ನಿಮಗೆ ಗೊತ್ತಿರಬೇಕಾದ ಹೂಡಿಕೆಯ ಪ್ರಮುಖ ವಿಧಾನಗಳು

Subscribe to GoodReturns Kannada
For Quick Alerts
ALLOW NOTIFICATIONS  
For Daily Alerts

  ಆರ್ಥಿಕ ಜಗತ್ತಿನಲ್ಲಿ ಉಳಿಸಿದ ಹಣದ ಬಳಕೆ ಮೂಲತಃ ಎರಡು ಬಗೆಯಲ್ಲಾಗುತ್ತವೆ. ಮೊದಲನೆಯದು ಮುಂದಿನ ದಿನಗಳಿಗಾಗಿ ಉಳಿಸಿಡುವ ಉಳಿತಾಯವಾದರೆ ಎರಡನೆಯದು ಹೂಡಿಕೆಯಾಗಿದೆ. ಮೇಲ್ನೋಟಕ್ಕೆ ಒಂದೇ ತೆರನಾಗಿ ಕಾಣಿಸಿದರೂ ಇವೆರಡನ್ನು ಕಾರ್ಯಗತಗೊಳಿಸಿದಾ ದೊಡ್ಡದಾದ ಅಂತರ ಕಂಡುಬರುತ್ತದೆ.

  ಆರ್ಥಿಕ ಹೂಡಿಕೆ ಎಂದರೆ ನಿಮ್ಮಲ್ಲಿರುವ ಹಣವನ್ನು ಇಂದು ಯಾವುದಾದರೊಂದು ಯೋಜನೆಯಲ್ಲಿ ತೊಡಗಿಸಿ ಆ ಯೋಜನೆಯ ಯಶಸ್ಸಿನೊಂದಿಗೇ ನಿಮ್ಮ ಹೂಡಿಕೆಯೂ ಬೆಳೆಯುತ್ತಾ ಭವಿಷ್ಯದಲ್ಲಿ ದೊಡ್ಡ ನಿಧಿಯಾಗಿ ಕೈಸಿಗುವುದು ಇದರ ಉದ್ದೇಶವಾಗಿದೆ. ಹೂಡಿಕೆಯನ್ನು ಆಸ್ತಿ ಅಥವಾ ಇದಕ್ಕೆ ಸಮಾನವಾದ ಮೌಲ್ಯಯುತವಾದ ನಿಧಿ ಅಥವಾ ಸೊತ್ತನ್ನು ನಿರ್ಮಿಸಿಕೊಂಡು ಮುಂದಿನ ದಿನಗಳಲ್ಲಿ ಈ ನಿಧಿ ಅಥವಾ ಸೊತ್ತುಗಳ ಮೌಲ್ಯ ಏರುವ ಮೂಲಕ ಲಾಭ ಪಡೆಯಬಹುದು ಅಥವಾ ನಿಧಿಗಳಿಗೆ ದೊರಕುವ ಬಡ್ಡಿ, ಲಾಭಾಂಶ ಅಥವಾ ಬೇರಾವುದೋ ರೂಪದಲ್ಲಿ ಹೆಚ್ಚುವರಿ ಮೊತ್ತವನ್ನು ಪಡೆಯಬಹುದಾಗಿದೆ. ಪ್ರತಿಯೊಂದೂ ಹೂಡಿಕೆ ಯಾವ ಬಗೆಯಲ್ಲಿ ಬಳಸಲ್ಪಡುತ್ತದೆ ಎಂಬುದನ್ನಾಧರಿಸಿ ಇತರ ಹೂಡಿಕೆಗಳಿಂದ ವಿಂಗಡಿಸಲ್ಪಡುತ್ತದೆ. ಹೂಡಿಕೆ ಯಾವುದೇ ಬಗೆಯದ್ದಾಗಿರಲಿ, ಮುಂದಿನ ದಿನಗಳಲ್ಲಿ ಇದು ಹೆಚ್ಚುವರಿ ಧನವನ್ನು ಗಳಿಸಿಕೊಡಬೇಕೆಂಬುದೇ ಮುಖ್ಯ ಉದ್ದೇಶವಾಗಿರುತ್ತದೆ.

  ಹೂಡಿಕೆಯ ಬಗೆಗಳು

  ಆರ್ಥಿಕ ಉದ್ಯಮದಲ್ಲಿ ಹೂಡಲಾಗುವ ಮೊತ್ತವನ್ನು ಪ್ರಮುಖವಾಗಿ ಎರಡು ವಿಧಗಳಲ್ಲಿ ವಿಂಗಡಿಸಬಹುದು. ಮೊದಲನೆಯದಾಗಿ ಸಾಂಪ್ರಾದಾಯಿಕ ವಿಧಾನಗಳು ಹಾಗೂ ಎರಡನೆಯದಾಗಿ ಪರ್ಯಾಯ ವಿಧಾನಗಳು. ಬನ್ನಿ, ಇವೆರಡೂ ಬಗೆಯ ಹೂಡಿಕೆಗಳಲ್ಲಿ ಏನು ಅಂತರವಿದೆ.ಯಾವ ವಿಧ ಹೆಚ್ಚು ಸೂಕ್ತ ಎಂಬುದನ್ನು ನೋಡೋಣ..

