For Quick Alerts
ALLOW NOTIFICATIONS  
For Daily Alerts

1 ವರ್ಷದ ಅವಧಿಗೆ ಎಲ್ಲಿ ಹೂಡಿಕೆ ಮಾಡಬೇಕು? ಈ ಆಯ್ಕೆಗಳು ನಿಮ್ಮದಾಗಿರಲಿ..

ಕೆಲ ಬಾರಿ ಕೈಯಲ್ಲಿರುವ ಹಣವನ್ನು ಅಲ್ಪಾವಧಿಗಾಗಿ ಮಾತ್ರ ಹೂಡಿಕೆ ಮಾಡುವ ಪರಿಸ್ಥಿತಿ ಬಂದೊದಗುತ್ತದೆ. ಮದುವೆ-ಮುಂಜಿ ಅಥವಾ ಇನ್ನಾವುದೋ ಕಾರ್ಯಕ್ರಮಗಳಿಗಾಗಿ ಕೂಡಿಟ್ಟ ಹಣವನ್ನು ದೀರ್ಘಾವಧಿಗಾಗಿ ಹೂಡಿಕೆ ಮಾಡಲು ಆಗುವುದಿಲ್ಲ.

By Siddu
|

ಕೆಲ ಬಾರಿ ಕೈಯಲ್ಲಿರುವ ಹಣವನ್ನು ಅಲ್ಪಾವಧಿಗಾಗಿ ಮಾತ್ರ ಹೂಡಿಕೆ ಮಾಡುವ ಪರಿಸ್ಥಿತಿ ಬಂದೊದಗುತ್ತದೆ. ಮದುವೆ-ಮುಂಜಿ ಅಥವಾ ಇನ್ನಾವುದೋ ಕಾರ್ಯಕ್ರಮಗಳಿಗಾಗಿ ಕೂಡಿಟ್ಟ ಹಣವನ್ನು ದೀರ್ಘಾವಧಿಗಾಗಿ ಹೂಡಿಕೆ ಮಾಡಲು ಆಗುವುದಿಲ್ಲ. ಒಂದು ವರ್ಷ ಅಥವಾ ಅದಕ್ಕೂ ಮುನ್ನ ಯಾವುದೇ ಕ್ಷಣದಲ್ಲಿ ಹಣದ ಅವಶ್ಯಕತೆ ಬರಬಹುದಾದ ಸಂದರ್ಭಗಳಲ್ಲಿ ಹೂಡಿಕೆ ಮಾಡಿದ ಹಣ ಬಯಸಿದ ತಕ್ಷಣ ಮರಳಿ ಸಿಗುವಂತಿರಬೇಕಾಗಿರುವುದು ಅಗತ್ಯ.
12 ತಿಂಗಳು ಅಥವಾ ಅದಕ್ಕೂ ಕಡಿಮೆ ಅವಧಿಗೆ ಹೂಡಿಕೆ ಮಾಡುವ ಪ್ರಮುಖ ವಿಧಾನಗಳನ್ನು ಇಲ್ಲಿ ನೀಡಲಾಗಿದೆ. ರೂ. 1 ಲಕ್ಷ 21 ವರ್ಷಗಳಲ್ಲಿ 1 ಕೋಟಿ ಆಗುತ್ತದೆ ಹೇಗೆ? ಇಲ್ಲಿ ನೋಡಿ

 

1. ಬ್ಯಾಂಕ್ ಫಿಕ್ಸೆಡ್ ಡಿಪಾಸಿಟ್

1. ಬ್ಯಾಂಕ್ ಫಿಕ್ಸೆಡ್ ಡಿಪಾಸಿಟ್

ವರ್ಷದ ಅವಧಿಗೆ ಹಣ ಹೂಡಿಕೆ ಮಾಡಲು ಬ್ಯಾಂಕ್‌ನಲ್ಲಿನ ಫಿಕ್ಸೆಡ್ ಡಿಪಾಸಿಟ್ ಯೋಜನೆ ಅತ್ಯಂತ ಸೂಕ್ತವಾಗಿದೆ. ಠೇವಣಿ ವಿಮೆ ಹಾಗೂ ಸಾಲ ಖಾತರಿ ಪ್ರಾಧಿಕಾರದ (DICGC) ನಿಯಮಗಳ ಪ್ರಕಾರ ಬ್ಯಾಂಕಿನ ಪ್ರತಿ ಠೇವಣಿದಾರರಿಗೂ ಗರಿಷ್ಠ 1 ಲಕ್ಷ ರೂಪಾಯಿ ಠೇವಣಿ ಹಾಗೂ ಅಷ್ಟೇ ಮೊತ್ತದ ಬಡ್ಡಿಗೆ ವಿಮಾ ಸೌಲಭ್ಯವನ್ನು ನೀಡಲಾಗುತ್ತದೆ. ಇತ್ತೀಚೆಗೆ ಬಹುತೇಕ ಬ್ಯಾಂಕ್‌ಗಳು ಆನ್‌ಲೈನ್ ಮೂಲಕವೇ ಫಿಕ್ಸೆಡ್ ಡೆಪಾಸಿಟ್ ಸೌಕರ್ಯ ನೀಡುತ್ತಿರುವುದು ಸಹ ಠೇವಣಿದಾರರಿಗೆ ಅನುಕೂಲಕರವಾಗಿದೆ.

