For Quick Alerts
ALLOW NOTIFICATIONS  
For Daily Alerts

ವಿಮೆ ಏಕೆ ಬೇಕು? ಆನ್‌ಲೈನ್ ಮೂಲಕ ಪಾಲಿಸಿ ಖರೀದಿಸಲು ಪ್ರಮುಖ ಕಾರಣಗಳು

ಹಲವಾರು ಕಾರಣಗಳಿಗಾಗಿ ನಮಗೆ ಜೀವನದಲ್ಲಿ ವಿಮೆ ಬೇಕಾಗುತ್ತದೆ. ಅನಿಶ್ಚಿತತೆಗಳಿಂದ ಕೂಡಿರುವ ಜೀವನದಲ್ಲಿ ಎದುರಾಗಬಹುದಾದ ಸಮಸ್ಯೆಗಳಿಂದ ನಮ್ಮನ್ನು ಹಾಗೂ ನಮ್ಮ ಕುಟುಂಬ ಸದಸ್ಯರನ್ನು ರಕ್ಷಿಸಲು ಆದಷ್ಟು ಬೇಗ ವಿಮಾ ಸುರಕ್ಷೆ ಪಡೆಯುವುದು.

By Siddu
|

ಹಲವಾರು ಕಾರಣಗಳಿಗಾಗಿ ನಮಗೆ ಜೀವನದಲ್ಲಿ ವಿಮೆ ಬೇಕಾಗುತ್ತದೆ. ಅನಿಶ್ಚಿತತೆಗಳಿಂದ ಕೂಡಿರುವ ಜೀವನದಲ್ಲಿ ಎದುರಾಗಬಹುದಾದ ಸಮಸ್ಯೆಗಳಿಂದ ನಮ್ಮನ್ನು ಹಾಗೂ ನಮ್ಮ ಕುಟುಂಬ ಸದಸ್ಯರನ್ನು ರಕ್ಷಿಸಲು ಆದಷ್ಟು ಬೇಗ ವಿಮಾ ಸುರಕ್ಷೆ ಪಡೆಯುವುದು ಅಗತ್ಯವಾಗಿದೆ. ವಿಮಾ ಯೋಜನೆ ಹೊಂದುವುದರಿಂದ ಆಕಸ್ಮಿಕ ಸಂದರ್ಭಗಳಲ್ಲಿ ಸುರಕ್ಷೆ ದೊರಕುವುದು ಅಷ್ಟೆ ಅಲ್ಲದೆ ಮನಸ್ಸಿಗೆ ನೆಮ್ಮದಿಯೂ ಇರುತ್ತದೆ. ಅದರಲ್ಲೂ ಹಿರಿಯ ನಾಗರಿಕರು ವಿಮೆ ಹೊಂದಿರುವುದು ಅತಿ ಅವಶ್ಯ. ನಿವೃತ್ತ ಜೀವನದಲ್ಲಿ ಹಿರಿಯ ನಾಗರಿಕರು ತಮ್ಮ ಹಾಗೂ ತಮ್ಮ ಕುಟುಂಬಸ್ಥರ ಜವಾಬ್ದಾರಿಯನ್ನು ನಿರ್ವಹಿಸಲು ಪರ್ಯಾಯ ಆದಾಯದ ರೂಪದಲ್ಲಿ ವಿಮೆ ಸಹಾಯ ಮಾಡುತ್ತದೆ.

