ಭಾರತ ಸರಕಾರದ 8 ವಿಮಾ ಯೋಜನೆಗಳ ಪ್ರಯೋಜನಗಳೇನು ಗೊತ್ತೆ?

By Siddu Thoravat
Subscribe to GoodReturns Kannada
For Quick Alerts
ALLOW NOTIFICATIONS  
For Daily Alerts

  ಜೀವ ವಿಮೆ ಎಂಬುದು ನಮಗೆ ಭವಿಷ್ಯತ್ತಿನ ಜೀವನದ ಸುಭದ್ರತೆಯ ಖಾತರಿ ನೀಡುವುದರೊಂದಿಗೆ ಬಹು ಮುಖ್ಯವಾಗಿ ನಮ್ಮ ಮನಸ್ಸಿಗೆ ನೆಮ್ಮದಿ ಒದಗಿಸುವ ಸಾಧನವಾಗಿದೆ. ಶ್ರೀಮಂತರಿರಲಿ ಅಥವಾ ಬಡವರೇ ಆಗಿರಲಿ ಎಲ್ಲರಿಗೂ ನಮ್ಮ ದೇಶದಲ್ಲಿ ನೆಮ್ಮದಿಯಾಗಿ ಬದುಕುವ ಹಕ್ಕಿದೆ. ಸಾಮಾನ್ಯ ಜನತೆ ಸಹ ನೆಮ್ಮದಿಯಾಗಿ ಬದುಕಬೇಕೆಂಬ ದೂರದೃಷ್ಟಿಯಿಂದ ಕೇಂದ್ರ ಸರಕಾರ ಹಲವಾರು ರೀತಿಯ ವಿಮಾ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಭಾರತ ಸರ್ಕಾರದ ಯೋಜನೆಗಳು
  ಬಡವರು ಹಾಗೂ ಸಮಾಜದಲ್ಲಿ ಹಿಂದುಳಿದ ವರ್ಗದವರ ಜನರ ನೆಮ್ಮದಿಯ ಜೀವನಕ್ಕಾಗಿ ಕೇಂದ್ರ ಸರಕಾರ ಜಾರಿಗೆ ತಂದ ಪ್ರಮುಖ ೮ ವಿಮಾ ಯೋಜನೆಗಳ ಬಗ್ಗೆ ಮಾಹಿತಿ ಪಡೆದು ಅವುಗಳನ್ನು ಸದುಪಯೋಗಪಡಿಸಿಕೊಳ್ಳುವುದು ಅವಶ್ಯ. ಕೇಂದ್ರ ಸರಕಾರ ಜಾರಿ ಮಾಡಿರುವ ವಿಮಾ ಯೋಜನೆಗಳು ಹಾಗೂ ಅವುಗಳ ವೈಶಿಷ್ಟ್ಯಗಳು ಹೀಗಿವೆ:

  1. ಅಟಲ್ ಪಿಂಚಣಿ ಯೋಜನೆ (ಎಪಿವೈ)

  ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರಿನಲ್ಲಿ ಜಾರಿಗೆ ತರಲಾದ ಈ ವಿಮಾ ಯೋಜನೆ ಹಿರಿಯ ನಾಗರಿಕರಿಗೆ ವರದಾನವಾಗಿದೆ. ನಿವೃತ್ತರಾದ ಮೇಲೆ ಜೀವನ ನಡೆಸಲು ಸಹಾಯಕವಾಗುವಂತೆ ಯೋಜನೆ ರೂಪಿಸಲಾಗಿದೆ.

  ಪ್ರಯೋಜನಗಳು:
  ಅಟಲ್ ಪಿಂಚಣಿ ಯೋಜನೆಯಲ್ಲಿ ತೊಡಗಿಸುವ ಹಣಕ್ಕೆ ವರ್ಷಕ್ಕೆ ಶೇ.೫೦ ರಷ್ಟು ಅಥವಾ ಗರಿಷ್ಠ ಒಂದು ಸಾವಿರ ರೂಪಾಯಿಗಳನ್ನು ಕೇಂದ್ರ ಸರಕಾರ ತನ್ನ ಕಡೆಯಿಂದ ಭರಿಸುತ್ತದೆ.