ಅವಧಿ: 6, 9 ಅಥವಾ 12 ತಿಂಗಳು ಅಥವಾ ಅದಕ್ಕೂ ಹೆಚ್ಚಿನ ಕಾಲಾವಧಿಯ ಫಿಕ್ಸೆಡ್ ಡೆಪಾಸಿಟ್ ಆಯ್ಕೆ ಮಾಡಬಹುದು. ವಿವಿಧ ಬ್ಯಾಂಕಗಳು ತಮ್ಮದೇ ಆದ ಕಾಲಾವಧಿ ಯೋಜನೆಗಳನ್ನು ಹೊಂದಿವೆ.

ಪ್ರತಿಫಲ: ತಮ್ಮ ಅವಶ್ಯಕತೆಗಳಿಗೆ ಅನುಸಾರವಾಗಿ ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ, ವಾರ್ಷಿಕ ಅಥವಾ ಸಂಚಯಿತ ಬಡ್ಡಿ ಯೋಜನೆಯ ಫಿಕ್ಸೆಡ್ ಡೆಪಾಸಿಟ್ ಯೋಜನೆಯನ್ನು ಆಯ್ದುಕೊಳ್ಳಬಹುದು. ಸಾಮಾನ್ಯವಾಗಿ ಎಫ್ ಡಿ ಬಡ್ಡಿ ದರಗಳು ಆರ್‌ಬಿಐನ ರೆಪೊ ದರಗಳನ್ನು ಆಧರಿಸಿರುತ್ತವೆ. ಪ್ರಸ್ತುತ ಬಹುತೇಕ ಎಫ್‌ಡಿಗಳಲ್ಲಿ 12 ತಿಂಗಳು ಅಥವಾ ಮೇಲ್ಪಟ್ಟ ಅವಧಿಯ ಠೇವಣಿಗೆ ವಾರ್ಷಿಕ ಶೇ. ೬.೫ ರಷ್ಟು ಬಡ್ಡಿ ದರ ನಿಗದಿಪಡಿಸಲಾಗಿದ್ದು, ಹಿರಿಯ ನಾಗರಿಕರಿಗೆ ಶೇ. ೦.೫ ರಷ್ಟು ಹೆಚ್ಚುವರಿ ಬಡ್ಡಿಯನ್ನು ನೀಡಲಾಗುತ್ತದೆ.

ಹಣ ಹಿಂತೆಗೆತ: ಹೂಡಿಕೆ ಮಾಡಿದ ಅವಧಿಯ ನಂತರವೂ ಹಣದ ಅವಶ್ಯಕತೆ ಬರದಿದ್ದರೆ ಫಿಕ್ಸೆಡ್ ಡೆಪಾಸಿಟ್ ಅನ್ನು ನವೀಕರಿಸಬಹುದು. ಜೊತೆಗೆ ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ ಅಥವಾ ವಾರ್ಷಿಕ ಅವಧಿಗಳಲ್ಲಿ ಬಡ್ಡಿಯನ್ನು ಮಾತ್ರ ಪಡೆದುಕೊಳ್ಳುವ ಸೌಲಭ್ಯವೂ ಸಿಗುತ್ತದೆ.

ಅನ್ವಯವಾಗುವ ತೆರಿಗೆಗಳು: ಫಿಕ್ಸೆಡ್ ಡೆಪಾಸಿಟ್‌ನಲ್ಲಿ ಸಿಗುವ ಬಡ್ಡಿಯನ್ನು ವ್ಯಕ್ತಿಯ ಆದಾಯವೆಂದು ಪರಿಗಣಿಸಲಾಗಿದ್ದು, ಆಯಾ ವ್ಯಕ್ತಿಯು ಒಳಪಡುವ ತೆರಿಗೆ ನಿಯಮಗಳಂತೆ ತೆರಿಗೆ ಪಾವತಿಸಬೇಕಾಗುವುದು.

