For Quick Alerts
ALLOW NOTIFICATIONS  
For Daily Alerts

ಉದ್ಯೋಗಿಗಳಿಗೆ ಆಶ್ಚರ್ಯಕರ ಸೌಲಭ್ಯಗಳನ್ನು ನೀಡುವ 15 ಕಂಪನಿಗಳು

ನಮ್ಮ ಊಹೆಗೂ ಮೀರಿದ ಅನುಕೂಲತೆ ಹಾಗೂ ಭತ್ಯೆಗಳನ್ನು ನೀಡುವ ಮೂಲಕ ಕೆಲವು ಸಂಸ್ಥೆಗಳು 'ಇಲ್ಲಿ ಕೆಲಸ ದೊರಕಿರುವುದು ಯಾವ ಜನ್ಮದ ಪುಣ್ಯವೋ ಏನೋ' ಎಂದು ಅನ್ನಿಸುವಂತೆ ಮಾಡದಿರಲಾರದು. ಅಂತಹ ಹದಿನೈದು ಸಂಸ್ಥೆಗಳ ಬಗ್ಗೆ ಇಂದು ಮಾಹಿತಿ ಇಲ್ಲಿದೆ.

By Siddu
|

ಇಂದು, ಉದ್ಯೋಗಿಗಳು ಹಿಂದಿಗಿಂತಲೂ ಹೆಚ್ಚಾಗಿ ಹೆಚ್ಚಿನ ವೇತನ ಹಾಗೂ ಭತ್ಯೆಗಳಿಗಾಗಿ ಅಸಾಂಪ್ರಾದಾಯಿಕ ಹಾಗೂ ಆಧುನಿಕ ಯೋಚನೆಯನ್ನು ಸ್ವಾಗತಿಸುವ ಸಂಸ್ಥೆಗಳಲ್ಲಿ ಕೆಲಸ ಮಾಡಲು ಬಯಸುತ್ತಿದ್ದಾರೆ. ನಮ್ಮ ಊಹೆಗೂ ಮೀರಿದ ಅನುಕೂಲತೆ ಹಾಗೂ ಭತ್ಯೆಗಳನ್ನು ನೀಡುವ ಮೂಲಕ ಕೆಲವು ಸಂಸ್ಥೆಗಳು 'ಇಲ್ಲಿ ಕೆಲಸ ದೊರಕಿರುವುದು ಯಾವ ಜನ್ಮದ ಪುಣ್ಯವೋ ಏನೋ' ಎಂದು ಅನ್ನಿಸುವಂತೆ ಮಾಡದಿರಲಾರದು.

ಅಂತಹ ಹದಿನೈದು ಸಂಸ್ಥೆಗಳ ಬಗ್ಗೆ ಇಂದು ಮಾಹಿತಿಯನ್ನು ಸಂಗ್ರಹಿಸಲಾಗಿದ್ದು, ಇವರಿಗೆ ತಮ್ಮ ಉದ್ಯೋಗಿಗಳ ಕ್ಷೇಮವೇ ಮೊದಲಾಗಿರುವ ಪರಿಣಾಮವಾಗಿ ಅತಿ ಹೆಚ್ಚು ವೇತನ ಹಾಗೂ ಇತರ ಸೌಲಭ್ಯಗಳು ದೊರಕುತ್ತಿವೆ.

ಗೂಗಲ್ (ಮೌಂಟೇನ್ ವ್ಯೂ, ಕ್ಯಾಲಿಫೋರ್ನಿಯಾ)

ಗೂಗಲ್ (ಮೌಂಟೇನ್ ವ್ಯೂ, ಕ್ಯಾಲಿಫೋರ್ನಿಯಾ)

ಒಂದು ವೇಳೆ ನೀವು ಉದ್ಯೋಗ ಜೀವನವನ್ನು ಪ್ರಾರಂಭಿಸಬೇಕೆಂದ್ದಿದ್ದರೆ ತಮ್ಮ ಉದ್ಯೋಗಿಗಳಿಗೆ ಚಿನ್ನದ ಗುಣಮಟ್ಟದ ಜೀವನವನ್ನು ಒದಗಿಸುವ ಸಂಸ್ಥೆಯನ್ನೇ ಬಯಸುತ್ತೀರಿ ಅಲ್ಲವೇ? ಗೂಗಲ್ ಈ ನಿಟ್ಟಿನಲ್ಲಿ ಪ್ರಥಮ ಸ್ಥಾನದಲ್ಲಿದ್ದು, ಕಳೆದ ನಾಲ್ಕು ವರ್ಷಗಳಿಂದಲೂ ತನ್ನ ಪ್ರಥಮ ಸ್ಥಾನವನ್ನು ಉಳಿಸಿಕೊಂಡು ಬಂದಿದೆ. ಈ ಮಾತನ್ನು ಫಾರ್ಚ್ಯೂನ್ ಮ್ಯಾಗಜಿನ್ ನ "#1 ಕೆಲಸ ಮಾಡಲು ಅತ್ಯುತ್ತಮ ಸ್ಥಳ" (#1 Best Place to Work) ಎಂಬ ಸಮೀಕ್ಷೆಯಲ್ಲಿ ಈ ಸ್ಥಾನವನ್ನು ಪಡೆದಿದ್ದು ಒಟ್ಟು ಆರು ಬಾರಿ ಈ ಸ್ಥಾನ ಪಡೆದ ಹೆಗ್ಗಳಿಕೆ ಹೊಂದಿದೆ. ಇಲ್ಲಿ ಉದ್ಯೋಗಿಗಳಿಗೆ ಸಂಪೂರ್ಣ ಆರೋಗ್ಯ ಸೌಲಭ್ಯಗಳು, ಮಕ್ಕಳ ಶಿಕ್ಷಣ ವೆಚ್ಚವನ್ನು ನಗದೀಕರಿಸಿಕೊಳ್ಳುವುದು, ಉದ್ಯೋಗದ ಸ್ಥಳದಲ್ಲಿ ಸಿಗುವ ಹಲವಾರು ಸೌಲಭ್ಯಗಳು, ಉದಾಹರಣೆಗೆ ಕೆಲಸದ ಸ್ಥಳದಲ್ಲಿಯೇ ಲಭಿಸುವ ಅಪರೂಪದ ಖಾದ್ಯಗಳು, ಕೆಲಸದಲ್ಲಿ ಬೇಜಾರಾದರೆ ಆಡಲು ಹಲವಾರು ಆಯ್ಕೆಗಳು, ಬಾಸ್ಕೆಟ್ ಬಾಲ್ ಕೋರ್ಟು, ಒಂದು ಬೌಲಿಂಗ್ ಆಟದ ಮೈದಾನ ಮೊದಲಾದ ಹತ್ತು ಹಲವು ಸೌಲಭ್ಯಗಳಿವೆ. ಇಷ್ಟು ಸಾಕಾಗಿಲ್ಲವೇ? ಗೂಗಲ್ ನಲ್ಲಿ ಉದ್ಯೋಗ ದೊರಕಿಸಿಕೊಂಡವರಿಗೆ ಇನ್ನೂ ಹೆಚ್ಚಿನ ಸೌಲಭ್ಯಗಳಿವೆ. ಮಧ್ಯಾಹ್ನದ ಊಟದ ಬಿಡುವಿನಲ್ಲಿ ವೃತ್ತಿಪರರಿಂದ ಮಸಾಜ್ ಸೇವೆ (ಸಂಸ್ಥೆಯ ಖರ್ಚಿನಲ್ಲಿ), ಕೇಶಮುಂಡನ (ಇದೂ ಸಂಸ್ಥೆಯ ಖರ್ಚಿನಲ್ಲಿ) ಅಥವಾ ಕೆಲಸದ ಸ್ಥಳದಲ್ಲಿಯೇ ಇರುವ ಅಗಸನಿಂದ ಬಟ್ಟೆಯನ್ನು ಒಗೆಸಿ ಇಸ್ತ್ರಿ ಮಾಡಿಸಿಕೊಂಡು ಠಾಕು ಠೀಕಾಗಿ ಬರುವ ಸೌಲಭ್ಯವೂ ಇದೆ. ಇವೆಲ್ಲಾ ನಿತ್ಯದ ಸೌಲಭ್ಯಗಳಾದರೆ ಅಗತ್ಯಕ್ಕೆ ತಕ್ಕಂತೆ ಸಿಗುವ ಸವಲತ್ತುಗಳು ಬೇರೆಯೇ ಇದೆ. ಉದಾಹರಣೆಗೆ ಪತ್ನಿಗೆ ಹೆರಿಗೆಯ ಸಮಯದಲ್ಲಿ ಪತಿದೇವರಿಗೂ ಪತ್ನಿಯೊಂದಿಗಿರಲು ಪಿತೃತ್ವ ರಜೆಯೂ (ವೇತನ ಸಹಿತ) ದೊರಕುತ್ತದೆ. ಈ ಸೌಲಭ್ಯವನ್ನು ಇತ್ತೀಚೆಗೆ ಎಲ್ಲಾ ಬಗೆಯ ವ್ಯಕ್ತಿಗಳಿಗೆ ಅಂದರೆ ಈ ಊರಿನಲ್ಲಿರುವ ಸಂಗಾತಿ (ಪತ್ನಿಯಲ್ಲದಿದ್ದರೂ) ಹಾಗೂ ಬಾಡಿಗೆ ತಾಯಿಯನ್ನು ಪಡೆದಿದ್ದರೂ (surrogate mother) ಹೆರಿಗೆಯ ಸಮಯದಲ್ಲಿ ವೇತನಸಹಿತ ಹನ್ನೆರಡು ವಾರಗಳ ರಜೆ ದೊರಕುತ್ತದೆ. ಪ್ರತಿಯೊಂದು ಕಂಪನಿಯು ಉದ್ಯೋಗಿಗಳಿಗೆ ಈ 11 ಸೌಲಭ್ಯಗಳನ್ನು ಒದಗಿಸಬೇಕು..