  ತಿಂಗಳಿಗೆ ೧೦೦೦ ರೂಪಾಯಿ ಪಿಂಚಣಿ ಪಡೆಯಲು ಭರಿಸಬೇಕಾದ ಮೊತ್ತ :
  ವಂತಿಗೆದಾರ 18 ವರ್ಷ ವಯಸ್ಸಿನವರಾಗಿದ್ದಲ್ಲಿ, ಮುಂದಿನ 40 ವರ್ಷಗಳವರೆಗೆ ತಿಂಗಳಿಗೆ 43 ರೂಪಾಯಿ ಪಾವತಿಸಬೇಕು.
  40 ವರ್ಷ ಆಗಿದ್ದಲ್ಲಿ ಮುಂದಿನ 20 ವರ್ಷಗಳವರೆಗೆ ಪ್ರತಿ ತಿಂಗಳು 291 ರೂಪಾಯಿ ಪಾವತಿ ಮಾಡಬೇಕಾಗುತ್ತದೆ.

  ಅರ್ಹತೆ : 18 ರಿಂದ 40 ವರ್ಷ ವಯೋಮಾನದವರು ಈ ಪಿಂಚಣಿ ಯೋಜನೆ ಆರಂಭಿಸಬಹುದಾಗಿದ್ದು, ತಮ್ಮ 60 ವರ್ಷದವರೆಗೆ ವಂತಿಗೆ ನೀಡಬೇಕು. ಆಧಾರ ಸಂಖ್ಯೆ ಒಂದಿದ್ದರೆ ಸುಲಭವಾಗಿ ಯೋಜನೆಗೆ ಹೆಸರು ನೋಂದಾಯಿಸಿಕೊಳ್ಳಬಹುದು.
  ಮಾಹಿತಿಗೆ ವೆಬ್‌ಸೈಟ್: https://npscra.nsdl.co.in/nsdl/scheme-details.pdf

  2. ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (ಪಿಎಂಎಸ್‌ಬಿವೈ)

  ಪಿಎಂಎಸ್‌ಬಿವೈ ಇದು ನಾಗರಿಕರಿಗೆ ಅಪಘಾತ ವಿಮೆಯ ಸುರಕ್ಷತೆ ನೀಡುವ ಸರಕಾರಿ ಪ್ರಾಯೋಜಿತ ಯೋಜನೆಯಾಗಿದೆ. ಅಪಘಾತದಿಂದ ಅಂಗವೈಕಲ್ಯ ಅಥವಾ ಮರಣ ಸಂಭವಿಸಿದ ಸಂದರ್ಭಗಳಲ್ಲಿ ವಿಮೆಯ ಸುರಕ್ಷತೆ ಸಿಗುತ್ತದೆ.

  ಪ್ರಯೋಜನಗಳು:
  ಅಪಘಾತದಿಂದ ಮರಣ ಅಥವಾ ಶಾಶ್ವತ ಅಂಗವೈಕಲ್ಯ ಉಂಟಾದರೆ, ವ್ಯಕ್ತಿಯ ನಾಮಿನಿಗೆ ೨ ಲಕ್ಷ ರೂಪಾಯಿ ನೀಡಲಾಗುತ್ತದೆ.
  ಭಾಗಶಃ ಅಂಗವೈಕಲ್ಯ ಉಂಟಾದರೆ ಅಪಘಾತಗೊಂಡ ವ್ಯಕ್ತಿಗೆ ೧ ಲಕ್ಷ ರೂಪಾಯಿ ನೀಡಲಾಗುತ್ತದೆ.

  ಅರ್ಹತೆ : 18 ರಿಂದ 70 ವರ್ಷದೊಳಗಿನ, ಉಳಿತಾಯ ಬ್ಯಾಂಕ್ ಖಾತೆ ಹೊಂದಿರುವ ಯಾರೇ ಆದರೂ ಈ ಯೋಜನೆಗೆ ನೋಂದಾಯಿಸಿಕೊಳ್ಳಬಹುದು. ವೆಬ್ ಸೈಟ್: https://www.indiapost.gov.in/Financial/DOP_PDFFiles/Rules%20PMSBY.pdf

  3. ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ (ಪಿಎಂಜೆಜೆಬಿವೈ)

  ದೇಶದಲ್ಲಿನ ಎಲ್ಲರನ್ನೂ ಜೀವ ವಿಮೆ ಯೋಜನೆಯಡಿ ತರಬೇಕೆಂಬ ಸದುದ್ದೇಶದಿಂದ ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ ಆರಂಭಿಸಲಾಗಿದೆ.