  ಸಾಂಪ್ರಾದಾಯಿಕ ವಿಧಾನದ ಹೂಡಿಕೆ

  ಈಗಾಗಲೇ ಪ್ರಸಿದ್ದಿ ಪಡೆದು ಜನರ ನಂಬಿಕೆಯನ್ನು ಪಡೆದಿರುವ ಹಾಗೂ ಇದರಲ್ಲಿ ಹೂಡಿದ ಹೂಡಿಕೆಯಿಂದ ಲಾಭ ಖಚಿತ ಎಂದು ಭರವಸೆ ತಾಳಿರುವ ಆಯ್ಕೆಗಳನ್ನು ಸ್ಥೂಲವಾಗಿ ಸಾಂಪ್ರಾದಾಯಿಕ ಹೂಡಿಕೆ ಎಂದು ಕರೆಯಬಹುದು. ಇವುಗಳಲ್ಲಿ ಬಾಂಡ್ ಗಳು, ಶೇರುಗಳು, ರಿಯಲ್ ಎಸ್ಟೇಟ್ ಅಥವಾ ಮನೆ-ಕಟ್ಟಡಗಳ ಮೇಲಿನ ಹೂಡಿಕೆ ಇತ್ಯಾದಿಗಳು ಹೆಚ್ಚು ಜನಪ್ರಿಯವಾಗಿವೆ. ಈ ಯೋಜನೆಗಳಲ್ಲಿ ಹಣ ಹೂಡುವ ಮೂಲಕ ಇದನ್ನು ಆರ್ಥಿಕ ತಜ್ಞರು ಹೆಚ್ಚು ಲಾಭ ತರುವ ಇತರ ಯೋಜನೆಗಳಲ್ಲಿ ತೊಡಗಿಸಿ ಹೆಚ್ಚು ಲಾಭ ಬರುವಂತೆ ಮಾಡುತ್ತಾರೆ. ಹಾಗಾಗಿ ಈ ಯೋಜನೆಗಳಲ್ಲಿ ಹೆಚ್ಚು ಜನರು ತಮ್ಮ ಹಣವನ್ನು ತೊಡಗಿಸುತ್ತಾರೆ.

  ಬಾಂಡ್ ಗಳು

  ಬಾಂಡ್ ಅಂದರೆ ಹಣ ತೊಡಗಿಸಿದವನಿಗೆ ಹಣ ಪಡೆದುಕೊಂಡ ಸಂಸ್ಥೆ 'ನಿಮ್ಮ ಹಣ ಇಷ್ಟು ಅವಧಿಯಲ್ಲಿ ನಮ್ಮಲ್ಲಿರುತ್ತದೆ, ಈ ಅವಧಿಯ ಬಳಿಕ ಇಷ್ಟು ಮೊತ್ತವನ್ನು ನೀವು ಖಚಿತವಾಗಿ ಪಡೆಯಬಹುದು' ಎಂದು ದೃಢೀಕರಿಸುವ ಒಂದು ಅಂಗೀಕಾರ ಪತ್ರವಾಗಿದೆ. ಸಾಮಾನ್ಯವಾಗಿ ಈ ಬಾಂಡ್ ಗಳನ್ನು ಸಾರ್ವಜನಿಕ ವಲಯ ಹಾಗೂ ಖಾಸಗಿ ವಲಯದ ಉದ್ಯಮಗಳು ನೀಡುತ್ತವೆ. ಏಕೆಂದರೆ ಈ ಉದ್ಯಮಗಳನ್ನು ಪ್ರಾರಂಭಿಸಲು ದೊಡ್ಡ ಮೊತ್ತದ ಹಣ ಬೇಕಾಗಿದ್ದು ಈ ಮೊತ್ತವನ್ನು ಬ್ಯಾಂಕುಗಳು ನೀಡಲು ನಿರಾಕರಿಸುವ ಕಾರಣ ಸಾರ್ವಜನಿಕರಿಂದ ಒಟ್ಟಾಗಿ ಸಂಗ್ರಹಿಸುವ ಯೋಜನೆಯಾಗಿದೆ. ಅಗತ್ಯವಿರುವ ಒಟ್ಟು ಮೊತ್ತವನ್ನು ಚಿಕ್ಕದಾದ ನಿಗದಿತ ಮೊತ್ತಗಳಲ್ಲಿ ವಿಂಗಡಿಸಿ ಪ್ರತಿ ಮೊತ್ತವನ್ನೂ ಒಂದು ಬಾಂಡ್ ಗೆ ಮೀಸಲಾಗಿಸಿ ಒಟ್ಟು ಬಾಂಡ್ ಗಳನ್ನು ಸಾರ್ವಜನಿಕರಿಗೆ ಮಾರಲಾಗುತ್ತದೆ. ಸಾವಿರಾರು ಹೂಡಿಕೆದಾರರು ತಮ್ಮ ಆರ್ಥಿಕ ಸಾಮರ್ಥ್ಯಕ್ಕನುಸಾರವಾಗಿ ಇವುಗಳನ್ನು ಕೊಳ್ಳುತ್ತಾರೆ. ಹೀಗೆ ಸಂಗ್ರಹವಾದ ದೊಡ್ಡ ಮೊತ್ತದಿಂದ ಉದ್ಯಮ ಪ್ರಾರಂಭವಾಗಿ ಇದರ ಲಾಭಾಂಶವನ್ನು ಸಂಸ್ಥೆಯ ಏಳ್ಗೆ ಹಾಗೂ ಬಾಂಡ್ ದಾರರಿಗೆ ಕೊಟ್ಟ ಮಾತಿನಂತೆ ಅವಧಿ ಮುಗಿದ ಬಳಿಕ ನೀಡಲಾಗುತ್ತದೆ.