ಎಸ್. ಸಿ. ಜಾನ್ಸನ್ಸ್ (ರಾಸೈನ್, ವಿಸ್ಕಾನ್ಸಿನ್)
 

ಎಸ್. ಸಿ. ಜಾನ್ಸನ್ಸ್ (ರಾಸೈನ್, ವಿಸ್ಕಾನ್ಸಿನ್)

ಎಸ್. ಸಿ. ಜಾನ್ಸನ್ಸ್ ರವರ ಟೀವಿ ಜಾಹೀರಾತಿನಲ್ಲಿ "ನಾವೊಂದು ಕುಟುಂಬ ಸಂಸ್ಥೆ" ಎಂದು ಹೇಳಿಕೊಳ್ಳುವುದರಲ್ಲಿ ಉತ್ಪ್ರೇಕ್ಷೆಯೇನೂ ಇಲ್ಲ. ಏಕೆಂದರೆ ಈ ಸಂಸ್ಥೆ ತನ್ನ ಧ್ಯೇಯವಾಕ್ಯದ ಪ್ರಕಾರ ನುಡಿದುದನ್ನೇ ನಡೆದು ತೋರುಸುತ್ತಿದೆ. ತನ್ನ ಉದ್ಯೋಗಿಗಳ ಕುಟುಂಬವನ್ನು ತಮ್ಮ ಸ್ವಂತ ಕುಟುಂಬದಂತೆಯೇ ನೋಡಿಕೊಳ್ಳುವ ಸಂಸ್ಥೆಯಲ್ಲಿ ಉದ್ಯೋಗಿಗಳ ಉದ್ಯೋಗ ಸ್ಥಳದಲ್ಲಿ ಮಕ್ಕಳಿಗೆ ಆರೈಕೆ, ಹೆರಿಗೆಯ ಸಮಯದಲ್ಲಿ ಹೆಚ್ಚಿನ ಭತ್ಯೆ ಹಾಗೂ ದಂಪತಿಗಳಿಬ್ಬರಿಗೂ ಹೆಚ್ಚಿನ ರಜೆ ಹಾಗೂ ಉನ್ನತ ಶಿಕ್ಷಣಕ್ಕಾಗಿ ಪ್ರತಿ ಏಳು ವರ್ಷಗಳಿಗೊಂದು ವರ್ಷದಂತೆ ವೇತನ ಸಹಿತ ರಜೆ ಮೊದಲಾದ ಸೌಲಭ್ಯಗಳಿವೆ. ಅಷ್ಟೇ ಅಲ್ಲ, ಮನೆಯ ಸ್ವಚ್ಛತೆಯ ಉಪಕರಣಗಳನ್ನು ತಯಾರಿಸುವ ಈ ಸಂಸ್ಥೆಯ ಮುಖ್ಯ ಕಛೇರಿಯಲ್ಲಿ ಪರಿಚಾರಕ ಸೇವೆಯೂ ಲಭ್ಯವಿದೆ. ಈ ಪರಿಚಾರಕರ ಕರ್ತವ್ಯವೆಂದರೆ ಸಂಸ್ಥೆಯ ಉದ್ಯೋಗಿಗಳ ಕೆಲವು ಸ್ವಂತ ಕೆಲಸಗಳನ್ನು ನಿರ್ವಹಿಸುವುದು. ಉದಾಹರಣೆಗೆ ಲಾಂಡ್ರಿಯಲ್ಲಿ ಕೊಟ್ಟಿದ್ದ ಬಟ್ಟೆಯನ್ನು ತರುವುದು, ಹಿಂದಿನ ದಿನ ಗ್ರಂಥಾಲಯದಿಂದ ತಂದಿದ್ದ ಪುಸ್ತಕಗಳನ್ನು ಹಿಂದಿರುಗಿಸುವುದು ಇತ್ಯಾದಿ.

ಡ್ರೀಮ್ ವರ್ಕ್ಸ ಅನಿಮೇಶನ್ (ಗ್ಲೆಂಡೇಲ್, ಕ್ಯಾಲಿಫೋರ್ನಿಯಾ)

ಡ್ರೀಮ್ ವರ್ಕ್ಸ ಅನಿಮೇಶನ್ (ಗ್ಲೆಂಡೇಲ್, ಕ್ಯಾಲಿಫೋರ್ನಿಯಾ)