  ಪ್ರಯೋಜನಗಳು :
  ಯೋಜನೆಯನ್ನು ಪಡೆದುಕೊಂಡ ವ್ಯಕ್ತಿಯು ಮೃತನಾದಲ್ಲಿ ಆತನ ನಾಮಿನಿಗೆ 2 ಲಕ್ಷ ರೂಪಾಯಿ ನೀಡಲಾಗುತ್ತದೆ.

  ವಂತಿಗೆ : ಪ್ರತಿ ವರ್ಷ 330 ರೂಪಾಯಿ ಪ್ರೀಮಿಯಂ ಕಟ್ಟಬೇಕು. (ಸೇವಾ ತೆರಿಗೆ ಹೊರತು ಪಡಿಸಿ)

  ಅರ್ಹತೆ :
  ಉಳಿತಾಯ ಬ್ಯಾಂಕ್ ಖಾತೆ ಹೊಂದಿರುವ ೧೮ ರಿಂದ ೫೦ ವರ್ಷದೊಳಗಿನವರು ಯೋಜನೆ ಪಡೆಯಬಹುದು. ವೆಬ್ ಸೈಟ್:
  https:// www.indiapost.gov.in/Financial/DOP_PDFFiles/Rules%20PMJJBY.pdf

  4. ಪ್ರಧಾನ ಮಂತ್ರಿ ಜನ್ ಧನ ಯೋಜನೆ (ಪಿಎಂಜೆಡಿವೈ)

  ನಗರ ಪ್ರದೇಶ ಹಾಗೂ ಗ್ರಾಮೀಣ ಭಾಗಗಳಲ್ಲಿ ವಾಸಿಸುವ ಕಡಿಮೆ ಆದಾಯದ ಜನತೆ ಶೂನ್ಯ ಠೇವಣಿಯೊಂದಿಗೆ ಬ್ಯಾಂಕ್ ಖಾತೆ ಹೊಂದುವ ನಿಟ್ಟಿನಲ್ಲಿ ಜನ್ ಧನ್ ಯೋಜನೆ ಜಾರಿ ಮಾಡಲಾಗಿದೆ. ಜೀರೊ ಬ್ಯಾಲೆನ್ಸ್ ಉಳಿತಾಯ ಖಾತೆಯ ಮೂಲಕ ಎಲ್ಲರೂ ಬ್ಯಾಂಕ್ ವ್ಯವಹಾರ ನಡೆಸುವಂತೆ ಹಾಗೂ ಸಾಲ, ವಿಮೆ, ಪಿಂಚಣಿ ಮುಂತಾದ ಸೌಲಭ್ಯಗಳನ್ನು ಪಡೆಯಲು ಜನ್ ಧನ್ ಯೋಜನೆ ಸಹಾಯಕವಾಗಿದೆ.

  ಪ್ರಯೋಜನಗಳು:
  ಖಾತೆದಾರ ಆಕಸ್ಮಿಕವಾಗಿ ನಿಧನರಾದಲ್ಲಿ 30 ಸಾವಿರ ರೂಪಾಯಿ ವಿಮೆ ಹಣವನ್ನು ನಾಮಿನಿದಾರರಿಗೆ ನೀಡಲಾಗುವುದು.
  ಖಾತೆ ಆರಂಭಿಸಿದ 6 ತಿಂಗಳ ನಂತರ ಬ್ಯಾಂಕಿನಿಂದ ೫ ಸಾವಿರ ರೂಪಾಯಿ ಓವರ್ ಡ್ರಾಫ್ಟ್ ಪಡೆಯಬಹುದು.
  ಎನ್‌ಪಿಸಿಐ ತಂತ್ರಜ್ಞಾನದ ಮೂಲಕ ಸಾಮಾನ್ಯ ಮೊಬೈಲ್ ಫೋನ್ ಬಳಸಿ ತಮ್ಮ ಖಾತೆಯಿಂದ ಹಣ ವರ್ಗಾಯಿಸಬಹುದು ಹಾಗೂ ಬ್ಯಾಲೆನ್ಸ್ ಚೆಕ್ ಮಾಡಬಹುದು.
  ೧ ಲಕ್ಷ ರೂಪಾಯಿ ಅಪಘಾತ ವಿಮೆ ಸೌಲಭ್ಯ.
  ಬಡವರಿಗೆ ಮೊಬೈಲ್ ಬ್ಯಾಂಕಿಂಗ್ ಸೌಕರ್ಯ.

