For Quick Alerts
ALLOW NOTIFICATIONS  
For Daily Alerts

ಸುಕನ್ಯಾ ಸಮೃದ್ಧಿ ಖಾತೆ, ಎಫ್‌ಡಿ, ಆರ್‌ಡಿ, ಪಿಪಿಎಫ್, ಎಂಎಫ್, ವಿಮೆ: ನಿಮ್ಮ ಮಗುವಿಗೆ ಯಾವುದು ಸೂಕ್ತ ಆಯ್ಕೆ?

|

ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸುವುದು, ಅವರು ಬಯಸಿದ ಕ್ಷೇತ್ರದಲ್ಲಿ ಅವರು ಯಶಸ್ವಿಯಾಗುವಂತೆ ಮಾರ್ಗದರ್ಶನ ನೀಡುವುದು, ಅವರ ವಿವಾಹ ನೆರವೇರಿಸಿ ಜೀವನ ಸೆಟಲ್ ಮಾಡುವುದು ಹೀಗೆ ಮಕ್ಕಳ ವಿಷಯದಲ್ಲಿ ಹಲವಾರು ಜವಾಬ್ದಾರಿಗಳನ್ನು ಪಾಲಕರು ನಿರ್ವಹಿಸಬೇಕಾಗುತ್ತದೆ. ಕೇವಲ ಪಾಲನೆ, ಪೋಷಣೆ ಮಾತ್ರವಲ್ಲ ಇದಕ್ಕೆಲ್ಲ ಸಾಕಷ್ಟು ಹಣವನ್ನೂ ಖರ್ಚು ಮಾಡಬೇಕಾಗುತ್ತದೆ.

ಶಿಕ್ಷಣ ಕ್ಷೇತ್ರ ಅತ್ಯಂತ ದುಬಾರಿಯಾಗುತ್ತಿರುವ ಈ ದಿನಮಾನಗಳಲ್ಲಿ ಶೈಕ್ಷಣಿಕ ಖರ್ಚು ವೆಚ್ಚಗಳ ಹಣದುಬ್ಬರ ಸಾಮಾನ್ಯ ಹಣದುಬ್ಬರವನ್ನೂ ಮೀರಿ ಮುನ್ನಡೆಯುತ್ತಿದೆ. ಇಂಥ ಸ್ಥಿತಿಯಲ್ಲಿ ಮಕ್ಕಳಿಗೆ ಶಿಕ್ಷಣ ಕೊಡಿಸಲು ಸೂಕ್ತವಾದ ಆರ್ಥಿಕ ಯೋಜನೆ ಹಾಕಿಕೊಳ್ಳುವುದು ಅಗತ್ಯವಾಗುತ್ತದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಹಲವಾರು ಹೂಡಿಕೆ ವಿಧಾನಗಳ ಪೈಕಿ ನಿಮಗೆ ಸರಿ ಹೊಂದುವ ಯೋಜನೆಯನ್ನು ಆಯ್ದುಕೊಂಡು ಆರ್ಥಿಕ ಯೋಜನೆಯನ್ನು ತಯಾರಿಸಬಹುದು. ಇನ್ನು ಹೆಣ್ಣು ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕಾಗಿಯೇ 'ಬೇಟಿ ಬಚಾವೊ ಬೇಟಿ ಪಡಾವೊ' ಕಾರ್ಯಕ್ರಮದ ಅಂಗವಾಗಿ ಕೇಂದ್ರ ಸರಕಾರ ಉಳಿತಾಯ ಯೋಜನೆಯನ್ನು ಜಾರಿಗೆ ತಂದಿದೆ.

