For Quick Alerts
ALLOW NOTIFICATIONS  
For Daily Alerts

ಸಾಲ ಪಡೆಯುವ ಮುನ್ನ ಇಲ್ಲೊಮ್ಮೆ ನೋಡಿ.. ಈ 10 ಸಂಗತಿ ನೆನಪಿರಲಿ...

ಜಗತ್ತು ಎಲ್ಲ ಕಡೆ ಸುಭಿಕ್ಷವಾಗಿ ಎಲ್ಲರೂ ಸಾಕಷ್ಟು ಹಣ ಹೊಂದುವ ಮೂಲಕ ಯಾರೂ ಸಾಲ ಮಾಡದೆ ಬದುಕುವ ಹಾಗಿದ್ದರೆ ಈ ಜಗತ್ತು ಎಷ್ಟು ಸುಂದರವಾಗಿರುತ್ತಿತ್ತು ಅಲ್ಲವೆ? ಇದು ಕಲ್ಪನೆ ಮಾತ್ರ.

By Siddu
|

ಜಗತ್ತು ಎಲ್ಲ ಕಡೆ ಸುಭಿಕ್ಷವಾಗಿ ಎಲ್ಲರೂ ಸಾಕಷ್ಟು ಹಣ ಹೊಂದುವ ಮೂಲಕ ಯಾರೂ ಸಾಲ ಮಾಡದೆ ಬದುಕುವ ಹಾಗಿದ್ದರೆ ಈ ಜಗತ್ತು ಎಷ್ಟು ಸುಂದರವಾಗಿರುತ್ತಿತ್ತು ಅಲ್ಲವೆ? ಇದು ಕಲ್ಪನೆ ಮಾತ್ರ. ವಾಸ್ತವದಲ್ಲಿ ಜಗತ್ತು ಹೀಗಿಲ್ಲ ಎಂಬುದು ನಮಗೆಲ್ಲರಿಗೂ ಗೊತ್ತು. ನಿಜ ಜೀವನದಲ್ಲಿ ನಮ್ಮ ಅವಶ್ಯಕತೆಗಳ ಪೂರೈಕೆಗೆ ಸಾಲ ಪಡೆಯುವುದು ಕೆಲವೊಮ್ಮೆ ಅನಿವಾರ್ಯವಾಗುತ್ತದೆ. ನಿಜವಾದ ಕಷ್ಟದ ಸಂದರ್ಭಗಳಲ್ಲಿ ಹಾಗೂ ಮುಂದಿನ ಯಾವುದೋ ತುರ್ತು ಖರ್ಚಿಗೆ ಸಾಲ ಮಾಡುತ್ತೇವೆ.

 

ಹಲವಾರು ಬಾರಿ ಸುಲಭವಾಗಿ ಸಾಲ ಸಿಗುತ್ತದೆ ಎಂಬ ಒಂದೇ ಕಾರಣಕ್ಕೆ ಅವಶ್ಯಕತೆ ಇಲ್ಲದಿದ್ದರೂ ಅನೇಕರು ಸಾಲ ಪಡೆಯುವುದನ್ನು ನೋಡಿದ್ದೇವೆ. ಗ್ರಾಹಕರ ಈ ಮನಸ್ಥಿತಿಯನ್ನು ಚೆನ್ನಾಗಿ ಅರಿತುಕೊಂಡಿರುವ ಬ್ಯಾಂಕ್ ಗಳು ಹಾಗೂ ಅನೇಕ ಹಣಕಾಸು ಸಂಸ್ಥೆಗಳು ಯಥೇಚ್ಛವಾಗಿ ಸಾಲ ನೀಡಲು ಮುಂದೆ ಬರುತ್ತವೆ. ಇಮೇಲ್, ಎಸ್ಸೆಮ್ಮೆಸ್ ಹಾಗೂ ದೂರವಾಣಿ ಕರೆಗಳ ಮೂಲಕ ಹಣಕಾಸು ಸಂಸ್ಥೆಗಳು ಗ್ರಾಹಕರಿಗೆ ವಿವಿಧ ರೀತಿಯ ಆಫರ್ ಮುಂದೆ ಮಾಡಿ ಸಾಲದ ಆಮಿಷ ಒಡ್ಡುತ್ತಲೇ ಇರುತ್ತವೆ. ಕೆಲವರು ಕಡಿಮೆ ಬಡ್ಡಿ ದರದ ಆಫರ್ ನೀಡಿದರೆ ಇನ್ನು ಕೆಲವರು ಶೀಘ್ರವಾಗಿ ಸಾಲ ನೀಡುವ ವಾಗ್ದಾನ ಮಾಡುತ್ತವೆ. ನೀವು ಸಾಲವನ್ನು ಮರುಪಾವತಿ ಮಾಡದಿದ್ದರೆ ಏನಾಗುತ್ತದೆ?