ಎಷ್ಟು ಬಾರಿ ನೋಡಿದರೂ ಬೇಜಾರಾಗದ ಅನಿಮೇಶನ್ ಅಥವಾ ಜೀವಂತಭ್ರಮೆ ಮೂಡಿಸುವ ರೇಖಾಚಿತ್ರಗಳಾದ ಶ್ರೆಕ್, ಹೌ ಟು ಟ್ರೇನ್ ಯುವರ್ ಡ್ರಾಗನ್ ಮೊದಲಾದ ಚಲನಚಿತ್ರಗಳು ತಯಾರಾಗಿದ್ದು ಈ ಸಂಸ್ಥೆಯಲ್ಲಿ. ಇದು ಅಪ್ಪಟ ಕಲಾವಂತಿಕೆಯ ಕೇಂದ್ರವಾಗಿದೆ. ಅತ್ಯದ್ಭುತ ಸಿನೇಮಾ ಪರಿಣಾಮಗಳನ್ನು ಬಳಸಿಕೊಂಡು ನಿರ್ಮಿಸುವ ಚಲನಚಿತ್ರಗಳು ವಿಶ್ವದಾದ್ಯಂತ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಷ್ಟೂ ಇದರ ಉದ್ಯೋಗಿಗಳಿಗೂ ಪ್ರಯೋಜನವಾಗುತ್ತದೆ. ಸಮಯದೊಂದಿಗೆ ತನ್ನ ಉದ್ಯೋಗಿಗಳೂ ತಮ್ಮ ಕಲಾವಂತಿಕೆ ಹಾಗೂ ಆಧುನಿಕ ತಂತ್ರಜ್ಞಾನವನ್ನು ಹೆಚ್ಚಿಸಿಕೊಳ್ಳುತ್ತಾ ಹೋಗುವಂತೆ ಸಂಸ್ಥೆ ಹೆಚ್ಚಿನ ಕಾಳಜಿ ವಹಿಸುತ್ತದೆ. ಇದಕ್ಕಾಗಿ ಪ್ರತಿ ಕಲಾವಿದನಿಗೂ ಅಗತ್ಯ ತರಬೇತಿ ಹಾಗೂ ಹೊಸ ಹೊಸ ಕಲ್ಪನೆಗಳನ್ನು ಸಾಕಾರಗೊಳಿಸಲು ಭಿನ್ನರೀತಿಯ ನೆರವನ್ನೂ ನೀಡುತ್ತದೆ. ಇದರಲ್ಲಿ ಕಲಾ ಪ್ರದರ್ಶನ, ಕಲಾ ತರಗತಿ, ಯೋಗಾಭ್ಯಾಸದ ತರಗತಿ, ಶಿಲ್ಪಕಲೆಯ ತರಬೇತಿ ಹಾಗೂ ಕಲಾಮೇಳಗಳನ್ನು ಆಯೋಜಿಸುತ್ತದೆ. ಇವೆಲ್ಲಾ ಕಲಾವಿದರಿಗೆ ಮೀಸಲಾದ ಸೌಲಭ್ಯಗಳಾದರೆ ಇವರ ಕುಟುಂಬದವರಿಗೆ ಸಂಪೂರ್ಣ ಆರೋಗ್ಯ ಸೌಲಭ್ಯ, ಆರೋಗ್ಯ ವಿಮೆ, ಉಚಿತ ಮದ್ಯಾಹ್ನದ ಊಟ, ಕೆಲಸದ ಸ್ಥಳದಲ್ಲಿಯೇ ವ್ಯಾಯಾಮಶಾಲೆ ಹಾಗೂ ತರಬೇತಿ ಕೇಂದ್ರವೂ ಇದೆ.

ಸೌಥ್ ವೆಸ್ಟ್ ಏರ್ಲೈನ್ಸ್ (ಡಲ್ಲಾಸ್, ಟೆಕ್ಸಸ್)

ಸೌಥ್ ವೆಸ್ಟ್ ಏರ್ಲೈನ್ಸ್ (ಡಲ್ಲಾಸ್, ಟೆಕ್ಸಸ್)

ವಿಶ್ವಪರ್ಯಟನೆಗೆ ಭಾರೀ ಮೊತ್ತವನ್ನೇ ನೀಡಬೇಕಾಗುತ್ತದೆ. ಆದರೆ ವಿಶ್ವಪರ್ಯಟನೆಯೇ ನಿಮ್ಮ ಜೀವನದ ಗುರಿಯಾಗಿದ್ದು ಇದಕ್ಕಾಗಿ ಅಗತ್ಯವಿರುವ ಹಣವನ್ನು ಹೊಂದಿಸಲು ನಿಮ್ಮ ಈಗಿನ ಕೆಲಸದಲ್ಲಿ ಸಾಧ್ಯವಿಲ್ಲವೆಂದಿದ್ದರೆ ನಿಮ್ಮ ಗಮನವನ್ನು ಸೌಥ್ ವೆಸ್ಟ್ ಏರ್ ಲೈನ್ಸ್ ನಲ್ಲಿ ಉದ್ಯೋಗದ ಕಡೆ ಕೇಂದ್ರೀಕರಿಸಿ. ಏಕೆಂದರೆ ಇಲ್ಲಿ ಕೆಲಸ ಸಿಗುವುದು ಅತಿ ಕಷ್ಟವಾದರೂ, ಒಮ್ಮೆ ಸಿಕ್ಕ ನಂತರ ಸೌಲಭ್ಯಗಳ ಸುಗ್ಗಿಯೇ ಹರಿಯುತ್ತದೆ. ಇದರಲ್ಲಿ ತಾವು, ತಮ್ಮ ಕುಟುಂಬ ಹಾಗೂ ತಮ್ಮ ಸ್ನೇಹಿತರನ್ನೂ ಜೊತೆಗೆ ಕರೆದುಕೊಂಡು ಉಚಿತವಾಗಿ ಸಂಸ್ಥೆಯ ವಿಮಾನ ಹಾರಾಟವಿರುವ ನಗರಗಳಿಗೆ ಹೋಗಿಬರಬಹುದು. ಅಷ್ಟೇ ಅಲ್ಲ, ಹೋದಲ್ಲೆಲ್ಲಾ ಖ್ಯಾತ ಹೋಟೆಲುಗಳಲ್ಲಿ ಭಾರೀ ರಿಯಾಯಿತಿ, ಥೀಮ್ ಪಾರ್ಕ್ ಗಳ ಪ್ರವೇಶದರದಲ್ಲಿ ರಿಯಾಯಿತಿ, ಕಾರು ಬಾಡಿಗೆ ಪಡೆದರೂ ಭಾರೀ ರಿಯಾಯಿತಿ ಪಡೆಯಬಹುದು. ಈ ಸಂಸ್ಥೆಯ ಕಟ್ಟಡಕ್ಕೆ ಅನತಿ ದೂರದಲ್ಲಿಯೇ ಇರುವ "ಭೂತಬಂಗಲೆಯಂತಹ ಕಛೇರಿ"ಯಲ್ಲಿ ಹ್ಯಾಲೋವೀನ್ ಹಬ್ಬದ ವೇಳೆ ಸಂಸ್ಥೆಯ ಎಲ್ಲಾ ಉದ್ಯೋಗಿಗಳು ಒಟ್ಟಾಗಿ ಕಲೆತು ಅಡುಗೆ ಸ್ಪರ್ಧೆ ಹಾಗೂ ಇತರ ವಿನೋದಕ್ರೀಡೆಗಳನ್ನು ಏರ್ಪಡಿಸುತ್ತಾರೆ. ಎಲ್ಲಾ ಉದ್ಯೋಗಿಗಳಿಗೂ ವಿಶ್ವದ ಅತ್ಯುತ್ತಮ ಆರೋಗ್ಯ ಯೋಜನೆಯಾದ 401 (k) ಯೋಜನೆಯ ಸೌಲಭ್ಯವನ್ನೂ ನೀಡುತ್ತದೆ.