ವಿಮೆ ಏಕೆ ಬೇಕು? ಆನ್‌ಲೈನ್ ಮೂಲಕ ಪಾಲಿಸಿ ಖರೀದಿಸಲು ಪ್ರಮುಖ ಕಾರಣಗಳು

ಅಲ್ಲದೆ ವಿಮಾ ಪಾಲಿಸಿಗಳ ಮೂಲಕ ಸರಿಯಾದ ಹೂಡಿಕೆ ಯೋಜನೆ ರೂಪಿಸಿ ನೆಮ್ಮದಿಯ ನಿವೃತ್ತ ಜೀವನ ಕಳೆಯುವಂತೆ ಪ್ಲ್ಯಾನ್ ಮಾಡಬಹುದು. ಜೀವ ವಿಮಾ ಪಾಲಿಸಿಯ ಮೇಲೆ ಅವಶ್ಯ ಬಿದ್ದಾಗ ಸಾಲ ಪಡೆಯುವ ಸೌಲಭ್ಯ ಇರುವುದು ಜೀವ ವಿಮೆಯ ಮತ್ತೊಂದು ವಿಶೇಷವಾಗಿದೆ. ಜೀವ ವಿಮೆ ನಿಮಗೆ ಸುವಿಮೆ ಎಂದರೇನು? ಭಾರತದಲ್ಲಿ ಲಭ್ಯವಿರುವ ವಿವಿಧ ವಿಮಾ ಯೋಜನೆಗಳು ಯಾವುವು?

ಹೀಗಾಗಿ ಮಾರುಕಟ್ಟೆಯಲ್ಲಿ ಇರುವ ಹಲವಾರು ರೀತಿಯ ವಿಮಾ ಯೋಜನೆಗಳಲ್ಲಿ ನಿಮಗೆ ಹೊಂದುವಂತಹ ಸೂಕ್ತ ವಿಮಾ ಪಾಲಿಸಿಯನ್ನು ಆಯ್ಕೆ ಮಾಡಿಕೊಳ್ಳುವುದು ಅಗತ್ಯ.
ವಿಮೆ ಕೊಳ್ಳುವ ಮೊದಲು ಕೆಲ ಪ್ರಮುಖ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದು ಅಗತ್ಯ. "ನಿಮಗೆ ವಿಮೆ ಏಕೆ ಬೇಕು?" , "ಎಷ್ಟು ಮೊತ್ತದ ವಿಮೆ ನಿಮಗೆ ಅವಶ್ಯಕತೆ ಇದೆ?" ಹಾಗೂ "ಸಂಪೂರ್ಣ ಜೀವನ ವಿಮೆ ಅಥವಾ ಅವಧಿ ಜೀವ ವಿಮೆ ಬೇಕಾ?" ಈ ಮೂರು ಪ್ರಶ್ನೆಗಳಿಗೆ ಸೂಕ್ತ ಉತ್ತರವನ್ನು ನೀವು ಕಂಡುಕೊಂಡರೆ ಇದರ ಆಧಾರದ ಮೇಲೆ ವಿಮೆ ಖರೀದಿಸಬಹುದು.

ವಿಮಾ ಕ್ಷೇತ್ರದ ಅಗಾಧ ಬೆಳವಣಿಗೆ
ಆನ್‌ಲೈನ್ ಇನ್ಸೂರೆನ್ಸ್ ವಹಿವಾಟಿನ ಬಗ್ಗೆ ತಿಳಿದುಕೊಳ್ಳುವುದಕ್ಕಿಂತ ಮೊದಲು ವಿಮಾ ಕ್ಷೇತ್ರದ ಕೆಲ ಪ್ರಮುಖ ಅಂಕಿ ಅಂಶಗಳನ್ನು ತಿಳಿಯೋಣ.

