For Quick Alerts
ALLOW NOTIFICATIONS  
For Daily Alerts

ಬ್ಯಾಂಕಿಂಗ್/ಇ-ವ್ಯಾಲೆಟ್ ವ್ಯವಹಾರ ಸುರಕ್ಷತೆಗೆ ಆರ್‌ಬಿಐ ಮಾರ್ಗದರ್ಶಿ ಸೂತ್ರಗಳು

|

ಕಳೆದ ಕೆಲ ತಿಂಗಳುಗಳಿಂದೀಚೆಗೆ ಭಾರತದಲ್ಲಿ ಹಣಕಾಸು ವ್ಯವಹಾರ ನಡೆಸಲು ಇ-ವ್ಯಾಲೆಟ್‌ಗಳ ಬಳಕೆ ಹೆಚ್ಚಾಗುತ್ತ ನಡೆದಿದೆ. ಕೆಲವು ವರ್ಷಗಳ ಹಿಂದೆ ಆನ್ಲೈನ್ ಬ್ಯಾಂಕಿಂಗ್ ವ್ಯವಸ್ಥೆ ಆರಂಭವಾದಾಗ ಈಗಿನಷ್ಟು ಪ್ರಿಪೇಡ್ ಪೇಮೆಂಟ್ ಆಯ್ಕೆಗಳು ಲಭ್ಯವಿರಲಿಲ್ಲ. ಆದರೆ ಈಗ ಸ್ಮಾರ್ಟಫೋನ್‌ಗಳ ಮೂಲಕ ಬಳಸಬಹುದಾದ ಪ್ರಿಪೇಡ್ ಇ-ವ್ಯಾಲೆಟ್ ಆಪ್‌ಗಳ ಸಂಖ್ಯೆ ಸಾಕಷ್ಟಿದೆ.

ಈಗ ಇ-ವ್ಯಾಲೆಟ್ ಬಳಸುವ ಕೋಟ್ಯಂತರ ಗ್ರಾಹಕರ ಸುರಕ್ಷತೆಗೆ ಆರ್‌ಬಿಐ ಹಲವಾರು ಕಠಿಣ ಮಾರ್ಗಸೂಚಿಗಳನ್ನು ಪ್ರಕಟಿಸಿ ಆನ್ಲೈನ್ ಹಣಕಾಸು ಪ್ರಕ್ರಿಯೆಗಳಲ್ಲಿನ ಮೋಸ, ವಂಚನೆ ತಡೆಗಟ್ಟಿ ಗ್ರಾಹಕರು ಹಾಗೂ ಕಂಪನಿಗಳ ಹಿತಾಸಕ್ತಿ ಕಾಪಾಡಲು ಮುಂದಾಗಿದೆ.

1. ವಂಚನೆಯಾದಲ್ಲಿ ಗ್ರಾಹಕರ ಜವಾಬ್ದಾರಿ ಎಷ್ಟು?
 

1. ವಂಚನೆಯಾದಲ್ಲಿ ಗ್ರಾಹಕರ ಜವಾಬ್ದಾರಿ ಎಷ್ಟು?