ಮೆಟ್ಟೆಲ್ (ಎಲ್ ಸೆಗ್ಯುಂಡೋ, ಕ್ಯಾಲಿಫೋರ್ನಿಯಾ)

ಮೆಟ್ಟೆಲ್ (ಎಲ್ ಸೆಗ್ಯುಂಡೋ, ಕ್ಯಾಲಿಫೋರ್ನಿಯಾ)

ಬಾರ್ಬಿ ಡಾಲ್ ಎಂಬ ಗೊಂಬೆ ಇಂದು ವಿಶ್ವವಿಖ್ಯಾತಿ ಪಡೆದಿದ್ದರೆ ಇದಕ್ಕೆ ಮೆಟ್ಟೆಲ್ ಸಂಸ್ಥೆಯೇ ಕಾರಣ. ಗೊಂಬೆಗಳು ಹಾಗೂ ಇತರ ಮಕ್ಕಳ ಅಟಿಕೆಗಳಾದ ಮ್ಯಾಚ್ ಬಾಕ್ಸ್ ಕಾರುಗಳು ವಿಶ್ವದಾದ್ಯಂತ ಮಕ್ಕಳ ನೆಚ್ಚಿನ ಆಟಿಕೆಗಳಾಗಿವೆ. ಸಹಜವಾಗಿಯೇ ಸಂಸ್ಥೆ ತನ್ನ ಉದ್ಯೋಗಿಗಳ ಮಕ್ಕಳಿಗೂ ಸೌಲಭ್ಯಗಳು ತಲುಪುವಂತೆ ಮಾಡಿದೆ. ಒಂದು ವೇಳೆ ಸಂತಾನ ರಹಿತ ದಂಪತಿ ಮಗುವೊಂದನ್ನು ದತ್ತು ಪಡೆಯಬಯಸಿದರೆ, ಈ ಪ್ರಕ್ರಿಯೆಗೆ ಅಗತ್ಯವಾದ ಎಲ್ಲಾ ಹಣವನ್ನೂ ಸಂಸ್ಥೆ ನೀಡುತ್ತದೆ. ಶಾಲೆಗೆ ಹೋಗುವ ಮಕ್ಕಳ ಪಾಲಕರಿಗೆ ಮಕ್ಕಳ ಶಾಲಾ ಪ್ರವಾಸದಲ್ಲಿ ಜೊತೆಗೂಡಲು ಅಥವಾ ಪಾಲಕ-ಶಿಕ್ಷಕ ಸಂವಾದದಲ್ಲಿ ಭಾಗಿಯಾಗಲು ಹದಿನಾರು ಘಂಟೆಗಳ ವೇತನಸಹಿತ ರಜೆ ನೀಡುತ್ತದೆ.

ಸಿಸ್ಕೋ ಸಿಸ್ಟಮ್ಸ್ (ಸ್ಯಾನ್ ಜೋಸ್, ಕ್ಯಾಲಿಫೋರ್ನಿಯಾ)

ಸಿಸ್ಕೋ ಸಿಸ್ಟಮ್ಸ್ (ಸ್ಯಾನ್ ಜೋಸ್, ಕ್ಯಾಲಿಫೋರ್ನಿಯಾ)

ಒಂದು ವೇಳೆ ಸಂಸ್ಥೆ ತನ್ನ ಉದ್ಯೋಗಿಗಳಿಗಾಗಿ ಸಂಸ್ಥೆಯ ಆವರಣದಲ್ಲಿಯೇ ದುಬಾರಿಯಾದ ಲೈಫ್ ಕನೆಕ್ಷನ್ ಹೆಲ್ತ್ ಸೆಂಟರ್ ಎಂಬ ವ್ಯಾಯಾಮ ಶಾಲೆಯ ಶಾಖೆಯೊಂದನ್ನು ಪ್ರಾರಂಭಿಸಿದೆ ಎಂದರೆ ಸಂಸ್ಥೆ ತನ್ನ ಉದ್ಯೋಗಿಗಳ ಆರೋಗ್ಯಕ್ಕೆಷ್ಟು ಮಹತ್ವ ನೀಡುತ್ತದೆ ಎಂದು ಅಂದಾಜಿಸಬಹುದು. ಇದು ಕೇವಲ ವ್ಯಾಯಾಮ ಶಾಲೆಯಲ್ಲ, ಬದಲಿಗೆ ಆರೋಗ್ಯಕರ ಕೆಲಸ-ಜೀವನದದ ಸಮತೋಲನ ಕಾಯ್ದುಕೊಳ್ಳಲು ನೆರವಾಗುವ ಆರೋಗ್ಯಕೇಂದ್ರವೂ ಆಗಿದೆ. ಸಂಸ್ಥೆ ನೀಡುವ ಸೌಲಭ್ಯಗಳಲ್ಲಿ ಪ್ರಮುಖವಾಗಿ ಪ್ರಾಥಮಿಕ ಆರೋಗ್ಯ ವೈದ್ಯರ ಸೇವೆ, ಒಂದು ಔಷಧಿ ಅಂಗಡಿ, ಆಕ್ಯುಪಂಕ್ಚರ್ ಹಾಗೂ ದೈಹಿಕ ಥೆರಪಿ ತಜ್ಞರ ಸೇವೆಗಳು ಉದ್ಯೋಗಿಗಳಿಗೆ ಉಚಿತವಾಗಿ ಲಭ್ಯವಾಗುತ್ತವೆ. ಸಿಸ್ಕೋ ನೀಡುವ ಇನ್ನೊಂದು ಅತ್ಯುತ್ತಮ ಸೌಲಭ್ಯವೆಂದರೆ ಮನೆಯಿಂದಲೇ ಕೆಲಸ ಮಾಡಲು ಅಗತ್ಯ ಸಲಕರಣೆಗಳನ್ನು ಒದಗಿಸುವುದು. ಈ ಮೂಲಕ ಉದ್ಯೋಗಿ ಮನೆಯಿಂದ ಬರಬೇಕಾಗಿಯೇ ಇಲ್ಲ!

ವೈನಮಿಕ್ ಎಲ್ಎಲ್ಸಿ (ಫಿಲಡೆಲ್ಫಿಯಾ, ಪೆನ್ಸಿಲ್ವೇನಿಯಾ)

ವೈನಮಿಕ್ ಎಲ್ಎಲ್ಸಿ (ಫಿಲಡೆಲ್ಫಿಯಾ, ಪೆನ್ಸಿಲ್ವೇನಿಯಾ)

ವೈನಮಿಕ್ ಸಂಸ್ಥೆ ಪ್ರಸ್ತುತ ಬೋಸ್ಟನ್ ಹಾಗೂ ಫಿಲಡೆಲ್ಫಿಯಾಗಳಲ್ಲಿ ಉದ್ಯೋಗಿಗಳನ್ನು ಕೆಲಸಕ್ಕೆ ತೆಗೆದುಕೊಳ್ಳುತ್ತಿದೆ. ಈ ಸಂಸ್ಥೆ ಆರೋಗ್ಯ ಸಲಹಾ ವ್ಯಾಪಾರದಲ್ಲಿ ತನ್ನ ಹೆಸರನ್ನು ಮುನ್ನಡೆಸಲು ಯತ್ನಿಸುತ್ತಿದೆ. ಈ ಸಂಸ್ಥೆಯ ಉದ್ಯೋಗಿಗಳು ಆರೋಗ್ಯಕರ ಜೀವನಕ್ರಮವನ್ನು ಅಳವಡಿಸಿಕೊಂಡಾಗ ಮಾತ್ರವೇ ಸಂಸ್ಥೆಗೆ ಅತ್ಯುತ್ತಮವಾಗಿ ಕೆಲಸ ಮಾಡಬಲ್ಲರು ಎಂದು ಸ್ಪಷ್ಟವಾಗಿ ಅರಿತಿದೆ. ಆದ್ದರಿಂದ ಪ್ರತಿ ಉದ್ಯೋಗಿಗೂ ತಮ್ಮ ಕೆಲಸದ ಈಮೇಲ್ ಖಾತೆಗಳನ್ನು ವಾರಾಂತ್ಯಗಳಲ್ಲಿ ಹಾಗೂ ವಾರದ ದಿನಗಳಲ್ಲಿ ರಾತ್ರಿ ಹತ್ತರಿಂದ ಬೆಳಿಗ್ಗೆ ಆರರವರೆಗೆ ನೋಡಲೇಬೇಡಿ ಎಂದು ಕಟ್ಟಪ್ಪಣೆ ಮಾಡಿದೆ. ಇದೇ ಕಾರಣಕ್ಕೆ Best Small Firms to Work For in 2015 ಎಂಬ ಸ್ಪರ್ಧೆಯ Consulting Magazine awards ceremony ಎಂಬ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೆಲಸ-ಜೀವನದ ಸಮತೋಲನ ಕಾಯ್ದುಕೊಳ್ಳುವ ವಿಭಾಗದಲ್ಲಿ ಪ್ರಶಸ್ತಿಯನ್ನೂ ಗಳಿಸಿತ್ತು. ಈ ಸಂಸ್ಥೆಯ ಉದ್ಯೋಗಿಗಳು ಪಡೆಯುವ ಸೌಲಭ್ಯಗಳಲ್ಲಿ ತಿಂಗಳಿಗೊಂದು ಬಾರಿ ಮೋಜಿನ ತಿರುಗಾಟ (ಉದಾಹರಣೆಗೆ ಸುಶಿ ತಯಾರಿಸುವುದು, ಸೆಗ್ವೇ ಟೂರ್ ಇತ್ಯಾದಿ), ಉದ್ಯೋಗಿಯೊಬ್ಬರು ಪ್ರಾರಂಭಿಸುವ ಯೋಗಾಭ್ಯಾಸ ತರಗತಿ, ಧ್ಯಾನದ ತರಗತಿಗಳು ಸೇರಿವೆ. ಉಳಿದಂತೆ ಎಲ್ಲಾ ದಿನಗಳಲ್ಲಿ ಅನ್ವಯವಾಗುವ ಆರೋಗ್ಯ ಸೌಲಭ್ಯ, ವೇತನ ಸಹಿತ ರಜೆ ಇತ್ಯಾದಿಗಳು ಉದ್ಯೋಗಿಗಳಿಗೆ ದೊರಕುತ್ತವೆ.