2. ಸ್ಥಿರ ಪಕ್ವತಾ ಅವಧಿ ಯೋಜನೆ
 

2. ಸ್ಥಿರ ಪಕ್ವತಾ ಅವಧಿ ಯೋಜನೆ

ನಿಶ್ಚಿತ ಪಕ್ವತಾ ಅವಧಿ ಯೋಜನೆ (Fixed Maturity Plan - FMP) ಇದು ಕ್ಲೋಸ್ ಎಂಡೆಡ್ ಡೆಬ್ಟ್ ಮ್ಯೂಚುವಲ್ ಫಂಡ್ ಆಗಿದೆ. ಇದರಲ್ಲಿ ಪಕ್ವತಾ ಅವಧಿಯನ್ನು ಆಧರಿಸಿ ಆದಾಯವನ್ನು ನಿಗದಿಪಡಿಸಲಾಗಿರುತ್ತದೆ. ಪಕ್ವತಾ ಅವಧಿಯ ಆಧಾರದಲ್ಲಿ ಒಂದೇ ಸಮಯಕ್ಕೆ ಮೊತ್ತ ಸಿಗುವಂತೆ ಫಂಡ್ ಮ್ಯಾನೇಜರ್‌ಗಳು ಈ ಮೊತ್ತವನ್ನು ಮ್ಯೂಚುವಲ್ ಫಂಡ್ ಯೋಜನೆಗಳಲ್ಲಿ ಹೂಡಿಕೆ ಮಾಡುತ್ತಾರೆ.

ಅವಧಿ: ಎಫ್‌ಎಂಪಿಗಳಲ್ಲಿ ಒಂದು ತಿಂಗಳಿನಿಂದ ಐದು ವರ್ಷದವರೆಗಿನ ಪಕ್ವತಾ ಅವಧಿ ಯೋಜನೆಗಳು ಲಭ್ಯವಿವೆ.

ಪ್ರತಿಫಲ: ಈ ಯೋಜನೆ ಶೇರು ಮಾರುಕಟ್ಟೆಯ ಮೇಲೆ ಅವಲಂಬಿತವಾಗಿದ್ದು, ಮಾರುಕಟ್ಟೆಯ ಏರಿಳಿತಗಳ ಮಧ್ಯೆಯೂ ಹೂಡಿಕೆದಾರನಿಗೆ ಸ್ಥಿರವಾದ ಆದಾಯ ದೊರಕುವಂತೆ ನೋಡಿಕೊಳ್ಳಲಾಗುತ್ತದೆ. ಇವುಗಳಲ್ಲಿನ ಹೂಡಿಕೆಗೆ ಬಡ್ಡಿ ದರ ಬದಲಾವಣೆಗಳಿಂದ ಯಾವುದೇ ವ್ಯತ್ಯಾಸವಾಗುವುದಿಲ್ಲ. ಆದರೆ ಎಫ್‌ಎಂಪಿಗಳಲ್ಲಿ ಸಿಗುವ ಆದಾಯದ ಪ್ರಮಾಣ ನಿಶ್ಚಿತ ಅಥವಾ ಖಾತರಿಯಾಗಿರುವುದಿಲ್ಲ.

ಹಣ ಹಿಂತೆಗೆತ : ಎಫ್‌ಎಂಪಿಗಳು ಶೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿರುವುದರಿಂದ ಸುಲಭವಾಗಿ ಹೂಡಿಕೆ ಹಿಂತೆಗೆಯಲಾಗುವುದಿಲ್ಲ. ಪಕ್ವತಾ ಅವಧಿಯವರೆಗೂ ಹೂಡಿಕೆ ಮುಂದುವರಿಸುವ ಹಾಗಿದ್ದರೆ ಮಾತ್ರ ಈ ಯೋಜನೆಯಲ್ಲಿ ಹಣ ತೊಡಗಿಸಬಹುದು.

ಅನ್ವಯವಾಗುವ ತೆರಿಗೆಗಳು: ಇದರಲ್ಲಿ ಹೂಡಿಕೆ ಮಾಡಿದ ಮೊತ್ತವು ಡೆಬ್ಟ್ ಫಂಡ್‌ನ ತೆರಿಗೆ ನಿಯಮಗಳಿಗೆ ಒಳಪಟ್ಟಿರುತ್ತದೆ. ಇವುಗಳಲ್ಲಿ ೩೬ ತಿಂಗಳ ಅವಧಿಗೆ ಹೂಡಿಕೆ ಮಾಡಿ ಪಡೆದ ಆದಾಯಯನ್ನು ವ್ಯಕ್ತಿಯ ಆದಾಯವೆಂದು ಪರಿಗಣಿಸಲಾಗಿದ್ದು, ಅದರನ್ವಯ ತೆರಿಗೆ ಪಾವತಿಸಬೇಕಾಗುತ್ತದೆ. ೩೬ ತಿಂಗಳ ಅವಧಿಯ ನಂತರ ಸಿಗುವ ಆದಾಯಕ್ಕೆ ಶೇ. ೨೦ ರಷ್ಟು ತೆರಿಗೆಯನ್ನು ಪಾವತಿಸಬೇಕಾಗುತ್ತದೆ.