  ವೆಚ್ಚಗಳು:
  ಖಾತೆಯಲ್ಲಿ ಕನಿಷ್ಠ ಠೇವಣಿ ಕಾಯ್ದುಕೊಳ್ಳುವ ನಿಬಂಧನೆ ಇಲ್ಲ.

  ಅರ್ಹತೆ:
  ಆರ್ಥಿಕವಾಗಿ ಹಿಂದುಳಿದವರೆಲ್ಲರೂ ಈ ಯೋಜನೆಯ ಲಾಭ ಪಡೆಯಬಹುದು. ವೆಬ್ ಸೈಟ್: http://pmjdy.gov.in/

  5. ಕಿಸಾನ್ ವಿಕಾಸ ಪತ್ರ

  ಕಿಸಾನ್ ವಿಕಾಸ ಪತ್ರ ಎಂಬ ಉಳಿತಾಯ ಯೋಜನೆಯನ್ನು ೧೯೮೮ ರಲ್ಲಿ ಭಾರತೀಯ ಅಂಚೆ ಇಲಾಖೆ ಮೂಲಕ ಆರಂಭಿಸಲಾಗಿತ್ತು. ಆದರೆ ೨೦೧೧ ರಲ್ಲಿ ಯೋಜನೆಯನ್ನು ಸ್ಥಗಿತಗೊಳಿಸಲಾಗಿತ್ತು. ೨೦೧೪ ರಲ್ಲಿ ಕೇಂದ್ರ ಸರಕಾರ ಯೋಜನೆಯನ್ನು ಪುನಾರಂಭಿಸಿದೆ.
  ಪ್ರಯೋಜನಗಳು :
  ಬಡ್ಡಿ ದರ - ವಾರ್ಷಿಕ ಶೇ. ೭.೭
  ಕಿಸಾನ್ ವಿಕಾಸ ಪತ್ರ ಕೊಂಡ ಎರಡೂವರೆ ವರ್ಷಗಳ ನಂತರ ಅವಶ್ಯ ಬಿದ್ದಲ್ಲಿ ನಗದೀಕರಿಸಿಕೊಳ್ಳಬಹುದು.
  ಹೂಡಿಕೆಯ ಪಕ್ವತಾ ಅವಧಿ ೧೧೨ ತಿಂಗಳುಗಳಾಗಿದೆ.

  ವೆಚ್ಚಗಳು :
  1000 ರೂಪಾಯಿ ಮೊತ್ತ ಹಾಗೂ ಅದರ ದ್ವಿಗುಣಗಳಲ್ಲಿ ಕನಿಷ್ಠ ೧೦೦೦ ರೂಪಾಯಿಯಂತೆ ಹೂಡಿಕೆ ಮಾಡಬಹುದು.
  ಅರ್ಹತೆ :
  ಯಾವುದೇ ವಯಸ್ಕ ಭಾರತೀಯ ವೈಯಕ್ತಿಕವಾಗಿ, ಇಬ್ಬರು ವಯಸ್ಕರು ಜಂಟಿಯಾಗಿ ಅಥವಾ ಟ್ರಸ್ಟ್ ಮೂಲಕ ಕಿಸಾನ್ ವಿಕಾಸ ಪತ್ರ ಕೊಳ್ಳಬಹುದು.
  ವೆಬ್ ಸೈಟ್ :
  https://www.indiapost.gov.in/Financial/Pages/content/KVP.aspx

  6. ಸುಕನ್ಯಾ ಸಮೃದ್ಧಿ ಯೋಜನೆ (ಎಸ್‌ಎಸ್‌ವೈ)