ಜಿಂಗಾ (ಸ್ಯಾನ್ ಫ್ರಾನ್ಸಿಸ್ಕೋ, ಕ್ಯಾಲಿಫೋರ್ನಿಯಾ)

ಜಿಂಗಾ (ಸ್ಯಾನ್ ಫ್ರಾನ್ಸಿಸ್ಕೋ, ಕ್ಯಾಲಿಫೋರ್ನಿಯಾ)

ಸಾಕು ಪ್ರಾಣಿಗಳ ಒಡೆಯರಿಗೆ ಸೂಕ್ತವಾಗಲು ಈ ಸಂಸ್ಥೆಗಿಂತಲೂ ಉತ್ತಮ ಸಂಸ್ಥೆ ಈ ವಿಶ್ವದಲ್ಲಿಯೇ ಇನ್ನೊಂದಿಲ್ಲ. ಇದೇ ಕಾರಣಕ್ಕೆ ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಮುಖ್ಯ ಕಛೇರಿಗೆ 'ಶ್ವಾನಗೃಹ' ("The Doghouse) ಎಂಬ ಅನ್ವರ್ಥನಾಮವೂ ಇದೆ. ಈ ಕಛೇರಿಯಲ್ಲಿ ಉದ್ಯೋಗಿಗಳು ತಮ್ಮೊಂದಿಗೆ ಕರೆತರುವ ನಾಯಿಗಳಿಗೆ ವಿರಮಿಸಲು ಹಾಸಿಗೆ, ಉಚಿತ ಸಾಕುಪ್ರಾಣಿ ವಿಮೆ, ಛಾವಣೆಯಲ್ಲಿ ನಾಯಿಗಳಿಗೆ ಆಡುವ ಸ್ಥಳ ಹಾಗೂ ಉದ್ಯೋಗಿಗಳಿಗೂ, ಅವರ ನಾಯಿಗಳಿಗೂ ಆರೈಕೆ ಮಾಡಲು ಕಛೇರಿಯಲ್ಲಿಯೇ ಪ್ರತ್ಯೇಕವಾದ ಸ್ಥಳವಿದೆ. ಅಷ್ಟೇ ಅಲ್ಲ, ಇವರಿಗೆ 100% ಉಚಿತ ಆರೋಗ್ಯ ವಿಮೆ, ಅನಿಯಮಿತ ರಜೆಯ ವಿಮೆ, ಉಚಿತ ನಿತ್ಯದ ಮದ್ಯಾಹ್ನದ ಊಟ ಹಾಗೂ ಕೆಲಸದ ಸ್ಥಳದಲ್ಲಿಯೇ ಉದ್ಯೋಗಿಗಳು ತಮ್ಮ ಕಾರುಗಳನ್ನು ತೊಳೆಸಿಕೊಳ್ಳಬಹುದು ಹಾಗೂ ಡ್ರೈ ಕ್ಲೀನಿಂಗ್ ಸೇವೆಗಳನ್ನೂ ಪಡೆಯಬಹುದು.

ಏರ್ ಬಿಎನ್ ಬಿ (ಸ್ಯಾನ್ ಫ್ರಾನ್ಸಿಸ್ಕೋ, ಕ್ಯಾಲಿಫೋರ್ನಿಯಾ)

ಏರ್ ಬಿಎನ್ ಬಿ (ಸ್ಯಾನ್ ಫ್ರಾನ್ಸಿಸ್ಕೋ, ಕ್ಯಾಲಿಫೋರ್ನಿಯಾ)

ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಏರ್ ಬಿಎನ್ ಬಿ ಸಂಸ್ಥೆ ಪ್ರಯಾಣಿಕರಿಗೆ ಹಾಗೂ ನಗರದಲ್ಲಿ ಮನೆ ಇರುವವರು ತಮ್ಮ ಮನೆಯ ಕೋಣೆಯನ್ನು ಹೋಟೆಲುಗಳಿಗಿಂತ ಕಡಿಮೆ ಬಾಡಿಗೆ ನೀಡುವ ಮೂಲಕ ಇಬ್ಬರಿಗೂ ಪರಸ್ಪರ ಸಹಾಯವಾಗುವಂತೆ ಮಾಡುವ ಸಂಸ್ಥೆಯಾಗಿದೆ. ತನ್ನ ಉದ್ಯೋಗಿಗಳ ಹರ್ಷಕ್ಕೆ ಅತಿ ಹೆಚ್ಚಿನ ಪ್ರಾಮುಖ್ಯತೆ ನೀಡುವ ಮೂಲಕ 2015ರ ಗ್ಲಾಸ್ ಡೋರ್ಸ್ Best Places to Work ಎಂಬ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದೆ. ರಜಾದಿನಗಳಲ್ಲಿ ಉದ್ಯೋಗಿಗಳು ಯಾವ ಸಂತೋಷವನ್ನು ಪಡೆಯುತ್ತಾರೋ ಅಂತಹ ಸಂತೋಷವನ್ನು ಉದ್ಯೋಗ ಸ್ಥಳದಲ್ಲಿಯೂ ಪಡೆಯಬೇಕು ಎಂದು ಸಂಸ್ಥೆ ಬಯಸುತ್ತದೆ ಹಾಗೂ ಇದಕ್ಕಾಗಿ ಕೆಲವು ಅಸಾಂಪ್ರಾದಾಯಿಕ ವಿಧಾನವನ್ನೂ ಅಳವಡಿಸಿಕೊಂಡಿದೆ. ಉದಾಹರಣೆಗೆ ಪ್ರತಿ ಸೋಮವಾರ ಇಲ್ಲಿನ ಉದ್ಯೋಗಿಗಳಿಗೆ 'ಮೀಸೆಯ ದಿನ'ವಾಗಿದೆ. ಅಂದರೆ ಭಾನುವಾರದ ರಜೆಯ ಬಳಿಕ ಸೋಮವಾರ ಮೀಸೆ ಬೋಳಿಸದೇ ಬರಬೇಕು ಅಥವಾ ಕೃತಕ ಮೀಸೆಯೊಂದನ್ನು ಧರಿಸಿಯೇ ಬರಬೇಕು. ಔಪಚಾರಿಕಾ ಶುಕ್ರವಾರ, ಎಂದರೆ ಈ ದಿನ ಇತರ ದಿನಗಳಿಗೆ ವಿರುದ್ದವಾದ, ವಿನೋದಮಯ ನಡವಳಿಕೆ ಇರುತ್ತದೆ. ಉದ್ಯೋಗಿಗಳಿಗೆ ವಾರ್ಷಿಕ ಪ್ರಯಾಣದ ಸೌಲಭ್ಯದ ಟ್ರಾವೆಲ್ ಕಾರ್ಡ್ ದೊರಕುತ್ತದೆ. ಅಲ್ಲದೇ ಇವರು ತಮ್ಮ ಸಾಕುಪ್ರಾಣಿಯನ್ನು ಜೊತೆಗೇ ತರಬಹುದು. ಸಂಸ್ಥೆಯಲ್ಲಿಯೇ ಇರುವ ಆರೋಗ್ಯ ಕೇಂದ್ರದ ಪ್ರಯೋಜನ ಪಡೆಯಬಹುದು ಹಾಗೂ ನಿವೃತ್ತಿಯ ಬಳಿಕವೂ ಪಿಂಚಣಿಯನ್ನು ಪಡೆಯಬಹುದು.