  ಆದರೆ ಈ ಬಾಂಡ್ ಗಳ ಮೂಲಕ ಹಣವನ್ನು ನೀಡುವ ಹೂಡಿಕೆದಾರರು ಈ ಮೊತ್ತಕ್ಕೆ ಬರುವ ಬಡ್ಡಿಯನ್ನು ಪಡೆಯಲೂ ಅರ್ಹರಾಗಿರುತ್ತಾರೆ. ಈ ಬಡ್ಡಿಯ ಮೊತ್ತವನ್ನು ನಿಗದಿತ ಅವಧಿಯಲ್ಲಿ ಹೂಡಿಕೆದಾರರಿಗೆ ನೀಡಲಾಗುತ್ತದೆ. ಬಾಂಡ್ ಗಳು ಖಚಿತ ಬಡ್ಡಿದರದ ಯೋಜನೆಗಳಲ್ಲೊಂದಾಗಿದೆ. ಏಕೆಂದರೆ ಈ ಅವಧಿಯಲ್ಲಿ ನೀಡಲಾಗುವ ಬಡ್ಡಿದರವನ್ನು ಮುಂಚಿತವಾಗಿಯೇ ಪ್ರಕಟಿಸಿ ಆ ಮೊತ್ತವನ್ನೇ ಖಚಿತವಾಗಿ ನೀಡಲಾಗುತ್ತದೆ. ಅಲ್ಲದೇ ಬಾಂಡ್ ಗಳು ಒಂದು ರೀತಿಯಲ್ಲಿ ಸಾಲವೇ ಆಗಿರುವುದರಿಂದ ಇವು ಹೆಚ್ಚು ಸುರಕ್ಷಿತ ಹಾಗೂ ಸುಲಭವಾದ ಆರ್ಥಿಕ ಹೂಡಿಕೆಗಳಾಗಿವೆ. ಆದರೂ, ಯಾವುದೇ ಆರ್ಥಿಕ ವಹಿವಾಟಿನಲ್ಲಿ ಆರ್ಥಿಕ ಏರುಪೇರು ಇದ್ದೇ ಇರುವ ಕಾರಣ ಅಪಾಯಕ್ಕೊಳಗಾಗುವ ಸಾಧ್ಯತೆ ಅಥವಾ ರಿಸ್ಕ್ ಹೂಡಿಕೆಯ ಮೊತ್ತಕ್ಕೆ ವಿಲೋಮ ಅನುಪಾತದಲ್ಲಿ ಅನ್ವಯವಾಗುತ್ತದೆ. ಅಂದರೆ ಹೆಚ್ಚು ರಿಸ್ಕ್ ಇರುವಲ್ಲಿ ಹೆಚ್ಚಿನ ಹಣ ಗಳಿಸುವ ಅಥವಾ ಕಳೆದುಕೊಳ್ಳುವ ಸಾಧ್ಯತೆ ಹಾಗೂ ಕಡಿಮೆ ರಿಸ್ಕ್ ಇದ್ದಲ್ಲಿ ಕಡಿಮೆ ಹಣ ಗಳಿಸುವ ಮತ್ತು ಕಳೆದುಕೊಳ್ಳುವ ಸಾಧ್ಯತೆಗಳಿವೆ.

  ಷೇರುಗಳು

  ಸ್ಟಾಕ್ಸ್, ಷೇರು, ಈಕ್ವಿಟಿ ಮೊದಲಾದವು ಒಂದೇ ಹೆಸರಿನ ವಿವಿಧ ರೂಪಗಳಾಗಿವೆ. ದೊಡ್ಡ ಸಂಸ್ಥೆಗಳು ತಮ್ಮ ಹೂಡಿಕೆಯನ್ನು ಚಿಕ್ಕ ಪ್ರಮಾಣದಲ್ಲಿ ವಿಂಗಡಿಸಿ ಸಾರ್ವಜನಿಕರನ್ನು ಈ ಮೊತ್ತದ ಮೂಲಕ ಹೂಡಿಕೆದಾರರನ್ನಾಗಿಸುತ್ತದೆ. ಶೇರುಗಳ ಮಾರಾಟದಿಂದ ಸಂಸ್ಥೆ ದೊಡ್ಡ ಮೊತ್ತದ ಹಣವನ್ನು ಸಂಗ್ರಹಿಸಿ ತನ್ನ ಉದ್ಯಮವನ್ನು ಮುಂದುವರೆಸುತ್ತದೆ. ಉದ್ಯಮ ಬೆಳೆದಂತೆಯೇ ಉದ್ಯಮದ ಒಟ್ಟು ಮೌಲ್ಯವೂ ಹೆಚ್ಚುತ್ತದೆ. ಆ ಪ್ರಕಾರ ಒಟ್ಟು ಮೌಲ್ಯಕ್ಕೆ ಒಳಗಾಗಿರುವ ಪ್ರತಿ ಶೇರಿನ ಮೊತ್ತವೂ ಏರುತ್ತದೆ. ಅಂದರೆ ಈ ಮೂಲಕ ಶೇರು ಪಡೆದುಕೊಂಡವರು ಈ ಶೇರನ್ನು ಮಾರುವುದಾದರೆ ಹೂಡಿದ ಹಣಕ್ಕಿಂತ ಆ ಸಮಯದಲ್ಲಿರುವ ಶೇರಿನ ಮೌಲ್ಯ ದೊರಕುತ್ತದೆ. ಇದೊಂದು ವಿಶ್ವದ ಅತ್ಯಂತ ಜನಪ್ರಿಯ ಯೋಜನೆಯಾಗಿದೆ. ಆದರೆ ಈ ಮೌಲ್ಯ ವೃದ್ದಿಯಾಗುವುದು ಮಾರುಕಟ್ಟೆಯ ಸ್ಥಿತಿಯನ್ನು ಬಲವಾಗಿ ಅವಲಂಬಿಸಿರುವ ಕಾರಣ ಸಂಸ್ಥೆ ಕಳಪೆ ಸಾಧನೆ ಮಾಡಿದರೂ, ಮಾರುಕಟ್ಟೆ ಕುಸಿದರೂ ಶೇರಿನ ಮೌಲ್ಯವೂ ಇಳಿದು ಹೂಡಿಕೆದಾರ ನಷ್ಟ ಅನುಭವಿಸಬೇಕಾಗಿ ಬರುತ್ತದೆ. ಇಲ್ಲಿ ರಿಸ್ಕ್ ಹೆಚ್ಚಿದ್ದಷ್ಟೂ ಲಾಭವೂ ಹೆಚ್ಚು.

  ಪ್ರತಿ ಉದ್ಯಮವೂ ತನ್ನ ಆರ್ಥಿಕ ಅಗತ್ಯತೆಯನ್ನು ಪರಿಗಣಿಸಿ ವಿವಿಧ ಮೌಲ್ಯದ ಹಾಗೂ ಬಗೆಯ ಶೇರುಗಳನ್ನು ಬಿಡುಗಡೆ ಮಾಡಬಹುದು. ಹೂಡಿಕೆದಾರರು ನೀಡುವ ಹಣದ ಬದಲಿಗೆ ಇವರಿಗೆ ಶೇರು ಕೊಂಡ ಖಾತರಿ ಇರುವ ಸ್ಟಾಕ್ ಸರ್ಟಿಫಿಕೇಟ್ ಎಂಬ ಪ್ರಮಾಣಪತ್ರವನ್ನು ನೀಡಲಾಗುತ್ತದೆ.

  ಷೇರುಗಳನ್ನು ಸ್ಥೂಲವಾಗಿ ಎರಡು ಬಗೆಯಲ್ಲಿ ವಿಂಗಡಿಸಬಹುದು. ಇವೆಂದರೆ ಸಾಮಾನ್ಯ ಷೇರುಗಳು ಮತ್ತು ಆದ್ಯತೆಯ ಷೇರುಗಳು.