  ಬೇಟಿ ಬಚಾವೊ, ಬೇಟಿ ಪಢಾವೊ ಕಾರ್ಯಕ್ರಮದ ಅಂಗವಾಗಿ 2015ರಲ್ಲಿ ಪ್ರಧಾನ ಮಂತ್ರಿಗಳು ಈ ಯೋಜನೆಗೆ ಚಾಲನೆ ನೀಡಿದರು. ಹೆಣ್ಣು ಮಕ್ಕಳ ವಿದ್ಯಾಭ್ಯಾಸ ನಿರ್ವಹಣೆ ಹಾಗೂ ಅವರ ಮದುವೆ ವೆಚ್ಚವನ್ನು ಭರಿಸಲು ನೆರವಾಗುವಂತೆ ಯೋಜನೆ ರೂಪಿಸಲಾಗಿದೆ.

  ಪ್ರಯೋಜನಗಳು :
  ಉನ್ನತ ವಿದ್ಯಾಭ್ಯಾಸ ಹಾಗೂ ಮದುವೆಯ ಖರ್ಚು ಭರಿಸಲಾಗುತ್ತದೆ.
  ಆದಾಯ ತೆರಿಗೆ ವಿನಾಯಿತಿ ಸೌಲಭ್ಯವಿದೆ.
  ಒಂದು ಕುಟುಂಬ ಎರಡು ಸುಕನ್ಯಾ ಸಮೃದ್ಧಿ ಯೋಜನೆ ಖಾತೆ ಹೊಂದಬಹುದಾಗಿದೆ. ಒಂದು ವೇಳೆ ಅವಳಿ ಹೆಣ್ಣು ಮಕ್ಕಳು ಹಾಗೂ ಮತ್ತೊಂದು ಹೆಣ್ಣು ಜನಿಸಿದಲ್ಲಿ ಮೂರನೆಯ ಅಕೌಂಟ್ ತೆರೆಯುವ ಅವಕಾಶವಿದೆ.

  ವಂತಿಗೆ :
  ಹೆಣ್ಣು ಮಕ್ಕಳ ಪಾಲಕರು ಪ್ರತಿವರ್ಷ ೧೦೦೦ ರೂಪಾಯಿಯಿಂದ ೧.೫ ಲಕ್ಷ ರೂಪಾಯಿವರೆಗೆ, ಮಗುವಿಗೆ ೧೫ ವರ್ಷವಾಗುವವರೆಗೂ ಪಾವತಿ ಮಾಡಬಹುದು.

  ಅರ್ಹತೆ : 10 ವರ್ಷದೊಳಗಿನ ಹೆಣ್ಣು ಮಗು
  ವೆಬ್ ಸೈಟ್: http://www.sukanyasamriddhiaccount.net/

  7. ಪ್ರಧಾನ ಮಂತ್ರಿ ಆವಾಸ್ ಯೋಜನೆ (ಪಿಎಂಎವೈ)

  ಎಲ್ಲರಿಗೂ ಸೂರು ಎಂದು ಕರೆಯಲಾಗುವ ಪ್ರಧಾನ ಮಂತ್ರಿ ಆವಾಸ್ ಯೋಜನೆ ಮೂಲಕ ನಗರ ಪ್ರದೇಶಗಳ ಬಡವರಿಗೆ ಮನೆ ನಿರ್ಮಾಣ ಮಾಡಿ ಕೊಡುವ ಉದ್ದೇಶ ಹೊಂದಲಾಗಿದೆ.

  ಪ್ರಯೋಜನಗಳು:
  2022 ರೊಳಗೆ ನಗರ ಪ್ರದೇಶಗಳ ಬಡವರಿಗೆ ೨ ಕೋಟಿ ಮನೆ ನಿರ್ಮಾಣವಾಗಲಿವೆ.
  ವಿಶೇಷ ಚೇತನರಿಗೆ ಹಾಗೂ ಹಿರಿಯ ನಾಗರಿಕರಿಗೆ ಹೆಚ್ಚಿನ ಆದ್ಯತೆ.
  ಮಹಿಳಾ ಸಬಲೀಕರಣದ ದೃಷ್ಟಿಯಿಂದ ಈ ಯೋಜನೆಯಲ್ಲಿ ಮನೆಗಳನ್ನು ಮಹಿಳೆಯರ ಹೆಸರಿಗೆ ಮಾತ್ರ ನೋಂದಣಿ ಮಾಡಲು ನಿರ್ಧರಿಸಲಾಗಿದೆ.
  ಪರಿಸರ ಸ್ನೇಹಿ ವಸ್ತುಗಳಿಂದ ಮನೆ ನಿರ್ಮಾಣ.
  ಈ ಯೋಜನೆಯಲ್ಲಿ ಸಾಲ ಪಡೆಯುವವರಿಗೆ ಶೇ. 6.5 ರಷ್ಟು ಬಡ್ಡಿ ಸಬ್ಸಿಡಿಯನ್ನು ೧೫ ವರ್ಷಗಳವರೆಗೆ ಸರಕಾರ ಭರಿಸಲಿದೆ.