ಆಧುನಿಕ ತಂತ್ರಜ್ಞಾನದ ಕಾರಣದಿಂದ ಸಾಲ ನೀಡುವ ಪ್ರಕ್ರಿಯೆ ಈಗ ಸುಲಭವಾಗಿದ್ದರೂ, ವಿವೇಕತನದಿಂದ ಸಾಲ ಪಡೆಯುವ ಗ್ರಾಹಕರ ಜವಾಬ್ದಾರಿ ಮಾತ್ರ ಎಂದಿನಂತೆಯೇ ಇದೆ. ಹಣದ ಅವಶ್ಯಕತೆ ಇಲ್ಲದಿದ್ದರೂ ಸಾಲ ಮಾಡುವುದು ಬೇಜವಾಬ್ದಾರಿತನದ ಕ್ರಮವಾಗುತ್ತದೆ. ಸಾಲದ ಬಡ್ಡಿಯ ಮೇಲೆ ತೆರಿಗೆ ವಿನಾಯಿತಿ ಸಿಗುತ್ತದೆ ಎಂಬ ಒಂದೇ ಕಾರಣಕ್ಕೆ ದೀರ್ಘಾವಧಿಯ ಸಾಲಗಳನ್ನು ಮೈಮೇಲೆ ಎಳೆದುಕೊಳ್ಳುವುದು ಸರಿಯಲ್ಲ. ಹಾಗಾದರೆ ಸಾಲ ಮಾಡುವ ಮುಂಚೆ ಯಾವೆಲ್ಲ ಮುಂಜಾಗರೂಕತೆ ಕ್ರಮಗಳನ್ನು ಅನುಸರಿಸಬೇಕು ಎಂಬುದನ್ನು ತಿಳಿದುಕೊಂಡಲ್ಲಿ ಅನವಶ್ಯಕವಾಗಿ ಸಾಲದ ಸುಳಿಯಲ್ಲಿ ಸಿಲುಕಿ ಒದ್ದಾಡುವ ಪರಿಸ್ಥಿತಿ ತಪ್ಪುತ್ತದೆ.

ಸಾಲ ಪಡೆಯುವ ಮುಂಚೆ ಅನುಸರಿಸಬೇಕಾದ 10 ಪ್ರಮುಖ ಮುಂಜಾಗರೂಕತಾ ಕ್ರಮಗಳನ್ನು ಇಲ್ಲಿ ನಿಡಿದ್ದೇವೆ ತಪ್ಪದೇ ಅನುಸರಿಸಿ..

1. ಮರಳಿ ಪಾವತಿಸಲಾಗದಷ್ಟು ದೊಡ್ಡ ಮೊತ್ತದ ಸಾಲ ಬೇಡ

1. ಮರಳಿ ಪಾವತಿಸಲಾಗದಷ್ಟು ದೊಡ್ಡ ಮೊತ್ತದ ಸಾಲ ಬೇಡ

ಹಿರಿಯರು ಯಾವಾಗಲೂ ಹೇಳುವ 'ಹಾಸಿಗೆ ಇದ್ದಷ್ಟು ಕಾಲು ಚಾಚು' ಎಂಬ ಗಾದೆ ಸಾಲದ ವಿಷಯದಲ್ಲಿ ಅತ್ಯಂತ ಸೂಕ್ತವಾಗಿ ಅನ್ವಯಿಸುತ್ತದೆ. ಸಾಲ ಪಡೆಯುವಾಗ ಎಲ್ಲಕ್ಕೂ ಮೊದಲು ಈ ವಿಷಯವನ್ನು ಗಣನೆಗೆ ತೆಗೆದುಕೊಳ್ಳಬೇಕು. ನೀವು ಸುಲಭವಾಗಿ ಮರಳಿ ಪಾವತಿಸುವಷ್ಟು ಮಾತ್ರ ಸಾಲ ಪಡೆಯುವುದು ಜಾಣತನ. ಸಾಲದ ವಿಷಯದಲ್ಲಿ ಕೆಲ ಸಾರ್ವತ್ರಿಕ ನಿಯಮಗಳಿವೆ. ನಮ್ಮ ತಿಂಗಳ ಆದಾಯದಲ್ಲಿ ಕಾರ್ ಲೋನ್ ಇಎಂಐ ಶೇ. 15 ಹಾಗೂ ಪರ್ಸನಲ್ ಲೋನ್ ಇಎಂಐ ಶೇ. 10 ಮೀರಬಾರದು. ಎಲ್ಲ ಸಾಲದ ಕಂತುಗಳ ಮೊತ್ತ ನಮ್ಮ ತಿಂಗಳಿನ ಆದಾಯದಲ್ಲಿ ಶೇ. 50 ರಷ್ಟು ಮೀರಬಾರದು.