೩೬೦ ಮಿಲಿಯನ್ ಇನ್ಸೂರೆನ್ಸ್ ಪಾಲಿಸಿಗಳನ್ನು ಹೊಂದಿರುವ ಭಾರತದ ವಿಮಾ ಕ್ಷೇತ್ರ ಜಗತ್ತಿನಲ್ಲಿಯೇ ಅತಿ ದೊಡ್ಡದಾಗಿದೆ. ಇದು ಮುಂದಿನ ೫ ವರ್ಷಗಳಲ್ಲಿ ಶೇ.೧೨ ರಿಂದ ೧೫ ರಷ್ಟು ಸಂಯುಕ್ತ ವಾರ್ಷಿಕ ಬೆಳವಣಿಗೆ ದರದಲ್ಲಿ ಅಭಿವೃದ್ಧಿ ಹೊಂದುವ ಸಾಧ್ಯತೆಗಳಿವೆ. ೨೦೨೦ ರೊಳಗೆ ವಿಮಾ ಕ್ಷೇತ್ರವನ್ನು ಶೇ.೫ ರಷ್ಟು ಹೆಚ್ಚಿಸುವ ಗುರಿಯನ್ನು ಕಂಪನಿಗಳು ಹೊಂದಿವೆ.
ಸದ್ಯ ೬೦ ಬಿಲಿಯನ್ ಡಾಲರ್‌ನಷ್ಟು ವ್ಯವಹಾರ ಹೊಂದಿರುವ ಭಾರತದ ವಿಮಾ ಕ್ಷೇತ್ರ ಬರುವ ೧೦ ವರ್ಷಗಳಲ್ಲಿ ನಾಲ್ಕು ಪಟ್ಟು ಬೆಳವಣಿಗೆ ಹೊಂದುವ ಸಾಧ್ಯತೆಗಳಿವೆ. ಈ ಅವಧಿಯಲ್ಲಿ ವಿಮಾ ವಲಯದ ಒಟ್ಟು ವಹಿವಾಟು ೧೬೦ ಬಿಲಿಯನ್ ಡಾಲರ್ ದಾಟುವ ನಿರೀಕ್ಷೆ ಇದೆ.

ಸದ್ಯ ಭಾರತದಲ್ಲಿ ಸಾಮಾನ್ಯ ವಿಮೆಯ ವಹಿವಾಟು ವಾರ್ಷಿಕ ೭೮ ಸಾವಿರ ಕೋಟಿ ರೂಪಾಯಿ ಮೊತ್ತದ ಪ್ರೀಮಿಯಂಗಳಷ್ಟಿದ್ದು, ಇದು ವಾರ್ಷಿಕವಾಗಿ ಶೇ.೧೭ ರ ದರದಲ್ಲಿ ಬೆಳವಣಿಗೆ ಕಾಣುತ್ತಿದೆ.
ಇಷ್ಟು ವೇಗದಲ್ಲಿ ಅಗಾಧವಾಗಿ ವಿಸ್ತಾರಗೊಳ್ಳುತ್ತಿರುವ ವಿಮಾ ಕ್ಷೇತ್ರ ತನ್ನ ಮೂಲಭೂತ ಸೇವಾ ಸೌಕರ್ಯಗಳನ್ನು ಶೀಘ್ರವಾಗಿ ಮೇಲ್ದರ್ಜೆಗೇರಿಸಿಕೊಳ್ಳಬೇಕಿದೆ. ಇಷ್ಟೊಂದು ಬೃಹತ್ ಉದ್ಯಮವನ್ನು ಗ್ರಾಹಕ ಸ್ನೇಹಿಯಾಗಿ ಹಾಗೂ ಅದೇ ಸಮಯದಲ್ಲಿ ಲಾಭಕರವಾಗಿ ನಡೆಸಬೇಕಾದರೆ ಎಲ್ಲ ವ್ಯವಹಾರಗಳನ್ನು ಆನ್‌ಲೈನ್ ಮೂಲಕ ನಡೆಸುವುದೊಂದೇ ದಾರಿ.
ಹೀಗಾಗಿಯೇ ಭಾರತದಲ್ಲಿ ಬಹುತೇಕ ವಿಮಾ ಕಂಪನಿಗಳು ತಮ್ಮ ಎಲ್ಲ ಯೋಜನೆಗಳು ಆನ್‌ಲೈನ್ ಮೂಲಕ ದೊರಕುವಂತೆ ವ್ಯವಸ್ಥೆ ಮಾಡಿಕೊಂಡಿದ್ದು, ಮತ್ತಷ್ಟು ಗ್ರಾಹಕರನ್ನು ಸೆಳೆಯಲು ಸಜ್ಜಾಗಿ ನಿಂತಿವೆ.