ಪ್ರಿಪೇಡ್ ವ್ಯಾಲೆಟ್ ಬಳಸಿ ನಡೆಸಲಾಗುವ ಮೋಸ ಹಾಗೂ ವಂಚನೆಯ ಹಣಕಾಸು ವ್ಯವಹಾರಗಳು ಹಾಗೂ ಇಂಥ ಸಂದರ್ಭಗಳಲ್ಲಿ ಗ್ರಾಹಕ ಹಾಗೂ ಪ್ರಿಪೇಡ್ ಆಪ್ ಕಂಪನಿ (ಪಿಪಿಐ - ಪ್ರಿಪೇಡ್ ಇನ್ಸಟ್ರುಮೆಂಟ್) ಗಳ ಹೊಣೆಗಾರಿಕೆಗಳ ಬಗ್ಗೆ ಆರ್‌ಬಿಐ ಸ್ಪಷ್ಟವಾಗಿ ತಿಳಿಸಿದೆ. ಒಂದು ವೇಳೆ ಆಪ್ ಕಂಪನಿಯ ಬೇಜವಾಬ್ದಾರಿ ಹಾಗೂ ನಿರ್ಲಕ್ಷದ ಕಾರಣದಿಂದ ಮೋಸದ ವ್ಯವಹಾರ ನಡೆದಲ್ಲಿ ಅದಕ್ಕೆ ಗ್ರಾಹಕ ಯಾವುದೇ ರೀತಿಯಿಂದಲೂ ಬಾಧ್ಯಸ್ಥನಾಗಿರುವುದಿಲ್ಲ.
ಹಾಗೆಯೇ ಗ್ರಾಹಕ ಹಾಗೂ ಕಂಪನಿ ಎರಡೂ ಕಡೆಯಿಂದ ಯಾವುದೇ ತಪ್ಪು ಇರದಿದ್ದರೂ ಇನ್ನಾವುದೋ ಥರ್ಡ ಪಾರ್ಟಿ ಕಡೆಯಿಂದ ನಡೆಯುವ ವಂಚನೆ ಗ್ರಾಹಕನ ಗಮನಕ್ಕೆ ಬಂದಲ್ಲಿ ಹಾಗೂ ಅದರ ಬಗ್ಗೆ ಮೂರು ದಿನಗಳೊಳಗಾಗಿ ಕಂಪನಿಗೆ ತಿಳಿಸಿದ್ದಲ್ಲಿ ಆಗಿರುವ ಸಂಪೂರ್ಣ ನಷ್ಟ ಭರಿಸುವ ಹೊಣೆ ಇ-ವ್ಯಾಲೆಟ್ ಕಂಪನಿಯದೇ ಆಗಿರುತ್ತದೆ.
ಅದೇ ರೀತಿ ಮೋಸದ ವ್ಯವಹಾರದ ಬಗ್ಗೆ ಕಂಪನಿಗೆ ಮೂರು ದಿನಗಳ ಒಳಗೆ ತಿಳಿಸಲಾಗದಿದ್ದ ಸಂದರ್ಭದಲ್ಲಿ ಕನಿಷ್ಠ ಏಳು ದಿನಗಳೊಳಗಾಗಿ ತಿಳಿಸಿದ್ದಲ್ಲಿ ಗ್ರಾಹಕರ ನಷ್ಟ ಭರಿಸುವ ಜವಾಬ್ದಾರಿ ೧೦ ಸಾವಿರ ರೂ.ಗಳಿಗೆ ಸೀಮಿತವಾಗಿರುತ್ತದೆ. ಈ ಅವಧಿಯ ನಂತರ ಕಂಪನಿಯ ಗಮನಕ್ಕೆ ತರಲಾಗುವ ವಂಚನೆಯ ವ್ಯವಹಾರಗಳ ಮೂಲಕ ಉಂಟಾಗಬಹುದಾದ ನಷ್ಟಕ್ಕೆ ಗ್ರಾಹಕನೇ ಹೊಣೆಯಾಗುತ್ತಾನೆ. ಆದಾಗ್ಯೂ ಕಂಪನಿಯು ತನ್ನ ವಿವೇಚನೆಯನ್ನು ಬಳಸಿ ಗ್ರಾಹಕರನ್ನು ನಷ್ಟದಿಂದ ಪಾರು ಮಾಡಬಹುದು.
ಒಂದೊಮ್ಮೆ ಗ್ರಾಹಕರ ನಿಷ್ಕಾಳಜಿಯಿಂದ ವ್ಯವಹಾರದಲ್ಲಿ ಮೋಸ ನಡೆದಿದ್ದರೆ ಹಾಗೂ ಅಂಥ ವ್ಯವಹಾರವನ್ನು ಗ್ರಾಹಕ ತಕ್ಷಣ ಪಿಪಿಐ ಕಂಪನಿಯ ಗಮನಕ್ಕೆ ತಂದಲ್ಲಿ ಕಂಪನಿಗಳು ಗ್ರಾಹಕರ ಹಿತಾಸಕ್ತಿ ಕಾಪಾಡಲು ಮುಂದಾಗಬೇಕೆಂದು ಆರ್‌ಬಿಐ ಸೂಚಿಸಿದೆ. ಇಂಥ ವಂಚನೆಯ ವ್ಯವಹಾರದ ಸಂದರ್ಭಗಳಲ್ಲಿ ವ್ಯವಹಾರದ ಬಗ್ಗೆ ಕಂಪನಿಗೆ ತಿಳಿಸುವ ಮುಂಚೆಯೇ ವ್ಯವಹಾರ ಪೂರ್ಣಗೊಂಡು ಹಣ ವರ್ಗಾವಣೆ ಆಗಿ ಹೋಗಿದ್ದರೆ ಅದಕ್ಕೆ ಗ್ರಾಹಕನೇ ಜವಾಬ್ದಾರಿಯಾಗಿರುತ್ತಾನೆ. ಹಾಗೆಯೇ ಇಂಥ ವ್ಯವಹಾರ ನಡೆಯುತ್ತಿರುವ ಬಗ್ಗೆ ಕಂಪನಿಯ ಗಮನಕ್ಕೆ ತಂದ ಮೇಲೆ ವ್ಯವಹಾರ ಪೂರ್ಣಗೊಂಡಿದ್ದರೆ ಅದಕ್ಕೆ ಕಂಪನಿ ಜವಾಬ್ದಾರಿಯಾಗಿರುತ್ತದೆ.