3. ಮಧ್ಯಸ್ಥಿಕೆ ಮ್ಯೂಚುವಲ್ ಫಂಡ್

3. ಮಧ್ಯಸ್ಥಿಕೆ ಮ್ಯೂಚುವಲ್ ಫಂಡ್

ಆರ್ಬಿಟ್ರೇಜ್ ಮ್ಯೂಚುವಲ್ ಫಂಡ್ (Arbitrage Mutual Fund) ಎಂದು ಕರೆಯಲಾಗುವ ಈ ಮಧ್ಯಸ್ಥಿಕೆ ಮ್ಯೂಚುವಲ್ ಫಂಡ್‌ಗಳಲ್ಲಿ ಹಣವನ್ನು ಇಕ್ವಿಟಿ ಮಾರುಕಟ್ಟೆಯ ಕ್ಯಾಶ ಹಾಗೂ ಡೆರಿವೇಟಿವ್‌ಗಳಲ್ಲಿ ಹೂಡಿಕೆ ಮಾಡಲಾಗುತ್ತದೆ.

ಅವಧಿ: ಇವು ಓಪನ್ ಎಂಡೆಡ್ ಫಂಡ್ ಆಗಿದ್ದು, ಕನಿಷ್ಠ ೧೨ ತಿಂಗಳ ಕಾಲಾವಧಿಗೆ ಇವುಗಳಲ್ಲಿ ಹೂಡಿಕೆ ಕಾಯ್ದುಕೊಂಡರೆ ಇಕ್ವಿಟಿ ಫಂಡ್‌ಗಳಿಗೆ ಅನ್ವಯವಾಗುವ ತೆರಿಗೆ ವಿನಾಯಿತಿಗಳನ್ನು ಪಡೆಯಬಹುದಾಗಿದೆ.

ಪ್ರತಿಫಲ: ಮಾರುಕಟ್ಟೆಯಲ್ಲಿನ ಕ್ಯಾಶ ಮತ್ತು ಡೆರಿವೇಟಿವ್‌ಗಳಲ್ಲಿನ ದರ ವ್ಯತ್ಯಾಸವನ್ನು ಉಪಯೋಗಿಸಿಕೊಂಡು ಇದರಲ್ಲಿ ಆದಾಯ ಸೃಷ್ಟಿಸಲಾಗುತ್ತದೆ. ಹೀಗಾಗಿ ಇವುಗಳಲ್ಲಿನ ಆದಾಯದ ಪ್ರಮಾಣ ಸ್ಪಾಟ್ ಹಾಗೂ ಫ್ಯೂಚರ್ ಮಾರ್ಕೆಟ್‌ಗಳನ್ನು ಆಧರಿಸಿರುತ್ತದೆ. ಇದರಲ್ಲಿ ಆದಾಯ ನಿಶ್ಚಿತವಾಗಿರದಿದ್ದರೂ ರಿಸ್ಕ್ ಪ್ರಮಾಣ ಕಡಿಮೆಯಾಗಿರುತ್ತದೆ. ಪ್ರಸ್ತುತ ಈ ಫಂಡ್ ವಾರ್ಷಿಕ ಶೇ.೬ ರಷ್ಟು ಪ್ರತಿಫಲವನ್ನು ನೀಡುತ್ತಿದ್ದು, ಎಫ್‌ಎಂಪಿಗಳಂತೆ ಇದರಲ್ಲಿ ಸಹ ಆದಾಯವು ನಿಶ್ಚಿತ ಅಥವಾ ಖಾತರಿದಾಯಕವಾಗಿರುವುದಿಲ್ಲ.

ಹಣ ಹಿಂತೆಗೆತ: ಇದು ಓಪನ್ ಎಂಡೆಡ್ ಯೋಜನೆ ಆಗಿರುವುದರಿಂದ ಸುಲಭವಾಗಿ ಹೂಡಿಕೆಯನ್ನು ಹಿಂಪಡೆಯಬಹುದು.

ಅನ್ವಯವಾಗುವ ತೆರಿಗೆಗಳು : ಇದು ಇಕ್ವಿಟಿ ಫಂಡ್ ಆಗಿರುವುದರಿಂದ, ಇಕ್ವಿಟಿಗಳಲ್ಲಿ ಕನಿಷ್ಠ ಶೇ.೬೫ ರಷ್ಟು ಹೂಡಿಕೆಯ ಯೋಜನೆಗಳಂತೆ ತೆರಿಗೆಗಳು ಅನ್ವಯವಾಗುತ್ತವೆ.