ಜನ ಹೇಗೆ ಸಾಲದ ಸುಳಿಯಲ್ಲಿ ಸಿಲುಕುತ್ತಾರೆ ಎಂಬುದರ ಬಗ್ಗೆ ಒಂದು ಸರಳ ಉದಾಹರಣೆ ಹೀಗಿದೆ: ಕುಮಾರ ಎನ್ನುವ ವ್ಯಕ್ತಿ 5 ವರ್ಷಗಳ ಹಿಂದೆ 5 ಲಕ್ಷ ರೂಪಾಯಿ ಮೊತ್ತದ ಎರಡು ಪರ್ಸನಲ್ ಲೋನ್ ಪಡೆದರು. ಆ ಸಮಯದಲ್ಲಿ ಅವರು ತಿಂಗಳಿಗೆ 18 ಸಾವಿರ ರೂಪಾಯಿ (ಆದಾಯದ ಶೇ. 40ರಷ್ಟು) ಇಎಂಐ ಪಾವತಿಸುತ್ತಿದ್ದರು. ಹಣಕಾಸು ಮುಗ್ಗಟ್ಟಿನ ನಡುವೆಯೇ ಅವರು ೨೦೧೨ ರಲ್ಲಿ ೫.೭೪ ಲಕ್ಷ ರೂಪಾಯಿ ಮೊತ್ತದ ಕಾರ್ ಲೋನ್ ಪಡೆದರು. ಇದರಿಂದ ತಿಂಗಳಿಗೆ ೧೨,೫೦೦ ರೂಪಾಯಿ ಇಎಂಐ ಹೆಚ್ಚಾಯಿತು. ಕಳೆದ ವರ್ಷ ಹಳೆಯ ಸಾಲಗಳನ್ನು ತೀರಿಸಲು ಅವರು 8 ಲಕ್ಷ ರೂಪಾಯಿ ಪರ್ಸನಲ್ ಲೋನ್ ಹಾಗೂ ಇನ್ನೂ ಕೆಲ ಖರ್ಚುಗಳನ್ನು ನಿಭಾಯಿಸಲು 4 ಲಕ್ಷ ರೂಪಾಯಿ ಟಾಪ್ ಅಪ್ ಲೋನ್ ಪಡೆದರು. ಈಗ ನೋಡಿದರೆ ಕುಮಾರ ಅವರು ತಿಂಗಳಿಗೆ ಒಟ್ಟು 49,900 ರೂಪಾಯಿ ಇಎಂಐ ಪಾವತಿಸುತ್ತಿದ್ದು, ಇದು ಅವರ ಆದಾಯದ ಶೇ. 72ರಷ್ಟಾಗಿದೆ. ಭಾರತದಲ್ಲಿ ಲಭ್ಯವಿರುವ ಅನೇಕ ವಿಧದ ಸಾಲಗಳು ಯಾವುವು?

2. ಸಾಲ ಮರುಪಾವತಿ ಅವಧಿ ಆದಷ್ಟೂ ಚಿಕ್ಕದಾಗಿರಲಿ
 

2. ಸಾಲ ಮರುಪಾವತಿ ಅವಧಿ ಆದಷ್ಟೂ ಚಿಕ್ಕದಾಗಿರಲಿ

ಬಹುತೇಕ ಎಲ್ಲ ಹಣಕಾಸು ಸಂಸ್ಥೆಗಳು ಗೃಹ ಸಾಲ ಮರುಪಾವತಿಗೆ ಗರಿಷ್ಠ 30 ವರ್ಷದ ಅವಧಿಯನ್ನು ನೀಡುತ್ತವೆ. ಮರುಪಾವತಿ ಅವಧಿ ಹೆಚ್ಚಾದಷ್ಟೂ ಇಎಂಐ ಮೊತ್ತ ಕಡಿಮೆಯಾಗುತ್ತದೆ. ಹೀಗಾಗಿ ೨೫ ರಿಂದ ೩೦ ವರ್ಷದ ಮರುಪಾವತಿ ಅವಧಿ ಆಯ್ಕೆ ಮಾಡಿಕೊಳ್ಳುವುದು ಆಕರ್ಷಣೀಯವಾಗಿ ಕಾಣಿಸುತ್ತದೆ. ಆದರೆ ಯಾವಾಗಲೂ ಸಾಧ್ಯವಿದ್ದಷ್ಟೂ ಕಡಿಮೆ ಮರುಪಾವತಿ ಅವಧಿ ಆಯ್ಕೆ ಮಾಡಿಕೊಳ್ಳುವುದು ಉತ್ತಮ. ಸಾಲದ ಅವಧಿ ದೀರ್ಘವಾದಷ್ಟೂ ಪಾವತಿಸುವ ಬಡ್ಡಿಯ ಮೊತ್ತವೂ ಹೆಚ್ಚಾಗುತ್ತದೆ. 10 ವರ್ಷಗಳಲ್ಲಿ ಸಾಲ ಮರುಪಾವತಿಸಿದರೆ, ಸಾಲ ಪಡೆದ ಒಟ್ಟು ಮೊತ್ತದ ಶೇ. 57 ರಷ್ಟು ಬಡ್ಡಿ ಪಾವತಿಸಬೇಕಾಗುತ್ತದೆ. ಆದರೆ ಅವಧಿ 20 ವರ್ಷವಾದರೆ ಇದು ಶೇ. 128ಕ್ಕೆ ಜಿಗಿಯುತ್ತದೆ ಎಂಬುದು ಗೊತ್ತಿರಲಿ.