ಆನ್‌ಲೈನ್ ಮೂಲಕ ಪಾಲಿಸಿ ಖರೀದಿಸಲು ಪ್ರಮುಖ ಕಾರಣಗಳು

ಆನ್‌ಲೈನ್ ಮೂಲಕ ವಿಮೆ ಕೊಳ್ಳುವ ಅವಕಾಶ ಸಿಕ್ಕಿರುವುದು ಮಾರುಕಟ್ಟೆಯಲ್ಲಿನ ಇ-ಕಾಮರ್ಸ್ ಅಲೆಯಿಂದ ಉಂಟಾದ ಒಂದು ಕ್ರಾಂತಿಕಾರಿ ಬದಲಾವಣೆ ಎನ್ನಬಹುದು. ಗ್ರಾಹಕರಿಗೆ ಇದರಿಂದ ಹಲವಾರು ರೀತಿಯ ಅನುಕೂಲತೆಗಳು ಸಿಗುತ್ತಿವೆ. ಅನ್‌ಲೈನ್ ಮೂಲಕ ಪಾಲಿಸಿ ಖರೀದಿಸಿದಾಗ ಸಿಗುವ ಹೆಚ್ಚುವರಿ ಲಾಭಗಳೇನು ನೋಡೋಣ.

ಪಾಲಿಸಿಯ ಎಲ್ಲ ವಹಿವಾಟು, ಅರ್ಜಿ ಸಲ್ಲಿಕೆ ಪ್ರಕ್ರಿಯೆ, ಅರ್ಜಿಯ ಸ್ಥಿತಿ ಮುಂತಾದ ಎಲ್ಲ ವಿಷಯಗಳನ್ನು ಈಗ ಆನ್‌ಲೈನ್ ಮೂಲಕವೇ ಪರಿಶೀಲಿಸಬಹುದಾಗಿದೆ. ಬ್ಯಾಂಕ್ ಅಥವಾ ವಿಮಾ ಕಂಪನಿಗೆ ಹೋಗುವ ರಗಳೆ ತಪ್ಪಿದ್ದು ಸಾಕಷ್ಟು ಸಮಯ ಉಳಿತಾಯವಾಗುತ್ತಿದೆ.

ಆನ್‌ಲೈನ್ ಮೂಲಕ ಖರೀದಿಸಲಾಗುವ ಪಾಲಿಸಿಗಳ ಪ್ರೀಮಿಯಂ ದರ ಆಫ್‌ಲೈನ್ ಪಾಲಿಸಿಗಳಿಗಿಂತ ಕಡಿಮೆಯಾಗಿರುವುದು ವಿಶೇಷವಾಗಿದೆ. ಕಚೇರಿಯ ಮೂಲಕ ವಹಿವಾಟು ನಡೆಸಿದಾಗ ಆಗುವ ಖರ್ಚು ಉಳಿತಾಯವಾಗುವುದರಿಂದ ಕಂಪನಿಗಳು ಸಾಮಾನ್ಯವಾಗಿ ಆನ್‌ಲೈನ್ ಪಾಲಿಸಿಗಳ ಪ್ರೀಮಿಯಂನಲ್ಲಿ ರಿಯಾಯಿತಿ ನೀಡುತ್ತವೆ. ಆನ್‌ಲೈನ್ ಮೂಲಕ ಪಾಲಿಸಿ ಖರೀದಿಸುವಾಗ ಗ್ರಾಹಕ ಸ್ವತಃ ವಿವಿಧ ವಿಮಾ ಯೋಜನೆಗಳನ್ನು ಪರಿಶೀಲಿಸಿ ಯಾವ ಪಾಲಿಸಿ ತನಗೆ ಸೂಕ್ತ ಎಂಬುದನ್ನು ಸರಿಯಾಗಿ ನಿರ್ಧರಿಸಲು ಸಾಧ್ಯವಾಗುತ್ತದೆ. ಯಾವುದೇ ಆತುರವಿಲ್ಲದೆ ನಿಖರವಾಗಿ ನಿರ್ಧಾರ ಕೈಗೊಳ್ಳಲು ಇದು ಸಹಕಾರಿಯಾಗಿದೆ. ಯಾವುದೇ ವಿಮಾ ಕಂಪನಿಯ ವೆಬ್‌ಸೈಟ್ ತೆರೆದು ಅವರ ಎಲ್ಲ ಪ್ಲ್ಯಾನ್‌ಗಳು, ಅವುಗಳ ವೈಶಿಷ್ಟ್ಯ, ನಿರ್ದಿಷ್ಟ ಪಾಲಿಸಿಯ ಕಾರ್ಯನಿರ್ವಹಣೆ ಹೀಗೆ ಪ್ರತಿಯೊಂದು ಅಂಶವನ್ನು ಕೂಲಂಕುಶವಾಗಿ ಪರಿಶೀಲಿಸಿ ಸರಿಯಾದ ನಿರ್ಧಾರಕ್ಕೆ ಬರಲು ಗ್ರಾಹಕರಿಗೆ ಅವಕಾಶವಿದೆ.