2. ಸಾಕ್ಷಿ ಸಂಗ್ರಹಿಸುವುದು ಪಿಪಿಐ ಕಂಪನಿಯ ಕರ್ತವ್ಯ

ಇ-ವ್ಯಾಲೆಟ್ ಹಾಗೂ ಇನ್ನಿತರ ಪ್ರಿಪೇಡ್ ಆಪ್ ಬಳಸುವ ಗ್ರಾಹಕರು ಹಲವಾರು ಬಾರಿ ವ್ಯವಹಾರದಲ್ಲಿ ವಂಚನೆಗೊಳಗಾಗುವ ಸಂದರ್ಭಗಳು ಎದುರಾಗುತ್ತವೆ. ಹೀಗೆ ವಂಚನೆಗಳು ನಡೆದಾಗ ಆಗುವ ನಷ್ಟವನ್ನು ಗ್ರಾಹಕರೇ ಭರಿಸಬೇಕಾಗುವುದು ಮಾತ್ರ ದುರಾದೃಷ್ಟವಾಗಿದೆ. ಆದರೆ ಈಗ ಇಂಥ ಕೃತ್ಯಗಳ ಸಂದರ್ಭದಲ್ಲಿ ಗ್ರಾಹಕರ ಹಿತಾಸಕ್ತಿಯನ್ನು ಕಾಪಾಡಲು ಆರ್‌ಬಿಐ ಹೊಸ ನಿಯಮಗಳನ್ನು ರೂಪಿಸಿದೆ. ಇದರ ಪ್ರಕಾರ ವಂಚನೆಯ ಕೃತ್ಯ ನಡೆದಾಗ ಅದಕ್ಕೆ ಗ್ರಾಹಕ ಜವಾಬ್ದಾರನಾಗಿದ್ದರೆ ಅದನ್ನು ಸೂಕ್ತ ಆಧಾರಗಳ ಮೂಲಕ ನಿರೂಪಿಸುವ ಹೊಣೆಗಾರಿಕೆ ಪಿಪಿಐ ಕಂಪನಿಯದೇ ಆಗಿರುತ್ತದೆ. ಇದರಿಂದ ಗ್ರಾಹಕ ತುಸು ನಿರಾಳವಾಗಿ ಉಸಿರಾಡುವಂತಾಗಿದೆ. ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ 2017 ರಲ್ಲಿ ಈ ಬಗ್ಗೆ ಸ್ಪಷ್ಟವಾಗಿ ತಿಳಿಸಲಾಗಿದೆ.

3. ಹಣ ಕಡಿತಗಳನ್ನು ಕಾಲಾವಧಿಯಲ್ಲಿ ಮರುಪಾವತಿಸುವುದು

ತನ್ನ ಖಾತೆಯಲ್ಲಿ ಯಾವುದಾದರೂ ಸಂಶಯಾಸ್ಪದ ವ್ಯವಹಾರ ಕಂಡು ಬಂದಾಗ ಅದರ ಬಗ್ಗೆ ವ್ಯಾಲೆಟ್ ಕಂಪನಿಯ ಗಮನಕ್ಕೆ ತಂದಲ್ಲಿ 10 ದಿನಗಳೊಳಗಾಗಿ ಕಡಿತಗೊಂಡ ಹಣವನ್ನು ಮರಳಿ ವ್ಯಾಲೆಟ್ ಅಥವಾ ಪಿಪಿಐಗೆ ವರ್ಗಾಯಿಸಬೇಕು. ಗ್ರಾಹಕರ ದೂರನ್ನು ದಾಖಲಿಸಿಕೊಂಡು ಕಂಪನಿಯ ನಿಯಮಾವಳಿಗಳ ಪ್ರಕಾರ ದೂರು ಪರಿಹರಿಸಿ ಗ್ರಾಹಕರ ಬಾಧ್ಯತೆಯನ್ನು ನಿರ್ಣಯಿಸಬೇಕು. ಹೀಗೆ ದೂರು ದಾಖಲಾದ 90 ದಿನಗಳಲ್ಲಿ ದೂರಿನ ವಿಚಾರಣೆ ಪೂರ್ಣಗೊಳಿಸಬೇಕು. ದೂರು ನೀಡಿದ ಸಂದರ್ಭದಲ್ಲಿ ದೂರಿನ ಬಗ್ಗೆ ಸೂಕ್ತ ವಿಚಾರಣೆ ನಡೆಸಲು ಕಂಪನಿಯು ವಿಫಲವಾದಲ್ಲಿ ಅದಕ್ಕಾಗಿ ಗ್ರಾಹಕರಿಗೆ ಸೂಕ್ತ ಪರಿಹಾರವನ್ನು ನೀಡಬೇಕಾಗುತ್ತದೆ. ಅಲ್ಲದೆ ಗ್ರಾಹಕನ ನಿಷ್ಕಾಳಜಿಯೇ ಇದ್ದರೂ ಗ್ರಾಹಕನಿಗೆ ಪರಿಹಾರ ನೀಡಬೇಕಾಗುತ್ತದೆ.