 

ಒಟ್ಟಾರೆಯಾಗಿ ಮಾರುಕಟ್ಟೆಯಲ್ಲಿ ಯಾವ ಪ್ರಮುಖ ರೀತಿಯ ಉಳಿತಾಯ ಹಾಗೂ ಹೂಡಿಕೆ ಯೋಜನೆಗಳು ಚಾಲ್ತಿಯಲ್ಲಿವೆ ಎಂಬುದನ್ನು ಈ ಅಂಕಣದಲ್ಲಿ ತಿಳಿಸಲಾಗಿದೆ. ಅದರಲ್ಲಿ ನಿಮಗೆ ಸರಿಹೊಂದುವ ಯೋಜನೆಗಳನ್ನು ಆಯ್ಕೆ ಮಾಡಿಕೊಂಡು ಆರ್ಥಿಕ ಯೋಜನೆಯನ್ನು ತಯಾರಿಸಿಕೊಳ್ಳಬಹುದು.

ಪ್ರಮುಖ ಉಳಿತಾಯ ಹಾಗೂ ಹೂಡಿಕೆ ಯೋಜನೆಗಳು ಮತ್ತು ಅವುಗಳ ವೈಶಿಷ್ಟ್ಯಗಳು:

ಸುಕನ್ಯಾ ಸಮೃದ್ಧಿ ಯೋಜನೆ

ಸುಕನ್ಯಾ ಸಮೃದ್ಧಿ ಯೋಜನೆ

ಸಣ್ಣ ಉಳಿತಾಯದ ಸುಕನ್ಯಾ ಸಮೃದ್ಧಿ ಯೋಜನೆ (ಎಸ್‌ಎಸ್‌ವೈ) ಯನ್ನು ವಿಶೇಷವಾಗಿ ಹೆಣ್ಣು ಮಕ್ಕಳ ಉನ್ನತ ವಿದ್ಯಾಭ್ಯಾಸ ಹಾಗೂ ಅವರ ವಿವಾಹದ ಖರ್ಚುಗಳನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗಿದೆ. ಹೆಣ್ಣು ಮಗುವಿಗೆ 10 ವರ್ಷ ಮುಗಿಯುವ ಮುನ್ನ ಮಗುವಿನ ಪಾಲಕರು ಅಥವಾ ಅಧಿಕೃತ ಪೋಷಕರು ಮಗುವಿನ ಹೆಸರಲ್ಲಿ ಈ ಖಾತೆ ಆರಂಭಿಸಬಹುದು. ಎಸ್‌ಎಸ್‌ವೈ ಖಾತೆಯನ್ನು ಖಾತೆ ಆರಂಭಿಸಿದ 21 ವರ್ಷಗಳ ನಂತರ ನಿಲ್ಲಿಸಬಹುದು. ಆದರೂ ಹೆಣ್ಣು ಮಗುವಿಗೆ 18 ವರ್ಷವಾಗಿ ಮದುವೆಯಾದ ಸಂದರ್ಭದಲ್ಲಿ ಸಹಜವಾಗಿಯೇ ಖಾತೆಯನ್ನು ಬಂದ್ ಮಾಡಲು ಅವಕಾಶವಿದೆ.

ಪ್ರಸ್ತುತ ಒಂದು ಆರ್ಥಿಕ ವರ್ಷದಲ್ಲಿ ಸುಕನ್ಯಾ ಸಮೃದ್ಧಿ ಖಾತೆಗೆ ಗರಿಷ್ಠ ರೂ. 1 ಲಕ್ಷ 50 ಸಾವಿರ ಜಮೆ ಮಾಡಬಹುದು. ಹೂಡಿದ ಮೊತ್ತ, ಅದಕ್ಕೆ ಬರುವ ಬಡ್ಡಿ ಹಾಗೂ ಪಕ್ವತಾ ಮೊತ್ತಗಳು ಆದಾಯ ತೆರಿಗೆ ಕಾಯ್ದೆ ೮೦ಸಿ ಪ್ರಕಾರ ತೆರಿಗೆ ವಿನಾಯಿತಿಗೆ ಅರ್ಹವಾಗಿವೆ.