ಆನ್‌ಲೈನ್ ನಲ್ಲಿ ಸಾಕಷ್ಟು ಸಂಶೋಧನೆ ನಡೆಸಿದ ನಂತರ, ತನಗೆ ಸರಿ ಹೊಂದುವ ಉತ್ತಮವಾದ ಪಾಲಿಸಿಯನ್ನು ಆಯ್ಕೆ ಮಾಡುವ ಗ್ರಾಹಕ, ಸ್ವತಃ ಪಾಲಿಸಿಗಾಗಿ ಅರ್ಜಿ ಭರ್ತಿ ಮಾಡಿ ಸಲ್ಲಿಸಬಹುದು. ಇದರಿಂದ ವಿಮೆ ಕೊಳ್ಳುವ ಸಂಪೂರ್ಣ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯುತ್ತದೆ.

ಬಹುತೇಕ ಎಲ್ಲ ವಿಮಾ ಕಂಪನಿಗಳ ವೆಬ್‌ಸೈಟ್‌ಗಳು ಅತ್ಯಂತ ಗ್ರಾಹಕ ಸ್ನೇಹಿಯಾಗಿವೆ. ಗ್ರಾಹಕರು ಎಲ್ಲ ಪ್ಲ್ಯಾನ್‌ಗಳನ್ನು ನೋಡಿ ತಿಳಿದುಕೊಂಡು ತಮ್ಮ ದಾಖಲೆಗಳನ್ನು ಅರ್ಜಿಯೊಂದಿಗೆ ಸುರಕ್ಷಿತವಾಗಿ ಆನ್‌ಲೈನ್ ಮೂಲಕವೇ ಅಪ್‌ಲೋಡ್ ಮಾಡಬಹುದು. ಇದರಿಂದ ದಾಖಲೆಗಳನ್ನು ಝೆರಾಕ್ಸ್ ಮಾಡಿಸುವುದು, ಅವನ್ನು ಕೊರಿಯರ್ ಮೂಲಕ ಕಳುಹಿಸುವುದು ಮುಂತಾದ ಕೆಲಸಗಳು ತಪ್ಪಿದಂತಾಗಿದ್ದು ಸಾಕಷ್ಟು ಸಮಯವೂ ಉಳಿತಾಯವಾಗುತ್ತದೆ.

ಆನ್‌ಲೈನ್‌ನಲ್ಲಿ ಲಭ್ಯವಿರುವ ಹಲವಾರು ಫೋರಂಗಳಲ್ಲಿ ವಿಮಾ ಯೋಜನೆಗಳ ಬಗ್ಗೆ ಚರ್ಚೆ ನಡೆಯುತ್ತಿರುತ್ತದೆ. ಅಲ್ಲದೇ ಅನೇಕ ಗ್ರಾಹಕರು ನಿರ್ದಿಷ್ಟ ಕಂಪನಿ ಅಥವಾ ಪಾಲಿಸಿಯ ಬಗ್ಗೆ ತಮ್ಮ ಅಭಿಪ್ರಾಯವನ್ನು ಸಹ ಹಂಚಿಕೊಂಡಿರುತ್ತಾರೆ. ಇವನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿದಲ್ಲಿ ನಿರ್ದಿಷ್ಟ ವಿಮಾ ಪಾಲಿಸಿಯ ಗುಣಮಟ್ಟದ ಬಗ್ಗೆ ಸರಿಯಾದ ನಿರ್ಧಾರ ತಳೆಯಲು ಸಹಕಾರಿಯಾಗುತ್ತದೆ.