ಇದಕ್ಕೆ ಒಂದು ಸರಳ ಉದಾಹರಣೆ ನೀಡುವುದಾದರೆ-
ನೀವು 25 ವರ್ಷ ಅವಧಿಗೆ 50 ಲಕ್ಷ ರೂಪಾಯಿ ಸಾಲ ಪಡೆದಿದ್ದೀರಿ ಎಂದುಕೊಳ್ಳೋಣ. ಇದಕ್ಕೆ ನೀವು ಒಟ್ಟು ೮೩.೫ ಲಕ್ಷ ರೂಪಾಯಿ (ಶೇ. 167) ಗಳಷ್ಟು ಬರೀ ಬಡ್ಡಿಯನ್ನೇ ಕಟ್ಟಬೇಕಾಗುತ್ತದೆ. "ಸಾಲ ಪಡೆಯುವುದು ಎಂದರೆ ನಕಾರಾತ್ಮಕ ಹೂಡಿಕೆ. ಸಾಲದ ಅವಧಿ ಹೆಚ್ಚಾದಷ್ಟೂ ಪುನರಾವರ್ತಿತ ಬಡ್ಡಿ ಹೆಚ್ಚಳವಾಗಿ ಬ್ಯಾಂಕ್ ಗಳು ಲಾಭ ಗಳಿಸುತ್ತವೆ" ಎನ್ನುತ್ತಾರೆ ಹಣಕಾಸು ತಜ್ಞ ಪಿ.ವಿ. ಸುಬ್ರಮಣ್ಯಂ.

3. ಸಕಾಲದಲ್ಲಿ ಹಾಗೂ ನಿಯಮಿತವಾಗಿ ಕಂತು ಪಾವತಿಸಿ

3. ಸಕಾಲದಲ್ಲಿ ಹಾಗೂ ನಿಯಮಿತವಾಗಿ ಕಂತು ಪಾವತಿಸಿ

ಸಾಲದ ಮರುಪಾವತಿಯ ಸಂದರ್ಭದಲ್ಲಿ ಶಿಸ್ತು ಅಳವಡಿಸಿಕೊಳ್ಳುವುದು ಅತಿ ಮುಖ್ಯ. ಕ್ರೆಡಿಟ್ ಕಾರ್ಡ್‌ನ ಕಿರು ಅವಧಿಯ ಸಾಲವಾಗಿರಲಿ ಅಥವಾ ದೀರ್ಘಾವಧಿಯ ಗೃಹ ಸಾಲವಾಗಿರಲಿ ಕಂತು ಪಾವತಿ ತಪ್ಪಿಸಕೂಡದು. ಇಎಂಐ ಪಾವತಿಯನ್ನು ತಪ್ಪಿಸುವುದು ಅಥವಾ ತಡ ಮಾಡುವುದರಿಂದ ನಿಮ್ಮ ಕ್ರೆಡಿಟ್ ಸ್ಕೋರ್ ಹಾಳಾಗಿ ಭವಿಷ್ಯದಲ್ಲಿ ಮತ್ತೆ ಸಾಲ ಪಡೆಯುವುದು ಕಷ್ಟಕರವಾಗಿ ಪರಿಣಮಿಸುತ್ತದೆ.
ಬೇರೆ ಯಾವುದೇ ಹೂಡಿಕೆಯನ್ನು ನಿಲ್ಲಿಸಿದರೂ ಸಾಲದ ಕಂತು ಪಾವತಿ ಮಾತ್ರ ತಪ್ಪಿಸಲೇಕೂಡದು. ತುರ್ತು ಸಂದರ್ಭಗಳಲ್ಲಿ ಸಹ ಸಾಲದ ಮರುಪಾವತಿಯ ಬಗ್ಗೆ ಗಂಭೀರವಾಗಿರಬೇಕು. ಅದರಲ್ಲೂ ಕ್ರೆಡಿಟ್ ಕಾರ್ಡ್ ಕಂತು ಪಾವತಿ ತಪ್ಪಿಸಿದರೆ ದಂಡದ ಜೊತೆಗೆ ಬಾಕಿ ಮೊತ್ತದ ಮೇಲೆ ಹೆಚ್ಚುವರಿ ಬಡ್ಡಿಯನ್ನೂ ತೆರಬೇಕಾಗುತ್ತದೆ.

