಲಯಗಳಿಗೆ ಕಸ್ಟಮ್ಸ್ ದರ ಮತ್ತು ಸುಂಕದ ರಚನೆಯನ್ನು ಸರಳಗೊಳಿಸುವುದು ಮತ್ತು ವಿವಾದಗಳನ್ನು ಕಡಿಮೆ ಮಾಡುವುದು, 'ಮೇಕ್ ಇನ್ ಇಂಡಿಯಾ' ಮತ್ತು 'ಆತ್ಮನಿರ್ಭರ ಭಾರತ' ದೃಷ್ಟಿಕೋನಕ್ಕೆ ಅನುಗುಣವಾಗಿ ಭಾರತದಲ್ಲಿ ತಯಾರಿಸಬಹುದಾದ ಅಥವಾ ತಯಾರಿಸುವ ವಸ್ತುಗಳ ಮೇಲಿನ ವಿನಾಯಿತಿ ತೆಗೆದುಹಾಕುವುದು ಮತ್ತು ಮಧ್ಯಂತರ ಉತ್ಪನ್ನಗಳ ತಯಾರಿಕೆಯ ಕಚ್ಚಾ ವಸ್ತುಗಳ ಮೇಲೆ ರಿಯಾಯಿತಿ ಸುಂಕಗಳನ್ನು ಒದಗಿಸುವುದು.

- ಎಲೆಕ್ಟ್ರಾನಿಕ್ಸ್:

ಧರಿಸಬಹುದಾದ ಸಾಧನಗಳು, ಇಯರ್ ಫೋನ್ ಮತ್ತು ಎಲೆಕ್ಟ್ರಾನಿಕ್ ಸ್ಮಾರ್ಟ್ ಮೀಟರ್‌ಗಳ ದೇಶೀಯ ಉತ್ಪಾದನೆಯನ್ನು ಉತ್ತೇಜಿಸಲು ಸುಲಭಗೊಳಿಸಲು ಶ್ರೇಣೀಕೃತ ದರ ರಚನೆ ಒದಗಿಸಲು ಕಸ್ಟಮ್ಸ್ ಸುಂಕದ ದರಗಳನ್ನು ಸರಿಹೊಂದಿಸಲಾಗುವುದು. ಹೆಚ್ಚಿನ ಬೆಳವಣಿಗೆಯ ಎಲೆಕ್ಟ್ರಾನಿಕ್ ವಸ್ತುಗಳ ದೇಶೀಯ ಉತ್ಪಾದನೆಯನ್ನು ಸಕ್ರಿಯಗೊಳಿಸಲು, ಮೊಬೈಲ್ ಫೋನ್ ಚಾರ್ಜರ್‌ಗಳ ಟ್ರಾನ್ಸ್‌ಫಾರ್ಮರ್‌ ಭಾಗಗಳಿಗೆ ಮತ್ತು ಮೊಬೈಲ್ ಕ್ಯಾಮೆರಾ ಮಾಡ್ಯೂಲ್‌ನ ಕ್ಯಾಮೆರಾ ಲೆನ್ಸ್ ಮತ್ತು ಇತರ ಕೆಲವು ವಸ್ತುಗಳಿಗೆ ಸುಂಕ ರಿಯಾಯಿತಿ ನೀಡಲಾಗುವುದು.

- ರತ್ನಗಳು ಮತ್ತು ಆಭರಣಗಳು:

ರತ್ನಗಳು ಮತ್ತು ಆಭರಣ ವಲಯಕ್ಕೆ ಉತ್ತೇಜನ ನೀಡಲು, ಕಟ್ ಮತ್ತು ಪಾಲಿಶ್ ಮಾಡಿದ ವಜ್ರಗಳು ಮತ್ತು ರತ್ನದ ಕಲ್ಲುಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇಕಡಾ 5 ಕ್ಕೆ ಇಳಿಸಲಾಗಿದೆ. ಸರಳವಾದ ಸಾನ್ ವಜ್ರಕ್ಕೆ ಕಸ್ಟಮ್ಸ್ ಸುಂಕವಿಲ್ಲ. ಇ-ಕಾಮರ್ಸ್ ಮೂಲಕ ಆಭರಣಗಳ ರಫ್ತಿಗೆ ಅನುಕೂಲ ಕಲ್ಪಿಸಲು ಈ ವರ್ಷದ ಜೂನ್‌ನೊಳಗೆ ಸರಳೀಕೃತ ನಿಯಂತ್ರಣ ಚೌಕಟ್ಟನ್ನು ಜಾರಿಗೆ ತರಲಾಗುವುದು. ಕಡಿಮೆ ಮೌಲ್ಯದ ಅನುಕರಣೆ ಆಭರಣಗಳ ಆಮದನ್ನು ತಡೆಯಲು, ಅನುಕರಣೆ ಆಭರಣ ಆಮದು ಮೇಲೆ ಪ್ರತಿ ಕೆಜಿಗೆ ಕನಿಷ್ಠ 400 ರೂಪಾಯಿಗಳ ಕಸ್ಟಮ್ಸ್ ಸುಂಕ.

- ರಾಸಾಯನಿಕಗಳು:

ಕೆಲವು ಪ್ರಮುಖ ರಾಸಾಯನಿಕಗಳಾದ ಮೆಥನಾಲ್, ಅಸಿಟಿಕ್ ಆಸಿಡ್ ಮತ್ತು ಪೆಟ್ರೋಲಿಯಂ ಸಂಸ್ಕರಣೆಗೆ ಹೆವಿ ಫೀಡ್ ಸ್ಟಾಕ್‌ಗಳ ಮೇಲಿನ ಕಸ್ಟಮ್ಸ್ ಸುಂಕ ಕಡಿಮೆ ಮಾಡಲಾಗಿದೆ. ಸಾಕಷ್ಟು ದೇಶೀಯ ಸಾಮರ್ಥ್ಯವಿರುವ ಸೋಡಿಯಂ ಸೈನೈಡ್ ಮೇಲೆ ಸುಂಕವನ್ನು ಹೆಚ್ಚಿಸಲಾಗುತ್ತಿದೆ. ಇದು ದೇಶೀಯ ಮೌಲ್ಯವರ್ಧನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

English summary

Union Budget 2022: Highlights and Major Schemes Announced By Finance Minister

Union Budget 2022: Highlights and Major Schemes Announced By Finance Minister Nirmala Sitharaman.
Story first published: Tuesday, February 1, 2022, 21:09 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X