4. ಅಂಚೆ ಕಚೇರಿ ನಿಶ್ಚಿತ ಅವಧಿ ಯೋಜನೆ

4. ಅಂಚೆ ಕಚೇರಿ ನಿಶ್ಚಿತ ಅವಧಿ ಯೋಜನೆ

ಅಲ್ಪಾವಧಿಗಾಗಿ ಹೂಡಿಕೆ ಮಾಡಲು ಅಂಚೆ ಕಚೇರಿ ಠೇವಣಿ ಯೋಜನೆಗಳು ಸುರಕ್ಷಿತ ಹಾಗೂ ಉಪಯುಕ್ತವಾಗಿವೆ.
ಅವಧಿ: ಅಂಚೆ ಯೋಜನೆಯಲ್ಲಿ 1 ರಿಂದ 5 ವರ್ಷಗಳ ಕಾಲಾವಧಿಗೆ ಹೂಡಿಕೆ ಮಾಡಬಹುದು. ಬೇಗನೆ ಹಣದ ಅವಶ್ಯಕತೆ ಇದ್ದಲ್ಲಿ ೧ ವರ್ಷದ ನಿಗದಿತ ಅವಧಿಯ ಯೋಜನೆಯಲ್ಲಿ ಹೂಡಿಕೆ ಮಾಡುವುದು ಸೂಕ್ತವಾಗಿದೆ.

ಪ್ರತಿಫಲ : ಅಂಚೆ ಕಚೇರಿ ಯೋಜನೆಗಳಲ್ಲಿ ಹೂಡಿಕೆ ಮಾಡಿದ ಮೊತ್ತದ ಆದಾಯಕ್ಕೆ ಸರಕಾರದ ಖಾತರಿ ಇರುತ್ತದೆ. ಅಲ್ಪಾವಧಿಗೆ ಹೂಡಿಕೆ ಮಾಡುವುದಾದಲ್ಲಿ ಒಂದು ವರ್ಷದ ಅವಧಿಯನ್ನು ಆಯ್ದುಕೊಳ್ಳಬಹುದು. ಇವುಗಳಲ್ಲಿ ವಾರ್ಷಿಕವಾಗಿ ಬಡ್ಡಿಯನ್ನು ಪಾವತಿಸಲಾದರೂ, ತ್ರೈಮಾಸಿಕ ಆಧಾರದಲ್ಲಿ ಬಡ್ಡಿ ಜಮೆ ಮಾಡಲಾಗುತ್ತದೆ. ಪ್ರತಿ ತ್ರೈಮಾಸಿಕಕ್ಕೊಮ್ಮೆ ಬಡ್ಡಿ ದರಗಳನ್ನು ಪರಿಷ್ಕರಣೆ ಮಾಡಲಾಗುತ್ತದೆ ಹಾಗೂ ಆಯಾ ಆರ್ಥಿಕ ವರ್ಷದ ತ್ರೈಮಾಸಿಕದಲ್ಲಿ ಹೂಡಲಾದ ಹೊಸ ಹೂಡಿಕೆಗಳಿಗೆ ಮಾತ್ರ ಹೊಸ ಬಡ್ಡಿ ದರಗಳು ಅನ್ವಯಿಸುತ್ತವೆ. ಪ್ರಸ್ತುತ (ಏಪ್ರಿಲ್-ಜೂನ್ ತ್ರೈಮಾಸಿಕ) ೧ ರಿಂದ ೫ ವರ್ಷಗಳ ಕಾಲಾವಧಿಯ ಹೂಡಿಕೆಗೆ ಶೇ. ೬.೬ ರಿಂದ ೭.೪ ರಷ್ಟು ಬಡ್ಡಿದರ ನಿಗದಿಪಡಿಸಲಾಗಿದೆ.

ಹಣ ಹಿಂತೆಗೆತ: ಇದರಲ್ಲಿ ವಾರ್ಷಿಕವಾಗಿ ಬಡ್ಡಿಯನ್ನು ಪಾವತಿಸಲಾಗುತ್ತದೆ. ಹೂಡಿಕೆ ಮಾಡಿದ ೬ ತಿಂಗಳೊಳಗೆ ಅವಧಿ ಪೂರ್ವ ಹಣ ಹಿಂಪಡೆಯುವಿಕೆಗೆ ಅವಕಾಶವಿಲ್ಲ. ಈ ಅವಧಿಯ ನಂತರ ಬೇಕಾದರೆ ಡೆಪಾಸಿಟ್ ಅನ್ನು ಸರೆಂಡರ್ ಮಾಡಬಹುದಾದರೂ, ಇಳಿಕೆ ಬಡ್ಡಿದರ ಆಧಾರದಲ್ಲಿ ಬಡ್ಡಿಯನ್ನು ಲೆಕ್ಕ ಹಾಕಲಾಗುತ್ತದೆ.