  ಸಣ್ಣ ಉಳಿತಾಯ ಯೋಜನೆ

  ಭಾರತೀಯ ಆರ್ಥಿಕ ಮಾರುಕಟ್ಟೆಯಲ್ಲಿ ಸಣ್ಣ ಉಳಿತಾಯ ಅತಿ ಹೆಚ್ಚು ಜನಪ್ರಿಯ ಯೋಜನೆಯಾಗಿದೆ. ಹೆಸರೇ ಸೂಚಿಸುವಂತೆ ಚಿಕ್ಕ ಮೊತ್ತದಲ್ಲಿ ಹಣವನ್ನು ಹೂಡುವುದು ಈ ಯೋಜನೆಯ ಉದ್ದೇಶವಾಗಿದೆ. ಸಮಾಜದ ಎಲ್ಲಾ ವರ್ಗದ ಜನರೂ ತಮ್ಮ ಸಾಮರ್ಥಕ್ಕನುಗುಣವಾಗಿ ಉಳಿತಾಯ ಸಾಧಿಸಬೇಕೆಂಬ ಉದ್ದೇಶದಿಂದ ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಇವುಗಳಲ್ಲಿ ಪ್ರಮುಖವಾದುದೆಂದರೆ ಸುಕನ್ಯಾ ಸಮೃದ್ದಿ ಯೋಜನೆ, ಇಪಿಎಫ್ ಅಥವಾ ಉದ್ಯೋಗಿಗಳ ಭವಿಷ್ಯ ನಿಧಿ (Employees Provident Fund), ರಾಷ್ಟ್ರೀಯ ಪಿಂಚಣಿ ಯೋಜನೆ (NPS (National Pension Scheme), ಕಿಸಾನ್ ವಿಕಾಸ ಪತ್ರ, ವೈಯಕ್ತಿಕ ಭವಿಷ್ಯ ನಿಧಿ (Personal Provident Fund (PPF) ಮೊದಲಾದವು. ಇವುಗಳಲ್ಲಿ ಹೆಚ್ಚಿನವುಗಳನ್ನು ಭಾರತ ಕೇಂದ್ರ ಸರ್ಕಾರ ದೇಶದ ಪ್ರತಿ ಹಳ್ಳಿಗೂ ಈ ಯೋಜನೆ ತಲುಪಬೇಕೆಂಬ ಉದ್ದೇಶದಿಂದ ಪ್ರಾರಂಭಿಸಲಾಗಿದೆ.
  ಬನ್ನಿ, ಈ ಯೋಜನೆಗಳಲ್ಲಿ ಪ್ರಮುಖ ಯೋಜನೆಗಳ ಬಗ್ಗೆ ಅರಿಯೋಣ..

  ಉದ್ಯೋಗಗಳ ಭವಿಷ್ಯ ನಿಧಿ (Employees Provident Fund)

  ಇದೊಂದು ಸಣ್ಣ ಉಳಿತಾಯ ಯೋಜನೆಯಾಗಿದ್ದು ಇದನ್ನು ಉದ್ಯೋಗಿಯ ಉದ್ಯೋಗದಾತನೇ ತೊಡಗಿಸಬೇಕಾಗುತ್ತದೆ. ಸಾರ್ವಜನಿಕ ಅಥವಾ ಖಾಸಗಿ ವಲಯದಲ್ಲಿ ಕೆಲಸ ಮಾಡಿ ವೇತನ ಪಡೆಯುವ ವ್ಯಕ್ತಿಗಳ ಒಟ್ಟು ವೇತನದಿಂದ ಕೊಂಚ ಪ್ರಮಾಣವನ್ನು ಪ್ರತಿ ತಿಂಗಳೂ ಈ ನಿಧಿಯಲ್ಲಿ ಕಾಯ್ದಿರಿಸಲಾಗುತ್ತದೆ. ಕನಿಷ್ಟ ಇಪ್ಪತ್ತು ಉದ್ಯೋಗಿಗಳಿರುವ ಸಂಸ್ಥೆಗೆ ಈ ಯೋಜನೆ ಕಡ್ಡಾಯವಾಗಿದೆ. ಪ್ರತಿ ತಿಂಗಳೂ ಮೂಲವೇತನದ 12% ರಷ್ಟು ಮೊತ್ತವನ್ನು ಕಡಿತ ಮಾಡಿ ಈ ನಿಧಿಯಲ್ಲಿ ಉಳಿಸಿಡಲಾಗುತ್ತದೆ. ಈ ನಿದಿಯನ್ನು ಒಂದು ಇಪಿಎಫ್ ಖಾತೆಯಲ್ಲಿ ನಮೂದಿಸಲಾಗುತ್ತದೆ. ಈ ಖಾತೆಗಳನ್ನು Employees Provident Fund Organization, ಅಥವಾ EPFO ಎಂಬ ಸಂಸ್ಥೆ ನಿರ್ವಹಿಸ್ತುತದೆ. ಈ ಖಾತೆಯಲ್ಲಿ ತೊಡಗಿಸಿದ ಹಣ ಆದಾಯ ತೆರಿಗೆ ವಿಧಿ 80C ಪ್ರಕಾರ ತೆರಿಗೆಯಿಂದ ವಿನಾಯಿತಿ ಪಡೆದಿದೆ.