ಕೇಂದ್ರ ಸರಕಾರ ಪ್ರತಿ ತ್ರೈಮಾಸಿಕ್ಕೊಮ್ಮೆ ಎಸ್‌ಎಸ್‌ವೈ ಬಡ್ಡಿ ದರಗಳನ್ನು ಪರಿಷ್ಕರಿಸುತ್ತದೆ ಹಾಗೂ ಸಾಮಾನ್ಯವಾಗಿ ಇದರ ಬಡ್ಡಿ ದರ ಎನ್‌ಎಸ್‌ಸಿ, ಕೆವಿಪಿ, ಪಿಪಿಎಫ್ ಮುಂತಾದ ಯೋಜನೆಗಳಿಗಿಂತಲೂ ಹೆಚ್ಚಾಗಿರುತ್ತದೆ. ಸದ್ಯ ಈ ಯೋಜನೆಯ ಬಡ್ಡಿದರ ಶೇ. 8.5 ರಷ್ಟಿದೆ. ಇದೇ ಬಡ್ಡಿದರ ಮುಂದುವರಿಯುತ್ತದೆ ಎಂದಿಟ್ಟುಕೊಂಡು, ಪ್ರತಿ ವರ್ಷದ ಆರಂಭದಲ್ಲಿ ಖಾತೆಗೆ 1 ಲಕ್ಷ 50 ಸಾವಿರ ರೂ. ಗಳನ್ನು 15 ವರ್ಷಗಳವರೆಗೆ ಜಮೆ ಮಾಡುತ್ತ ಹೋದಲ್ಲಿ 21 ವರ್ಷದ ಕೊನೆಯಲ್ಲಿ ಒಟ್ಟು 74,96,802 ರೂ. ಗಳಷ್ಟು ದೊಡ್ಡ ಮೊತ್ತ ಖಾತೆಯಲ್ಲಿ ಜಮೆಯಾಗುತ್ತದೆ.

ಸುಕನ್ಯಾ ಸಮೃದ್ಧಿ ಖಾತೆ ತೆರೆಯುವುದು ಹೇಗೆ?

ಬ್ಯಾಂಕ್ ಫಿಕ್ಸೆಡ್ ಡಿಪಾಸಿಟ್ (ಎಫ್‌ಡಿ)
 

ಬ್ಯಾಂಕ್ ಫಿಕ್ಸೆಡ್ ಡಿಪಾಸಿಟ್ (ಎಫ್‌ಡಿ)

ಬ್ಯಾಂಕುಗಳ ಫಿಕ್ಸೆಡ್ ಡಿಪಾಸಿಟ್‌ಗಳಲ್ಲಿ ಹಣ ಹೂಡಬೇಕಾದರೆ ನಿಮ್ಮ ಕೈಯಲ್ಲಿ ದೊಡ್ಡ ಮೊತ್ತದ ಗಂಟು ಇರಬೇಕಾಗುತ್ತದೆ. ಎಫ್‌ಡಿಗಳು ಭಾರತೀಯರ ಅತಿ ಅಚ್ಚು ಮೆಚ್ಚಿನ ಹೂಡಿಕೆ ವಿಧಾನವಾಗಿವೆ. ಅತಿ ಸುಲಭವಾಗಿ ಪಡೆಯಬಹುದಾದ ಎಫ್‌ಡಿ ಯೋಜನೆಗಳ ಬಗ್ಗೆ ಗ್ರಾಹಕರ ವಿಶ್ವಾಸ ಗಳಿಸುವಲ್ಲಿ ಬ್ಯಾಂಕುಗಳು ಸಫಲವಾಗಿವೆ. ಆದರೆ ಎಫ್‌ಡಿಗಳಲ್ಲಿನ ಹೂಡಿಕೆಗೆ ಹಣದುಬ್ಬರದಿಂದ ರಕ್ಷಣೆ ಪಡೆಯುವುದು ಸಾಧ್ಯವಾಗದು. ಹಾಗೆಯೇ ಇದರಲ್ಲಿನ ಹೂಡಿಕೆಗೆ ತೆರಿಗೆ ಪಾವತಿ ಕಡ್ಡಾಯವಾಗಿದೆ.

