ದಿವಾಳಿಯತ್ತ ವೊಡಾಫೋನ್, ಐಡಿಯಾ: ಭಾರತದಲ್ಲಿ ಸೇವೆ ಬಂದ್?
ಲಂಡನ್, ನವದೆಹಲಿ, ನ 18: ಭಾರತದ ಎರಡನೇ ದೊಡ್ಡ ಟೆಲೆಕಾಂ ಸಂಸ್ಥೆಯಾಗಿರುವ ವೊಡಾಫೋನ್ - ಐಡಿಯಾ, ಭಾರತದಲ್ಲಿ ತನ್ನ ವಹಿವಾಟನ್ನು ಸದ್ಯದಲ್ಲೇ ನಿಲ್ಲಿಸಲಿದೆಯೇ?
ಈ ರೀತಿಯ ಪ್ರಶ್ನೆ ಎದುರಾಗಲು ಕಾರಣ ಸಂಸ್ಥೆಯ ಸಿಇಓ ನಿಕ್ ರೆಡ್ ಲಂಡನ್ ನಲ್ಲಿ ನೀಡಿದ ಹೇಳಿಕೆ. "ಭಾರತ ಸರಕಾರ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು" ರೆಡ್ ಮನವಿ ಮಾಡಿದ್ದಾರೆ.
74,000 ಕೋಟಿ ರುಪಾಯಿ ನಷ್ಟ ಅನುಭವಿಸಿದ ಏರ್ಟೆಲ್, ವೋಡಾಫೋನ್, ಐಡಿಯಾ
"ಭಾರತ ಸರಕಾರ ಸ್ಪೆಕ್ಟ್ರಂ ಶುಲ್ಕ, ಹೆಚ್ಚುವರಿ ತೆರಿಗೆ ಸಂಗ್ರಹವನ್ನು ಕಡಿಮೆ ಮಾಡದೇ ಇದ್ದಲ್ಲಿ, ನಾವು ದಿವಾಳಿಯತ್ತ ಸಾಗಬೇಕಾಗುತ್ತದೆ. ಹಾಗಾಗಿ, ಭಾರತದಲ್ಲಿನ ನಮ್ಮ ವಹಿವಾಟು ಮುಂದುವರಿಸಬೇಕೇ ಎನ್ನುವುದು ಸರಕಾರದ ನಿರ್ಧಾರದ ಮೇಲೆ ನಿಂತಿದೆ" ಎಂದು ನಿಕ್ ರೆಡ್ ಹೇಳಿದ್ದಾರೆ.
ಇತ್ತೀಚೆಗೆ ಹಳೆಯ 92ಸಾವಿರ ಕೋಟಿ ಟೆಲಿಕಾಂ ಶುಲ್ಕವನ್ನು ಪಾವತಿಸುವಂತೆ, ಸುಪ್ರೀಂಕೋರ್ಟ್ ಆದೇಶವನ್ನು ನೀಡಿತ್ತು. "ಇದು ನಮಗೆ ಭಾರೀ ಹೊರೆಯಾಗಿ ಪರಿಣಮಿಸಿದೆ" ಎಂದು ರೆಡ್ ಹೇಳಿದ್ದಾರೆ.
"ಆದಿತ್ಯ ಬಿರ್ಲಾ ಒಡೆತನದ ಐಡಿಯಾ ಜೊತೆ 2018ರಲ್ಲಿ ಸಹಯೋಗಕ್ಕೆ ಬರಲಾಯಿತು. ಅಂದಿನಿಂದ ಇಂದಿನವರೆಗೂ ಹಲವು ಕಠಿಣ ಸವಾಲುಗಳನ್ನು ಎದುರಿಸಿಕೊಂಡು ಬಂದಿದ್ದೇವೆ" ಎಂದು ರೆಡ್ ಹೇಳಿದ್ದಾರೆ.
"ವೊಡಾಫೋನ್ - ಐಡಿಯಾಗೆ ಭಾರತದಲ್ಲಿ ಮೂವತ್ತು ಕೋಟಿ ಗ್ರಾಹಕರಿದ್ದಾರೆ. ಒಟ್ಟಾರೆಯಾಗಿ ಶೇ. 30ರಷ್ಟು ಮಾರುಕಟ್ಟೆ ನಮಗಿದೆ. ಆದರೂ, ಹಣಕಾಸು ಸ್ಥಿತಿ ಸುಧಾರಿಸುತ್ತಿಲ್ಲ. ಹಾಗಾಗಿ, ಭಾರತ ಸರಕಾರ ನಮಗೆ ಪರಿಹಾರ ಪ್ಯಾಕೇಜ್ ಅನ್ನು ಘೋಷಿಸಬೇಕು" ಎಂದು ನಿಕ್ ರೆಡ್ ಮನವಿ ಮಾಡಿದ್ದಾರೆ.