  ಸುಕನ್ಯಾ ಸಮೃದ್ದಿ ಯೋಜನೆ

  ಕುಟುಂಬದಲ್ಲಿರುವ ಹೆಣ್ಣು ಮಗುವಿನ ಶ್ರೇಯಸ್ಸಿಗಾಗಿ ಕೇಂದ್ರ ಸರ್ಕಾರ ಪ್ರಾರಂಭಿಸಿರುವ ಈ ಯೋಜನೆ ಹೆಚ್ಚು ಜನಪ್ರಿಯವಾಗಿದೆ. ಮಗುವಿನ ತಂದೆ ತಾಯಿಯರು ಅಥವಾ ಕಾನೂನುಬದ್ದ ಪಾಲಕರು ವರ್ಷಕ್ಕೆ ಅತಿ ಕಡಿಮೆ ಎಂದರೆ ಕೇವಲ ಒಂದು ಸಾವಿರ ರೂ. ವಿನಿಯೋಗಿಸುವ ಮೂಲಕ ಈ ಯೋಜನೆಯಲಿ ಪಾಲ್ಗೊಳ್ಳಬಹುದು. ಈ ಯೋಜನೆಯಲ್ಲಿ ಹೂಡಿದ ಹಣವನ್ನು ಹೆಣ್ಣು ಮಗುವಿಗೆ ಇಪ್ಪತ್ತೊಂದು ವರ್ಷ ತುಂಬುವವರೆಗೂ ಹಿಂಪಡೆಯಲು ಸಾಧ್ಯವಿಲ್ಲ. ಆದರೆ ವಿವಾಹ ಅಥವಾ ಉನ್ನತ ಶಿಕ್ಷಣಕ್ಕಾಗಿ ಮಾತ್ರ ಹದಿನೆಂಟು ತುಂಬಿದ ಬಳಿಕ ಹಿಂಪಡೆಯಬಹುದು.

  ರಾಷ್ಟ್ರೀಯ ಪಿಂಚಣಿ ಯೋಜನೆ

  ಖಾಸಗಿ ಅಥವಾ ಸಾರ್ವಜನಿಕ ವಲಯಗಳಲ್ಲಿ ಉದ್ಯೋಗಿಗಳಾಗಿರುವವರು ನಿವೃತ್ತಿಯ ಬಳಿಕ ನಿಗದಿತ ಆದಾಯವನ್ನು ಪಡೆಯಲು ಪ್ರಾರಂಭಿಸಲಾಗಿರುವ ಈ ಯೋಜನೆಯೂ ಹೆಚ್ಚು ಜನಪ್ರಿಯವಾಗಿದೆ. NPS ಯೋಜನೆಯನ್ನು ಉದ್ಯೋಗಿಯ ಸಂಸ್ಥೆ ತನ್ನ ಲಾಭಾಂಶದಲ್ಲಿ ನೀಡುವ ಪಾಲನ್ನು ವಿನಿಯೋಗಿಸುವ ಮೂಲಕ ಅಥವಾ ಉದ್ಯೋಗಿಯೇ ಒಂದು ನಿಯಮಿತ ಮೊತ್ತವನ್ನು ಪ್ರತಿತಿಂಗಳೂ ತೆಗೆದಿರಿಸುವ ಮೂಲಕ ಈ ಯೋಜನೆಯಲ್ಲಿ ಪಾಲ್ಗೊಳ್ಳಬಹುದು. ಈ ಯೋಜನೆಯಲ್ಲಿ ತೊಡಗಿಸಿದ ಮೊತ್ತ ಆದಾಯ ತೆರಿಗೆ ವಿಧಿ 80C ಪ್ರಕಾರ ತೆರಿಗೆ ವಿನಾಯಿತಿಯನ್ನು ಪಡೆಯುತ್ತದೆ. ಈ ಯೋಜನೆಯಲ್ಲಿ ಉದ್ಯೋಗಿ ತನಗೆ ಅರವತ್ತು ತುಂಬುವವರೆಗೂ ನಿಗದಿತ ಮೊತ್ತವನ್ನು ತುಂಬಬಹುದೇ ವಿನಃ ತೆಗೆಯುವಂತಿಲ್ಲ. ಅರವತ್ತು ತುಂಬಿದ ಬಳಿಕ ಈ ಮೊತ್ತದಿಂದ ಪ್ರತಿ ತಿಂಗಳೂ ನಿಯಮಿತ ಆದಾಯ ದೊರಕುತ್ತದೆ. ಅಲ್ಲದೇ ಒಟ್ಟು ಮೊತ್ತವನ್ನು ನಿವೃತ್ತಿಯ ಬಳಿಕ ಪಡೆಯುವುದಾದರೂ ಈ ಮೊತ್ತ ಆದಾಯ ತೆರಿಗೆಯಿಂದ ವಿನಾಯಿತಿ ಪಡೆದಿರುತ್ತದೆ.

  ಮ್ಯೂಚುವಲ್ ಫಂಡ್

  ಮ್ಯೂಚುವಲ್ ಅಂದರೆ ಪರಸ್ಪರ ಎಂಬ ಅರ್ಥ ಬರುತ್ತದೆ. ಅಂದರೆ ಈ ಕ್ಷೇತ್ರದಲ್ಲಿ ಪರಿಣಿತರು ಸಾರ್ವಜನಿಕರಿಂದ ಹಣವನ್ನು ಪಡೆದು ಹೆಚ್ಚು ಲಾಭ ಬರುವ ವಿವಿಧ ಕ್ಷೇತ್ರಗಳಲ್ಲಿ ಹೂಡಿಕೆ ಮಾಡುತ್ತಾರೆ. ತನ್ಮೂಲಕ ಇಬ್ಬರಿಗೂ ಲಾಭವಾಗುವಂತೆ ನೋಡಿಕೊಳ್ಳುತ್ತಾರೆ. ಮ್ಯೂಚುವಲ್ ಫಂಡ್ ಗಳು ಇವುಗಳನ್ನು ಹೂಡಿದ ಕ್ಷೇತ್ರಕ್ಕನುಗುಣವಾಗಿ ವಿವಿಧ ಬಗೆಯಲ್ಲಿವೆ. ಇವುಗಳಲ್ಲಿ ಹೆಚ್ಚು ಜನಪ್ರಿಯವಾದುದೆಂದರೆ ಸಮತೋಲನದ ನಿಧಿ (balanced funds), ಸ್ಟಾಕ್ ಫಂಡ್, ಮುಕ್ತ-ಫಂಡ್ (open-ended funds) ಇತ್ಯಾದಿ. ಇವುಗಳಿಂದ ಸಂಗ್ರಹಿಸಲಾದ ಮೊತ್ತವನ್ನು ಯಾವ ಕ್ಷೇತ್ರಗಳಲ್ಲಿ ಎಷ್ಟು ಪ್ರಮಾಣದಲ್ಲಿ ವಿನಿಯೋಗಿಸಲಾಗುತ್ತದೆ ಎಂಬುದನ್ನು ಆಧರಿಸಿ ಇವುಗಳನ್ನು ವಿಂಗಡಿಸಲಾಗುತ್ತದೆ. ಈ ಹೂಡಿಕೆ ಅತಿ ಹೆಚ್ಚಿನ ರಿಸ್ಕ್ ಹೊಂದಿದ್ದು ಲಾಭವೂ ನಷ್ಟವೂ ಹೆಚ್ಚೇ ಇರುತ್ತದೆ. ಆದರೆ ಸಾಲದ ಬಾಂಡ್ ಗಳನ್ನು ಕೇವಲ ಸಾಲ ನೀಡಲು ಮಾತ್ರವೇ ವಿನಿಯೋಗಿಸುವ ಕಾರಣ ಇವುಗಳ ರಿಸ್ಕ್ ಕಡಿಮೆ ಇರುತ್ತದೆ ಹಾಗೂ ಲಾಭವೂ ಕಡಿಮೆಯೇ ಇರುತ್ತದೆ.