4. ವ್ಯವಹಾರಗಳ ಬಗ್ಗೆ ಎಸ್ಸೆಮ್ಮೆಸ್ ಕಳುಹಿಸುವುದು ಕಡ್ಡಾಯ
 

4. ವ್ಯವಹಾರಗಳ ಬಗ್ಗೆ ಎಸ್ಸೆಮ್ಮೆಸ್ ಕಳುಹಿಸುವುದು ಕಡ್ಡಾಯ

ಪ್ರಿಪೇಡ್ ಆಪ್ ಬಳಸುವ ಗ್ರಾಹಕರು ತಮ್ಮ ವ್ಯವಹಾರಗಳ ಬಗ್ಗೆ ಮೊಬೈಲ್ ಮೇಲೆ ಎಸ್ಸೆಮ್ಮೆಸ್ ಪಡೆಯುವಂತೆ ಕಡ್ಡಾಯವಾಗಿ ಅವರನ್ನು ನೋಂದಾಯಿಸಿಕೊಳ್ಳಬೇಕೆಂದು ಆರ್‌ಬಿಐ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಗ್ರಾಹಕರಿಗೆ ಕಳುಹಿಸಲಾಗುವ ಟ್ರಾನ್ಸಾಕ್ಷನ್ ಎಸ್ಸೆಮ್ಮೆಸ್‌ನಲ್ಲಿ ದೂರು ಸಲ್ಲಿಸಬಹುದಾದ ದೂರವಾಣಿ ಸಂಖ್ಯೆ ಅಥವಾ ಇಮೇಲ್ ಐಡಿಯ ಮಾಹಿತಿ ಇರುವುದು ಕಡ್ಡಾಯ. ಅಲ್ಲದೆ ದೂರು ಸಲ್ಲಿಸಬಹುದಾದ ಇಮೇಲ್ ಐಡಿ ಬಗ್ಗೆ ಗ್ರಾಹಕರಿಗೆ ಇಮೇಲ್ ಕಳುಹಿಸುವುದು ಸಹ ಕಡ್ಡಾಯವಾಗಿದೆ. ಆದಾಗ್ಯೂ ಗ್ರಾಹಕರ ಹಿತಾಸಕ್ತಿಗಾಗಿ ಆರ್‍ಬಿಐ ಹೊರಡಿಸಿರುವ ನೂತನ ನಿಯಮಾವಳಿಗಳ ಪ್ರಕಾರ ಗ್ರಾಹಕ ಸುರಕ್ಷತೆ ಪಡೆಯಬೇಕಾದಲ್ಲಿ ಗ್ರಾಹಕರು ಸರಿಯಾದ ಮೊಬೈಲ್ ಸಂಖ್ಯೆ ಹಾಗೂ ಇಮೇಲ್ ಐಡಿ ನೀಡುವ ಮೂಲಕ ಅಲರ್ಟ್‌ಗಳಿಗೆ ನೋಂದಾಯಿಸಿಕೊಳ್ಳಬೇಕಾಗುತ್ತದೆ.