ತೆರಿಗೆ ಹಾಗೂ ಹಣದುಬ್ಬರಗಳನ್ನು ಪರಿಗಣಿಸಿದರೆ ಶೇ.6 ರಿಂದ 7 ರ ಬಡ್ಡಿದರದ ಫಿಕ್ಸೆಡ್ ಡಿಪಾಸಿಟ್‌ಗಳು ನಿಮ್ಮ ಮಗಳ ಉನ್ನತ ವಿದ್ಯಾಭ್ಯಾಸ ಹಾಗೂ ವಿವಾಹಗಳ ಖರ್ಚಿಗೆ ಅಷ್ಟೊಂದು ಸೂಕ್ತವಾಗಲಾರವು. ಹೀಗಾಗಿ ಕೈಯಲ್ಲಿರುವ ಹೆಚ್ಚುವರಿ ಮೊತ್ತವನ್ನು ಮಾತ್ರ ಎಫ್‌ಡಿಗಳಲ್ಲಿ ಹೂಡಿಕೆ ಮಾಡಿ ಬೇಕಾದಾಗ ಹಿಂಪಡೆಯಬಹುದು.

ರಿಕರಿಂಗ್ ಡಿಪಾಸಿಟ್ (ಆರ್‌ಡಿ)

ರಿಕರಿಂಗ್ ಡಿಪಾಸಿಟ್ (ಆರ್‌ಡಿ)

ರಿಕರಿಂಗ್ ಡಿಪಾಸಿಟ್ ಎಂಬುದು ಎಫ್‌ಡಿಯ ರೂಪಾಂತರಿತ ಯೋಜನೆಯೇ ಆಗಿದೆ. ಇದರಲ್ಲಿ ಒಮ್ಮೆಲೇ ದೊಡ್ಡ ಮೊತ್ತದ ಬದಲಾಗಿ ನಿಯಮಿತವಾಗಿ ಸಣ್ಣ ಮೊತ್ತದ ಹಣವನ್ನು ಕೂಡಿಸುತ್ತ ಹೋಗಬಹುದು. ಪ್ರತಿ ತಿಂಗಳು ಉಳಿತಾಯದ ಹಣ ಹೂಡಿಕೆ ಮಾಡಲು ಆರ್‌ಡಿ ಸೂಕ್ತವಾಗಿದೆ. ಒಮ್ಮೆಲೇ ದೊಡ್ಡ ಮೊತ್ತದ ಹೂಡಿಕೆ ಸಾಧ್ಯವಾಗದಿರುವವರು ಸಣ್ಣ ಕಂತುಗಳಲ್ಲಿ ಹಣ ಜಮೆ ಮಾಡುತ್ತ ಅವಶ್ಯಕತೆ ಬಿದ್ದಾಗ ದೊಡ್ಡ ಮೊತ್ತದ ಹಣ ಪಡೆಯಬಹುದು. ಎಫ್‌ಡಿಗಳ ರೀತಿಯಲ್ಲೇ ಆರ್‌ಡಿಗೆ ಸಹ ತೆರಿಗೆ ವಿನಾಯಿತಿ ಸಿಗುವುದಿಲ್ಲ ಹಾಗೂ ಹಣದುಬ್ಬರಗಳಿಂದ ಹೆಚ್ಚು ರಕ್ಷಣೆಯೂ ಸಾಧ್ಯವಿಲ್ಲ.

ಪಿಪಿಎಫ್ (ಪಬ್ಲಿಕ್ ಪ್ರಾವಿಡೆಂಟ್ ಫಂಡ್)

ಪಿಪಿಎಫ್ (ಪಬ್ಲಿಕ್ ಪ್ರಾವಿಡೆಂಟ್ ಫಂಡ್)