ವೆಬ್ ಪೇಜ್ ಎಫ್ಎಕ್ಸ್ (ಹ್ಯಾರಿಸ್ ಬರ್ಗ್, ಪೆನ್ಸಿಲ್ವೇನಿಯಾ)

ವೆಬ್ ಪೇಜ್ ಎಫ್ಎಕ್ಸ್ (ಹ್ಯಾರಿಸ್ ಬರ್ಗ್, ಪೆನ್ಸಿಲ್ವೇನಿಯಾ)

ಒಂದು ವೇಳೆ ಪೆನ್ಸಿಲ್ವೇನಿಯಾ ನಗರದ ಕೇಂದ್ರದಲ್ಲಿ ನೀವು ನೆಲೆಸಿದ್ದರೆ, ವಿಶೇಷವಾಗಿ ನೀವು 1980 ಹಾಗೂ 1990 ರ ನಡುವೆ ಹುಟ್ಟಿದ್ದರೆ ಇಲ್ಲಿರುವ ವೆಬ್ ಪೇಜ್ ಎಫ್ ಎಕ್ಸ್ ಎಂಬ ಡಿಜಿಟಲ್ ಮಾರ್ಕೆಟಿಂಗ್ ಸಂಸ್ಥೆಯ ಕಟ್ಟಡವನ್ನು ಮರೆಯುವಂತೆಯೇ ಇಲ್ಲ. ಇತ್ತೀಚೆಗೆ ಈ ಸಂಸ್ಥೆ ಪೆನ್ಸಿಲ್ವೇನಿಯಾದಲ್ಲಿ ಕೆಲಸ ಮಾಡಲು ಅತ್ಯುತ್ತಮ ಸಂಸ್ಥೆ ಎಂಬ ಬಿರುದನ್ನು ಗಳಿಸಿದೆ. ಅಲ್ಲದೇ ಬೆಸ್ಟ್ ಕಂಪನೀಸ್ ಗ್ರೂಪ್ ಏರ್ಪಡಿಸಿದ Best Places to Work for Millennials list in 2015 ಎಂಬ ಸ್ಪರ್ಧೆಯಲ್ಲಿಯೂ ನಾಮಾಂಕಿತಗೊಂಡಿದೆ. ಇದಕ್ಕೆ ಕಾರಣವೂ ಇದೆ. ಈ ಸಂಸ್ಥೆಯ ಉದ್ಯೋಗಿಗಳು ವಾರಕ್ಕೊಮ್ಮೆ ಬರುವ ಸ್ಥಳೀಯ ಆಹಾರ ಟ್ರಕ್ ನ ಉಚಿತ ಪ್ರಯೋಜನ ಪಡೆಯಬಹುದು, ಫಿಟ್ಬಿಟ್ ಎಂಬ ಸಂಸ್ಥೆಯ ಆರೋಗ್ಯ ಸಲಹಾ ಕೇಂದ್ರದ ಸೇವೆಯ ಕಾರ್ಯಕ್ರಮಗಳಲ್ಲಿ ಭಾಗಿಯಾಗಬಹುದು, ಕಲಿಯಲು ಇರುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಪ್ರಶಸ್ತಿಗಳನ್ನೂ ಪಡೆಯಬಹುದು ಹಾಗೂ ಕೆಲಸದ ಸ್ಥಳದಲ್ಲಿರುವ ವ್ಯಾಯಾಮ ಶಾಲೆ, ಅಡುಗೆ ಮನೆಯ ಸೌಲಭ್ಯಗಳನ್ನು ಬಳಸಿಕೊಳ್ಳಬಹುದು. ಕೊಂಚ ಹೆಚ್ಚೇ ಎನಿಸುವಷ್ಟು ಕುಟುಂಬ ಸಹಿತ ವಾರ್ಷಿಕ ರಜೆಗಳು, ಸಾರ್ವಜನಿಕ ದತ್ತಕ ಸಂಸ್ಥೆಗಳಾದ ಪೆನ್ಸಿಲ್ಸ್ ಆಫ್ ಪ್ರಾಮಿಸ್ ಎಂಬ ಸಂಸ್ಥೆಗಳಲ್ಲಿ ಸ್ವಯಂಸೇವಕರಾಗಿ ಗುರುತಿಸಿಕೊಳ್ಳಲು ಅವಕಾಶವನ್ನೂ ಪಡೆಯುತ್ತಾರೆ.

ಡ್ರಾಪ್ ಬಾಕ್ಸ್ (ಸ್ಯಾನ್ ಫ್ರಾನ್ಸಿಸ್ಕೋ, ಕ್ಯಾಲಿಫೋರ್ನಿಯಾ)

ಡ್ರಾಪ್ ಬಾಕ್ಸ್ (ಸ್ಯಾನ್ ಫ್ರಾನ್ಸಿಸ್ಕೋ, ಕ್ಯಾಲಿಫೋರ್ನಿಯಾ)

ಕ್ಲೌಡ್ ಸಂಗ್ರಹ ಅಥವಾ ಅಂತರ್ಜಾಲದಲ್ಲಿ ಸ್ಥಳಾವಕಾಶವನ್ನು ಒದಗಿಸುವ ಈ ಸಂಸ್ಥೆಯ ಮುಂದಾಳುಗಳು ಕೆಲವು ವರ್ಷಗಳ ಹಿಂದೆ ಕೈಗೊಂಡ ನಿರ್ಣಯ ಈ ಸಂಸ್ಥೆ ನೀಡುತ್ತಿದ್ದ ಎಲ್ಲರ ಮೆಚ್ಚಿನ ಸೌಲಭ್ಯವನ್ನು ಹಿಂಪಡೆದುಕೊಳ್ಳುವಂತಾಗಿತ್ತು. ಈ ಸೌಲಭ್ಯವಿದ್ದಿದ್ದರೆ ಸಂಸ್ಥೆ ಹೆಚ್ಚು ಖ್ಯಾತಿ ಗಳಿಸಿರುತ್ತಿತ್ತು. ಆದರೆ ಇದರ ಬದಲಿಗೆ ಸಂಸ್ಥೆ ತನ್ನ ಸೇವೆಯ ಶ್ರೇಷ್ಠತೆಗೆ ಬದ್ಧತೆ ನೀಡಲು ಹಾಗೂ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಹೆಚ್ಚಿನ ಒತ್ತು ನೀಡಿತು. ಪರಿಣಾಮವಾಗಿ ಇಂದು ಡ್ರಾಪ್ ಬಾಕ್ಸ್ ಉದ್ಯೋಗಿಗಳು ಸತತವಾದ ಸಂವಾದ ಹಾಗೂ ತರಬೇತಿ ಶಿಬಿರಗಳ ಮೂಲಕ ಹೆಚ್ಚಿನ ಮಾಹಿತಿ ಪಡೆಯುವಂತಾಗುತ್ತದೆ. ಉದ್ಯೋಗಿಗಳು ಸಂಸ್ಥೆಯಲ್ಲಿರುವ ಪುಷ್ ಸ್ಕೂಟರ್ ನಲ್ಲಿ ಚಲಿಸುತ್ತಾ ಸಂಸ್ಥೆಯ ಆವರಣದಲ್ಲಿಯೇ ಇರುವ ಕೆಲವಾರು ಆಟದ ಕೋಣೆಗೆ ತೆರಳಬಹುದು ಹಾಗೂ ಸಂಗಿತ ಸ್ಟೂಡಿಯೋದ ಸೇವೆಯನ್ನೂ ಪಡೆಯಬಹುದು. ಜೊತೆಗೆ ಉಚಿತ ಮದ್ಯಾಹ್ನದ ಊಟ, ಹಾಗೂ ಎಲ್ಲರ ಹುಬ್ಬೇರಿಸುವಂತೆ 'ಪ್ರತಿ ಶುಕ್ರವಾರ ಉಚಿತ ವಿಸ್ಕಿ'