4. ಮತ್ತೊಂದು ಕಡೆ ಹೂಡಿಕೆ ಮಾಡಲು ಅಥವಾ ಆಡಂಬರಕ್ಕಾಗಿ ಸಾಲ ಬೇಡ

4. ಮತ್ತೊಂದು ಕಡೆ ಹೂಡಿಕೆ ಮಾಡಲು ಅಥವಾ ಆಡಂಬರಕ್ಕಾಗಿ ಸಾಲ ಬೇಡ

ಸಾಲದ ಹಣವನ್ನು ಹೂಡಿಕೆ ಮಾಡುವುದು ಸಲ್ಲದು. ಅತ್ಯಂತ ಸುರಕ್ಷಿತ ಫಿಕ್ಸೆಡ್ ಡಿಪಾಸಿಟ್ ಗಳಲ್ಲಿ ಸಹ ಸಾಲದ ಹಣ ಹೂಡಿಕೆ ಮಾಡುವುದು ಜಾಣತನವಲ್ಲ. ಎಫ್‌ಡಿ ಅಥವಾ ಬಾಂಡ್ ಇವು ಯಾವುವೂ ಸಾಲದ ಮೇಲಿನ ಬಡ್ಡಿಗಿಂತ ಹೆಚ್ಚಿನ ಆದಾಯ ನೀಡಲು ಸಾಧ್ಯವಿಲ್ಲ ಎಂಬುದು ಗೊತ್ತಿರಲಿ. ಇನ್ನು ಹೆಚ್ಚು ಆದಾಯ ನೀಡಬಲ್ಲ ಇಕ್ವಿಟಿಗಳು ಯಾವಾಗಲೂ ಅಪಾಯಕಾರಿ. ಶೇರು ಮಾರುಕಟ್ಟೆ ಕುಸಿದಾಗ ನಿಮ್ಮ ಬಂಡವಾಳ ಹಾಳಾಗುವುದರೊಂದಿಗೆ ಇಎಂಐ ಹೊರೆಯನ್ನು ಹೊರಬೇಕಾಗುತ್ತದೆ.
ಒಂದು ಕಾಲದಲ್ಲಿ ರಿಯಲ್ ಎಸ್ಟೇಟ್‌ನಲ್ಲಿನ ಹೂಡಿಕೆ ಅತ್ಯಂತ ಲಾಭದಾಯಕವಾಗಿತ್ತು. ಶೇ. 7 ರಿಂದ 8 ರ ಬಡ್ಡಿದರದಲ್ಲಿ ಆಗ ಗೃಹ ಸಾಲ ಸಿಗುತ್ತಿದ್ದು, ಆಸ್ತಿ ಮೌಲ್ಯ ಶೇ. 15 ರಿಂದ 20ರ ದರದಲ್ಲಿ ಹೆಚ್ಚಳ ಕಾಣುತ್ತಿದ್ದವು. ಆಗ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆದು ಆಸ್ತಿ ಖರೀದಿಸಬಹುದಾಗಿತ್ತು. ಆದರೆ ಈಗ ಕಾಲ ಬದಲಾಗಿದೆ. ಪ್ರಸ್ತುತ ಗೃಹ ಸಾಲದ ಬಡ್ಡಿದರ ಶೇ.೧೦ ರಷ್ಟಿದ್ದು, ಆಸ್ತಿ ಮೌಲ್ಯ ಶೇ.4 ರಿಂದ 5 ರಷ್ಟು ಮಾತ್ರ ಹೆಚ್ಚಳ ಕಾಣುತ್ತಿವೆ. ದೇಶದ ಹಲವಾರು ಭಾಗಗಳಲ್ಲಿ ಕಳೆದ ಒಂದೆರಡು ವರ್ಷದಲ್ಲಿ ಆಸ್ತಿಗಳ ಮೌಲ್ಯದಲ್ಲಿ ಕುಸಿತ ಕಂಡು ಬರುತ್ತಿದೆ.

5. ದೊಡ್ಡ ಮೊತ್ತದ ಸಾಲಕ್ಕೆ ವಿಮೆಯ ಭದ್ರತೆ ಇರಲಿ

5. ದೊಡ್ಡ ಮೊತ್ತದ ಸಾಲಕ್ಕೆ ವಿಮೆಯ ಭದ್ರತೆ ಇರಲಿ

ದೊಡ್ಡ ಮೊತ್ತದ ಗೃಹ ಸಾಲ ಅಥವಾ ಕಾರ್ ಲೋನ್ ಪಡೆದರೆ ಅದಕ್ಕೆ ವಿಮಾ ಸುರಕ್ಷತೆ ಮಾಡಿಸುವುದೂ ಅಗತ್ಯ. ಒಂದು ವೇಳೆ ನಿಮಗೆ ಏನಾದರೂ ಆದಲ್ಲಿ ನಿಮ್ಮ ಕುಟುಂಬಕ್ಕೆ ಯಾವುದೇ ಹಾನಿ ಆಗದಂತೆ ತಡೆಯಲು ಸಾಲದ ಮೊತ್ತದಷ್ಟೇ ಅವಧಿ ವಿಮೆ ಮಾಡಿಸುವುದು ಸೂಕ್ತ. ಅನಿರೀಕ್ಷಿತ ಘಟನೆಯಿಂದ ಏನಾದರೂ ಸಂಭವಿಸಿ, ಇಎಂಐ ಕಟ್ಟಲಾಗದಿದ್ದಲ್ಲಿ ಸಾಲ ನೀಡಿದ ಸಂಸ್ಥೆ ನಿಮ್ಮ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುತ್ತದೆ. 50 ಲಕ್ಷ ರೂಪಾಯಿ ಸಾಲದ ಮೊತ್ತದ ಅವಧಿ ವಿಮೆ ಅಂತಹ ಹೊರೆ ಆಗಲಾರದು.
ಸಾಮಾನ್ಯವಾಗಿ ಕಡಿಮೆಯಾಗುತ್ತ ಹೋಗುವ ವಿಮಾ ಪಾಲಿಸಿಯನ್ನು ಕೊಳ್ಳಲು ಬ್ಯಾಂಕ್ ಗಳು ಸೂಚಿಸುತ್ತವೆ. ಆದರೆ ನಿಶ್ಚಿತ ಅವಧಿಯ ವಿಮೆ ಪಡೆಯುವುದೇ ಸೂಕ್ತ. ಸಾಲ ತೀರಿದ ಮೇಲೆಯೂ ಇದನ್ನು ಮುಂದುವರಿಸಬಹುದು ಅಥವಾ ಬೇರೆ ಸಾಲ ಪಡೆದಾಗ ಇದು ಉಪಯೋಗಕ್ಕೆ ಬರುತ್ತದೆ.