  ಅರ್ಹತೆ :
  ಆರ್ಥಿಕವಾಗಿ ದುರ್ಬಲ ವರ್ಗಕ್ಕೆ ಸೇರಿದ ಮಹಿಳೆಯರು.
  ವೆಬ್ ಸೈಟ್: http://pmaymis.gov.in/

  8. ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆ (ಆರ್‌ಎಸ್‌ಬಿವೈ)

  ಸರಕಾರದ ಈ ಆರೋಗ್ಯ ವಿಮೆ ಯೋಜನೆಯಡಿ ಈಗಾಗಲೇ 36 ಮಿಲಿಯನ್ ಕುಟುಂಬಗಳು ನೋಂದಾಯಿಸಿಕೊಂಡಿವೆ. ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಕೈಗೆಟುಕುವ ದರದಲ್ಲಿ ಆರೋಗ್ಯ ತಪಾಸಣೆ ಹಾಗೂ ಇತರ ಆರೋಗ್ಯ ಸೇವೆಗಳನ್ನು ನೀಡಲು ಯೋಜನೆ ಆರಂಭಿಸಲಾಗಿದೆ. ಸ್ಮಾರ್ಟ್ ಕಾರ್ಡ್ ಮೂಲಕ ನಿರ್ವಹಿಸಲಾಗುವ ಈ ಯೋಜನೆಯನ್ನು ವಿಶ್ವ ಬ್ಯಾಂಕ್, ವಿಶ್ವ ಸಂಸ್ಥೆ ಹಾಗೂ ಐಎಲ್‌ಓ ಮುಕ್ತಕಂಠದಿಂದ ಶ್ಲಾಘಿಸಿವೆ.

  ಪ್ರಯೋಜನಗಳು:
  ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ನಗದು ರಹಿತ ಚಿಕಿತ್ಸೆ.
  ೩೦ ಸಾವಿರ ರೂಪಾಯಿಗಳವರೆಗೆ ಒಳರೋಗಿ ಚಿಕಿತ್ಸಾ ವೆಚ್ಚ ಭರಿಸುವಿಕೆ.
  ಮೊದಲ ದಿನದಿಂದಲೇ ಎಲ್ಲ ರೀತಿಯ ಕಾಯಿಲೆಗಳಿಗೆ ಚಿಕಿತ್ಸೆ.

  ವೆಚ್ಚಗಳು:
  18 ರಿಂದ 40 ವಯೋಮಾನದವರಿಗೆ 50 ಸಾವಿರ ರೂಪಾಯಿ ವಿಮಾ ರಕ್ಷಣೆ ಪಡೆಯಲು ಪ್ರತಿವರ್ಷ 700 ರಿಂದ 800 ರೂಪಾಯಿ ವಂತಿಗೆ ನೀಡಬೇಕಾಗುತ್ತದೆ.

  ಅರ್ಹತೆ:
  ಬಡತನ ರೇಖೆಗಿಂತ ಕೆಳಗಿರುವ ಹಳದಿ ರೇಷನ್ ಕಾರ್ಡ್ ಹೊಂದಿರುವ ಕುಟುಂಬದ ಸದಸ್ಯರು.

  ವೆಬ್ ಸೈಟ್:
  http://www.rsby.gov.in/

  English summary

  Top 8 Government Insurance Schemes in India and their Benefits

  number of insurance schemes have been brought up by our honorable Prime Minister and the government of India.
  Story first published: Saturday, June 30, 2018, 10:36 [IST]
  Company Search
  Enter the first few characters of the company's name or the NSE symbol or BSE code and click 'Go'

  Find IFSC

  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more