ಎಪಿಕ್ ಸಿಸ್ಟಂಸ್ (ವೆರೋನಾ, ವಿಸ್ಕಾನ್ಸಿನ್)

ಎಪಿಕ್ ಸಿಸ್ಟಂಸ್ (ವೆರೋನಾ, ವಿಸ್ಕಾನ್ಸಿನ್)

ನೀವು ಇದುವರೆಗೂ ಎಲೆಕ್ಟ್ರಾನಿಕ್ ಆರೋಗ್ಯ ಮಾಹಿತಿ ಕಡತಗಳನ್ನು ನಿರ್ಮಿಸುವ ಈ ಸಂಸ್ಥೆಯ ಬಗ್ಗೆ ಕೇಳಿಲ್ಲದಿರಬಹುದು. ಆದರೆ ಇಂದು ಇದು ಪಡೆಯುತ್ತಿರುವ ಏಳ್ಗೆಯ ವೇಗವನ್ನು ನೋಡಿದರೆ ಕೆಲವೇ ದಿನಗಳಲ್ಲಿ ಇದು ಎಲ್ಲರ ಬಾಯಿಮಾತಿನ ಸಂಸ್ಥೆಯಾಗಬಹುದು. ತನ್ನ ಉದ್ಯೋಗಿಗಳನ್ನು ಹೇಗೆ ನೋಡಿಕೊಳ್ಳಬೇಕು ಎಂಬ ವಿಷಯದ ಬಗ್ಗೆ ಪುಸ್ತಕವನ್ನೇ ಬರೆಯುವಷ್ಟು ಸೌಲಭ್ಯಗಳನ್ನು ಇದು ಒದಗಿಸುತ್ತಿದೆ. ಇದರಲ್ಲಿ ಪ್ರಮುಖವಾದುದು ಒಂದು ತಿಂಗಳ ಎಲ್ಲಾ ಖರ್ಚುಗಳನ್ನು ಒಳಗೊಂಡ, ವಿಶ್ವದಲ್ಲಿ ಯಾವುದೇ ಭಾಗಕ್ಕೆ ಪ್ರವಾಸ ಹೋಗಬಹುದಾದ ಸೌಲಭ್ಯ. ತಾವೆಂದೂ ಇದಕ್ಕೂ ಮೊದಲು ಹೋಗಿರದ ಸ್ಥಳಕ್ಕೆ ಇವರು ಹೋಗಬಹುದು ಹಾಗೂ ಜೊತೆಯಲ್ಲಿ ಸ್ನೇಹಿತರೊಬ್ಬರನ್ನೂ ಕರೆದುಕೊಂಡು ಹೋಗಬಹುದು. ಕೆಲಸದಲ್ಲಿದ್ದಾಗ ಈ ಸಂಸ್ಥೆಯ ಕಟ್ಟಡದಲ್ಲಿ ಓಡಾಡುವುದೇ ಒಂದು ಅವರ್ಚನೀಯ ಅನುಭವಾಗಿರುತ್ತದೆ. ಫೋರ್ಬ್ಸ್ ಪೇಜಸ್ ಎಂಬ ಸಂಸ್ಥೆಯ ಸಮೀಕ್ಷೆಯಲ್ಲಿ ಇದರ ನ್ಯೂಯಾರ್ಕ್ ನಗರದ ಸಬ್ ವೇ ಸುರಂಗಗಳ ವಿನ್ಯಾನ, ಮರದ ಮನೆಯಂತಿರುವ ಸಭಾಗೃಹ ಇತ್ಯಾದಿಗಳು ಪ್ರಕಟಗೊಂಡಿವೆ. ಅಲ್ಲದೇ ಉದ್ಯೋಗಿಗಳಿಗೆ ಅತ್ಯುತ್ತಮ ಆರೋಗ್ಯ ಸೌಲಭ್ಯ, ವಿದ್ಯಾದಾನದ ಪ್ರತಿಫಲ, ಶೇರುಮಾರುಕಟ್ಟೆಯಲ್ಲಿ ಭಾಗವಹಿಸುವ ಅವಕಾಶ ಹಾಗೂ ನಿವೃತ್ತಿ ಭತ್ಯೆಗಳೂ ದೊರಕುತ್ತವೆ.

ಲೆಂಡಿಯೋ (ಸಾಲ್ಟ್ ಲೇಕ್ ಸಿಟಿ, ಯುಟಾ)

ಲೆಂಡಿಯೋ (ಸಾಲ್ಟ್ ಲೇಕ್ ಸಿಟಿ, ಯುಟಾ)

ವಾಣಿಜ್ಯ ವಹಿವಾಟಿಗಾಗಿ ಆನ್ಲೈನ್ ಮೂಲಕ ಸಾಲ ನೀಡುವ ಈ ಸಂಸ್ಥೆ ಹಲವು ಅಮೀರಿಕನ್ ಸಂಸ್ಥೆಗಳ ಕನಸು ಸನಸಾಗಲು ನೆರವಾಗಿದೆ. ಅಷ್ಟೇ ಅಲ್ಲ, ತನ್ನ ಉದ್ಯೋಗಿಗಳ ಕನಸು ನನಸಾಗಲೂ ಇದು ಹಲವಾರು ಕಾರ್ಯಗಳನ್ನು ಕೈಗೊಂಡಿದೆ. ಹೊಸ ಉದ್ಯೋಗಿಗಳು ಇಲ್ಲಿ ಅನಿಯಮಿತ ವೇತನ ಸಹಿತ ರಜೆಯನ್ನು ಪಡೆಯಬಹುದು ಹಾಗೂ ಸಂಸ್ಥೆ ನಡೆಸುವ ಟೀಮ್ ಬಿಲ್ಡಿಂಗ್ ಅಥವಾ ತಂಡವನ್ನು ಕಟ್ಟುವ ಕಾರ್ಯಾಗಾರಗಳಲ್ಲಿ ಭಾಗವಹಿಸಬಹುದು. ಉದಾಹರಣೆಗೆ ಪಿಂಗ್ ಪಾಂಗ್ ಶಿಬಿರ. ಕೆಲಸದ ಸ್ಥಳದಲ್ಲಿ ತಲೆಬಿಸಿ ಹೆಚ್ಚಾಯಿತೇ, ಅಲ್ಲೇ ಇರುವ ಸ್ಪಾ ಸೇವೆಯನ್ನೂ ಪಡೆಯಬಹುದು. ಆರೋಗ್ಯದ ಕಾಳಜಿ ಇರುವ ಯಾವುದೇ ಉದ್ಯೋಗಿ ಇಲ್ಲಿನ ವಾರ್ಷಿಕ ಜಿಮ್ ಒಂದರ ಸದಸ್ಯತ್ವ ಪಡೆಯಬಹುದು. ಇದಕ್ಕೂ ಮುಖ್ಯವಾಗಿ ಪ್ರತಿ ತಿಂಗಳೂ ನಡೆಯುವ ಸಭೆಗಳಲ್ಲಿ ಈಗಿರುವ ಪರಿಸ್ಥಿತಿಯನ್ನು ಇನ್ನಷ್ಟು ಉತ್ತಮಗೊಳಿಸಲು ಏನು ಮಾಡಬಹುದು ಎಂಬ ಚರ್ಚಾಕೂಟದಲ್ಲಿ ಹೊಸಬರೂ ತಮ್ಮ ಅಭಿಪ್ರಾಯವನ್ನು ಮಂಡಿಸಲು ಅವಕಾಶ ನೀಡಲಾಗುತ್ತದೆ.