5. ವಂಚನೆ ಪ್ರಕರಣಗಳ ಬಗ್ಗೆ ದೂರು ದಾಖಲಿಸುವುದು ಈಗ ಸುಲಭ

ಸಂಶಯಾಸ್ಪದ ಅಥವಾ ವಂಚನೆಯ ವ್ಯವಹಾರಗಳು ನಡೆದಾಗ ಅವುಗಳನ್ನು ಗುರುತಿಸುವುದು ಹೇಗೆ ಹಾಗೂ ಅಂಥ ವ್ಯವಹಾರಗಳು ಕಂಡು ಬಂದಲ್ಲಿ ಅದರ ಬಗ್ಗೆ ಆದಷ್ಟೂ ಬೇಗ ದೂರು ಸಲ್ಲಿಸುವ ಬಗ್ಗೆ ಗ್ರಾಹಕರಲ್ಲಿ ಕಂಪನಿಗಳು ಜಾಗೃತಿ ಮೂಡಿಸಬೇಕೆಂದು ಆರ್‌ಬಿಐ ಹೇಳಿದೆ.
ವಂಚನೆಯ ಪ್ರಕರಣದ ಬಗ್ಗೆ ಮಾಹಿತಿ ನೀಡುವುದು ತಡವಾದಷ್ಟೂ ಗ್ರಾಹಕ ಹಾಗೂ ಪಿಪಿಐ ಜಾರಿ ಕಂಪನಿಗೆ ಆಗುವ ನಷ್ಟದ ಪ್ರಮಾಣ ಹೆಚ್ಚಾಗುತ್ತದೆ ಎಂದು ಆರ್‌ಬಿಐ ತಿಳಿಸಿದೆ.
ವಂಚನೆಯ ವ್ಯವಹಾರಗಳ ಬಗ್ಗೆ ದೂರು ದಾಖಲಿಸಲು ಪಿಪಿಐ ಕಂಪನಿಗಳು ೨೪ ಗಂಟೆಗಳ ಕಾಲ ಕಾರ್ಯನಿರ್ವಹಿಸುವ ಗ್ರಾಹಕರ ಉಚಿತ ಸಹಾಯವಾಣಿ, ವೆಬ್ಸೈಟ್, ಎಸ್ಸೆಮ್ಮೆಸ್ ಮತ್ತು ಇಮೇಲ್‌ಗಳ ವ್ಯವಸ್ಥೆಗಳನ್ನು ಮಾಡಬೇಕು. ಅಲ್ಲದೆ ತಮ್ಮ ಆಪ್ ನಲ್ಲಿ ದೂರು ದಾಖಲಿಸುವ ಸಲುವಾಗಿ ನೇರ ಲಿಂಕ್ ಕೊಡುವುದು ಈಗ ಕಡ್ಡಾಯವಾಗಿದೆ. ಒಂದೊಮ್ಮೆ ದೂರು ದಾಖಲಾದಲ್ಲಿ ದೂರಿನ ನೋಂದಣಿ ಸಂಖ್ಯೆಯೊಂದಿಗೆ ದೂರು ದಾಖಲಿಸಿಕೊಂಡಿರುವ ಬಗ್ಗೆ ತಕ್ಷಣ ಗ್ರಾಹಕರಿಗೆ ತಿಳಿಸುವುದು ಸಹ ಕಡ್ಡಾಯ.
ಅಡ್ಡಿ ಆತಂಕಗಳಿಲ್ಲದೆ ಪಿಪಿಐ ವ್ಯವಹಾರ ನಡೆಸುವಿಕೆ, ವಂಚನೆಯಾಗದಂತೆ ನೋಡಿಕೊಳ್ಳುವುದು ಹಾಗೂ ಗ್ರಾಹಕರ ಹಿತಾಸಕ್ತಿ ಕಾಪಾಡುವಿಕೆಯ ಜವಾಬ್ದಾರಿಗಳನ್ನು ಆರ್‍ಬಿಐ ಪಿಪಿಐ ಕಂಪನಿಗಳ ಮೇಲೆ ಹೊರಿಸಿದೆ. ಆದರೆ ಹಾಗಂತ ಗ್ರಾಹಕ ಬೇಜವಾಬ್ದಾರಿಯುತವಾಗಿ ವ್ಯವಹಾರ ನಡೆಸುವಂತಿಲ್ಲ. ಎಸ್ಸೆಮ್ಮೆಸ್ ಅಲರ್ಟ ಬಂದಾಗ, ಯಾವುದೇ ಸಂಶಯಾಸ್ಪದ ವ್ಯವಹಾರ ಕಂಡುಬಂದಲ್ಲಿ ಮೂರು ದಿನಗಳವರೆಗೆ ಕಾಯದೆ ತಕ್ಷಣ ದೂರು ದಾಖಲಿಸುವುದು ಗ್ರಾಹಕನ ಅತಿ ಮುಖ್ಯ ಕರ್ತವ್ಯವಾಗಿದೆ.

Read more about: rbi banking money finance news
English summary

5 ways RBI has made Banking/e-wallets safer for users

RBI has mandated a range of safety valves to protect prepaid payment instrument customers. ET Wealth elaborates on the banking regulator’s guidelines.
Story first published: Friday, January 18, 2019, 9:52 [IST]
Company Search
Enter the first few characters of the company's name or the NSE symbol or BSE code and click 'Go'

Find IFSC

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more