6. ಕಡಿಮೆ ಬಡ್ಡಿಯ ಸಾಲ ಹುಡುಕಿ

6. ಕಡಿಮೆ ಬಡ್ಡಿಯ ಸಾಲ ಹುಡುಕಿ

ಸಾಲ ಸಿಕ್ಕರೆ ಸಾಕು ಎಂದು ಬೇಕಾಬಿಟ್ಟಿಯಾಗಿ ದಾಖಲೆಗಳ ಮೇಲೆ ಸಹಿ ಮಾಡಿ ಮರೆತು ಬಿಡುವುದು ವಿವೇಕವಂತರ ಲಕ್ಷಣವಲ್ಲ. ಬದಲಾಗುವ ಬಡ್ಡಿದರಗಳು ಹಾಗೂ ನಿಯಮಗಳ ಬಗ್ಗೆ ನಿಗಾ ಇರಲಿ. ಪ್ರಸ್ತುತ ಆರ್‌ಬಿಐ ಬಡ್ಡಿಯ ಬೇಸ್ ರೇಟ್ ನಿಯಮವನ್ನು ಬದಲಾಯಿಸುವ ಚಿಂತನೆ ನಡೆಸಿದೆ. ಇದು ಬ್ಯಾಂಕಿಂಗ್ ವ್ಯವಸ್ಥೆಯ ಬಡ್ಡಿದರಗಳನ್ನು ಆಮೂಲಾಗ್ರವಾಗಿ ಬದಲಾಯಿಸುವ ಸಾಧ್ಯತೆ ಇದೆ. ಹಾಗಾಗಿ ಯಾವಾಗಲೂ ಕಡಿಮೆ ಬಡ್ಡಿದರದ ಬಗ್ಗೆ ಹುಡುಕಾಟ ನಡೆಸಿ. ಬೇರೆಡೆ ಬಡ್ಡಿ ಕಡಿಮೆ ಇರುವುದು ತಿಳಿದಾಗ ಆ ಸಂಸ್ಥೆಗೆ ಸಾಲ ವರ್ಗಾವಣೆ ಮಾಡಲು ಹಿಂಜರಿಕೆ ಬೇಡ.
ಆದರೂ ಸಾಲ ವರ್ಗಾಯಿಸುವಾಗ ಬಡ್ಡಿದರ ಶೇ. ೧ ರಿಂದ ೨ ರಷ್ಟಾದರೂ ಕಡಿಮೆ ಇರುವುದು ಸೂಕ್ತ. ಇಲ್ಲವಾದರೆ ಅವಧಿ ಪೂರ್ವ ಸಾಲ ಮರುಪಾವತಿಯ ದಂಡ ಹಾಗೂ ಇತರ ವೆಚ್ಚಗಳಿಂದ ಯಾವುದೇ ಲಾಭ ಸಿಗದಂತಾಗುವುದು.