ಜೆನೆರಲ್ ಮಿಲ್ಸ್ (ಗೋಲ್ಡನ್ ವ್ಯಾಲಿ, ಮಿನ್ನೆಸೋಟಾ)

ಜೆನೆರಲ್ ಮಿಲ್ಸ್ (ಗೋಲ್ಡನ್ ವ್ಯಾಲಿ, ಮಿನ್ನೆಸೋಟಾ)

ತನ್ನ ಉದ್ಯೋಗಿಗಳು ಸೇರಿದ ಪ್ರಥಮ ದಿನದಿಂದಲೇ ಅನ್ವಯವಾಗುವಂತೆ ಕೆಲವು ಸೌಲಭ್ಯಗಳನ್ನು ನೀಡುವ ಈ ಸಂಸ್ಥೆ ಇದೊಂದಕ್ಕೆ ಮಾತ್ರವೇ ಹೆಸರು ಪಡೆದಿಲ್ಲ. ಹೊಸ ಉದ್ಯೋಗಿಗಳು ಸೇರಿ, ಎಲ್ಲರಿಗೂ ವಾರ್ಷಿಕ ಮೂರು ವಾರಗಳ ವೇತನಸಹಿತ ರಜೆ ಸಿಗುತ್ತದೆ. ತನ್ನ ಉದ್ಯೋಗಿಗಳು ಮನೆ ಹಾಗೂ ಕಛೇರಿಯಲ್ಲಿ ನಿರಾಳರಾಗಿರಲು ಕೆಲವು ಸೌಲಭ್ಯಗಳನ್ನು ಒದಗಿಸಿದೆ. ಉದ್ಯೋಗಿಗಳು ಕಟ್ಟಡದ ಯಾವುದೇ ಭಾಗದಲ್ಲಿ, ತಮಗಿಷ್ಟ ಬಂದ ಕಡೆ ತಮ್ಮ ಮೇಜು ಕುರ್ಚಿಯನ್ನು ಸಾಗಿಸಿಕೊಂಡು ಹೋಗಿ, ತಮಗಿಷ್ಟ ಬಂದಂತೆ ಕುಳಿತು ಕೆಲಸ ನಿರ್ವಹಿಸಬಹುದು. ಸಂಸ್ಥೆಯಲ್ಲಿಯೇ ಇರುವ ವ್ಯಾಯಾಮಕೇಂದ್ರದ ಪ್ರಯೋಜನವನೂ ಪಡೆಬಹುದು. ವಿದ್ಯಾದಾನದ ಅನುದಾನ, ಸ್ವಯಂಸೇವಕರಾಗಿ ಕೈಗೊಂಡ ಕಾರ್ಯಗಳ ಬದಲಿಗೆ ಹೆಚ್ಚಿನ ರಜೆ ಹಾಗೂ ಇತರ ಭತ್ಯೆಗಳ ಕಾರಣದಿಂದಾಗಿ ಇಲ್ಲಿನ ಉದ್ಯೋಗಳಲ್ಲಿ ಅರ್ಧಕ್ಕಿಂತಲೂ ಹೆಚ್ಚಿನವರು ದಶಕಕ್ಕೂ ಹೆಚ್ಚಿನ ಸೇವೆಯನ್ನು ಸಲ್ಲಿಸಿದ್ದಾರೆ.

ಜಾಪ್ಪೋಸ್ (ಲಾಸ್ ವೇಗಾಸ್, ನೆವಾಡಾ)

ಜಾಪ್ಪೋಸ್ (ಲಾಸ್ ವೇಗಾಸ್, ನೆವಾಡಾ)

ಅಮೇಜಾನ್ ಎಂಬ ದೈತ್ಯ ಸಂಸ್ಥೆಯೂ ಈ ಸಂಸ್ಥೆಯನ್ನು ಎರಡು ಬಾರಿ ಕೊಳ್ಳಬಯಸಿದುದಕ್ಕೆ (ಎರಡನೆಯ ಬಾರಿ ಅವರು ಯಶಸ್ವಿಯಾದರು) ಕೆಲವು ಕಾರಣಗಳಿವೆ. ಪಾದರಕ್ಷೆಗಳ ಮಾರಾಟದ ಈ ಮಳಿಗೆಯಲ್ಲಿ ಇವರಿಗೆ ಏನು ಆಕರ್ಷಕವಾಗಿ ಕಂಡಿತ್ತು? ಉತ್ತಮ ಗುಣಮಟ್ಟದ ಪಾದರಕ್ಷೆಗಳ ಹೊರತಾಗಿ ಈ ಸಂಸ್ಥೆ ತನ್ನ ಉದ್ಯೋಗಿಗಳ ಶಾಶ್ವತ ಸಂತಸಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತದೆ. ಲಾಸ್ ವೇಗಾಸ್ ನಲ್ಲಿ ಕೇಂದ್ರಕಟ್ಟಡ ಹೊಂದಿರುವ ಈ ಸಂಸ್ಥೆ ಉದ್ಯೋಗಿಗಳಿಗಾಗಿ ಕಟ್ಟಡದಲ್ಲಿಯೇ ಬಿಸ್ಟ್ರೋ ಕೆಫೆ, ಯೋಗಾಭ್ಯಾಸ ತರಬೇತಿ ತರಗತಿಗಳು, ಮಲಗಲು ಕೋಣೆ, ಛಾವಣಿಯಲ್ಲಿರುವ ಡೆಕ್, ಲಿಫ್ಟ್ ನಲ್ಲಿ ಸಾಗುವಾಗ ಆಡಲು ವೀಡಿಯೋ ಗೇಮ್ ಇತ್ಯಾದಿಗಳು ಲಭ್ಯವಿವೆ. ಅಷ್ಟೇ ಅಲ್ಲ, ಉದ್ಯೋಗಿಗಳು ಸಂತೋಷವಾಗಿರಲು ಡರ್ಬಿ ಕುದುರೆ ರೇಸ್, ಪ್ರತಿಭಾ ಪ್ರದರ್ಶನ, ಪೈಜಾಮಾ ದಿನ, ಐಸ್ ಕ್ರೀಂ ಟ್ರಕ್ ಮೊದಲಾದವುಗಳ ಅನುಕೂಲತೆಯನ್ನೂ ಪಡೆಯಬಹುದು.

ಇದಕ್ಕೂ ಹೆಚ್ಚಿನ ಸೌಲಭ್ಯ ನೀಡುವ ಸಂಸ್ಥೆ ನಿಮಗೆ ಗೊತ್ತೇ? ಈ ಬಗ್ಗೆ ನಮಗೂ ಕುತೂಹಲವಿದೆ, ದಯವಿಟ್ಟು ನಮ್ಮೊಂದಿಗೆ ಹಂಚಿಕೊಳ್ಳಿ.

 

English summary

15 companies offering amazing facilities to employees

Now, more than ever before, job seekers are looking for companies that think outside the box when it comes to thoughtful employee perks and benefits.
Story first published: Friday, February 9, 2018, 11:37 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X