ನಿಮ್ಮ ಹೆಣ್ಣು ಮಗುವಿನ ಹೆಸರಲ್ಲಿ ಪಿಪಿಎಫ್ ಖಾತೆ ಆರಂಭಿಸುವುದು ಜಾಣತನವಾಗಿದೆ. ನೀವು ಹೂಡಿಕೆ ಮಾಡಲು ಬಯಸುವ ಒಟ್ಟು ಮೊತ್ತವನ್ನು ಎರಡು ಭಾಗಗಳನ್ನಾಗಿ ಮಾಡಿ ಒಂದು ಭಾಗವನ್ನು ಮಗುವಿನ ಖಾತೆಯಲ್ಲಿ ಹಾಗೂ ಇನ್ನೊಂದು ಭಾಗವನ್ನು ನಿಮ್ಮ ಖಾತೆಯಲ್ಲಿ ಹೂಡಿಕೆ ಮಾಡಬಹುದು. (ಒಂದು ಅಥವಾ ಅದಕ್ಕಿಂತ ಹೆಚ್ಚು ಖಾತೆಗಳಿದ್ದರೂ ಓರ್ವ ಪ್ಯಾನ್ ಕಾರ್ಡ್ ಧಾರಕನ ಹೆಸರಲ್ಲಿ ಗರಿಷ್ಠ 1 ಲಕ್ಷ 50 ಸಾವಿರ ರೂ. ಹೂಡಿಕೆ ಮಾಡಬಹುದು.)

ಇದಕ್ಕೆ ಹೋಲಿಸಿದಲ್ಲಿ ಮಗಳ ಹೆಸರಲ್ಲಿ ಸುಕನ್ಯಾ ಸಮೃದ್ಧಿ ಖಾತೆ ಆರಂಭಿಸುವುದೇ ಸೂಕ್ತವಾಗಿದೆ. ಆದಾಗ್ಯೂ ಉತ್ತಮ ಬಡ್ಡಿ ದರ, ಹೂಡಿಕೆಯ ಮೇಲೆ ತೆರಿಗೆ ವಿನಾಯಿತಿ ಹಾಗೂ ಬಡ್ಡಿ, ಪಕ್ವತಾ ಮೊತ್ತಗಳು ತೆರಿಗೆ ರಹಿತವಾಗಿರುವುದರಿಂದ ಪಿಪಿಎಫ್ ಒಳ್ಳೆಯ ಪ್ರತಿಫಲ ನೀಡುವ ಯೋಜನೆಯಾಗಿದೆ.

ಮ್ಯೂಚುವಲ್ ಫಂಡ್

ಮ್ಯೂಚುವಲ್ ಫಂಡ್

ಮಗಳ ಉನ್ನತ ವಿದ್ಯಾಭ್ಯಾಸ ಹಾಗೂ ಮದುವೆಯ ಆರ್ಥಿಕ ಯೋಜನೆಗಳು ದೀರ್ಘಾವಧಿ ಯೋಜನೆಯಾಗಿರುವುದರಿಂದ ಇಕ್ವಿಟಿ ಮ್ಯೂಚುವಲ್ ಫಂಡ್ ಆಧರಿತ ಸಿಪ್ (SIP) ಯೋಜನೆಗಳಲ್ಲಿ ಹೂಡಿಕೆ ಮಾಡಬಹುದು. ಇವು ಹಣದುಬ್ಬರ ಮೀರಿಸಿ ಉತ್ತಮ ಆದಾಯ ನೀಡಬಲ್ಲವು. ಆದರೆ ಈ ಯೋಜನೆಯಲ್ಲಿ ಹೂಡಿಕೆ ಮಾಡಿದಾಗ ಪ್ರತಿದಿನದ ಶೇರು ಮಾರುಕಟ್ಟೆಯ ಏರಿಳಿತಗಳನ್ನು ನೋಡಿ ಆತಂಕಗೊಳ್ಳಬಾರದು.

ನಿಮ್ಮ ಮಗಳ ಉನ್ನತ ವಿದ್ಯಾಭ್ಯಾಸ ಅಥವಾ ವಿವಾಹದ ಖರ್ಚು ಬರುವ ಒಂದು ವರ್ಷದ ಮೊದಲು ಫಂಡ್‌ನ ಎನ್‌ಎವಿ ಚೆಕ್ ಮಾಡಲು ಆರಂಭಿಸಿ. ಹೀಗೆ ಮಾಡಿದಲ್ಲಿ ಎನ್‌ಎವಿ ಉನ್ನತ ಮಟ್ಟದಲ್ಲಿದ್ದಾಗ ಹೂಡಿಕೆಯನ್ನು ಹಿಂಪಡೆದು ಉತ್ತಮ ಪ್ರತಿಫಲ ಪಡೆಯಲು ಸಾಧ್ಯವಾಗುತ್ತದೆ.