ಅನ್ವಯವಾಗುವ ತೆರಿಗೆಗಳು: ಈ ಯೋಜನೆಗಳಲ್ಲಿನ ಬಡ್ಡಿ ಆದಾಯವನ್ನು ವ್ಯಕ್ತಿಯ ಆದಾಯವೆಂದು ಪರಿಗಣಿಸಲಾಗಿದ್ದು, ಅದರನ್ವಯವೇ ತೆರಿಗೆ ಪಾವತಿಸಬೇಕಾಗುತ್ತದೆ.

 

5. ರಿಕರಿಂಗ್ ಡೆಪಾಸಿಟ್

5. ರಿಕರಿಂಗ್ ಡೆಪಾಸಿಟ್

ನಿಯಮಿತವಾಗಿ ನಿಶ್ಚಿತ ಕಾಲಾವಧಿಯಲ್ಲಿ ಹೂಡಿಕೆ ಮಾಡಿ ಕೊನೆಯಲ್ಲಿ ದೊಡ್ಡ ಮೊತ್ತವನ್ನು ಪಡೆಯುವುದೇ ರಿಕರಿಂಗ್ ಡೆಪಾಸಿಟ್ ಯೋಜನೆಯಾಗಿದೆ. ಬಹುತೇಕ ಬ್ಯಾಂಕುಗಳಲ್ಲಿ ಆನ್‌ಲೈನ್ ಮೂಲಕವೇ ಆರ್‌ಡಿ ಖಾತೆ ತೆರೆಯಬಹುದಾಗಿದೆ.

ಅವಧಿ: 12 ತಿಂಗಳ ಕಾಲಾವಧಿಯಲ್ಲಿ ನಿಯಮಿತವಾಗಿ ಹೂಡಿಕೆ ಮಾಡುವುದಾದಲ್ಲಿ ಬ್ಯಾಂಕಿನ ಆರ್‌ಡಿ ಯೋಜನೆ ಉಪಯುಕ್ತವಾಗಿದೆ. ಕನಿಷ್ಠ ೬ ತಿಂಗಳಿನಿಂದ ಹಿಡಿದು ೧೦ ವರ್ಷಗಳ ಅವಧಿಗೆ ರೆಕರಿಂಗ್ ಡೆಪಾಸಿಟ್ ಯೋಜನೆಯನ್ನು ಆಯ್ದುಕೊಳ್ಳಬಹುದು.

ಪ್ರತಿಫಲ: ಬ್ಯಾಂಕಿನ ಫಿಕ್ಸೆಡ್ ಡೆಪಾಸಿಟ್ ಬಡ್ಡಿ ದರಗಳೇ ರೆಕರಿಂಗ್ ಡೆಪಾಸಿಟ್‌ಗೂ ಅನ್ವಯಿಸುತ್ತವೆ. ಸದ್ಯ ೧೨ ತಿಂಗಳು ಅಥವಾ ಅದಕ್ಕೂ ಮೇಲ್ಪಟ್ಟ ಅವಧಿಯ ಆರ್‌ಡಿ ಹೂಡಿಕೆಗೆ ವಾರ್ಷಿಕ ಶೇ. ೬.೫ ಬಡ್ಡಿದರ ನಿಗದಿಪಡಿಸಲಾಗಿದೆ. ಮೊದಲ ಕಂತು ಪಾವತಿಸುವ ಸಮಯದಲ್ಲಿ ಜಾರಿಯಲ್ಲಿರುವ ಬಡ್ಡಿ ದರವನ್ನು ಯೋಜನೆಗೆ ಅನ್ವಯಿಸಲಾಗುತ್ತದೆ.

ಹಣ ಹಿಂತೆಗೆತ: ಸಾಮಾನ್ಯವಾಗಿ ಆರ್‌ಡಿ ಖಾತೆಯನ್ನು ಒಂದು ತಿಂಗಳೊಳಗೆ ಬಂದ್ ಮಾಡಲು ಆಗುವುದಿಲ್ಲ. ಒಂದು ವೇಳೆ ಒಂದು ತಿಂಗಳೊಳಗೆ ಖಾತೆ ಬಂದ್ ಮಾಡಿದಲ್ಲಿ ಠೇವಣಿದಾರನಿಗೆ ಯಾವುದೇ ಬಡ್ಡಿಯನ್ನು ನೀಡಲಾಗುವುದಿಲ್ಲ ಹಾಗೂ ಹೂಡಿಕೆಯ ಮೊತ್ತ ಮಾತ್ರ ಸಿಗುತ್ತದೆ. ಅವಧಿ ಪೂರ್ವ ಖಾತೆ ನಿಲ್ಲಿಸಿದಲ್ಲಿ ಹೂಡಿಕೆ ಮಾಡಿದ ಅವಧಿಯಲ್ಲಿ ಜಾರಿಯಲ್ಲಿದ್ದ ಬಡ್ಡಿದರದಂತೆ ಬಡ್ಡಿಯನ್ನು ಲೆಕ್ಕ ಹಾಕಲಾಗುತ್ತದೆ.