7. ನಿಯಮಗಳನ್ನು ಓದಿ ಅರ್ಥ ಮಾಡಿಕೊಳ್ಳಿ

7. ನಿಯಮಗಳನ್ನು ಓದಿ ಅರ್ಥ ಮಾಡಿಕೊಳ್ಳಿ

ಸಾಮಾನ್ಯವಾಗಿ ಸಾಲದ ನಿಯಮಗಳು ಎಲ್ಲರಿಗೂ ಅರ್ಥವಾಗುವುದಿಲ್ಲ. ಸಾಕಷ್ಟು ಕಾನೂನಾತ್ಮಕ ಅಂಶಗಳನ್ನು ಒಳಗೊಂಡ ನಿಯಮಾವಳಿಯ ಎಲ್ಲ ಅಂಶಗಳನ್ನು ತಿಳಿದುಕೊಳ್ಳಲು ಸಾಧ್ಯವಾಗದಿದ್ದರೂ, ಪ್ರಮುಖ ಷರತ್ತುಗಳ ಬಗ್ಗೆ ತಿಳಿದುಕೊಂಡರೆ ಭವಿಷ್ಯದಲ್ಲಿ ಎದುರಾಗುವ ಸಮಸ್ಯೆಗಳಿಂದ ಪಾರಾಗಬಹುದು.
ಇದಕ್ಕೊಂದು ಉದಾಹರಣೆ ನೀಡುವುದಾದರೆ- ಬೆಂಗಳೂರಿನ ಸುಭಾಷ ಶೆಟ್ಟಿ ಎಂಬುವರು 1 ಲಕ್ಷ ರೂಪಾಯಿ ಪರ್ಸನಲ್ ಲೋನ್‌ಗೆ ಅರ್ಜಿ ಸಲ್ಲಿಸಿದರು. ಸಾಲ ಮಂಜೂರಾಗಿ ಅವರಿಗೆ ಸಿಕ್ಕಿದ್ದು ಕೇವಲ 91,800 ರೂಪಾಯಿ ಚೆಕ್ ಮಾತ್ರ. ಸಾಲ ನೀಡುವ ಸಂಸ್ಥೆ ೫,೧೫೨ ರೂಪಾಯಿ ಮುಂಗಡ ಬಡ್ಡಿ ಹಾಗೂ ವಾರ್ಷಿಕ ವಿಮಾ ಕಂತಾಗಿ 3,047 ರೂಪಾಯಿಗಳನ್ನು ಕಡಿತ ಮಾಡಿತ್ತು.
ಶೆಟ್ಟಿ ಅವರು ಸಾಲ ಪಡೆಯುವ ಮುಂಚೆ ಸಂಸ್ಥೆಯ ಷರತ್ತುಗಳ ಬಗ್ಗೆ ವಿಚಾರಿಸದೇ ದಾಖಲೆಗಳಿಗೆ ಸಹಿ ಮಾಡಿದ್ದು ಈ ಅನಾಹುತ ಸೃಷ್ಟಿಸಿತ್ತು. ಕೆಲ ಹಣಕಾಸು ಸಂಸ್ಥೆಗಳು ಆರಂಭದಲ್ಲಿ ಗ್ರಾಹಕರಿಗೆ ಸೂಕ್ತ ಮಾಹಿತಿ ನೀಡದೆ ಮೋಸ ಮಾಡುವುದು ವಾಸ್ತವವಾಗಿದೆ. ಹೀಗಾಗಿ ಸಾಲದ ಷರತ್ತುಗಳ ಬಗ್ಗೆ ನಿಮಗೆ ತಿಳಿಯದಿದ್ದಲ್ಲಿ ನಿಮ್ಮ ವಿಶ್ವಾಸದ ಹಣಕಾಸು ತಜ್ಞರು ಅಥವಾ ಚಾರ್ಟರ್ಡ ಅಕೌಂಟಂಟ್ ಅವರಿಂದ ಸಾಲದ ಒಡಂಬಡಿಕೆ ಪತ್ರವನ್ನು ತಪಾಸಣೆ ಮಾಡಿಸಬೇಕು.

8. ಹೆಚ್ಚು ಬಡ್ಡಿಯ ಸಾಲಗಳನ್ನು ಪರಿವರ್ತಿಸಿಕೊಳ್ಳಿ

8. ಹೆಚ್ಚು ಬಡ್ಡಿಯ ಸಾಲಗಳನ್ನು ಪರಿವರ್ತಿಸಿಕೊಳ್ಳಿ

ಒಂದು ವೇಳೆ ಹೆಚ್ಚು ಬಡ್ಡಿದರದ ಹಲವಾರು ಸಾಲಗಳನ್ನು ನೀವು ಪಡೆದಿದ್ದರೆ ಅವುಗಳನ್ನು ಕ್ರೋಢೀಕರಿಸಿ ಒಂದೇ ಕಡಿಮೆ ಬಡ್ಡಿಯ ಸಾಲವಾಗಿ ಪರಿವರ್ತಿಸಿಕೊಳ್ಳುವುದು ಸೂಕ್ತ. ನಿಮ್ಮೆಲ್ಲ ಸಾಲಗಳ ಪಟ್ಟಿ ತಯಾರಿಸಿ ಅವುಗಳಲ್ಲಿ ಹೆಚ್ಚು ಬಡ್ಡಿಯ ಸಾಲಗಳನ್ನು ಗುರುತಿಸಿ. ಶೇ. 18 ರಿಂದ 20 ಬಡ್ಡಿದರದ ಪರ್ಸನಲ್ ಲೋನ್ ಇದ್ದರೆ ಅದನ್ನು ವಿಮಾ ಪಾಲಿಸಿಯ ಮೇಲೆ ಕಡಿಮೆ ಬಡ್ಡಿಯ ಸಾಲ ಪಡೆದು ತೀರಿಸುವುದು ಉತ್ತಮ.