  ಸ್ಥಿರ ಠೇವಣಿಗಳು

  ಹೆಸರೇ ಸೂಚಿಸುವಂತೆ ಇದೊಂದು ನಿಗದಿತ ಅವಧಿಯವರೆಗೆ ಹೂಡಿಕೆದಾರನ ಹಣವನ್ನು ನಿಗದಿತ ಬಡ್ಡಿ ದರದಲ್ಲಿ ವಿನಿಯೋಗಿಸುವಂತೆ ಮಾಡುವ ಯೋಜನೆಯಾಗಿದ್ದು ಭಾರತದ ಅತಿ ಹಳೆಯ ಹಾಗೂ ಅತ್ಯಂತ ಸುರಕ್ಷಿತ ವಿಧಾನದ ಹೂಡಿಕೆಯಾಗಿದೆ. ಈ ಹೂಡಿಕೆಯಲ್ಲಿ ಹೂಡಿದ ಹಣ ಕ್ರಿಯಾತ್ಮಕ ಹೂಡಿಕೆಯಾಗದೇ ಅಲ್ಪವೇ ಆದರೂ ನಷ್ಟವಿಲ್ಲದೇ ಖಚಿತ ಆದಾಯ ತರುವಂತಹ ಯೋಜನೆಯಾಗಿದೆ. ಈ ಯೋಜನೆಯಲ್ಲಿ ಒಂದು ನಿಯಮಿತ ಮೊತ್ತದ ಹಣವನ್ನು ಕೆಲವು ತಿಂಗಳು ಅಥವಾ ವರ್ಷಗಳವರೆಗೆ ಹಿಂಪಡೆಯದೇ ಹಾಗೇ ಇರಿಸಲಾಗುತ್ತದೆ ಹಾಗೂ ನಿಗದಿತ ಅವಧಿಯಲ್ಲಿ ಈ ಹಣಕ್ಕೆ ಬಡ್ಡಿಯೂ ಸೇರುತ್ತದೆ. ಠೇವಣಿ ಇಡುವ ಅವಧಿ ಹಾಗೂ ಠೇಣವಿ ಪಡೆಯುವ ಬ್ಯಾಂಕನ್ನಾಧರಿಸಿ ಬಡ್ಡಿದರವೂ ಹೆಚ್ಚೂ ಕಡಿಮೆಯಾಗಿರುತ್ತದೆ.

  ಮರುಕಳಿಸುವ ಠೇವಣಿ

  ಮರುಕಳಿಸುವ ಠೇವಣಿಯೂ ಹೆಚ್ಚೂ ಕಡಿಮೆ ಸ್ಥಿರ ಠೇವಣಿಯಂತೆಯೇ ಕಾರ್ಯನಿರ್ವಹಿಸುತ್ತದೆ. ಆದರೆ ಇದರಲ್ಲಿ ಹೂಡುವ ಮೊತ್ತವನ್ನು ಚಿಕ್ಕಮೊತ್ತಗಳಲ್ಲಿ ವಿಂಗಡಿಸಿ, ನಿಗದಿತ ಅವಧಿಯಲ್ಲಿ ಹೂಡಲಾಗುತ್ತದೆ. ಉದಾಹರಣೆಗೆ ಸ್ಥಿರ ಠೇವಣಿಯಲ್ಲಿ ಒಂದು ಲಕ್ಷ ರೂಪಾಯಿಯನ್ನು ಒಂದೇ ಬಾರಿಗೆ ಹೂಡಿದರೆ ಮರುಕಳಿಸುವ ಠೇವಣಿಯಲ್ಲಿ ಪ್ರತಿತಿಂಗಳೂ ಹತ್ತು ಸಾವಿರ ರೂಪಾಯಿಗಳಂತೆ ಹತ್ತು ತಿಂಗಳು ಹಣವನ್ನು ಹೂಡಬೇಕಾಗುತ್ತದೆ. ಇದು ದೊಡ್ಡ ಮೊತ್ತದ ಹಣವಿಲ್ಲದಿರುವವರಿಗೆ ವರದಾನವಾಗಿದೆ. ಈ ಮೊತ್ತದ ಮೇಲೆ ಪಡೆಯುವ ಮೊತ್ತವೂ ಹೆಚ್ಚೂ ಕಡಿಮೆ ಸ್ಥಿರ ಠೇವಣಿಯ ಮೂಲಕ ಪಡೆಯುವಷ್ಟೇ ಇರುತ್ತದೆ.