ಅನ್ವಯವಾಗುವ ತೆರಿಗೆಗಳು: ಈ ಯೋಜನೆಯಲ್ಲಿ ಸಹ ಬಡ್ಡಿ ಆದಾಯವನ್ನು ವ್ಯಕ್ತಿಯ ಆದಾಯವೆಂದೇ ಪರಿಗಣಿಸಲಾಗಿದ್ದು, ಅದರನ್ವಯವೇ ತೆರಿಗೆ ಪಾವತಿಸಬೇಕಾಗುತ್ತದೆ. ಬ್ಯಾಂಕಿನ ಎಲ್ಲಾ ಶಾಖೆಗಳಲ್ಲಿ ಹೂಡಿಕೆ ಮಾಡಲಾದ ಮೊತ್ತದ ಬಡ್ಡಿಯು (ಎಲ್ಲಾ ಹೂಡಿಕೆಯ ಬಡ್ಡಿಗಳನ್ನು ಸೇರಿಸಿ) ೧೦ ಸಾವಿರ ರೂಪಾಯಿ ಮೀರುತ್ತಿದ್ದರೆ ಟಿಡಿಎಸ್ ಕಡಿತ ಮಾಡಲಾಗುತ್ತದೆ.

6. ಡೆಬ್ಟ್ ಮ್ಯೂಚುವಲ್ ಫಂಡ್

6. ಡೆಬ್ಟ್ ಮ್ಯೂಚುವಲ್ ಫಂಡ್

ಕಡಿಮೆ ರಿಸ್ಕ್‌ನೊಂದಿಗೆ ಉತ್ತಮ ಆದಾಯ ಪಡೆಯಲು ಬಯಸುವವರಿಗೆ ಡೆಬ್ಟ್ ಮ್ಯೂಚುವಲ್ ಫಂಡ್‌ಗಳು ಉತ್ತಮ ಆಯ್ಕೆಯಾಗಿವೆ. ಡೆಬ್ಟ್ ಫಂಡ್‌ಗಳಲ್ಲಿನ ಏರಿಳಿತಗಳು ಇಕ್ವಿಟಿ ಫಂಡ್‌ಗಳಿಗಿಂತ ಕಡಿಮೆ ಇರುವುದರಿಂದ ರಿಸ್ಕ್ ಪ್ರಮಾಣವೂ ಕಡಿಮೆಯಾಗಿರುತ್ತದೆ. ಉದಾಹರಣೆಗೆ ನೋಡುವುದಾದರೆ, ಶೇರು ಮಾರುಕಟ್ಟೆಯಲ್ಲಿ ದೊಡ್ಡ ಕುಸಿತ ಉಂಟಾದಾಗ ಇಕ್ವಿಟಿ ಫಂಡ್‌ಗಳ ನೆಟ್ ಅಸೆಟ್ ವ್ಯಾಲ್ಯು (ಎನ್‌ಎವಿ) ನೆಲ ಕಚ್ಚುತ್ತವೆ. ಆದರೆ ಡೆಬ್ಟ್ ಫಂಡ್‌ಗಳಲ್ಲಿ ಈ ಪ್ರಮಾಣ ಅಲ್ಪವಾಗಿರುತ್ತದೆ.

ಒಂದು ವರ್ಷಕ್ಕೂ ಕಡಿಮೆ ಅವಧಿಗೆ ಶೇರು ಮಾರುಕಟ್ಟೆ ಆಧರಿತ ಯೋಜನೆಗಳಲ್ಲಿ ಹೂಡಿಕೆ ಮಾಡುವುದಾದರೆ ಈ ಕೆಳಗಿನ ಎರಡು ವಿಧಾನಗಳು ಸೂಕ್ತವಾಗಿವೆ.