9. ನಿವೃತ್ತಿ ಜೀವನದ ಮೇಲೆ ಸಾಲಗಳು ಭಾರವಾಗದಿರಲಿ

9. ನಿವೃತ್ತಿ ಜೀವನದ ಮೇಲೆ ಸಾಲಗಳು ಭಾರವಾಗದಿರಲಿ

ಮಕ್ಕಳ ಭವಿಷ್ಯದ ಬಗ್ಗೆ ಭಾರತೀಯರು ತುಂಬಾ ಕಾಳಜಿ ವಹಿಸುತ್ತಾರೆ ಎಂಬುದು ತಿಳಿದೇ ಇದೆ. ತಾವು ಪಡೆದ ಸಾಲದಿಂದ ಮಕ್ಕಳ ಮೇಲೆ ಹೊರೆಯಾಗುವುದನ್ನು ಯಾರೂ ಬಯಸುವುದಿಲ್ಲ. ಆದರೂ ಮಕ್ಕಳ ವಿದ್ಯಾಭ್ಯಾಸದ ಖರ್ಚು ಬಂದಾಗ ವಿವೇಚನೆಯಿಂದ ನಿರ್ಧಾರ ತಳೆಯವುದು ಒಳಿತು. ಸಾಲ ಪಡೆದು ಮಕ್ಕಳ ಭವಿಷ್ಯ ರೂಪಿಸುವುದು ಹಾಗೂ ಮುಂದಿನ ನಿವೃತ್ತಿ ಜೀವನ ಎರಡೂ ಸುಗಮವಾಗಿರುವಂತೆ ನೋಡಿಕೊಳ್ಳುವುದು ಜಾಣತನ.

10. ಪತ್ನಿ ಹಾಗೂ ಕುಟುಂಬದವರಿಗೆ ಸಾಲದ ಮಾಹಿತಿ ಇರಲಿ

10. ಪತ್ನಿ ಹಾಗೂ ಕುಟುಂಬದವರಿಗೆ ಸಾಲದ ಮಾಹಿತಿ ಇರಲಿ

ಯಾವುದೇ ಸಾಲ ಪಡೆಯುವ ಮೊದಲು ಕುಟುಂಬ ಸದಸ್ಯರೊಂದಿಗೆ ಚರ್ಚಿಸುವುದು ಅಗತ್ಯ. ಸಾಲ ಮರುಪಾವತಿ ಮಾಡುವ ಸಂದರ್ಭದಲ್ಲಿ ಅದು ಇಡೀ ಕುಟುಂಬದ ಹಣಕಾಸು ಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ನೀವು ಪಡೆಯುವ ಸಾಲದ ಮೊತ್ತ ಹಾಗೂ ಅದರ ಉದ್ದೇಶದ ಬಗ್ಗೆ ನಿಮ್ಮ ಪತ್ನಿಗೆ (ಸಂಗಾತಿ) ಮಾಹಿತಿ ನೀಡುವುದು ಸೂಕ್ತ.
ಹಣಕಾಸು ವ್ಯವಹಾರದ ಬಗ್ಗೆ ಪತ್ನಿಗೆ ಏನೂ ತಿಳಿಸದೆ ಇರುವುದು ನಿಮ್ಮನ್ನು ಒತ್ತಡದಲ್ಲಿ ಸಿಲುಕಿಸುತ್ತದೆ. ಜೊತೆಗೆ ಉತ್ತಮ ಹಣಕಾಸು ನಿರ್ವಹಣೆ ಕೂಡ ಕಷ್ಟಕರವಾಗುತ್ತದೆ. ಒಂದು ವೇಳೆ ಸಾಲ ಪಡೆಯುವ ಸಂದರ್ಭ ಬಂದಾಗ ನಿಮ್ಮ ಸಂಗಾತಿಯ ಬಳಿ ಒಂದಿಷ್ಟು ಉಳಿತಾಯದ ಮೊತ್ತ ಇದ್ದು, ಅದನ್ನು ಕೊಡುತ್ತೇನೆ ಎಂದಾಗ ಸಾಲದಿಂದ ಪಾರಾಗಬಹುದು. ಹಾಗಾಗಿ ಹಣಕಾಸು ವ್ಯವಹಾರದ ಬಗ್ಗೆ ಕುಟುಂಬ ಸದಸ್ಯರನ್ನು ಕತ್ತಲೆಯಲ್ಲಿ ಇಡುವುದು ಬೇಡ.

ಸಾಲ ಎಂಬುದು ಯಾವಾಗಲೂ ಶೂಲವಿದ್ದಂತೆ. ಹಾಗಾಗಿ ಸಾಲ ಪಡೆಯುವ ಮುನ್ನ ನೂರು ಬಾರಿ ವಿಚಾರ ಮಾಡಿ. ಸಾಲ ಪಡೆಯಲೇಬೇಕು ಎಂದಾದಲ್ಲಿ ಮೇಲೆ ತಿಳಿಸಿದ ವಿಷಯಗಳತ್ತ ಒಮ್ಮೆ ಗಂಭೀರವಾಗಿ ಆಲೋಚಿಸಿ ಆಮೇಲೆ ಮುಂದುವರೆಯುವುದು ಸುರಕ್ಷಿತ.

 

English summary

10 golden rules to follow when taking a Loan

10 such immutable rules of borrowing that potential customers must keep in mind.
Story first published: Wednesday, July 11, 2018, 10:20 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X