ಮ್ಯೂಚುವಲ್ ಫಂಡ್‌ಗಳಲ್ಲಿ ಮಕ್ಕಳಿಗಾಗಿಯೇ ವಿಶೇಷವಾಗಿ ರೂಪಿಸಿದ ಯೋಜನೆಗಳೂ ಇವೆ. ಆದರೆ ಇವು ದೀರ್ಘಾವಧಿಯ ಲಾಕ್ ಇನ್ ಅವಧಿ ಹೊಂದಿದ್ದು, ಅವಧಿ ಪೂರ್ವ ಹಣ ಹಿಂಪಡೆದಲ್ಲಿ ದಂಡ ಶುಲ್ಕ ತೆರಬೇಕಾಗುತ್ತದೆ. ಮಗುವಿನ ಅವಶ್ಯಕತೆಗಳ ಹೊರತಾಗಿ ಬೇರೆ ಉದ್ದೇಶಕ್ಕೆ ಹಣ ಹಿಂಪಡೆಯದಂತೆ ನಿರ್ಬಂಧಿಸಲು ಈ ನಿಯಮಗಳನ್ನು ವಿಧಿಸಲಾಗಿದೆ.

ವಿಮೆ

ವಿಮೆ

ಮಕ್ಕಳಿಗಾಗಿಯೇ ವಿಶೇಷವಾದ ಹಲವಾರು ಮನಿ ಬ್ಯಾಕ್ ಹಾಗೂ ಸಾಮಾನ್ಯ ವಿಮಾ ಯೋಜನೆಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಪ್ರೀಮಿಯಂ ಮನ್ನಾ ಸೌಲಭ್ಯವು ಮಕ್ಕಳ ವಿಮಾ ಯೋಜನೆಯ ಪ್ರಮುಖ ವಿಶಿಷ್ಟತೆಯಾಗಿದೆ. ಅಂದರೆ ನಿಯಮಿತವಾಗಿ ಪ್ರೀಮಿಯಂ ಪಾವತಿಸುವ ಕುಟುಂಬದ ಸದಸ್ಯ ಅಕಾಲಿಕ ಮರಣ ಹೊಂದಿದರೂ ಸಹ ಯಾವುದೇ ಪ್ರೀಮಿಯಂ ಪಾವತಿಸದೆ ವಿಮಾ ಯೋಜನೆ ಜಾರಿಯಲ್ಲಿರುತ್ತದೆ.

ಮಗುವಿನ ಅಕಾಲಿಕ ಮರಣದ ಸಂದರ್ಭದಲ್ಲಿ ದೊಡ್ಡ ಮೊತ್ತ ಪಡೆಯುವುದು ವಿಮೆ ಮಾಡಿಸುವ ಉದ್ದೇಶ ನಿಮ್ಮದಾಗಿರುವುದಿಲ್ಲ. ಆದ್ದರಿಂದ ಯಾವಾಗಲೂ ನಿಮ್ಮ ಹೆಸರಲ್ಲೇ ವಿಮೆ ಮಾಡಿಸಿ ಅದಕ್ಕೆ ಮಗಳನ್ನು ನಾಮಿನಿಯನ್ನಾಗಿ ದಾಖಲಿಸಬೇಕು. ಅವಧಿ ವಿಮಾ ಯೋಜನೆ ಅಥವಾ ಯುನಿಟ್ ಲಿಂಕ್ಡ್ ಯೋಜನೆಯ (ಯೂಲಿಪ್) ಅಡಿಯಲ್ಲಿ ವಿಮೆ ಪಡೆದುಕೊಳ್ಳುವುದು ಸೂಕ್ತವಾಗಿದೆ.

English summary

Sukanya Samriddhi vs Bank FD vs RD vs PPF vs MF vs insurance; Which is best for your children?

Small deposit scheme Sukanya Samriddhi Yojana (SSY) is aimed at meeting the expenses of higher education and marriage of your daughter.
Story first published: Saturday, December 1, 2018, 9:52 [IST]
Company Search
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more