ಅವಧಿ:
ಅಲ್ಪಾವಧಿಯ ಫಂಡ್ : ಇದರಲ್ಲಿ 6 ರಿಂದ 12 ತಿಂಗಳೊಳಗೆ ಪಕ್ವವಾಗುವಂತೆ ಡೆಬ್ಟ್ ಹಾಗೂ ಮನಿ ಮಾರ್ಕೆಟ್ ಯೋಜನೆಗಳಲ್ಲಿ ಹಣ ಹೂಡಲಾಗುತ್ತದೆ.
ಮನಿ ಮಾರ್ಕೆಟ್ ಫಂಡ್ : ಇವುಗಳಲ್ಲಿ ಒಂದು ವರ್ಷದ ಅವಧಿಗಾಗಿ ಮನಿ ಮಾರ್ಕೆಟ್‌ನ ಸೆಕ್ಯುರಿಟಿಗಳಲ್ಲಿ ಹಣ ಹೂಡಲಾಗುತ್ತದೆ.
ಪ್ರತಿಫಲ: ಇದರಲ್ಲಿನ ಆದಾಯಕ್ಕೆ ಯಾವುದೇ ನಿಶ್ಚಿತತೆ ಅಥವಾ ಖಾತರಿ ಇರುವುದಿಲ್ಲ. ಪ್ರಸ್ತುತ ಇವುಗಳಲ್ಲಿ ವಾರ್ಷಿಕ ಶೇ. ೭ ರಷ್ಟು ಪ್ರತಿಫಲವನ್ನು ಪಡೆಯಬಹುದಾಗಿದೆ. ಉತ್ತಮ ಆದಾಯ ಪಡೆಯಲು ಈ ಯೋಜನೆಯ ಅಂಶಗಳನ್ನು ಸರಿಯಾಗಿ ತಿಳಿದುಕೊಂಡು ಹೂಡಿಕೆ ಮಾಡಿ.

ಹಣ ಹಿಂತೆಗೆತ: ಇದರಲ್ಲಿನ ಹೂಡಿಕೆಯನ್ನು ಯಾವಾಗ ಬೇಕಾದರೂ ಹಿಂಪಡೆಯುವ ಅವಕಾಶವಿದೆ.

ಅನ್ವಯವಾಗುವ ತೆರಿಗೆಗಳು: ಈ ಯೋಜನೆಯಲ್ಲಿ 36 ತಿಂಗಳ ಒಳಗಿನ ಅವಧಿಯಲ್ಲಿ ಹೂಡಿಕೆ ಮಾಡಿ ಪಡೆದ ಆದಾಯವನ್ನು ವ್ಯಕ್ತಿಯ ಆದಾಯವೆಂದು ಪರಿಗಣಿಸಲಾಗಿದ್ದು, ಅದರ ಪ್ರಕಾರ ತೆರಿಗೆ ಪಾವತಿಸಬೇಕಾಗುತ್ತದೆ. ಆದರೆ 36 ತಿಂಗಳ ಸಿಗುವ ಆದಾಯಕ್ಕೆ ಶೇ. 20 ರಷ್ಟು ಬಡ್ಡಿಯನ್ನು ಪಾವತಿಸಬೇಕಾಗುವುದು.

 

ಕೊನೆ ಮಾತು

ಕೊನೆ ಮಾತು

ಹೂಡಿಕೆ ಮಾಡಿದ ನಂತರ ಅದರಿಂದ ಬರುವ ಆದಾಯವು ತೆರಿಗೆ ಕಡಿತಕ್ಕೆ ಒಳಪಡುವುದರಿಂದ ಒಟ್ಟು ಪ್ರತಿಫಲ ಕಡಿಮೆ ಇರುತ್ತದೆ ಎಂಬುದು ಗಮನದಲ್ಲಿಡಬೇಕಾದ ಸಂಗತಿಯಾಗಿದೆ. ನೀವು ೧೨ ತಿಂಗಳ ಅವಧಿಗೆ ಮಾತ್ರ ಹೂಡಿಕೆ ಮಾಡಲು ಬಯಸುವಿರಾದರೆ ಆದಷ್ಟೂ ಮೂಲ ಹೂಡಿಕೆಯ ಸುರಕ್ಷತೆಗೆ ಮೊದಲು ಆದ್ಯತೆ ನೀಡಿ. ಹೂಡಿಕೆ ಅವಧಿ ಕಡಿಮೆ ಇದ್ದಷ್ಟೂ ಆದಾಯಕ್ಕಿಂತ ಬಂಡವಾಳದ ಸುರಕ್ಷತೆಯೇ ಮುಖ್ಯವಾಗಿರುತ್ತದೆ ಎಂಬುದನ್ನು ಮರೆಯಬೇಡಿ.

English summary

Where to Invest Money for 1 year period? Fallow these options..

If you have an investment horizon of 12 months or lesser here are a few options to choose from.
Story first published: Saturday, August 25, 2018, 13:50 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X