ಅರ್ಜಿ ಸಲ್ಲಿಕೆ ಸಂದರ್ಭದಲ್ಲಿ ತಪ್ಪು ಮಾಹಿತಿ ನೀಡುವ ಕಾರಣದಿಂದಲೇ ಬಹುತೇಕ ಇನ್ಸೂರೆನ್ಸ್ ಕ್ಲೇಮ್‌ಗಳು ರಿಜೆಕ್ಟ್ ಆಗುತ್ತವೆ. ಅಲ್ಲದೆ ಅನೇಕ ಸಂದರ್ಭಗಳಲ್ಲಿ ಪಾಲಿಸಿಯ ಮಾಹಿತಿ ಹಾಗೂ ಅದರಿಂದ ಸಿಗುವ ಲಾಭಗಳ ಬಗ್ಗೆ ಪಾಲಿಸಿದಾರನಿಗೆ ಗೊತ್ತೇ ಇರುವುದಿಲ್ಲ. ಹೀಗಾಗಿ ಆನ್‌ಲೈನ್‌ನಲ್ಲಿ ಪಾಲಿಸಿಗೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ಡೌನ್‌ಲೋಡ್ ಮಾಡಿ ಪರಿಶೀಲಿಸಬಹುದು.

ಆನ್‌ಲೈನ್ ಮೂಲಕ ಪಾಲಿಸಿ ಖರೀದಿಸುವ ಸಂದರ್ಭದಲ್ಲಿ ಗ್ರಾಹಕ ಯಾವುದೇ ಏಜೆನ್ಸಿ ಅಥವಾ ವ್ಯಕ್ತಿಯನ್ನು ಅವಲಂಬಿಸುವ ಸಂದರ್ಭವೇ ಉಂಟಾಗುವುದಿಲ್ಲ. ಗ್ರಾಹಕ ಸ್ವಯಂ ಎಲ್ಲ ನಿರ್ಧಾರಗಳನ್ನು ತಳೆಯಬಹುದು. ವೆಬ್‌ಸೈಟ್ ಅಥವಾ ದೂರವಾಣಿ ಮೂಲಕ ಪಾಲಿಸಿಯ ಎಲ್ಲ ವಹಿವಾಟನ್ನು ನೇರವಾಗಿ ತಾವೇ ನಡೆಸಬಹುದು.

ಭಾರತದಲ್ಲಿ ಸದ್ಯ ಬೆಳೆಯುತ್ತಿರುವ ಮಧ್ಯಮ ವರ್ಗ, ಯುವ ಜನತೆ ಹಾಗೂ ಅವರಲ್ಲಿ ವಿಮೆಯ ಅವಶ್ಯಕತೆಯ ಬಗೆಗಿನ ಜಾಗೃತಿ, ನಿವೃತ್ತ ಜೀವನದ ಉಪಾಯ ಯೋಜನೆ ಮುಂತಾದುವುಗಳ ಬಲದಿಂದ ದೇಶದ ವಿಮಾ ವಲಯ ಅಗಾಧ ಬೆಳವಣಿಗೆ ಕಾಣುತ್ತಿದೆ. ಇದರ ಜೊತೆಗೆ ಇಂಟರನೆಟ್ ಕ್ರಾಂತಿ ಸಹ ವಿಮಾ ವಲಯದ ಬೆಳವಣಿಗೆಗೆ ಸಹಕಾರಿಯಾಗಿದ್ದು, ಜನತೆ ಇದೆಲ್ಲದರ ಸದುಪಯೋಗ ಪಡೆದುಕೊಳ್ಳಬೇಕಿದೆ.

English summary

Why do you need Insurance? Important Reasons to Buy Policy Online

There are a number of reasons why you feel the need of insurance in life. Given that life is full of uncertainties.
Story first published: Wednesday, August 1, 2018, 16:32 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X