  ರಿಯಲ್ ಎಸ್ಟೇಟ್

  ಈ ಜಗತ್ತಿನಲ್ಲಿ ಯಾವುದಕ್ಕೆ ಬೆಲೆ ಕಡಿಮೆಯಾದರೂ ಭೂಮಿಗೆ ಬೆಲೆ ಕಡಿಮೆಯಾಗುವುದಿಲ್ಲ ಎಂಬ ನಂಬಿಕೆ ಬೆಳೆದುಬಂದಿರುವ ಕಾರಣ ಹೆಚ್ಚಿನ ಜನರು ಸ್ಥಿರ ಆಸ್ತಿಗಳ ಮೇಲೆ ಹೆಚ್ಚಿನ ಹಣವನ್ನು ವಿನಿಯೋಗಿಸುವ ಕಾರಣ ಆಸ್ತಿಗಳ ಬೆಲೆ ದಿನೇ ದಿನೇ ಏರುತ್ತದೆ. ಹಾಗಾಗಿ ಈ ಯೋಜನೆಗಳಲ್ಲಿ ಹಣ ಹೂಡುವವರಿಗೆ ಹೆಚ್ಚಿನ ಲಾಭವಿದೆ. ಈಗಾಗಲೇ ಕಟ್ಟಲಾಗಿರುವ ಕಟ್ಟಡಗಳನ್ನು ಕೊಳ್ಳುವುದು, ಮಾರುವುದು, ಭೋಗ್ಯಕ್ಕೆ ನೀಡುವುದು ಮೊದಲಾದವುಗಳ ಮೂಲಕ ಹೆಚ್ಚು ಲಾಭವನ್ನು ಪಡೆಯಬಹುದು. ಈ ಮೊತ್ತದಿಂದ ಕೊಂಡ ಕಟ್ಟಡ ಅಥವಾ ಸ್ಥಿರಾಸ್ತಿ ಮುಂದಿನ ದಿನಗಳಲ್ಲಿ ಹೆಚ್ಚಿನ ಬೆಲೆ ಪಡೆಯುತ್ತದೆ. ಅಲ್ಲದೇ ಹೆಚ್ಚು ಹೆಚ್ಚು ಜನರು ನಗರಗಳಿಗೆ ವಲಸೆ ಹೋಗುತ್ತಿರುವ ಕಾರಣ ಪ್ರಮುಖ ನಗರಗಳಾದ ಮುಂಬೈ, ಬೆಂಗಳೂರು, ದೆಹಲಿ ಮೊದಲಾದವುಗಳಲ್ಲಿ ಭೂಮಿಯ ಬೆಲೆ ಗಗನಕ್ಕೇರಿದೆ. ಹಾಗಾಗಿ ಹೂಡಿಕೆದಾರರಿಗೆ ಈ ಸ್ಥಳಗಳಲ್ಲಿ ಹಣ ಹೂಡುವುದು ಬಿಸಿ ಕಾವಲಿಯ ಮೇಲೆ ತಮ್ಮ ರೊಟ್ಟಿಯನ್ನು ಸುಲಭವಾಗಿ ಬೇಯಿಸಿಕೊಂಡಂತೆ. ಈ ಆಸ್ತಿಗಳಲ್ಲಿ ಹಣ ಹೂಡಲು ಸಾರ್ವಜನಿಕರು ಬ್ಯಾಂಕುಗಳಿಂದ ಸಾಲ ಪಡೆದು ಹೂಡುತ್ತಾರೆ ಹಾಗೂ ಕೊಂಚ ದಿನ ಕಳೆದ ಬಳಿಕ ಹೆಚ್ಚಿನ ಮೊತ್ತಕ್ಕೆ ಮಾರಾಟ ಮಾಡುತ್ತಾರೆ. ಕಟ್ಟಡಗಳ ಬೆಲೆ ದಿನೇ ದಿನೇ ಏರುತ್ತಿರುವ ಕಾರಣ ಶೀಘ್ರವಾಗಿ ಹಣ ಮಾಡುವ ಉಪಾಯವೂ ಆಗಿದೆ.

  ಹೂಡಿಕೆ ಏಕೆ ಅಗತ್ಯ?

  ಆರ್ಥಿಕ ಯೋಜನೆಗಾಗಿ ಹೂಡಿಕೆ ಒಂದು ಪ್ರಮುಖವಾದ ನಿರ್ಧಾರವಾಗಿದೆ. ನೀವು ಗಳಿಸಿದ ಹಣವನ್ನು ಸುಮ್ಮನೇ ಮನೆಯಲ್ಲಿಟ್ಟರೇ ಅದು ಹಾಗೇ ಬಿದ್ದಿರುತ್ತದೆಯೇ ವಿನಃ ತನ್ನ ಮೌಲ್ಯವನ್ನು ಹೆಚ್ಚಿಸಿಕೊಳ್ಳುವುದಿಲ್ಲ. ಹಾಗಾಗಿ ತನ್ನ ಅಗತ್ಯಕ್ಕೂ ಹೆಚ್ಚಿನ ಮೊತ್ತವನ್ನು ಹೊಂದಿರುವ ಯಾರೇ ಆದರೂ ಈ ಮೊತ್ತವನ್ನು ಸೂಕ್ತ ವಿಧಾನಗಳಲ್ಲಿ ಹೂಡುವ ಮೂಲಕ ಹೆಚ್ಚಿನ ಲಾಭ ಪಡೆಯುವುದು ಒಳ್ಳೆಯ ಅಭ್ಯಾಸವಾಗಿದೆ. ವಿವಿಧ ಯೋಜನೆಗಳಲ್ಲಿ ಹಣವನ್ನು ವಿಂಗಡಿಸಿ ವಿನಿಯೋಗಿಸುವ ಮೂಲಕ ಒಂದು ಯೋಜನೆಯಲ್ಲಿ ಹೆಚ್ಚು ಪ್ರಯೋಜನವಾಗದಿದ್ದರೂ ಇನ್ನೊಂದರಲ್ಲಿ ಪ್ರಯೋಜನವಾಗುವ ಮೂಲಕ ಸರಾಸರಿಯಾಗಿ ಲಾಭದಲ್ಲಿಯೇ ಇರಬಹುದು. ಹೂಡಿಕೆಯಾಗದ ಹಣ ತನ್ನ ಮೌಲ್ಯವನ್ನು ದಿನೇ ದಿನೇ ಕಳೆದುಕೊಳ್ಳುತ್ತಾ ಹೋಗುತ್ತದೆ. ಉದಾಹರಣೆಗೆ ಇಂದು ಸಾವಿರ ರೂಪಾಯಿಗೆ ಕೊಳ್ಳಬಹುದಾದ ವಸ್ತು ಐದು ವರ್ಷಗಳ ಬಳಿಕ ಬೆಲೆ ಹೆಚ್ಚಿಸಿಕೊಂಡಿರುತ್ತದೆ. ಅಂದರೆ ಅಷ್ಟರ ಮಟ್ಟಿಗೆ ಹಾಗೇ ಇರಿಸಿದ ಹಣ ಅಪಮೌಲ್ಯಗೊಂಡಂತಾಯಿತು! ಆ ಲೆಕ್ಕದಲ್ಲಿ ಹತ್ತು ವರ್ಷ ಹಿಂದೆ ನೂರು ರೂಪಾಯಿಗಿದ್ದ ಬೆಲೆ ಇಂದು ಹತ್ತು ರೂಪಾಯಿಗಿಳಿದಿದೆ. ಆದ್ದರಿಂದ ಕೇವಲ ಉಳಿತಾಯ ಮಾಡಿದರೆ ಮಾತ್ರ ಸಾಲದು, ಬದಲಿಗೆ ಹೂಡಿಕೆದಾರ ಅಥವಾ ಜನಸಾಮಾನ್ಯ ಯಾರೇ ಆಗಿರಲಿ, ಅವರ ಹಣ ದಿನಗಳೆದಂತೆ ವೃದ್ದಿಗೊಳ್ಳಬೇಕು. ಆದ್ದರಿಂದ ಇಂದಿನ ಹಣವನ್ನು ಮುಂದಿನ ದಿನಗಳಲ್ಲಿಯೂ ವೃದ್ದಿಗೊಳಿಸಿಕೊಳ್ಳಲಾದರೂ ಹೂಡಿಕೆಯ ಅಗತ್ಯವಿದೆ.

  ಹೂಡಿಕೆಯ ಮಹತ್ವವನ್ನು ಕೆಳಗಿನ ಕೆಲವು ವಿಷಯಗಳು ಇನ್ನೂ ಚೆನ್ನಾಗಿ ವಿವರಿಸುತ್ತವೆ:

  * ನಿಮ್ಮ ಹಣ ಸುಮ್ಮನೇ ಬ್ಯಾಂಕಿನಲ್ಲಿ ಬಿದ್ದಿರುವ ಬದಲು ಕೆಲವಾರು ಕಡೆ ಹೂಡುವ ಮೂಲಕ ಹೆಚ್ಚಿನ ವೃದ್ದಿ ಪಡೆಯುತ್ತದೆ.
  * ಹೂಡಿಕೆಯಲ್ಲಿರುವ ಹಣ ಆಪತ್ಕಾಲದಲ್ಲಿ, ಉದಾಹರಣೆಗೆ ತುರ್ತು ವೈದ್ಯಕೀಯ ಅಗತ್ಯವಿರುವ ಸಂದರ್ಭಗಳಲ್ಲಿ ನೆರವಿಗೆ ಬರುತ್ತದೆ. ನೀವು ಇದುವರೆಗೆ ಗಳಿಸಿದ ಹಣವನ್ನು ಹೂಡಿ ನಿಯಮಿತ ಆದಾಯ ಪಡೆಯಲೂ ಹೂಡಿಕೆ ಉತ್ತಮ ಮಾರ್ಗವಾಗಿದೆ. ಉದಾಹರಣೆಗೆ ಮನೆಯೊಂದನ್ನು ಕೊಂಡು ಬಾಡಿಗೆಗೆ ನೀಡುವ ಮೂಲಕ, ಶೇರುಗಳಲ್ಲಿ ವಿನಿಯೋಗಿಸಿ ಲಾಭಾಂಶವನ್ನು ಪಡೆಯುವುದು ಇತ್ಯಾದಿ.
  * ಈ ಹೂಡಿಕೆಗಳಿಂದ ಲಭಿಸಿದ ಮೊತ್ತ ಆದಾಯ ತೆರಿಗೆಯಿಂದ ವಿನಾಯಿತಿ ಪಡೆದಿರುವುದು ಇನ್ನೊಂದು ಪ್ರಯೋಜನವಾಗಿದೆ. ಇದರ ಪೂರ್ಣ ಪ್ರಯೋಜನ ಪಡೆಯಲು ಒಟ್ಟು ಮೊತ್ತವನ್ನು ವಿವಿಧ ಕಡೆಗಳಲ್ಲಿ ವಿನಿಯೋಗಿಸಬೇಕಾಗುತ್ತದೆ.
  * ಹಣದುಬ್ಬರವನ್ನು ತಡೆಗಟ್ಟಲು ಹಾಗೂ ನಿಮ್ಮ ಹಣ ಸೂಕ್ತರೀತಿಯಲ್ಲಿ ಬೆಳೆಯುತ್ತಿದೆ ಎಂಬುದನ್ನು ಖಾತರಿಪಡಿಸಿಕೊಳ್ಳಲೂ ಹೂಡಿಕೆ ಅಗತ್ಯ. ಯಾವುದೇ ಮೊತ್ತ ಹಣದುಬ್ಬರಕ್ಕೆ ಅನುಗುಣವಾಗಿ ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತಾ ಹೋಗುತ್ತದೆ. ಅಲ್ಲದೇ ನಿಮ್ಮ ಇತರ ಆಸ್ತಿಗಳ ಮೌಲ್ಯದ ಕುಸಿತವನ್ನು ಇತರ ಹೂಡಿಕೆಗಳ ಮೂಲಕ ಸರಿದೂಗಿಸಬಹುದು.
  * ಹೂಡಿಕೆಗಳ ಮೂಲಕ ನಿಮ್ಮ ಪ್ರೀತಿಪಾತ್ರರಿಗೆ, ಮಕ್ಕಳಿಗೆ ಅಗತ್ಯವಾದ ಆರ್ಥಿಕ ನೆರವು ನೀಡಲೂ ಸಾಧ್ಯವಾಗುತ್ತದೆ.
  * ದೀರ್ಘಕಾಲದ ಅಥವಾ ಅಲ್ಪಕಾಲದ ಗುರಿಗಳನ್ನು ಸಾಧಿಸಲು ನಿಮ್ಮ ಹಣವನ್ನು ಬುದ್ದಿವಂತಿಕೆಯಿಂದ, ಸೂಕ್ತಕಡೆಗಳಲ್ಲಿ ವಿನಿಯೋಗಿಸಿಕೊಳ್ಳುವ ಮೂಲಕ ಸಾಧಿಸಬಹುದು.

  English summary

  Types of Investments in India

  Types of Investments in India
  Company Search
  Enter the first few characters of the company's name or the NSE symbol or BSE code and click 'Go'

  Find IFSC

  Get Latest News alerts from Kannada Goodreturns

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more